ಕನ್ನಡದ ಹೆಮ್ಮೆಯ ಕಾಂತಾರ ಚಿತ್ರದ ಮೂಲಕ ತುಳುನಾಡಿನ ದೈವ-ಕಾರಣಿಕಗಳ ಮಹತ್ವ, ಸಂಸ್ಕೃತಿಯ ಹಿನ್ನೆಲೆ ಇಡೀ ದೇಶಕ್ಕೆ ವ್ಯಾಪಿಸುತ್ತಿರುವುದರ ನಡುವೆ, ಉಕ್ರೇನ್ ಕುಟುಂಬವೊಂದು ತುಳುನಾಡಿನ ದೈವಗಳಲ್ಲೊಂದಾದ ಸ್ವಾಮಿ ಕೊರಗಜ್ಜನಿಗೆ ಅಗೆಲು ಸೇವೆ ನೀಡಿ ಗಮನ ಸೆಳೆದಿದೆ. ಅದಾಗ್ಯೂ, ಇವರು ದೈವವನ್ನು ನಂಬಲು ಪ್ರೇರಣೆಯಾದದ್ದು ಕಾಂತಾರ ಅಲ್ಲ ಬದಲಾಗಿ, ತಮ್ಮ ಬದುಕಿನ ಅನುಭವ.
ಪ್ರವಾಸಕ್ಕೆಂದು ಭಾರತಕ್ಕೆ ಬಂದಿದ್ದ ಉಕ್ರೇನ್ ದಂಪತಿಯ ಮಗುವಿನ ಅನಾರೋಗ್ಯದ ಹಿನ್ನೆಲೆ ಕೊರಗಜ್ಜನ ಕೋಲದಲ್ಲಿ ಹೇಳಿದ್ದ ಹರಕೆಯನ್ನು ತೀರಿಸಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಕಳೆದ ಕೆಲ ತಿಂಗಳ ಹಿಂದೆ ಪ್ರವಾಸಕ್ಕೆಂದು ಭಾರತಕ್ಕೆ ಬಂದಿದ್ದ ಉಕ್ರೇನ್ ಪ್ರಜೆಗಳಾದ ಆ್ಯಂಡ್ರೋ, ಪತ್ನಿ ಎಲೆನಾ ಹಾಗೂ ಮಗ ಮ್ಯಾಕ್ಸಿಂ ಉಡುಪಿಯ ಮಲ್ಪೆ ಕಡಲ ತೀರಕ್ಕೆ ಬಂದಿದ್ದರು. ಈ ಸಂದರ್ಭ ಉಡುಪಿಯ ಗೋಶಾಲೆಗೆ ತೆರಳಿದ್ದು, ಅಲಿ ಈ ವಿದೇಶಿ ಕುಟುಂಬ ನಾಡಿ ನೋಡಿ ಔಷಧಿ ಕೊಡುವ ಭಕ್ತಿ ಭೂಷಣ್ ಪ್ರಭೂಜಿರನ್ನು ಭೇಟಿಯಾಗಿದ್ದರು.ಈ ಸಂದರ್ಭ ಅನಾರೋಗ್ಯಕ್ಕೆ ಒಳಗಾಗಿದ್ದ ಮಗನ ವಿಚಾರವನ್ನು ಉಕ್ರೇನ್ ದಂಪತಿ ಪ್ರಭೂಜಿ ಗಮನಕ್ಕೆ ತಂದಿದ್ದು, ಅವರು ನಾಟಿ ಚಿಕಿತ್ಸೆ ಆರಂಭಿಸಿದ್ದರು. ಹಾಗಾಗಿ ಕಳೆದ ಮೂರು ತಿಂಗಳಿನಿಂದ ಕುಮ್ಡೇಲುವಿನ ಶ್ರೀ ರಾಧಾ ಸುರಭೀ ಗೋಮಂದಿರದಲ್ಲಿ ಉಕ್ರೇನ್ ದಂಪತಿ ವಾಸ್ತವ್ಯ ಹೂಡಿದ್ದರು.
ಜನ್ಮಾಷ್ಟಮಿಯ ಸಂದರ್ಭ ನಡೆದ ಕೊರಗಜ್ಜನ ಕೋಲದಲ್ಲಿ ಅನಾರೋಗ್ಯಕ್ಕೆ ಪರಿಹಾರ ನೀಡುವಂತೆ ಕೋರಿಕೊಂಡಿದ್ದರಲ್ಲದೆ, ಅಗೇಲು ಸೇವೆ ನೀಡುವುದಾಗಿ ದಂಪತಿ ಹರಕೆ ಹೊತ್ತಿದ್ದರು. ಇದೀಗ ಮ್ಯಾಕ್ಸಿಂ ಸಂಪೂರ್ಣ ಗುಣಮುಖನಾಗಿರುವ ಹಿನ್ನೆಲೆಯಲ್ಲಿ ಉಕ್ರೇನ್ ದಂಪತಿ ತಮ್ಮ ಹರಕೆಯನ್ನು ಪೂರೈಸಿದ್ದಾರೆ.