ಉತ್ತರಾಖಂಡದ ಹರಿದ್ವಾರದಲ್ಲಿ ನಡೆದ ʻಧರ್ಮ ಸಂಸದ್ʼ ಸಭೆಯಲ್ಲಿ ಕೋಮು ಸೌಹಾರ್ದ ಕದಡುವ ಭಾಷಣ ಮಾಡಿದ ಸಾಧುಗಳ ವಿರುದ್ದ ಎಫ್ ಐ ಆರ್ ದಾಖಲಾಗಿದ್ದು, ಈ ಸಂಬಂಧ ಸಾಧುಗಳು ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ನೀಡಿದ್ದಾರೆ.
ಡಿಸೆಂಬರ್ 17-19ರ ವರೆಗೆ ನಡೆದ ಧರ್ಮ ಸಂಸದ್ ಕಾರ್ಯಕ್ರಮದಲ್ಲಿ ಮುಸ್ಲಿಮರನ್ನು ಹತ್ಯೆಗೈಯುವಂತೆ ಕರೆ ನೀಡಿ, ದೇಶದಲ್ಲಿ ಕೋಮು ಸೌಹಾರ್ದ ಕದಡುವ ಭಾಷಣ ಮಾಡಿದ್ದರು. ಈ ವಿಚಾರ ತೀವ್ರ ಚರ್ಚೆಗೆ ಒಳಪಟ್ಟು ಶಿಯಾ ವಕ್ಛ್ ಬೋರ್ಡ್ನ ಮಾಜಿ ಅಧ್ಯಕ್ಷ ಜಿತೇಂದ್ರ ನಾರಾಯಣ್ ತ್ಯಾಗಿ (ಹಿಂದೂ ಧರ್ಮಕ್ಕೆ ಮತಾಂತರವಾಗುವ ಮುನ್ನ ವಾಸಿಂ ರಿಜ್ಷಿ), ಸಾದ್ವಿ ಅನ್ನಪೂರ್ಣ ಮತ್ತು ಧರ್ಮದಾಸ ಮಹಾರಾಜ್ ವಿರುದ್ದ ಆಕ್ಷೇಪಗಳು ಕೇಳಿ ಬಂದ ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಾದ್ವಿ ಅನ್ನಪೂರ್ಣ ಮತ್ತು ಧರ್ಮದಾಸ್ ವಿರುದ್ದ ಪೊಲೀಸರು ಭಾರತ ದಂಡ ಸಂಹಿತೆ 41(ಎ) ರ ಅಡಿಯಲ್ಲಿ ಪ್ರಕರಣ ದಾಖಲಿಸಿ, ಜನವರಿ 4ರ ಒಳಗೆ ಹರಿದ್ವಾರದ ಕೊತ್ವಾಲಿ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.
ಪೊಲೀಸ್ ಅಧಿಕಾರಿ ರಾಕೇಂದ್ರ ಕಥೈಟ್ ಈ ಕುರಿತು ಪ್ರತಿಕ್ರಿಯಿಸಿದ್ದು, “ಇಬ್ಬರು ನೋಟಿಸ್ ಸ್ವೀಕರಿಸಿದ್ದು, ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆ ಧರ್ಮದಾಸ ಹರಿದ್ವಾರದ ತಮ್ಮ ನಿವಾಸದಿಂದ ಕಾಲ್ಕಿತ್ತಿದ್ದು, ಅವರಿಗೆ ನೋಟಿಸ್ ತಲುಪಿಲ್ಲ. ಅವರನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ. ಆದಷ್ಟು ಬೇಗ ಅವರಿಗೂ ನೋಟಿಸ್ ನೀಡಲಾಗುವುದು ಎಂದು ತಿಳಿಸಿದ್ದಾರೆ.
ತಮ್ಮ ವಿರುದ್ದ ದೂರು ದಾಖಲಾಗುತ್ತಿದ್ದಂತೆ ಪ್ರತಿ ದೂರನ್ನು ದಾಖಲಿಸಿರುವ ಜಿತೇಂದ್ರ ನಾರಾಯಣ್ ತ್ಯಾಗಿ, ʻತಾವು ಹಿಂದೂ ಧರ್ಮಕ್ಕೆ ಮತಾಂತರಗೊಂಡ ನಂತರ ತಮ್ಮಗೆ ಮುಸ್ಲಿಂ ಮೂಲಭೂತವಾದಿಗಳಿಂದ ಜೀವ ಬೆದರಿಕೆ ಕರೆಗಳು ಹೆಚ್ಚಾಗುತ್ತಿದೆ. ತಮಗೆ ಅಗತ್ಯ ರಕ್ಷಣೆ ಕೋರಿ ದೂರು ದಾಖಲಿಸಿದ್ದಾರೆ. ದೂರನ್ನು ಪರಿಶೀಲಿಸಲಾಗುತ್ತಿದೆ ಎಂದು ಕಥೈಟ್ ವಿವರಿಸಿದ್ದಾರೆ.

ಧರ್ಮ ಸಂಸದ್ ಕಾರ್ಯಕ್ರಮದಲ್ಲಿ ಹಿಂದೂ ಧರ್ಮದ ಎಲ್ಲಾ ಸಾಧು ಸಂತರು, ಹಿಂದೂ ಸಂಘಟನೆಗಳು ಮುಖಂಡರು ಮೂರು ದಿನಗಳ ಕಾಲ ಅನ್ಯ ಕೋಮಿನ ಜನರನ್ನು ಗುರಿಯಾಗಿಸಿಕೊಂಡು ದ್ವೇಷ ಪೂರಿತ ಭಾಷಣ ಮಾಡಿದ್ದರು. ಸಾದ್ವಿ ಅನ್ನಪೂರ್ಣ ಕಾರ್ಯಕ್ರಮದಲ್ಲಿ ನರಮೇಧ ಮಾಡುವಂತೆ ಕರೆ ನೀಡಿದ್ದರು. ಮುಂದುವರೆದು, ನಮ್ಮ ದೇಶದ ಸಂವಿಧಾನವನ್ನ ತಪ್ಪಾಗಿ ಬರೆಯಲಾಗಿದೆ. ಗಾಂಧೀಜಿಯನ್ನು ಪೂಜಿಸುವ ಬದಲು ನಮ್ಮ ದೇಶ ಗೋಡ್ಸೆಯನ್ನು ಪೂಜಿಸಬೇಕು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಧರ್ಮದಾಸ ಮಹಾರಾಜ್ ಕೂಡ ಮಾತನಾಡಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹತ್ಯೆಗೆ ಕರೆ ನೀಡಿದ್ದರು. ಮಾಜಿ ಪ್ರಧಾನಿಗಳ ಹತ್ಯೆಗೆ ನಾವು ಗೋಡ್ಸೆ ಹಾದಿಯನ್ನು ಅನುಸರಿಸಬೇಕಾಗುತ್ತದೆ. ಏಕೆಂದರೆ ಅವರು 2006ರಲ್ಲಿ ಸಂಸತ್ ಅಧಿವೇಶನದಲ್ಲಿ ಮಾತನಾಡುವ ಸಮಯದಲ್ಲಿ ಅಲ್ಪಸಂಖ್ಯಾತ ಸಮುದಾಯದವರು ದೇಶದ ಸಂಪನ್ಮೂಲಗಳ ಮೊದಲ ಪ್ರಾಶ್ಯಸ್ತ್ಯದ ಹಕ್ಕುದಾರರು ಎಂದು 15 ವರ್ಷಗಳ ಹಿಂದೆ ನೀಡಿದ ಹೇಳಿಕೆ ಉಲ್ಲೇಖಿಸಿ ಭಾಷಣ ಮಾಡಿದ್ದನ್ನು ಇಲ್ಲಿ ಗಮನಿಸಬಹದು.
ಸಾಧು ಸಂತರು ಇಷ್ಟೆಲ್ಲಾ ಹೇಳಿಕೆ ನೀಡಿದ್ದರೂ ಸಹ ಸರ್ಕಾರ ಈ ಬಗ್ಗೆ ಯಾವುದೇ ಕ್ರಮ ಜರುಗಿಸಿರಲಿಲ್ಲ. ಪ್ರತಿಪಕ್ಷದ ನಾಯಕರು, ಸುಪ್ರೀಂ ಕೋರ್ಟ್ ಹಿರಿಯ ವಕೀಲರು, ಅಲ್ಪಸಂಖ್ಯಾತ ಸಂಘಟನೆಗಳು ಈ ಬಗ್ಗೆ ತೀವ್ರ ಆಕ್ರೋಶ ಹೊರಹಾಕಿದ ನಂತರ ಪ್ರಕರಣ ದಾಖಲಾಗಿದೆ. ಮುಂದಿನ ದಿನಗಳಲ್ಲಿ ಈ ವಿಚಾರಣೆ ಎಲ್ಲಿಗೆ ಬಂದು ನಿಲ್ಲುತ್ತದೆ ಎಂಬುದನ್ನು ಕಾದು ನೋಡಬೇಕಿದೆ.