ಡಿಸೆಂಬರ್ 11, 2019 ರಂದು ಸಂಸತ್ತು ಪೌರತ್ವ ತಿದ್ದುಪಡಿ ಕಾಯ್ದೆ ಅಂಗೀಕರಿಸಿದಂತೆ ದೇಶಾದ್ಯಂತ ಪ್ರತಿಭಟನೆಗಳು ಭುಗಿಲೆದ್ದವು. ಭಾರತೀಯ ಪೌರತ್ವವನ್ನು ಪಡೆಯಲು ಧಾರ್ಮಿಕತೆಯನ್ನು ಮಾನದಂಡವಾಗಿ ಇರಿಸಿದ ಮೊದಲ ಕಾನೂನು ಇದು. ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದ ಮುಸ್ಲಿಮೇತರ ದಾಖಲೆರಹಿತ ವಲಸಿಗರಿಗೆ ಪೌರತ್ವವನ್ನು ಕೊಡುವ, ದೇಶದ ಮುಸ್ಲಿಮರ ಪೌರತ್ವದ ಮೇಲೆ ತೂಗು ಕತ್ತಿ ಇರಿಸಿದ ಈ ಕಾಯ್ದೆ ಜಾತ್ಯಾತೀತ ಪ್ರಣೀತ ಭಾರತದ ಸಂವಿಧಾನಕ್ಕೆ ದೊಡ್ಡ ಅಪಚಾರ. ಹಾಗಾಗಿ ದೇಶಾದ್ಯಂತ ಈ ಕಾಯ್ದೆಯ ವಿರುದ್ಧ ಪ್ರತಿಭಟನೆಯ ಕೂಗು ಎದ್ದಿತು. ಎಲ್ಲಾ ಧರ್ಮದ ಬಹುತೇಕ ಜನರು ಈ ಕಾಯ್ದೆಯನ್ನು ವಿರೋಧಿಸಿ ಬೀದಿಗಿಳಿದರು.
ಈಗ ಎರಡು ವರ್ಷಗಳ ನಂತರ, ಪ್ರತಿಭಟನಾ ಸ್ಥಳಗಳು ಖಾಲಿಯಾಗಿವೆ. ಇದಕ್ಕೆ ಕಾರಣ ಹಲವು. ಉತ್ತರ ಭಾರತದಲ್ಲಿ ಹಿಂಸಾತ್ಮಕ ಪೋಲೀಸ್ ದಬ್ಬಾಳಿಕೆ ಮತ್ತು ಬಂಧನಗಳಿಂದಾಗಿ ಪ್ರತಿಭಟನೆ ಕಾವು ಕಳೆದುಕೊಂಡವು ಎನ್ನಲಾಗುತ್ತಿದೆ. ದೆಹಲಿಯಲ್ಲಿ, ಪ್ರತಿಭಟನೆಯು ಕೋಮು ಹಿಂಸಾಚಾರಕ್ಕೆ ತಿರುಗಿ ಹಿನ್ನಡೆ ಅನುಭವಿಸಿತು. ಎಲ್ಲಕ್ಕಿಂತ ಮುಖ್ಯವಾಗಿ ಮಾರ್ಚ್ 2020 ರಲ್ಲಿ ಕೋವಿಡ್ -19 ಗಾಗಿ ಹೇರಿದ ಲಾಕ್‌ಡೌನ್ ದೇಶಾದ್ಯಂತ ಹೆಚ್ಚಿನಪ್ರತಿಭಟನಾ ಸ್ಥಳಗಳನ್ನು ತೆರವುಗೊಳಿಸಿತು. ಬೀದಿ ಪ್ರತಿಭಟನೆಗಳನ್ನು ಸಂಘಟಿಸಿದ ಮತ್ತು ರೋಮಾಂಚಕ ಚರ್ಚೆಗಳನ್ನು ಆಯೋಜಿಸಿದ ವಾಟ್ಸಾಪ್ ಗುಂಪುಗಳು ಸಹ ಈಗ ಮೌನವಾಗಿವೆ.
ಒಂದು ಕಾಲದಲ್ಲಿ ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ ಚಳವಳಿಯ ನೇತೃತ್ವ ವಹಿಸಿದ್ದವರು ಈಗ ತಮ್ಮ ಗಮನವನ್ನು ಬೇರೆಡೆ ಕೇಂದ್ರೀಕರಿಸಿದ್ದಾರೆ. ಈ ಬಗ್ಗೆ ಮಾತಾಡಿರುವ ಸ್ವತಃ ಕೋರ್ಟಿನಿಂದ ಕೋರ್ಟಿಗೆ ಅಲೆಯುತ್ತಿರುವ ಶಾರ್ಜಿಲ್ ಉಸ್ಮಾನಿ ಸಿಎಎ ವಿರೋಧಿ ಆಂದೋಲನದಿಂದಾಗಿ ಬಂಧನಕ್ಕೊಳಗಾದವರನ್ನು ಹೊರತರುವುದು ನಮ್ಮ ಮೊದಲ ಆದ್ಯತೆಯಾಗಿದೆ ಎನ್ನುತ್ತಾರೆ . “ಸಿಎಎ ವಿರೋಧಿ ಪ್ರತಿಭಟನಕಾರರು ಸುರಕ್ಷಿತವಾಗಿರುವವರೆಗೆ, ಜೈಲಿನಿಂದ ಹೊರಬರುವವರೆಗೆ ಯಾವುದೇ ಪ್ರತಿಭಟನೆಯನ್ನು ಮರುಪ್ರಾರಂಭಿಸುವ ಬಗ್ಗೆ ಮಾತನಾಡುವುದು ಸರಿಯಲ್ಲ” ಎನ್ನುತ್ತಾರೆ.
ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧದ ಪ್ರತಿಭಟನೆಗಳ ಪ್ರಮುಖ ಮುಖಗಳಲ್ಲಿ ಹೆಚ್ಚಿನವರು ಪೊಲೀಸ್ ಕೇಸ್‌ಗಳಲ್ಲಿ ಸಿಲುಕಿ ಹೋರಾಡುತ್ತಿದ್ದಾರೆ ಅಥವಾ ಇನ್ನೂ ಜೈಲಿನಲ್ಲಿದ್ದಾರೆ. ಏಪ್ರಿಲ್ 2020 ರಲ್ಲಿ ಬಂಧಿಸಲ್ಪಟ್ಟ ಮತ್ತು ಜಾಮೀನು ನೀಡುವ ಮೊದಲು ದೆಹಲಿಯ ತಿಹಾರ್ ಜೈಲಿನಲ್ಲಿ 74 ದಿನಗಳನ್ನು ಕಳೆದ ಗರ್ಭಿಣಿಯಾಗಿದ್ದ 29 ವರ್ಷದ ಸಫೂರಾ ಜರ್ಗರ್ ಅವರು ಇದಕ್ಕೊಂದು ಉತ್ತಮ ಉದಾಹರಣೆ. ಎಫ್‌ಐಆರ್ 59 ರ ಅಡಿಯಲ್ಲಿ ಆರೋಪ ಹೊರಿಸಲಾದ ಜನರಲ್ಲಿ ಅವರೂ ಸಹ ಒಬ್ಬರು. ದೆಹಲಿ ಪೊಲೀಸರು 15 ಪ್ರತಿಭಟನಾಕಾರರ ವಿರುದ್ಧ ಕಠಿಣ ಭಯೋತ್ಪಾದನಾವಿರೋಧಿ ಕಾನೂನಾದ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಅಥವಾ ಯುಎಪಿಎ ಕಾಯಿದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ದೆಹಲಿ ಪೊಲೀಸರು ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆಗಳು ಪ್ರತ್ಯೇಕತಾವಾದಿ ಉದ್ದೇಶಗಳೊಂದಿಗಿನ ಪಿತೂರಿ ಎಂದೇ ಪ್ರತಿಭಟನಾಕಾರರ ವಿರುದ್ಧ ಎಫ್‌ಐ ಆರ್ ದಾಖಲಿಸಿದ್ದರು. ಮೊನ್ನೆಯಷ್ಟೇ ಅಲಹಾಬಾದ್ ಹೈಕೋರ್ಟ್ ಶಾರ್ಜಿಲ್ ಇಮಾಮ್ ಅವರಿಗೆ ಜಾಮೀನು ಕೊಟ್ಟಿತ್ತು, ಆದರೆ ಇನ್ನೂ ಇತ್ಯರ್ಥವಾಗದೆ ಬಾಕಿ ಇರುವ ಯುಎಪಿಎ ಪ್ರಕರಣದಿಂದಾಗಿ ಅವರು ಇನ್ನೂ ಜೈಲಲ್ಲೇ ಇರುವಂತಾಗಿದೆ. ಒಬ್ಬ ಸಫೂರ, ಒಬ್ಬ ಶಾರ್ಜಿಲ್ ಅಂತಲ್ಲ, ಬಹುತೇಕ ಸಿಎಎ ವಿರೋಧಿ ಹೋರಾಟಗಾರರ ಕಥೆಯೂ ಇದೇ ಆಗಿದೆ.
ಅನೇಕ ಹೋರಾಟಗಾರ ಜೀವನವು ಅನೇಕ ರೀತಿಯಲ್ಲಿ ಬದಲಾಗಿದೆ. ಉದಾಹರಣೆಗೆ, ಶಾರ್ಜಿಲ್ ಉಸ್ಮಾನಿ ಅವರಿಗೆ ಒಂದೂವರೆ ವರ್ಷದ ನಂತರವಷ್ಟೇ ತನ್ನ ತವರು ಜಿಲ್ಲೆ ಅಲಿಘರ್‌ಗೆ ಮರಳಲು ಸಾಧ್ಯವಾಯಿತು. ಅವರ ವಿರುದ್ಧ ಉತ್ತರ ಪ್ರದೇಶ ಗೂಂಡಾಗಳ ನಿಯಂತ್ರಣ ಕಾಯ್ದೆಯಡಿಯಲ್ಲಿ ಮೂರು ಬಾರಿ ಆರೋಪ ಹೊರಿಸಲಾಗಿತ್ತು. ಈ ಕಾಯ್ದೆಯು ನಿರ್ದಿಷ್ಟ ಪ್ರದೇಶದಿಂದ ವ್ಯಕ್ತಿಗಳನ್ನು ನಿರ್ದಿಷ್ಟ ಅವಧಿಯವರೆಗೆ ಹೊರಹಾಕಲು ಪೊಲೀಸರಿಗೆ ಅಧಿಕಾರ ನೀಡುತ್ತದೆ. ಶಾರ್ಜಿಲ್ ಅವರು ಕುಟುಂಬದ ಹಿರಿಯ ಮಗನಾಗಿದ್ದು ಈಗ ತನ್ನ ಕುಟುಂಬವನ್ನು ಪೋಷಿಸುವ ಚಿಂತೆಯಲ್ಲಿದ್ದಾರೆ.
ಶಾರ್ಜಿಲ್ ಉಸ್ಮಾನಿ ಅವರ ಪ್ರಕಾರ, ಪೌರತ್ವ ತಿದ್ದುಪಡಿ ಕಾಯಿದೆಯನ್ನು ಅಂಗೀಕರಿಸುವ ಮೊದಲೇ ಆಂದೋಲನವು ಅಲಿಗಢದಲ್ಲಿ ಪ್ರಾರಂಭವಾಗಿತ್ತು. ಡಿಸೆಂಬರ್ 6, 2019ರಂದು ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು 1992 ರ ಅಯೋಧ್ಯೆ ಮಸೀದಿ ಧ್ವಂಸವನ್ನು ಸ್ಮರಣಾರ್ಥವಾಗಿ “ಬಾಬರಿ ಸ್ಮರಣ ದಿನ” ವನ್ನು ಆಯೋಜಿಸಿದ್ದರು. ಆದರೆ ಪೌರತ್ವ ಮಸೂದೆಯ ಬಗ್ಗೆ ವಿದ್ಯಾರ್ಥಿಗಳಿಗೆ
ಮಾಹಿತಿ ನೀಡಿದ ಉಸ್ಮಾನಿ “ನಾವು ಪ್ರತಿಭಟಿಸಬೇಕಾಗಿದೆ” ಎಂದು ಹೇಳಿದ್ದರು ಎಂಬುವುದಾಗಿ ಉಸ್ಮಾನಿ ನೆನಪಿಸಿಕೊಳ್ಳುತ್ತಾರೆ.
ಆದರೆ ಕಾನೂನನ್ನು ಅಂಗೀಕರಿಸಿದಂತೆ, ಪ್ರತಿಭಟನೆಗಳು ದೆಹಲಿಯ ಜಾಮಿಯಾ ಸೇರಿದಂತೆ ಇತರ ಕ್ಯಾಂಪಸ್‌ಗಳಿಗೂ ಹರಡಿತು. ಡಿಸೆಂಬರ್ 15 ರಂದು, ಅಲಿಘಡ್ ಮುಸ್ಲಿಂ ವಿಶ್ವವಿದ್ಯಾಲಯ ಮತ್ತು ಜಾಮಿಯಾ ಕ್ಯಾಂಪಸ್‌ಗಳೆರಡಕ್ಕೂ ಪೋಲೀಸರು ದಾಳಿ ಮಾಡಿದರು. ಜಾಮಿಯಾದಲ್ಲಿ ಆರಂಭವಾದ ಪೊಲೀಸ್ ಹಿಂಸಾಚಾರದ ಸುದ್ದಿ ಮತ್ತು ವೀಡಿಯೊಗಳು ಅಲಿಗಢವನ್ನು ತಲುಪಿದವು.
ಈ ಸಂದರ್ಭದಲ್ಲಿ ಉತ್ತರ ಪ್ರದೇಶ ಪೊಲೀಸರು ಆರಂಭಿಸಿದ್ದ ದಮನ ಕಾರ್ಯಾಚರಣೆಯು ದೆಹಲಿಯಲ್ಲಿ ನಡೆದಿದ್ದಕ್ಕಿಂತ ಹೆಚ್ಚು ಹಿಂಸಾತ್ಮಕವಾಗಿತ್ತು ಎನ್ನುತ್ತಾರೆ ವಿದ್ಯಾರ್ಥಿ ಪ್ರಮುಖರು. ಅಲಿಗಢದಲ್ಲಿ ಪೋಲೀಸರಿಂದ ದಾಳಿಗೊಳಗಾದ ಒಬ್ಬ ವಿದ್ಯಾರ್ಥಿಯ ಕೈಯನ್ನೇ ಕತ್ತರಿಸಬೇಕಾಯಿತು.
“ನಾನು ಸ್ವಲ್ಪ ಗಾಯಗೊಂಡಿದ್ದೆ ಆದರೆ ಪೊಲೀಸರಿಂದ ತಪ್ಪಿಸಿಕೊಂಡೆ” ಎಂದು ಹೇಳುವ ಉಸ್ಮಾನಿ “ಆದರೆ ಮರುದಿನ ನಾನು ಎಚ್ಚರವಾದಾಗ ನನ್ನನ್ನು ಮಾಸ್ಟರ್ ಮೈಂಡ್ ಎಂದು ಕರೆಯಲಾಯಿತು. ನನಗೆ ಏನು ನಡೆದಿದೆ ಎಂಬುದರ ಬಗ್ಗೆಯೇ ಸುಳಿವಿರಲಿಲ್ಲ” ಎಂದು ಆವತ್ತಿನ ಘಟನೆಯನ್ನು ನೆನಪಿಸಿಕೊಳ್ಳುತ್ತಾರೆ.
ಎರಡೂ ಕ್ಯಾಂಪಸ್‌ಗಳಲ್ಲಿನ ಹಿಂಸಾಚಾರವು ಪ್ರತಿಭಟನೆಯ ಹೊಸ ಅಲೆಯನ್ನು ಹುಟ್ಟುಹಾಕಿತು. ದೆಹಲಿಯ ಶಾಹೀನ್ ಬಾಗ್‌ನಲ್ಲಿ, ಜಾಮಿಯಾ ವಿದ್ಯಾರ್ಥಿಗಳನ್ನು ಪೊಲೀಸರು ನಡೆಸಿಕೊಳ್ಳುವ ರೀತಿಯನ್ನು ವಿರೋಧಿಸಿ ಮಹಿಳೆಯರು ಪ್ರತಿಭಟನೆಗೆ ಕೂತರು. ಈ ಧರಣಿಯು ತಿಂಗಳುಗಳ ಕಾಲ ನಡೆಯಿತು ಮತ್ತು ಈ ದೇಶದ ಇತಿಹಾಸದಲ್ಲಿ ಒಂದು ದೊಡ್ಡ ಪ್ರತಿಭಟನೆಯಾಗಿ ದಾಖಲಾಯಿತು. ಮುಸ್ಲಿಂ ಸಮುದಾಯದ ಅನೇಕರಿಗೆ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧದ ಪ್ರತಿಭಟನೆಗಳು ನಾಗರಿಕರಾಗಿ ಅವರ ಮೂಲಭೂತ ಹಕ್ಕುಗಳ ಬಗ್ಗೆ, ಜಾತ್ಯತೀತತೆಯ ಕಲ್ಪನೆಯ ಬಗ್ಗೆ ಮಾತ್ರವಲ್ಲದೆ ಇದು ಅವರು ಎದುರಿಸುತ್ತಿರುವ ಬಹುಸಂಖ್ಯಾತ ಶಕ್ತಿಗಳ ಕೋಮುವಾದದ ವಿರುದ್ಧದ ತೀಕ್ಷ್ಣ ಪ್ರತಿಕ್ರಿಯೆಯೂ ಆಗಿತ್ತು.
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಯ ಭಿತ್ತಿಚಿತ್ರಗಳನ್ನು ಈಗ ಜಾಮಿಯಾದಲ್ಲಿ ಚಿತ್ರಿಸಲಾಗಿದೆ. ಶಾಹೀನ್ ಬಾಗ್, ಮಾರ್ಕ್ಯೂ, ಸಾಂವಿಧಾನಿಕ ಮೌಲ್ಯಗಳನ್ನು ಪ್ರತಿಪಾದಿಸುವ ಸಂಕೇತಗಳು, ತಾತ್ಕಾಲಿಕ ಗ್ರಂಥಾಲಯ ಮುಂತಾದವು ಬಹಳ ಕಾಲದವರೆಗೆ ಉಳಿಯಲಿದೆ.
ಆದರೆ ಸದ್ಯಕ್ಕೆ ಪೌರತ್ವ ತಿದ್ದುಪಡಿ ಕಾಯ್ದೆಯ ಬಗೆಗಿನ ಪ್ರತಿಭಟನೆ ಮೌನವಾಗಿದೆ. ಚುನಾವಣೆ ಎದುರಿಸುತ್ತಿರುವ ಉತ್ತರಪ್ರದೇಶದಲ್ಲಿ ಅದು ಸಾರ್ವಜನಿಕ ಅಜೆಂಡಾದಿಂದಲೇ ಹೊರಗಿದೆ. ಭಾರತೀಯ ಜನತಾ ಪಕ್ಷವು ಈಗಾಗಲೇ ಕೋಮು ಧ್ರುವೀಕರಣದ ಪ್ರಚಾರವನ್ನು ನಡೆಸುತ್ತಿದೆ ಮತ್ತು ಸಿಎಎ ವಿರೋಧಿ ಹೋರಾಟಗಾರರು ಮತ್ತು ರಾಜಕಾರಣಿಗಳು ಈ ಕಾನೂನಿನ ಬಗ್ಗೆ ಮೌನದ ಮೊರೆ ಹೋಗಿದ್ದಾರೆ.
ಈ ಬಗ್ಗೆ ಅತ್ಯಂತ ವಿಷಾದಿಂದ ಮಾತಾಡುವ ಉಸ್ಮಾನಿ “ಯುಪಿ ಚುನಾವಣೆಗಳು ಬರುತ್ತಿರುವ ಕಾರಣ, ಈ ವಿಷಯದ ಬಗ್ಗೆ ಪ್ರತಿಭಟಿಸಬೇಡಿ ಎಂದು ನಮಗೆ ಹೇಳಲಾಗುತ್ತಿದೆ ಏಕೆಂದರೆ ಜನರ ಗಮನ ಬೇರೆಡೆಗೆ ತಿರುಗುತ್ತದೆ. ಜನರು ಧಾರ್ಮಿಕ ಆಧಾರದ ಮೇಲೆ ಮತ ಚಲಾಯಿಸುವುದನ್ನು ನಾವು ಬಯಸುವುದಿಲ್ಲ ”ಎನ್ನುತ್ತಾರೆ.
ನಿಜಾಮಾಬಾದ್ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ರಿಹಾಯ್ ಮಂಚ್‌ನ ರಾಜೀವ್ ಯಾದವ್, ಸಿಎಎ ವಿರೋಧಿ ಆಂದೋಲನದ ಮೇಲೆ ಈಗ ಗಮನ ಕೇಂದ್ರೀಕರಿಸಿದರೆ ಬಿಜೆಪಿಯ ಕೈಯಲ್ಲಿ ಅಸ್ತ್ರ ಕೊಟ್ಟಂತಾಗುತ್ತದೆ ಎಂದು ಹೇಳುತ್ತಾರೆ. “ನಾವು ಸಿಎಎ ಬಗ್ಗೆ ಮಾತನಾಡಿದರೆ ಜನಸಾಮಾನ್ಯರನ್ನು ಧ್ರುವೀಕರಿಸುವ ಬಿಜೆಪಿಯ ಅಜೆಂಡಾ ಮುಂದುವರಿಯುತ್ತದೆ” ಎನ್ನುತ್ತಾರೆ ಯಾದವ್.
ಉತ್ತರ ಪ್ರದೇಶದ ಚುನಾವಣೆಯ ಹೊರತಾಗಿಯೂ, ಅನೇಕ ವಿದ್ಯಾರ್ಥಿ ಹೋರಾಟಗಾರರು ಕಾಯ್ದೆಯ ಬಗ್ಗೆ ಮಾತನಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸಿದ್ದಾರೆ. ಕಳೆದ ವರ್ಷದ ಕೊನೆಯಲ್ಲಿ ಪ್ರಾರಂಭವಾದ ರೈತರ ಪ್ರತಿಭಟನೆಗಳು ಸಾಧಿಸಿದ ಅಭೂತಪೂರ್ವ ಯಶಸ್ಸು ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಗಳಿಗೆ ಮತ್ತೊಮ್ಮೆ ಉತ್ತೇಜನ ನೀಡಬಹುದು ಎಂಬ ಆಶಾಭಾವನೆ ಹಲವರದು. ಉಸ್ಮಾನಿ, ಸಫೂರ ಸೇರಿದಂತೆ ಹಲವು ವಿದ್ಯಾರ್ಥಿ ಪ್ರಮುಖರು ಈ ಪ್ರತಿಭಟನೆಗಳು ಮತ್ತೊಮ್ಮೆ ಜಿಗಿತುಗೊಳ್ಳುವ ಬಗ್ಗೆ ಆಶಾವಾದವನ್ನು ಇನ್ನೂ ಕಳೆದುಕೊಂಡಿಲ್ಲ. ಅಲ್ಲದೆ ಕೋವಿಡ್, ಲಾಕ್‌ಡೌನ್ ಇವೆಲ್ಲವುಗಳ ನಡುವೆಯೂ ಪ್ರಜಾಪ್ರಭುತ್ವ ವಿರೋಧಿ ಕಾಯ್ದೆಗಳನ್ನು ಜಾರಿಗೆ ತರುವುದರ ಬಗ್ಗೆ ಈ ದೇಶದ ಜನತೆಯಲ್ಲೊಂದು ಆಕ್ರೋಶ ಇದ್ದೇ ಇದೆ. ಸರ್ಕಾರ ಮತ್ತೊಮ್ಮೆ CAA ಜಾರಿಗೊಳಿಸಲು ಹೊರಟರೆ ಜನತೆ ಪ್ರತಿಭಟಿಸಲು ಬೀದಿಗಿಳಿಯುವುದರಲ್ಲಿ ಯಾವ ಸಂಶಯವೂ ಇಲ್ಲ.