ಪಾಕಿಸ್ತಾನದ ಇಬ್ಬರು ಬಾಕ್ಸರ್ ಗಳು ಇಂಗ್ಲೆಂಡ್ ನ ಬರ್ಮಿಂಗ್ ಹ್ಯಾಂನಲ್ಲಿ ಮುಕ್ತಾಯಗೊಂಡ ಕಾಮನ್ ವೆಲ್ತ್ ಕ್ರೀಡಾಕೂಟದ ನಂತರ ನಾಪತ್ತೆಯಾಗಿದ್ದಾರೆ.
ಪಾಕಿಸ್ತಾನ ಬಾಕ್ಸಿಂಗ್ ಒಕ್ಕೂಟದ ಕಾರ್ಯದರ್ಶಿ ನಾಸಿರ್ ಟಂಗ್ ಗುರುವಾರ ನೀಡಿದ ಹೇಳಿಕೆಯಲ್ಲಿ ಬಾಕ್ಸರ್ ಗಳಾದ ಸುಲೇಮಾನ್ ಬಲೋಚ್ ಮತ್ತು ನಸಿರುಲ್ಲಾ ನಾಪತ್ತೆಯಾಗಿದ್ದಾರೆ ಎಂದು ತಿಳಿಸಿದ್ದಾರೆ.
ಸೋಮವಾರ ಕಾಮನ್ ವೆಲ್ತ್ ಕ್ರೀಡಾಕೂಟ ಮುಕ್ತಾಯಗೊಂಡಿದ್ದು, ಈ ಇಬ್ಬರು ಬಾಕ್ಸರ್ ಗಳ ಪಾಸ್ ಪೋರ್ಟ್, ಪ್ರಯಾಣದ ದಾಖಲೆ ಸೇರಿದಂತೆ ಅವರಿಗೆ ಸಂಬಂಧಪಟ್ಟ ಎಲ್ಲಾ ದಾಖಲೆಗಳು ರಾಯಭಾರಿ ಕಚೇರಿಯಲ್ಲಿವೆ ಎಂದು ತಿಳಿಸಿದರು.
ಸುಲೇಮಾನ್ ಮತ್ತು ನಸೀರುಲ್ಲಾ ನಾಪತ್ತೆಯಾಗಿರುವ ವಿಷಯವನ್ನು ಇಂಗ್ಲೆಂಡ್ ನ ರಾಯಭಾರ ಕಚೇರಿಗೂ ತಿಳಿಸಲಾಗಿದ್ದು, ಅವರ ಪತ್ತೆಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ ಎಂದು ಅವರು ವಿವರಿಸಿದರು.
ಇಸ್ಲಾಮಾಬಾದ್ ಗೆ ಪಾಕಿಸ್ತಾನ ತಂಡ ಹೊರಡುವ ಕೆಲವೇ ನಿಮಿಷಗಳ ಮುನ್ನ ಸುಲೇಮಾನ್ ಮತ್ತು ನಸೀರುಲ್ಲಾ ನಾಪತ್ತೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನಾಲ್ವರು ಸದಸ್ಯರ ಸಮಿತಿ ರಚಿಸಲಾಗಿದೆ.
ಪಾಕಿಸ್ತಾನ ಕಾಮನ್ ವೆಲ್ತ್ ನಲ್ಲಿ 2 ಚಿನ್ನ ಸೇರಿದಂತೆ ಒಟ್ಟಾರೆ 8 ಪದಕಗಳನ್ನು ಗೆದ್ದುಕೊಂಡಿದೆ. ಆದರೆ ಬಾಕ್ಸಿಂಗ್ ನಲ್ಲಿ ಒಂದೂ ಪದಕ ಗೆಲ್ಲಲು ಸಾಧ್ಯವಾಗಿಲ್ಲ.