ಬೆಂಗಳೂರು: ಕಟ್ಟಡ ಉರುಳಿಸುವಾಗ ಪಿಲ್ಲರ್ ಕುಸಿದು ಇಬ್ಬರು ಕೂಲಿ ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಮಹಾಲಕ್ಷ್ಮೀ ಲೇಔಟ್ ನ 10ನೇ ಕ್ರಾಸ್ ಬಳಿ ನಡೆದಿದೆ.
ಪಶ್ಚಿಮ ಬಂಗಾಳದ ಕೂಲಿ ಕಾರ್ಮಿಕರಾದ ಇನಾಮ್ ಉಲ್ಲಾ, ಸಿರಾಜ್ ಉಲ್ಲಾ ಮೃತ ದುರ್ದೈವಿಗಳು.
ರಾಜಾಜಿ ನಗರ ಮೆಟ್ರೋ ನಿಲ್ದಾಣದ ಬಳಿಯ ಕಟ್ಟಡವನ್ನು ಗುತ್ತಿಗೆದಾರ ಅಬು ಎಂಬುವವರು ತೆರವು ಮಾಡಿಸುತ್ತಿದ್ದರು. ಒಂದು ವಾರದಿಂದ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಸೂಕ್ತ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳದೇ ಕಟ್ಟಡ ತೆರವು ಮಾಡುತ್ತಿದ್ದರು ಎನ್ನಲಾಗಿದೆ. ಇಂದು ಸಂಜೆ 4 ಗಂಟೆಯ ಸುಮಾರಿಗೆ ಪಿಲ್ಲರ್ ಕುಸಿತು ಅವಘಡ ಸಂಭವಿಸಿದ್ದು, ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದಾರೆ.
ಸದ್ಯ ಮರಣೋತ್ತರ ಪರೀಕ್ಷೆಗೆ ಮೃತ ದೇಹಗಳನ್ನು ರಾಮಯ್ಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಘಟನಾ ಸ್ಥಳಕ್ಕೆ ಮಹಾಲಕ್ಷ್ಮೀ ಲೇಔಟ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.