ಬೆಂಗಳೂರು : ಇತ್ತೀಚೆಗಷ್ಟೇ ರಾಷ್ಟ್ರಪತಿಗಳಿಂದ ಬಾಲ ಪುರಸ್ಕಾರ ಪ್ರಶಸ್ತಿಗೆ ಭಾಜನರಾಗಿರುವ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ತಮ್ಮ ನೆಚ್ಚಿನ ಕ್ರಿಕೆಟ್‌ನಲ್ಲಿ ಮತ್ತೆ ಅಬ್ಬರಿಸಿದ್ದಾರೆ. ಭಾರತದ ಭವಿಷ್ಯದ ತಾರೆ ಎಂದೇ ಬಿಂಬಿತವಾಗಿರುವ 14ರ ಹರೆಯದ ವೈಭವ್ ಇದೀಗ ಮತ್ತೊಮ್ಮೆ ಅರ್ಧಶತಕ ಬಾರಿಸುವ ಮೂಲಕ ಮಿಂಚಿದ್ದಾರೆ.
ಐಸಿಸಿ ಅಂಡರ್ 19 ವಿಶ್ವಕಪ್ ಪಂದ್ಯದಲ್ಲಿ ಎದುರಾಳಿ ಜಿಂಬಾಬ್ವೆ ತಂಡದ ವಿರುದ್ಧ ಅಬ್ಬರದ ಅರ್ಧಶತಕ ಪೊರೈಸಿದ್ದಾರೆ. ಕೇವಲ 24 ಎಸೆತಗಳಲ್ಲಿ ಈ ದಾಖಲೆ ನಿರ್ಮಿಸಿದ್ದಾರೆ. ಈ ಟೂರ್ನಿಯಲ್ಲಿ ಇದು ವೈಭವ್ ಸೂರ್ಯವಂಶಿ ಅವರ 3ನೇ ಅರ್ಧಶತಕವಾಗಿದೆ. ಈ ಟೂರ್ನಿಯಲ್ಲಿ ವೈಭವ್ 41.50 ಸರಾಸರಿಯಲ್ಲಿ 133.87 ಸ್ಟ್ರೈಕ್ ರೇಟ್ ನಲ್ಲಿ 166 ರನ್ ಕಲೆ ಹಾಕಿದ್ದಾರೆ. ಸದ್ಯ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿ ಬಿಹಾರದ ಯುವ ಪ್ರತಿಭೆ ಮೂಡಿಬಂದಿದ್ದಾರೆ.
ಇದನ್ನೂ ಓದಿ : ಬಡವರು ಸೇವಕರಾಗಿಯೇ ಇರಬೇಕು ಎನ್ನುವುದು ಬಿಜೆಪಿ-RSS ಹುನ್ನಾರ-ಸಿಎಂ ಸಿದ್ದರಾಮಯ್ಯ
ಜಿಂಬಾಬ್ವೆಯ ಬುಲಾವಯೋ ನಗರದಲ್ಲಿ ಮಂಗಳವಾರ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಜಿಂಬಾಬ್ವೆ ತಂಡದ ನಾಯಕ ಸಿಂಬಾರಶೆ ಮುಝೆಂಗೆರೆರೆ ಭಾರತವನ್ನು ಬ್ಯಾಟಿಂಗ್ ಆಯ್ಕೆ ನೀಡಿದ್ದರು. ಕ್ರಿಕೆಟಿಗ ಆ್ಯರನ್ ಜಾರ್ಜ್ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸಿದ ವೈಭವ್ ಸೂರ್ಯವಂಶಿ ಆರಂಭದಿಂದಲೇ ಆಕ್ರಮಣಕಾರಿ ಬ್ಯಾಟಿಂಗ್ ಮಾಡಿದರು.

ಇವರಿಬ್ಬರು ಮೊದಲ 4 ಓವರ್ ಗಳಲ್ಲಿ ಓವರಿಗೆ 11 ರನ್ ನಂತೆ 44 ರನ್‌ಗಳನ್ನು ತಂಡದ ಪಾಲಾಗುವಂತೆ ಮಾಡಿದರು. ವೈಭವ್ ಸೂರ್ಯವಂಶಿ ಇಂದಿನ ಪಂದ್ಯದಲ್ಲೂ ಸಹ ಆಕ್ರಮಣಕಾರಿ ಹಾಗೂ ಅಬ್ಬರದ ಬ್ಯಾಟಿಂಗ್ ಮಾಡುವ ಮೂಲಕ ಎದುರಾಳಿಗಳಿಗೆ ನಡುಕ ಹುಟ್ಟಿಸುವಂತೆ ಮಾಡಿತು. ಭಾರತ ತಂಡವು 50 ಓವರ್‌ಗಳ ಪಂದ್ಯದಲ್ಲಿ ಕೇವಲ 10.2 ಓವರ್‌ಗಳಲ್ಲಿ 100 ರನ್ ಗಳಿಸುವ ಮೂಲಕ ಎದುರಾಳಿಗಳಿಗೆ ಗೆಲುವಿನ ಸವಾಲನ್ನು ಒಡ್ಡಿದ್ದಾರೆ. ಸೂರ್ಯವಂಶಿ ಬ್ಯಾಟಿಂಗ್ ಭಾರತ ತಂಡಕ್ಕೆ ಸಾಕಷ್ಟು ಬಲ ತಂದಿತು.












