ಜಮ್ಮು ಮತ್ತು ಕಾಶ್ಮೀರದಲ್ಲಿರುವ ಗಡಿ ನಿಯಂತ್ರಣ ರೇಖೆಯುದ್ದಕ್ಕೂ (ಎಲ್‌ಒಸಿ) ಈಗಿರುವ ಕದನ ವಿರಾಮ ನಿಯಮಗಳ ಎಲ್ಲ ಒಪ್ಪಂದಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಭಾರತ ಮತ್ತು ಪಾಕಿಸ್ತಾನ ರಾಷ್ಟ್ರಗಳು ಒಪ್ಪಿರುವುದನ್ನು ವಿಶ್ವಸಂಸ್ಥೆಯ ನಾಯಕರು ಸ್ವಾಗತಿಸಿದ್ದಾರೆ. ಇದೊಂದು ಸಕರಾತ್ಮಕ ಹೆಜ್ಜೆ ಎಂದು ವಿಶ್ವಸಂಸ್ಥೆ ಮುಖ್ಯಸ್ಥ ಆಂಟನಿಯೋ ಗುಟರೆಸ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
“… ಕಾಶ್ಮೀರದ ನಿಯಂತ್ರಣ ರೇಖೆಯಲ್ಲಿ ಕದನ ವಿರಾಮವನ್ನು ಗಮನಿಸಲು ಮತ್ತು ಸ್ಥಾಪಿತ ಕಾರ್ಯವಿಧಾನಗಳ ಮೂಲಕ ತೊಡಗಿಸಿಕೊಳ್ಳಲು ಒಪ್ಪಂದದ ಕುರಿತು ಭಾರತ ಮತ್ತು ಪಾಕಿಸ್ತಾನದ ಮಿಲಿಟರಿಗಳು ನೀಡಿದ ಜಂಟಿ ಹೇಳಿಕೆಯಿಂದ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್ ತುಂಬಾ ಉತ್ತೇಜಿತರಾಗಿದ್ದಾರೆ‘” ಎಂದು ವಿಶ್ವಸಂಸ್ಥೆ ಮುಖ್ಯಸ್ಥ ವಕ್ತಾರ ಸ್ಟೀಫನ್ ಡುಜಾರಿಕ್ ಗುರುವಾರ ದೈನಂದಿನ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

‘ಈ ಸಕಾರಾತ್ಮಕ ಬೆಳವಣಿಗೆ ಎರಡು ರಾಷ್ಟ್ರಗಳ ನಡುವೆ ಮುಂದೆ ನಡೆಯುವ ಮಾತುಕತೆಗಳಿಗೆ ಅವಕಾಶವನ್ನು ಕಲ್ಪಿಸಲಿದ್ದು, ಚರ್ಚೆಗೆ ದಾರಿಯೂ ಸುಗಮವಾಗಲಿದೆ ಎಂದು ಗುಟೆರಸ್ ಅಭಿಪ್ರಾಯಪಟ್ಟಿರುವುದಾಗಿ‘ ಡುಜಾರಿಕ್ ತಿಳಿಸಿದ್ದಾರೆ.
ಈ ಬಗ್ಗೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯವರು ಎರಡು ರಾಷ್ಟ್ರಗಳ ನಾಯಕರೊಂದಿಗೆ ಚರ್ಚೆ ನಡೆಸಲಿದ್ದಾರೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಡುಜಾರಿಕ್, ‘ಸದ್ಯಕ್ಕೆ ಅಂತ ಯೋಚನೆ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೆ, ಒಳ್ಳೆಯ ಕೆಲಸಗಳಿಗೆ ಸ್ಪಂದಿಸಲು ಪ್ರಧಾನ ಕಾರ್ಯದರ್ಶಿಯವರು ಸದಾ ಸಿದ್ಧರಿರುತ್ತಾರೆ‘ ಎಂದು ಹೇಳಿದ್ದಾರೆ.

ವಿಶ್ವಸಂಸ್ಥೆಯ 75ನೇ ಮಹಾ ಅಧಿವೇಶನದ ಅಧ್ಯಕ್ಷ ವೋಲ್ಕನ್ ಬೊಜ್ಕಿಕರ್ ಅವರು, ‘ಗಡಿ ಭಾಗದಲ್ಲಿ ಕದನವಿರಾಮದ ನಿಯಮಗಳನ್ನು ಪಾಲಿಸಲು ಒಪ್ಪಿಕೊಂಡಿರುವ ಭಾರತ ಮತ್ತು ಪಾಕಿಸ್ತಾನ ನಡೆಯನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ‘ ಎಂದು ಟ್ವೀಟ್ ಮಾಡಿದ್ದಾರೆ.
ಗಡಿಭಾಗದಲ್ಲಿನ ಉದ್ವಿಗ್ನತೆ ಕಡಿಮೆ ಮಾಡುವ ಮಹತ್ವದ ಕ್ರಮದಲ್ಲಿ ಭಾರತ ಮತ್ತು ಪಾಕಿಸ್ತಾನದ ಸೇನೆಯ ಅಧಿಕಾರಿಗಳು ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಕದನ ವಿರಾಮಕ್ಕೆ ಸಂಬಂಧಿಸಿದ ಎಲ್ಲಾ ಒಪ್ಪಂದಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಒಪ್ಪಿಕೊಂಡಿದ್ದಾರೆ.
ಕಳೆದ ವಾರವಷ್ಟೇ, ಕಣಿವೆ ರಾಜ್ಯದ ಹಿರಿಯ ರಾಜಕಾರಣಿ ಮೆಹಬೂಬಾ ಮುಫ್ತಿ ಕಾಶ್ಮೀರದಲ್ಲಿ ಶಾಂತಿ ಕಾಪಾಡಲು ಕೇಂದ್ರ ಸರ್ಕಾರ ಮುಂದಾಗಬೇಕು. ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಿ ತಾರ್ಕಿಕ ಅಂತ್ಯಕ್ಕೆ ಬರುವಂತೆ ಮುಫ್ತಿ ಆಗ್ರಹಿಸಿದ್ದರು.
Source: IE, DTnext








