ಸದ್ಯದಲ್ಲೇ ಅನಾವರಣವಾಗಲಿದೆ ಚಿತ್ರದ ಮೊದಲ ಹಾಡು .

ಯೋಗರಾಜ್ ಸಿನಿಮಾಸ್ ಹಾಗೂ ರವಿ ಶಾಮನೂರು ಫಿಲಂಸ್ ಲಾಂಛನದಲ್ಲಿ ಈ ಹಿಂದೆ “ಪದವಿ ಪೂರ್ವ”ಚಿತ್ರವನ್ನು ನಿರ್ಮಿಸಿದ್ದ ದಾವಣಗೆರೆಯ ರವಿ ಶಾಮನೂರು ಹಾಗೂ ಯೋಗರಾಜ್ ಭಟ್ ಅವರು ನಿರ್ಮಿಸಿರುವ, ಅಮೋಲ್ ಪಾಟೀಲ್ ನಿರ್ದೇಶನದ ಹಾಗೂ “ಪದವಿಪೂರ್ವ” ಖ್ಯಾತಿಯ ಪೃಥ್ವಿ ಶಾಮನೂರು ನಾಯಕನಾಗಿ ನಟಿಸಿರುವ “ಉಡಾಳ” ಚಿತ್ರದ ಟೀಸರ್ ಇತ್ತೀಚೆಗಷ್ಟೇ “ಸರಿಗಮ” ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಿತ್ತು. ಟೀಸರ್ ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದ್ದು, ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ. ಇದೇ ಸಂದರ್ಭದಲ್ಲಿ ಚಿತ್ರತಂಡ ಬಿಡುಗಡೆಯ ದಿನಾಂಕ ಸಹ ಘೋಷಣೆ ಮಾಡಿದೆ. ಬಹು ನಿರೀಕ್ಷಿತ ಈ ಚಿತ್ರ ನವೆಂಬರ್ 14 ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಯೋಗರಾಜ್ ಭಟ್ ಅವರು ಬರೆದಿರುವ ಐದು ಹಾಡುಗಳಿಗೆ. ಚೇತನ್ ಡ್ಯಾವಿ, ಸಂಗೀತ ನೀಡಿದ್ದು ಜಸ್ಕರಣ್ ಸಿಂಗ್, ಉತ್ತರ ಕರ್ನಾಟಕ ಭಾಗದಲ್ಲಿ ತಮ್ಮ ಹಾಡಿನ ಮೂಲಕ ಜನಪ್ರಿಯಗೊಂಡ ಮಾಳು ನಿಪ್ನಾಳು, ಬಾಳು ಬೆಳಗುಂದಿ, ಕರಿಬಸವ, ಸೃಷ್ಟಿ ಶಾಮನೂರ್ ಈ ಚಿತ್ರಕ್ಕೆ ಹಾಡಿದ್ದಾರೆ. ಸೃಷ್ಟಿ ಶಾಮನೂರು ಹಾಗೂ “ಹಿತ್ತಲಕ ಕರಿಬೇಡ ಮಾವ” ಹಾಡಿನ ಖ್ಯಾತಿಯ ಮಾಳು ನಿಪ್ನಾಳು ಹಾಡಿರುವ ಉತ್ತರ ಕರ್ನಾಟಕ ಭಾಗದ ಜನಪ್ರಿಯ ಪದವಾದ “ಹೊಡಿ ಶ್ಯಾವಿಗ್ಯಾಗ ಮಜ್ಗಿ” ಎನ್ನುವ ಪದದಿಂದಲೇ ಶುರುವಾಗುವ ಮೊದಲ ಹಾಡು ಸದ್ಯದಲ್ಲೇ “ಸರಿಗಮ” ಯೂಟ್ಯೂಬ್ ಚಾನೆಲ್ ನಲ್ಲಿ ಅನಾವರಣವಾಗಲಿದೆ.
ಮೊದಲ ಚಿತ್ರದಲ್ಲೇ ತಮ್ಮ ನಟನೆಯ ಮೂಲಕ ಎಲ್ಲರ ಗಮನ ಸೆಳೆದಿದ್ದ ಪೃಥ್ವಿ ಶಾಮನೂರು ನಾಯಕನಾಗಿ ನಟಿಸಿರುವ ಎರಡನೇ ಚಿತ್ರವಿದು. ಹೃತಿಕ ಶ್ರೀನಿವಾಸ್ “ಉಡಾಳ” ಚಿತ್ರದ ನಾಯಕಿ. ಬಲ ರಾಜ್ವಾಡಿ, ಮಾಳು ನಿಪ್ನಾಳ್, ಹರೀಶ್ ಹಿರಿಯೂರು, ಬಿರಾದರ್, ಗೋವಿಂದೇಗೌಡ, ಸುಮಿತ್ ಸಂಕೋಜಿ, ವಾದಿರಾಜ ಬಬ್ಲಾದಿ, ಪ್ರವೀಣ್ ಗಸ್ತಿ, ದಯಾನಂದ ಬೀಳಗಿ, ರೇಣುಕ, ಶ್ರೀಧರ್, ದಾನಪ್ಪ, ಶಿಲ್ಪ ಶಾಂತಕುಮಾರ್, ಸೋನಿಯಾ ಮುಂತಾದವರು ತಾರಾಬಳಗದಲ್ಲಿದ್ದಾರೆ.

ಲವ್, ಕಾಮಿಡಿ, ಸಸ್ಪೆನ್ಸ್ ಹೀಗೆ ನೋಡುಗರಿಗೆ ಬೇಕಾದ ಎಲ್ಲಾ ಅಂಶಗಳಿರುವ ಈ ಚಿತ್ರವನ್ನು ಯೋಗರಾಜ್ ಭಟ್ ಅವರ ಜೊತೆಗೆ ಸಹ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಅಮೋಲ್ ಪಾಟೀಲ್ ನಿರ್ದೇಶಿಸಿದ್ದಾರೆ.
ಉತ್ತರ ಕರ್ನಾಟಕದ ಸೊಗಡಿನ ಈ ಚಿತ್ರಕ್ಕೆ ಶಿವಶಂಕರ್ ನೂರಂಬಡ ಛಾಯಾಗ್ರಹಣ, ಮಧು ತುಂಬಕೆರೆ ಸಂಕಲನ, ಕಾಂತಾರ ಖ್ಯಾತಿಯ ಅರ್ಜುನ್ ರಾಜ್, ವಿನೋದ್ ಸಾಹಸ ನಿರ್ದೇಶನ ಹಾಗೂ ಭಜರಂಗಿ ಮೋಹನ್, ರಘು ಅವರ ನೃತ್ಯ ನಿರ್ದೇಶನ ಹಾಗೂ ವೀರೇಶ್ ಪಿ.ಎಂ ಅವರ ಸಹ ನಿರ್ದೇಶನವಿದೆ. “ಉಡಾಳ”ನಿಗೆ ವಿಜಾಪುರ(ವಿಜಯಪುರ)ದಲ್ಲೇ ಹೆಚ್ಚಿನ ಭಾಗದ ಚಿತ್ರೀಕರಣವಾಗಿದೆ.