ಕಳೆದ ವರ್ಷದ ಫೆಬ್ರವರಿಯಲ್ಲಿ ಸಿಎಎ-ಎನ್ ಆರ್ ಸಿ ಹೋರಾಟಕ್ಕೆ ಸಂಬಂಧಿಸಿದಂತೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಮತ್ತೆ ಮತ್ತೆ ನ್ಯಾಯಾಲಯದ ಛೀಮಾರಿಗೆ ಒಳಗಾಗುತ್ತಲೇ ಇದ್ದಾರೆ.
ಕೇಂದ್ರದ ಬಿಜೆಪಿ ಸರ್ಕಾರ ಮತೀಯ ಆಧಾರದ ಮೇಲೆ ದೇಶದ ಪ್ರಜೆಗಳ ಪೌರತ್ವ ನಿರ್ಧರಿಸುವ ಉದ್ದೇಶದಿಂದ ಜಾರಿಗೆ ತಂದಿರುವ ಸಿಎಎ-ಎನ್ ಆರ್ ಸಿ ವಿರುದ್ಧ ರಾಜಧಾನಿಯಲ್ಲಿ ತಿಂಗಳುಗಟ್ಟಲೆ ನಿರಂತರ ಹೋರಾಟ ನಡೆಸುತ್ತಿದ್ದ ಪ್ರತಿಭಟನಾಕಾರರನ್ನು ಆ ಜಾಗದಿಂದ ತೆರವು ಮಾಡುವ ಕೇಂದ್ರ ಸರ್ಕಾರ ನಡೆಸಿದ ಎಲ್ಲಾ ಪ್ರಯತ್ನಗಳು ವಿಫಲವಾಗಿದ್ದವು.
ಅಷ್ಟರಲ್ಲಿ ದೆಹಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ ಸಚಿವ ಅನುರಾಗ್ ಠಾಕೂರ್, ದೆಹಲಿ ಬಿಜೆಪಿ ನಾಯಕರಾದ ಕಪಿಲ್ ಮಿಶ್ರಾ, ಪರ್ವೇಶ್ ಶರ್ಮಾ ಸೇರಿದಂತೆ ಹಲವರು ಪ್ರತಿಭಟನಾಕಾರರ ಮೇಲೆ ದಾಳಿ ಮಾಡಿ ಅವರನ್ನು ಓಡಿಸುವಂತೆ ತಮ್ಮ ಬೆಂಬಲಿಗರಿಗೆ ಕರೆ ನೀಡಿದ್ದರು. ಕಪಿಲ್ ಶರ್ಮಾ ಸ್ವತಃ ಜನರ ಗುಂಪು ಕಟ್ಟಿಕೊಂಡು ಬಂದು ದಾಳಿ ನಡೆಸಿದ್ದರು. ಆ ವೇಳೆ ಪ್ರತಿಭಟನಾನಿರತರನ್ನು ತೆರವು ಮಾಡುವ ಉದ್ದೇಶದಿಂದಲೇ ಬಿಜೆಪಿ ಬೆಂಬಲಿಗರು ದಿಢೀರನೇ ರಾತ್ರೋರಾತ್ರಿ ಮುಸ್ಲಿಂ ಬಾಹುಳ್ಯದ ಪ್ರದೇಶಗಳ ಮೇಲೆ ದಿಢೀರ್ ದಾಳಿಸಿದ ಆರೋಪ ಕೇಳಿಬಂದಿತ್ತು. ಬಳಿಕ ಸುಮಾರು ಆರು ದಿನಗಳ ಮುಸ್ಲಿಂ ಬಾಹುಳ್ಯದ ಈಶಾನ್ಯ ದೆಹಲಿ ಅಕ್ಷರಶಃ ಹೊತ್ತಿ ಉರಿದಿತ್ತು. ಪ್ರಾರ್ಥನಾ ಮಂದಿರಗಳ ಮೇಲೆ ದಾಳಿ, ಮನೆಮನೆಗೆ ನುಗ್ಗಿ ಬೆಂಕಿ ಹಚ್ಚುವುದು, ಅಂತಹ ದಾಳಿಗಳಿಗೆ ಬಹುತೇಕ ಪೊಲೀಸರು ಪರೋಕ್ಷ ಕುಮ್ಮಕ್ಕು ನೀಡುವುದು ಇಲ್ಲವೇ ಮೂಕಪ್ರೇಕ್ಷಕರಾಗಿ ನಿಂತು ಸಹಕರಿಸುವುದು ಟಿವಿ ವಾಹಿನಿಗಳ ಲೈವ್ ಕವರೇಜ್ ಮೂಲಕ ಜಗಜ್ಜಾಹೀರಾಗಿತ್ತು. ಕೊನೆಗೆ ದೆಹಲಿ ಹೈಕೋರ್ಟ್ ಮಧ್ಯಪ್ರವೇಶದ ಬಳಿಕ ಗಲಭೆ ತಹಬದಿಗೆ ಬಂದಿತ್ತು.
ಘಟನೆ ನಡೆದ ಹಲವು ತಿಂಗಳ ಬಳಿಕ ಗಲಭೆಯ ಕುರಿತ ತನಿಖೆ ಕೈಗೆತ್ತಿಕೊಂಡ ದೆಹಲಿ ಪೊಲೀಸರು, ಗಲಭೆಗೆ ಕುಮ್ಮಕ್ಕು ನೀಡಿದ, ಟಿವಿ ಕ್ಯಾಮರಾಗಳ ಮುಂದೆಯೇ ದಾಳಿ ನಡೆಸಲು ಸೂಚನೆ ನೀಡಿದವರನ್ನು ಬಿಟ್ಟು, ಗಲಭೆ ಸಂತ್ರಸ್ತರು ಮತ್ತು ಸಿಎಎ ಪ್ರತಿಭಟನಾಕಾರರ ಮೇಲೆಯೇ ಪ್ರಕರಣ ದಾಖಲಿಸಿ ಎಫ್ ಐಆರ್ ಹಾಕಿದ್ದರು. ದೆಹಲಿ ಪೊಲೀಸರು ಈ ನಡೆ ಕೂಡ ದೆಹಲಿ ಹೈಕೋರ್ಟಿನ ಕೆಂಗಣ್ಣಿಗೆ ಗುರಿಯಾಗಿತ್ತು. ಅದೇ ಗಲಭೆಗೆ ಕುಮ್ಮಕ್ಕು ನೀಡಿದ ಆರೋಪ ಹೊರಿಸಿ ಜೆಎನ್ ಯು ಹಳೆಯ ವಿದ್ಯಾರ್ಥಿ ಹಾಗೂ ಸಿಎಎ ಹೋರಾಟಗಾರ ಉಮರ್ ಖಾಲೀದ್ ರನ್ನು ದೆಹಲಿ ಪೊಲೀಸರು ಕಳೆದ ವರ್ಷದ ಸೆಪ್ಟೆಂಬರಿನಲ್ಲಿ ಬಂಧಿಸಿದ್ದರು.

ಅವರ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ವೇಳೆ ಮೊನ್ನೆ ಖಾಲೀದ್ ಪರ ವಕೀಲರು ನ್ಯಾಯಾಲಯದ ಮುಂದೆ ಮಂಡಿಸಿದ ವಿವರ ಮತ್ತು ಸಾಕ್ಷ್ಯಗಳು, ದೆಹಲಿ ಪೊಲೀಸ್ ವ್ಯವಸ್ಥೆ, ಪತ್ರಿಕೋದ್ಯಮ ತಲುಪಿರುವ ಅಧಃಪತನ, ಆಡಳಿತ ಪಕ್ಷ ಬಿಜೆಪಿಯ ಹುನ್ನಾರಗಳು ಮತ್ತು ಬಹಳ ಮುಖ್ಯವಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯ ಅಣಕದಂತೆ ಇರುವ ಯುಎಪಿಎ(ಕಾನೂನುಬಾಹಿರ ಚಟುವಟಿಕೆ (ತಡೆ) ಕಾಯ್ದೆಯ ಕರಾಳ ಮುಖಗಳನ್ನು ಅನಾವರಣಗೊಳಿಸಿವೆ.
ದೆಹಲಿ ನ್ಯಾಯಾಲಯದಲ್ಲಿ ನಡೆದ ಜಾಮೀನು ಪ್ರಕರಣದ ವಿಚಾರಣೆಯ ವಿವರಗಳು ನಿಜಕ್ಕೂ ಈ ವಿಷಯದಲ್ಲಿ ಬೆಚ್ಚಿಬೀಳಿಸುವಂತಿದ್ದು, ಯಾವ ವೀಡಿಯೋವನ್ನು ಸಾಕ್ಷ್ಯವಾಗಿ ಪರಿಗಣಿಸಿ, ದೆಹಲಿ ಪೊಲೀಸರು, ಖಾಲೀದ್ ಗಲಭೆಗೆ ಕುಮ್ಮಕ್ಕು ನೀಡಿದ್ದಾನೆ ಎಂದು ಪ್ರಕರಣ ದಾಖಲಿಸಿ ಎಫ್ ಐಆರ್ ಹೂಡಿದ್ದಾರೋ, ಆ ವೀಡಿಯೋವೇ ನಕಲಿ ಎಂಬುದು ನ್ಯಾಯಾಲಯದ ಮುಂದೆ ಮಂಡನೆಯಾಗಿದೆ. ಪೊಲೀಸರು ಖಾಲೀದ್ ಮೇಲೆ ಪ್ರಕರಣ ಹೂಡುವಾಗ ಪರಿಗಣಿಸಿದ ವೀಡಿಯೋ ವಾಸ್ತವವಾಗಿ ಅವರಿಗೆ ಸಿಕ್ಕಿದ್ದು ರಿಪಬ್ಲಿಕ್ ಮತ್ತು ನ್ಯೂಸ್18 ಸುದ್ದಿವಾಹಿನಿಗಳ ಮೂಲಕ. ಆ ಸುದ್ದಿ ವಾಹಿನಿಗಳು ಆ ವೀಡಿಯೋ ಪಡೆದಿದ್ದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಲವೀಯ ಟ್ವೀಟ್ ಮೂಲಕ. ಅಮಿತ್ ಮಾಲವೀಯ ಆ ವೀಡಿಯೋ ಬಳಸಿದ್ದು, ಖಾಲೀದ್ ಆ ವರ್ಷದ ಫೆ.17ರಂದು ಮಹಾರಾಷ್ಟ್ರದಲ್ಲಿ ಮಾಡಿದ್ದ ಭಾಷಣದ ವೀಡಿಯೋದ ತಿರುಚಿದ ರೂಪವಾಗಿತ್ತು.
ನಿಜವಾಗಿಯೂ ಖಾಲೀದ್ ಆ ವೀಡಿಯೋದಲ್ಲಿ ಹಿಂಸೆಗೆ ಪ್ರಚೋದನೆ ಕೊಡುವಂತಹ ಯಾವ ಮಾತನ್ನೂ ಆಡಿಲ್ಲದಿದ್ದರೂ, ವಾಸ್ತವಾಗಿ ಶಾಂತಿಯುತ ಹೋರಾಟಕ್ಕೆ, ದೇಶದ ಧ್ವಜ ಹಿಡಿದು ಗಾಂಧೀ ಸತ್ಯಾಗ್ರಹದ ಮಾದರಿಯಲ್ಲಿ ಹೋರಾಟ ಮುಂದುವರಿಸುವ ಬಗ್ಗೆ ಮಾತನಾಡಿದ್ದರೂ, ಆ ಮಾತುಗಳನ್ನು ಕತ್ತರಿಸಿ, ಕೃತಕವಾಗಿ ಪ್ರಚೋದನಕಾರಿ ಭಾಷಣ ಮಾಡಿದಂತೆ ತಿರುಚಿ ಅಮಿತ್ ಮಾಲವೀಯ ಟ್ವೀಟ್ ಮಾಡಿದ್ದರು! ಆ ಟ್ವೀಟ್ ವೀಡಿಯೋವನ್ನೇ ರಿಪಬ್ಲಿಕ್ ಮತ್ತು ನ್ಯೂಸ್ 18 ವಾಹಿನಿಗಳು ರೋಚಕ ಸುದ್ದಿಯಾಗಿ ಪ್ರಸಾರ ಮಾಡಿದ್ದವು. ಸುದ್ದಿ ಪ್ರಸಾರಕ್ಕೆ ಮುಂಚೆ ಆ ವೀಡಿಯೊದ ಸಾಚಾತನವನ್ನು ತಾವು ಪರೀಕ್ಷೆ ಮಾಡಿಲ್ಲ ಮತ್ತು ಆ ವೀಡಿಯೋ ತಮ್ಮ ಸಿಬ್ಬಂದಿ ಚಿತ್ರೀಕರಿಸಿದ್ದಲ್ಲ ಎಂದು ದೆಹಲಿ ಪೊಲೀಸರಿಗೆ ನೀಡಿದ ಲಿಖಿತ ವಿವರಣೆಯಲ್ಲಿ ನ್ಯೂಸ್ 18 ವಾಹಿನಿ ಹೇಳಿದೆ!
ಈ ವಿವರಗಳನ್ನು ನ್ಯಾಯಾಲಯದ ಮುಂದೆ ಮಂಡಿಸಿದ ಖಾಲೀದ್ ವಕೀಲ ತ್ರಿದೀಪ್ ಪಯಾಸ್, ಮೊದಲನೆಯದಾಗಿ ಪೊಲೀಸರು ದಾಖಲಿಸಿದ ಎಫ್ ಐಆರ್ ಸಂಪೂರ್ಣ ಕಟ್ಟುಕತೆ. ಎರಡನೆಯದಾಗಿ ಸುಳ್ಳು ಸಾಕ್ಷಿಗಳು, ಯಾವುದೇ ಪರಿಶೀಲನೆ ನಡೆಸದ ದಾಖಲೆಗಳ ಆಧಾರದ ಮೇಲೆ ಆರೋಪ ಪಟ್ಟಿ ಸಲ್ಲಿಸಿರುವುದು ಕೂಡ ಪೊಲೀಸರು ಈ ಪ್ರಕರಣವನ್ನು ಎಂಥ ದುರುದ್ದೇಶದಿಂದ ದಾಖಲಿಸಿದ್ದಾರೆ ಎಂಬುದನ್ನು ತೋರಿಸುತ್ತದೆ ಎಂದು ನ್ಯಾಯಾಲಯದ ಗಮನ ಸೆಳೆದಿದ್ದಾರೆ. ಜೊತೆಗೆ ಪೊಲೀಸರು ಯಾವುದನ್ನು ಖಾಲೀದ್ ಪ್ರಚೋದನಕಾರಿ ಭಾಷಣ ಮಾಡಿರುವ ವೀಡಿಯೋ ಕ್ಲಿಪ್ ಎಂದು ಹೇಳಿದ್ದರೋ ಆ ವೀಡಿಯೋ, ಅದೇ ತುಣುಕಿನ ಮೂಲ ವೀಡಿಯೋ ಮತ್ತು ಮಹಾರಾಷ್ಟ್ರದ ಸಭೆಯಲ್ಲಿ ಖಾಲೀದ್ ಮಾಡಿದ್ದ ಆ ಭಾಷಣದ ಪೂರ್ತಿ 21 ನಿಮಿಷದ ವೀಡಿಯೋವನ್ನು ಕೂಡ ನ್ಯಾಯಾಧೀಶರ ಮುಂದೆ ಸಂಪೂರ್ಣ ಪ್ರದರ್ಶಿಸಿದ್ದಾರೆ.

ಇದೇ ವೇಳೆ ವಕೀಲರು, ಉಮರ್ ಖಾಲೀದ್ ವಿರುದ್ಧ ದೆಹಲಿ ಪೊಲೀಸರು ಮತ್ತು ಮಾಧ್ಯಮಗಳೇ ಸಂಚು ಮಾಡಿವೆ ಎಂಬುದಕ್ಕೆ ಅವರ ವಿರುದ್ಧದ ಆರೋಪದ ಪ್ರಮುಖ ಸಾಕ್ಷ್ಯವಾಗಿರುವ ಈ ವೀಡಿಯೋ ತುಣುಕಿನ ಪ್ರಸಂಗವೇ ಸಾಕ್ಷಿ. ತಮಗೆ ಸಿಕ್ಕ ವೀಡಿಯೋದ ಸಾಚಾತನವನ್ನು ಪರೀಕ್ಷೆ ಮಾಡಿಕೊಳ್ಳದೆ, ಒಬ್ಬ ವ್ಯಕ್ತಿಯನ್ನು ದೇಶದ್ರೋಹಿ ಎಂದು ಬಿಂಬಿಸಿರುವ ಈ ಮಾಧ್ಯಮಗಳದ್ದು ಪತ್ರಿಕೋದ್ಯಮವಲ್ಲ. ಪತ್ರಿಕೋದ್ಯಮದ ಸಾವು ಇದು ಎಂದೂ ಹೇಳಿದ್ದಾರೆ. ಪೊಲೀಸರು ಮಾರ್ಚ್ 6ರಂದು ಖಾಲೀದ್ ವಿರುದ್ಧ ಎಫ್ ಐಆರ್ ದಾಖಲಿಸುವಾಗ ಅವರಿಗೆ ಇದ್ದ ಏಕೈಕ ಸಾಕ್ಷ್ಯ ಆ ನಕಲಿ ವೀಡಿಯೋ ಮಾತ್ರ. ಬಳಿಕ ಅವರು ಜುಲೈ 6ರಂದು ಖಾಲೀದ್ ಭಾಷಣದ ಪೂರ್ಣ ವೀಡಿಯೋ ಪಡೆದುಕೊಂಡರೂ ಅದನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸದೆ ಮರೆಮಾಚಿದ್ದಾರೆ ಎಂಬ ಸಂಗತಿಯನ್ನೂ ಪಯಾಸ್ ಪ್ರಸ್ತಾಪಿಸಿದರು.
ಅಲ್ಲದೆ ಮತ್ತೊಂದು ಪ್ರಕರಣದಲ್ಲಿ, ಅಂದಿನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾರತ ಭೇಟಿಯ ಸಂದರ್ಭದಲ್ಲಿ ಗುಜರಾತಿನಲ್ಲಿ ಆಯೋಜಿಸಿದ್ದ ನಮಸ್ತೆ ಟ್ರಂಪ್ ಸಂದರ್ಭದಲ್ಲಿ ಗಲಭೆ ಸೃಷ್ಟಿಸಲು ಖಾಲೀದ್ ಸಂಚು ರೂಪಿಸಿದ್ದರು ಎಂದು ದೆಹಲಿ ಪೊಲೀಸರು ಪ್ರಕರಣ ದಾಖಲಿಸಿದ್ಧಾರೆ. ಪೊಲೀಸರ ಪ್ರಕಾರ, ಜನವರಿ ಎಂಟರಂದೇ ಖಾಲೀದ್ ಪ್ರಕರಣದ ಇತರೆ ಆರೋಪಿಗಳೊಂದಿಗೆ ಸೇರಿ ಸಂಚು ರೂಪಿಸಿದ್ದರು ಎನ್ನಲಾಗಿದೆ. ಆದರೆ ವಾಸ್ತವವಾಗಿ ಟ್ರಂಪ್ ಭೇಟಿಯ ವಿಷಯ ಆ ವರ್ಷದ ಘೋಷಣೆಯಾಗಿದ್ದೇ ಫೆಬ್ರವರಿಯಲ್ಲಿ! ಈ ಎಫ್ ಐಆರ್ ಮತ್ತುಆರೋಪಪಟ್ಟಿಗಳು ಎಂಥ ನಗೆಪಾಟಲಿನ ಕಟ್ಟುಕತೆಗಳು ಎಂಬುದಕ್ಕೆ ಇದಕ್ಕಿಂತ ಬೇರೆ ನಿದರ್ಶನ ಬೇಕೆ ಎಂದು ಪಯಾಸ್ ಕೇಳಿದ್ದಾರೆ.
ಪ್ರಕರಣದ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 3ಕ್ಕೆ ಮುಂದೂಡಲಾಗಿದೆ.
ಆದರೆ, ಖಾಲೀದ್ ವಕೀಲರು ನ್ಯಾಯಾಲಯದ ಮುಂದೆ ಹಾಜರುಪಡಿಸಿರುವ ವೀಡಿಯೋ ಮತ್ತು ಮತ್ತು ಮಂಡಿಸಿರುವ ವಿಷಯಗಳು ದೇಶದ ಆಡಳಿತ ಪಕ್ಷ, ಆ ಪಕ್ಷದ ಪರ ತಾಳ ಹಾಕುವ ಮಾಧ್ಯಮ ಮತ್ತು ಆಡಳಿತಪಕ್ಷದ ಕೈಗೊಂಬೆಯಾಗಿರುವ ಪೊಲೀಸ್ ವ್ಯವಸ್ಥೆ ಕೈಜೋಡಿಸಿದರೆ, ಯುಎಪಿಎ ನಂತಹ ಆಳುವ ಮಂದಿಯ ದಬ್ಬಾಳಿಕೆ, ದಮನ ಮತ್ತು ಪ್ರಶ್ನಿಸುವವರ ಬಾಯಿ ಮುಚ್ಚಿಸಲೆಂದೇ ಸೃಷ್ಟಿಸಿರುವ ಅಮಾನವೀಯ ಅಸ್ತ್ರವನ್ನು ಹೇಗೆಲ್ಲಾ ದುರುಪಯೋಗಪಡಿಸಿಕೊಳ್ಳಬಹುದು ಎಂಬುದನ್ನು ಸಾರಿ ಹೇಳಿವೆ.

ಇಲ್ಲಿ ಬಹಳ ಮುಖ್ಯವಾಗಿ ಗಮನಿಸಬೇಕಿರುವುದು ‘ಕ್ರೊನಾಲಜಿ’. ಮೊದಲು ಹಳೆಯ ವೀಡಿಯೋ ತುಣುಕೊಂದನ್ನು ಹುಡುಕಿ, ಅದನ್ನು ತಿರುಚಿ, ಪ್ರಚೋದನಕಾರಿ ಭಾಷಣದಂತೆ ಬಿಂಬಿಸಿ ಆಡಳಿತ ಪಕ್ಷದ ಐಟಿ ಸೆಲ್ ಮುಖ್ಯಸ್ಥ ಟ್ವೀಟ್ ಮಾಡುತ್ತಾನೆ, ಆ ವೀಡಿಯೋವನ್ನೇ ಬಳಸಿಕೊಂಡು ಪ್ರಮುಖ ಸುದ್ದಿವಾಹಿನಿಗಳು ಕಟ್ಟುಕತೆಯನ್ನೇ ಸಾಕ್ಷಾತ್ ವರದಿ ಎಂದು ಬಿಂಬಿಸುತ್ತವೆ, ಬಳಿಕ ಪೊಲೀಸರು ಆ ಟಿವಿ ವರದಿಯನ್ನೇ ಆಧಾರವಾಗಿಟ್ಟುಕೊಂಡು, ವೀಡಿಯೋದ ಸಾಚಾತನವನ್ನೂ ಪರಿಶೀಲಿಸದೆ ನೇರವಾಗಿ ಖಾಲೀದ್ ವಿರುದ್ಧ ಯುಎಪಿಎನಂತಹ ಘೋರ ಪ್ರಕರಣ ಹೂಡಿ ಎಫ್ ಐಆರ್ ದಾಖಲಿಸಿ ಅವರನ್ನು ಬಂಧಿಸಿ ಜೈಲಿಗಟ್ಟುತ್ತಾರೆ!
ಹೀಗೆ ಕ್ರೊನಾಲಜಿ ಮಂಡಿಸುವ ಮೂಲಕ ವಕೀಲ ಪಯಾಸ್, ಬಹಳ ಗಂಭೀರವಾದ ಪ್ರಶ್ನೆಯನ್ನೂ ನ್ಯಾಯಾಲಯದ ಮುಂದಿಟ್ಟಿದ್ದಾರೆ. ಅದು; ನ್ಯಾಯಾಂಗ ವ್ಯವಸ್ಥೆಯನ್ನೇ ಅಪ್ರಸ್ತುತಗೊಳಿಸುವ ಮತ್ತು ನ್ಯಾಯಾಂಗದ ಮಧ್ಯಪ್ರವೇಶವನ್ನೇ ತಳ್ಳಿಹಾಕುವ ಯುಎಪಿಎನಂತಹ ಕಾಯ್ದೆಯ ಉದ್ದೇಶ ನಿಜವಾಗಿಯೂ ಏನು? ರಾಜಕೀಯ ವಿರೋಧಿಗಳು, ಹೋರಾಟಗಾರರು, ಸರ್ಕಾರದ ನೀತಿ-ನಿಲುವು ಪ್ರಶ್ನಿಸುವವರನ್ನು ದೇಶದ ನ್ಯಾಯಾಂಗ ವ್ಯವಸ್ಥೆಯ ವಿಚಾರಣೆಯ ಹೊರಗಿಟ್ಟು ಹಣಿಯುವುದೇ? ಎಂಬುದು ಆ ಪ್ರಶ್ನೆ. ಬಹುಶಃ ವಕೀಲರು ನ್ಯಾಯಾಲಯದ ಮುಂದೆ ಮಂಡಿಸಿರುವ ಈ ವಾದ ಮತ್ತು ಸಾಕ್ಷ್ಯಗಳಿಗೆ ಪೀಠದ ಮನ್ನಣೆ ಸಿಕ್ಕರೆ ಯುಎಪಿಎ ಕಾಯ್ದೆಯ ಪ್ರಸ್ತುತತೆಯ ಪ್ರಶ್ನೆಗೂ ಉತ್ತರ ಸಿಗಬಹುದು.