ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರಕ್ಷಿಸುತ್ತಿದೆ ಎಂದು ಭಾರತದ ಮಾಧ್ಯಮಗಳೂ, ಮೋದಿ ಸಂಪುಟದ ಸಚಿವರೂ ಪ್ರಚಾರ ಮಾಡುತ್ತಿರುವ ನಡುವೆಯೇ, ನಿಜಕ್ಕೂ ಉಕ್ರೇನಿನಲ್ಲಿ ಸಿಲುಕಿಕೊಂಡಿರುವ ಭಾರತೀಯ ವಿದ್ಯಾರ್ಥಿಗಳು ಮಾಡಿರುವ ವಿಡಿಯೋಗಳು ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ಬೇಜವಾಬ್ದಾರಿಯನ್ನೂ, ಅವಕಾಶವಾದಿತನವನ್ನೂ ಬಯಲಿಗೆಳೆದಿದೆ.
ಭಾರತದಲ್ಲಿ ಮುಖ್ಯವಾಹಿನಿಯ ಮಾಧ್ಯಮಗಳು ನರೇಂದ್ರ ಮೋದಿ ಪರವಾಗಿ ನಡೆಸುತ್ತಿರುವ ಕಾರ್ಯಕ್ರಮಗಳಿಗಿಂತ ಭಿನ್ನವಾಗಿ ಉಕ್ರೇನಿನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳ ವಾಸ್ತವ ಇದೆ ಎನ್ನುವುದು ಸಾಬೀತಾಗಿದೆ.
ಅಷ್ಟಕ್ಕೂ, ಉಕ್ರೇನಿನಲ್ಲಿ ಸಿಲುಕಿರುವ ವಿದ್ಯಾರ್ಥಿಗಳನ್ನು ಸರ್ಕಾರ ತೆರವುಗೊಳಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಯುದ್ಧಗ್ರಸ್ತ ಉಕ್ರೇನಿನಿಂದ ಪಕ್ಕದ ದೇಶಗಳಿಗೆ ಗಡಿದಾಟಿದ ವಿದ್ಯಾರ್ಥಿಗಳನ್ನು ಮತ್ತು ನಾಗರಿಕರನ್ನು ಮಾತ್ರ ಕೇಂದ್ರ ಸರ್ಕಾರ ಮರಳಿ ತಾಯ್ನಾಡಿಗೆ ತಲುಪಿಸಿದೆಯೇ ಹೊರತು ಉಕ್ರೇನ್ ದೇಶದೊಳಗೆ ಸಿಲುಕಿರುವ ಹಾಗೂ ಗಡಿ ದಾಟಲು ವಿಫಲವಾದ ವಿದ್ಯಾರ್ಥಿಗಳ ರಕ್ಷಣೆಗೆ ಯಾವ ಕ್ರಮವನ್ನು ಕೈಗೊಂಡಿದೆ ಎನ್ನುವುದು ಪ್ರಶ್ನೆಯಾಗಿಯೇ ಉಳಿದಿದೆ.
ಪೋಲೆಂಡ್, ಹಂಗೇರಿ, ರೊಮಾನಿಯಾ ಮೊದಲಾದ ಉಕ್ರೇನ್ ನೆರೆ ದೇಶಗಳಿಗೆ ತಲುಪಿದವರನ್ನು ಮಾತ್ರ ಇದುವರೆಗೂ ಭಾರತಕ್ಕೆ ತರಲಾಗುತ್ತಿದೆ. ಉಕ್ರೇನಿನಲ್ಲಿ ಸಿಲುಕಿರುವ ಸಾವಿರಾರು ವಿದ್ಯಾರ್ಥಿಗಳಿಗೆ ಭಾರತದ ರಾಯಭಾರ ಕಛೇರಿಯಿಂದಲೂ ಸರಿಯಾದ ಸ್ಪಂದನೆ ದೊರಕುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಅದೂ ಅಲ್ಲದೆ, ರಷ್ಯಾ-ಉಕ್ರೇನ್ ಸಂಘರ್ಷದ ಕುರಿತಂತೆ ಭಾರತದ ನಿಲುವು ಉಕ್ರೇನಿಗರ ಕೋಪಕ್ಕೆ ಕಾರಣವಾಗಿದ್ದು, ಭಾರತದ ಮೇಲಿನ ಕೋಪವನ್ನು ಭಾರತೀಯ ವಿದ್ಯಾರ್ಥಿಗಳ ಮೇಲೆ ತೀರಿಸುತ್ತಿದ್ದಾರೆ.
ಪೋಲೆಂಡ್ ಗಡಿದಾಟಲು ಹೊರಟ ವಿದ್ಯಾರ್ಥಿಗಳನ್ನು ಉಕ್ರೇನ್ ತೊರೆಯದಂತೆ ಅಲ್ಲಿನ ಸೈನಿಕರು ದೌರ್ಜನ್ಯ, ದಾಳಿ ನಡೆಸಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಯುದ್ಧಪೀಡಿತ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳು ಭಾನುವಾರ ಪೋಲೆಂಡ್ ಗಡಿಯತ್ತ ತೆರಳುತ್ತಿದ್ದಾಗ ಉಕ್ರೇನ್ ಭದ್ರತಾ ಪಡೆಗಳು ದೇಶ ತೊರೆಯದಂತೆ ತಡೆದು, ಥಳಿಸಿರುವ ಘಟನೆಗಳು ವರದಿಯಾಗಿವೆ. ಉಕ್ರೇನ್-ಪೋಲೆಂಡ್ ಗಡಿಯಲ್ಲಿರುವ ಶೆಹಿನಿಯಲ್ಲಿ ಹಲವಾರು ಭಾರತೀಯ ವಿದ್ಯಾರ್ಥಿಗಳು ಅದರಲ್ಲೂ ಹೆಚ್ಚಿನ ಸಂಖ್ಯೆಯಲ್ಲಿದ್ದ ಮಲಯಾಳಿ ವಿದ್ಯಾರ್ಥಿಗಳನ್ನು ಅಲ್ಲಿನ ಭದ್ರತಾ ಪಡೆ ಸಿಬ್ಬಂದಿ ಮತ್ತು ಪೊಲೀಸರು ತಡೆದು, ಥಳಿಸಿದ್ದಾರೆ. ಪೋಲೆಂಡ್‌ಗೆ ಹೋಗಲು ಪ್ರಯತ್ನಿಸುತ್ತಿರುವ ವಿದ್ಯಾರ್ಥಿಗಳ ಕಡೆಗೆ ಉಕ್ರೇನ್ ಸೈನಿಕರು ಮತ್ತು ಪೊಲೀಸರು ತಮ್ಮ ವಾಹನಗಳನ್ನು ನುಗ್ಗಿಸಿ, ವಿದ್ಯಾರ್ಥಿಗಳನ್ನು ಅಡ್ಡಗಟ್ಟಿ ಹಿಡಿದು ಥಳಿಸಿದ್ದಾರೆ. ಅಲ್ಲದೇ ಗಾಳಿಯಲ್ಲಿ ಗುಂಡು ಹಾರಿಸಿ ಬೆದರಿಸಿರುವ ವಿಡಿಯೊ ತುಣುಕನ್ನು ವಿದ್ಯಾರ್ಥಿಗಳು ಹಂಚಿಕೊಂಡಿದ್ದಾರೆ.
ಆದರೂ ಭಾರತದ ಮಾಧ್ಯಮಗಳು ಯುದ್ಧವನ್ನು ರೋಮಾಂಚಕಾರಿ ಎಂದು ಬಿಂಬಿಸುತ್ತಾ, ನರೇಂದ್ರ ಮೋದಿ ಯುದ್ಧ ನಿಲ್ಲಿಸಲು ಶಕ್ತರಾಗಿದ್ದಾರೆ ಎಂಬ ಭ್ರಮಾತ್ಮಕ ಲೋಕವನ್ನು ಇಲ್ಲಿ ಸೃಷ್ಟಿಸುತ್ತಿವೆ. ಉಕ್ರೇನ್ ನೆರೆ ರಾಷ್ಟ್ರಗಳಿಂದ ವಿದ್ಯಾರ್ಥಿಗಳನ್ನು ಕರೆ ತಂದಿರುವುದನ್ನು ಮಹಾ ಸಾಧನೆ ಎಂಬಂತೆ ಬಿಂಬಿಸಿ ಇಂತಹ ದುರಿತ ಕಾಲದಲ್ಲೂ ಮೋದಿ ಪರ ಪ್ರಚಾರ ನಡೆಸಲಾಗುತ್ತಿದೆ.
ಆದರೆ, ಕೇಂದ್ರ ಸಚಿವರ, ಬಿಜೆಪಿ ಹಾಗೂ ಮಾಧ್ಯಮಗಳ ಪರದೆಯನ್ನು ಇದೀಗ ಉಕ್ರೇನಿನಲ್ಲಿ ಸಿಲುಕಿರುವ ವಿದ್ಯಾರ್ಥಿಗಳು ಬಯಲಿಗೆಳೆಯುತ್ತಿದ್ದಾರೆ. ಉಕ್ರೇನಿನ ರಾಜಧಾನಿ ಕೈವ್ ನಗರದಲ್ಲಿ ಸಿಲುಕಿಕೊಂಡಿರುವುದಾಗಿ ಹೇಳುವ ವಿದ್ಯಾರ್ಥಿನಿಯೊಬ್ಬಳು, ಸರ್ಕಾರ ತಮ್ಮ ತೆರವು ಕಾರ್ಯಾಚರಣೆಗೆ ಬಂದಿಲ್ಲ, ರಾಯಭಾರ ಕಛೇರಿ ಸಿಬ್ಬಂದಿಗಳೂ ತಮಗೆ ಪ್ರತಿಕ್ರಿಯಿಸುತ್ತಿಲ್ಲ ಎಂದು ಆರೋಪಿಸಿ ವೀಡಿಯೋವನ್ನು ಹಂಚಿಕೊಂಡಿದ್ದಾಳೆ.
ವಿಡಿಯೋದಲ್ಲಿ ಭಾರತದ ಮಾಧ್ಯಮಗಳ ಸುದ್ದಿಗಳನ್ನು ನಂಬಬೇಡಿ ಎಂದು ಭಾರತೀಯರಿಗೆ ಕರೆ ನೀಡಿರುವ ವಿದ್ಯಾರ್ಥಿನಿ, ಪ್ರತಿಭಟನೆ ಮಾಡಿಯಾದರೂ ಭಾರತದಲ್ಲಿ ಸರ್ಕಾರಕ್ಕೆ ಒತ್ತಾಯಿಸಿ ನಮ್ಮನ್ನು ಕರೆಯಿಸಿಕೊಳ್ಳಿ ಎಂದು ಅಳಲು ತೋಡುವ ವಿಡಿಯೋ ಭಾರತ ಸರ್ಕಾರದ, ಫೇಕ್ ವಿಶ್ವಗುರುವಿನ ನಿಜಬಣ್ಣವನ್ನು ಬಯಲು ಮಾಡಿದೆ.
“ಭಾರತದ ಸರ್ಕಾರ ತಮ್ಮನ್ನು ಮರಳಿ ಕರೆ ತರಲು ʼಏನೂ ಮಾಡುತ್ತಿಲ್ಲʼ, ನಾವು ರಾಯಭಾರ ಕಛೇರಿ ಸಿಬ್ಬಂದಿಗಳಿಗೆ ಕರೆ ಮಾಡಿದರೆ ಅವರು ಸ್ವೀಕರಿಸುತ್ತಿಲ್ಲ. ರೊಮಾನಿಯಾ ಗಡಿಯಲ್ಲಿ (ಭಾರತೀಯ) ಹುಡುಗಿಯರ ಮೇಲೆ ಉಕ್ರೇನ್ ಸೈನಿಕರು ಹಲ್ಲೆ ನಡೆಸುವ ವಿಡಿಯೋಗಳನ್ನು ಅವರಿಗೆ ಕಳಿಸಿದರೂ ಯಾವ ಪ್ರತಿಕ್ರಿಯೆಗಳನ್ನು ಅವರು ಕೊಡುತ್ತಿಲ್ಲ. ನಮ್ಮ ಕರೆಯನ್ನು ನಿರಾಕರಿಸುತ್ತಿದ್ದಾರೆ ನಾವು ಉಕ್ರೇನ್ ಗಡಿಗಿಂತ 800 ಕಿಮೀ ದೂರದಲ್ಲಿದ್ದೇವೆ, ಅಧಿಕೃತ (ಸರ್ಕಾರಿ) ಸಹಾಯವಿಲ್ಲದಿದ್ದರೆ ಗಡಿ ದಾಟಲು ಸಾಧ್ಯವಿಲ್ಲ. ಆದರೂ ಸರ್ಕಾರ ಏನೂ ಮಾಡುತ್ತಿಲ್ಲ. ನನ್ನ ವಿಡಿಯೋ ನೋಡುತ್ತಿರುವ ಭಾರತೀಯರಲ್ಲಿ ಒಂದು ವಿನಂತಿ, ದಯವಿಟ್ಟು ನೀವು ಭಾರತದ ಮಾಧ್ಯಮಗಳನ್ನು ನಂಬಬೇಡಿ. ನಾವು 20 ರಿಂದ 30 ಸಾವಿರದಷ್ಟು ಮೆಡಿಕಲ್ ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದೇವೆ. ಪ್ರತಿಭಟನೆ ಮಾಡಿ ಸರ್ಕಾರದ ಮೇಲೆ ಒತ್ತಡ ತನ್ನಿ, ನಮ್ಮನ್ನು ಸುರಕ್ಷಿತವಾಗಿ ಕರೆ ತರುವಂತೆ ಒತ್ತಾಯಿಸಿ” ಎಂದು ಅವಲತ್ತುಕೊಂಡಿದ್ದಾಳೆ.
ಈಕೆಯ ಈ ವಿಡಿಯೋ ವ್ಯಾಪಕ ವೈರಲ್ ಆಗಿದ್ದು, ಬಿಜೆಪಿ ಸಂಸದ ವರುಣ್ ಗಾಂಧಿ ಈ ವಿಡಿಯೋವನ್ನು ಟ್ವೀಟ್ ಮಾಡಿ ಸರ್ಕಾರದ ನಿಷ್ಕ್ರಿಯತೆಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.