ಪತ್ನಿಗೆ ಹಿಂಸೆ ಕೊಟ್ಟ ಕೇಸ್ನಿಂದ ಇಡೀ ಬ್ರಹ್ಮಾಂಡವನ್ನೇ ಹೊರ ಪ್ರಪಂಚಕ್ಕೆ ಗೊತ್ತಾಗುವಂತೆ ಮಾಡಿಕೊಂಡಿದ್ದ ದಲ್ಲಾಳಿ ಸ್ಯಾಂಟ್ರೋ ರವಿಯನ್ನು ಕರ್ನಾಟಕ ಪೊಲೀಸರು ಗುಜರಾತ್ನಲ್ಲಿ ಬಂಧಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗು ಅವರ ಪುತ್ರನ ಜೊತೆ ಸೇರಿದಂತೆ ಇಡೀ ಬಿಜೆಪಿ ಸಚಿವರು ಹಾಗು ಬಿಜೆಪಿ ಶಾಸಕರ ಜೊತೆಗೆ ಆತ್ಮೀಯ ಒಡನಾಟ ಹೊಂದಿದ್ದ ಸ್ಯಾಂಟ್ರೋ ರವಿಯನ್ನು ಗುಜರಾತ್ನ ಅಹಮದಾಬಾದ್ನಲ್ಲಿ ಬಂಧನ ಮಾಡಲಾಗಿದೆ. ಮೈಸೂರು ಪೊಲೀಸರು ಸ್ಯಾಂಟ್ರೋ ರವಿ ಬಂಧನಕ್ಕೆ ಬೆಂಗಳೂರು ಸಿಸಿಬಿ, ಮೈಸೂರು ಕಮಿಷನರ್ ಟೀಂ, ರಾಮನಗರ ಎಸ್ಪಿ ಹಾಗು ಮಂಡ್ಯ ಎಸ್ಪಿ ಟೀಂ ರಚನೆ ಮಾಡಲಾಗಿತ್ತು. ಇದೀಗ ರಾಮನಗರ SP ಸಂತೋಷ್ ಬಾಬು ನೇತೃತ್ವದ ತಂಡ ಗುಜರಾತ್ಗೆ ತೆರಳಿ ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿಯನ್ನು ಬಂಧನ ಮಾಡಲಾಗಿದೆ. ಆದರೆ ಬಿಜೆಪಿ ಸರ್ಕಾರದಲ್ಲಿ ಸ್ಯಾಂಟ್ರೋ ರವಿ ಬಂಧನ ಮಾಡಿ ಬಚಾವ್ ಮಾಡುವ ಕೆಲಸ ನಡೆಯುತ್ತಿದ್ಯಾ..? ಅನ್ನೋ ಶಂಕೆ ಕಾಡುತ್ತಿದೆ.
ಸ್ಯಾಂಟ್ರೋ ರವಿ ಬಂಧನ ಭೀತಿಯಲ್ಲಿ ಎಸ್ಕೇಪ್ ಆಗಿದ್ದು ಹೇಗೆ..?
ಮೈಸೂರಿನಲ್ಲಿ ಜನವರಿ 2ರಂದು ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿ ನನಗೆ ಮೋಸ ಮಾಡಿದ್ದಾನೆ ಎಂದು ಪತ್ನಿ ದೂರು ದಾಖಲು ಮಾಡ್ತಿದ್ದ ಹಾಗೆ ಕೇರಳಕ್ಕೆ ಬಸ್ನಲ್ಲಿ ಜಾಗ ಖಾಲಿ ಮಾಡಿದ್ದ ಆರೋಪಿ ಮಂಜುನಾಥ್, ಕೇರಳದಿಂದ ವಿಮಾನದ ಮೂಲಕ ಗುಜರಾತ್ ಸೇರಿಕೊಂಡಿದ್ದ ಎನ್ನುವುದು ಪೊಲೀಸ್ ಮೂಲಗಳ ಮಾಹಿತಿ. ಗುಜರಾತ್ನ ಸ್ನೇಹಿತರೊಬ್ಬರ ಸಹಾಯದಿಂದ ಅಹಮದಾಬಾದ್ನಲ್ಲಿ ಸ್ಯಾಂಟ್ರೋ ರವಿ ಉಳಿದುಕೊಂಡಿದ್ದ. ವೇಷ ಬದಲಿಸಿಕೊಂಡು ಸಂಚಾರ ಮಾಡಿದ್ದಾನೆ. ವಿಗ್ ಮತ್ತು ಸ್ಪೆಕ್ಟ್ ತೆಗೆದು ಟ್ರಾವೆಲ್ ಮಾಡಿದ್ದರಿಂದ ಪೋಟೋ ಸಹಿತ ಲುಕ್ ಔಟ್ ನೋಟಿಸ್ ಹೊರಡಿಸಿದ್ದರು ಮೈಸೂರು ಪೊಲೀಸರಿಗೆ ರವಿ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ ಎನ್ನಲಾಗ್ತಿದೆ. ಸದ್ಯ ಅಹಮದಾಬಾದ್ನಲ್ಲಿ ರಾಜ್ಯ ಪೊಲೀಸರ ವಶದಲ್ಲಿರೋ ಸ್ಯಾಂಟ್ರೋ ರವಿಯನ್ನು ಶನಿವಾರ ಬೆಳಗ್ಗೆ ಮೈಸೂರಿಗೆ ಕರೆತರಲು ಪ್ರಯತ್ನ ನಡೆದಿದೆ. ಸ್ಥಳೀಯ ಕೋರ್ಟ್ಗೆ ಹಾಜರು ಮಾಡಿ ಆ ಬಳಿಕ ಬಾಡಿವಾರೆಂಟ್ ಮೇಲೆ ವಶಕ್ಕೆ ಪಡೆದುಕೊಂಡು ಬರಲಾಗುತ್ತದೆ. ಆದ್ರೆ ಸ್ಯಾಂಟ್ರೋ ರವಿಯನ್ನು ಬಚಾವ್ ಮಾಡುವ ಪ್ರಯತ್ನ ನಡೆದಿದೆ ಎನ್ನುವ ಶಂಕೆ ಗೃಹ ಸಚಿವರ ಮಾತಿನಿಂದಲೇ ಮೂಡುತ್ತಿದೆ.
ಗೃಹ ಸಚಿವರಿಗೂ ಸ್ಯಾಂಟ್ರೋ ರವಿಗೂ ಟ್ರಾವೆಲ್ ಲಿಂಕ್..!
ಗುಜರಾತ್ನ ಅಹಮದಾಬಾದ್ನಲ್ಲಿ ಸ್ಯಾಂಟ್ರೋ ರವಿ ಹಾಗು ಆತನ ಆಪ್ತ ರಾಮ್ ಜೀ (45), ಮತ್ತು ಸತೀಶ್ ಕುಮಾರ್ (35) ಎಂಬುವರನ್ನು ಬಂಧನ ಮಾಡಲಾಗಿದೆ. ದೂರು ದಾಖಲಾದ 11 ದಿನಗಳ ನಂತರ ಸ್ಯಾಂಟ್ರೋ ರವಿಯನ್ನು ಬಂಧನ ಮಾಡಲಾಗಿದೆ. ಇನ್ನು ವಂಚಕ ಎನ್ನಲಾದ, ಸ್ಯಾಂಟ್ರೋ ರವಿಯನ್ನು, ಬಂಧಿಸುವಲ್ಲಿ, ರಾಜ್ಯ ಪೊಲೀಸರು ಯಶಸ್ವಿಯಾಗಿದ್ದಾರೆ. ಆತನ ಬಂಧನದಿಂದ, ಎಲ್ಲಾ ಊಹಾ ಪೋಹಗಳಿಗೆ ತೆರೆ ಬಿದ್ದಂತಾಗಿದೆ. ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ, ತಪ್ಪಿಸಿ ಕೊಳ್ಳುತ್ತಿದ್ದ, ಸ್ಯಾಂಟ್ರೋ ರವಿಯನ್ನು ಬಂಧಿಸಿದ್ದು, ಆತನ ವಿರುದ್ಧ ಇರುವ ಆರೋಪಗಳ ಬಗ್ಗೆ ಪೊಲೀಸರು ವಿಚಾರಣೆ ನಡೆಸಿ, ತಪ್ಪಿತಸ್ಥನಾಗಿದ್ದರೆ, ಸೂಕ್ತ ಕಾನೂನು ಕ್ರಮ ಜರುಗಿಸಿ, ಸಂತ್ರಸ್ತ ವ್ಯಕ್ತಿಗೆ, ನ್ಯಾಯ ಒದಗಿಸಲಾಗುತ್ತದೆ ಎಂದಿದ್ದಾರೆ. ವಿಶೇಷ ಅಂದ್ರೆ ಗುರುವಾರ ಅಷ್ಟೇ ಗುಜರಾತ್ನ ಅಹಮದಾಬಾದ್ಗೆ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ ನೀಡಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆರಗ ಜ್ಞಾನೇಂದ್ರ, ನಾನು ಗುಜರಾತ್ಗೆ ಭೇಟಿ ನೀಡಿದ್ದು ಕಾಕತಾಳಿಯ ಅಷ್ಟೆ ಎಂದಿದ್ದಾರೆ. ಆದರೆ ಕಾಂಗ್ರೆಸ್ ಮಾತ್ರ ಇದು ಕಾಕತಾಳಿಯ ಅಲ್ಲವೇ ಅಲ್ಲ ಎಂದು ಕುಟುಕಿದೆ.
ಪೊಲೀಸ್ ಇಲಾಖೆಯಂದ ಸ್ಯಾಂಟ್ರೋ ರವಿಗೆ ಶಿಕ್ಷೆ ಆಗುತ್ತಾ..?
ಪೊಲೀಸ್ ಆಧಿಕಾರಿಗಳ ವರ್ಗಾವಣೆ ದಂಧೆ ಮಾಡುತ್ತಾ, ಹಿರಿಯ ಅಧಿಕಾರಿಗಳನ್ನು ಬುಟ್ಟಿಗೆ ಹಾಕಿಕೊಂಡು, ಯುವತಿಯರನ್ನು ಮಂಚಕ್ಕೆ ರವಾನೆ ಮಾಡುವ ಕೆಲಸ ಮಾಡುತ್ತಿದ್ದ ಸ್ಯಾಂಟ್ರೋ ರವಿ ಬಿಜೆಪಿ ಸರ್ಕಾರದಲ್ಲಿ ಬೃಹತ್ ಹೆಮ್ಮರವಾಗಿ ಬೆಳೆದುಕೊಂಡಿದ್ದಾನೆ. ಇದೀಗ ಸರ್ಕಾರ ರಾಜ್ಯ ಸರ್ಕಾರದ ಅಧೀನದಲ್ಲೇ ತನಿಖೆ ನಡೆಯಲಿದೆ. ಈಗಾಗಲೇ ಅಧಿಕಾರಿಗಳ ವರ್ಗಾವಣೆ ಮೂಲಕ ಇಡೀ ಪೊಲೀಸ್ ಅಧಿಕಾರಿಗಳ ಮೇಲೆ ದರ್ಪ ದವಲತ್ತು ಮೆರೆದಿರುವ ಸ್ಯಾಂಟ್ರೋ ರವಿಯನ್ನು ಪೊಲೀಸ್ರು ಸರಿಯಾಗಿ ವಿಚಾರಣೆ ಮಾಡಲು ಸಾಧ್ಯವೇ..? ಎನ್ನುವ ಪ್ರಶ್ನೆ ಸೃಷ್ಟಿಯಾಗಿದೆ. ನ್ಯಾಯಾಂಗ ತನಿಖೆ ಆಗಬೇಕು ಎನ್ನುವ ಆಗ್ರಹವೂ ಕೇಳಿ ಬಂದಿದೆ. ಮೈಸೂರಿನಲ್ಲಿ ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿ, ಪತ್ನಿ ಕೊಟ್ಟಿದ್ದ ಕಿರುಕುಳ ಕೇಸ್ವೊಂದು ದಾಖಲಾಗಿತ್ತು. ಆ ಬಳಿಕ ಮಾಜಿ ಸಿಎಂ ಕುಮಾರಸ್ವಾಮಿ ಸ್ಯಾಂಟ್ರೋ ರವಿ ಯಾರು..? ಆತನ ಕಾಯಕ ಏನು..? ಅನ್ನೋದನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಬಳಿಕ ರಾಜ್ಯ ಸರ್ಕಾರ ಇಕ್ಕಟ್ಟಿಗೆ ಸಿಲುಕಿತ್ತು. ಇದೀಗ ಬಂಧನ ಆಗಿದೆ. ರಾಜ್ಯ ಸರ್ಕಾರ ತನಿಖೆಯಲ್ಲಿ ಸತ್ಯ ಹೊರಬರುತ್ತಾ..? ಅನ್ನೋದೇ ಅನುಮಾನ.
-ಕೃಷ್ಣಮಣಿ