ಉಡುಪಿ: ಜಿಲ್ಲೆಯ ಮಲ್ಪೆ(Malpe) ಪೊಲೀಸ್ ಠಾಣಾ ವ್ಯಾಪ್ತಿಯ ಕೋಡಿಬೆಂಗ್ರೆ ಬೀಚ್‌ನ ಅಳಿವೆ ಬಾಗಿಲು ಸಮೀಪ ಪ್ರವಾಸಿ ಬೋಟ್ ಮಗುಚಿ ಬಿದ್ದ ಪರಿಣಾಮ ಇಬ್ಬರು ಪ್ರವಾಸಿಗರು ಮೃತಪಟ್ಟಿದ್ದು, ಇನ್ನು ಕೆಲವರು ಅಸ್ವಸ್ಥಗೊಂಡ ಘಟನೆ ನಡೆದಿದೆ.

ಡೆಲ್ಟಾ ಬೀಚ್‌ನಿಂದ ಪ್ರವಾಸಕ್ಕೆ ಹೊರಟಿದ್ದ ಪ್ರವಾಸಿ ಬೋಟ್‌ನಲ್ಲಿ 14 ಮಂದಿ ಇದ್ದರು. ಸಮುದ್ರದಲ್ಲಿ ಅಲೆಗಳ ತೀವ್ರ ಹೊಡೆತಕ್ಕೆ ಬೋಟ್ ಮಗುಚಿ ಬಿದ್ದಿದೆ. ಈ ದುರಂತದಲ್ಲಿ ಶಂಕರಪ್ಪ (22) ಮತ್ತು ಸಿಂಧು (23) ಎಂಬವರು ಮೃತಪಟ್ಟಿದ್ದಾರೆ. ಧರ್ಮರಾಜ್ ಮತ್ತು ದಿಶಾ ಅವರನ್ನು ಸ್ಥಳೀಯರು ಹಾಗೂ ರಕ್ಷಣಾ ಸಿಬ್ಬಂದಿ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬೋಟ್ ಸಿಬ್ಬಂದಿ ಎಲ್ಲ ಪ್ರವಾಸಿಗರಿಗೆ ಲೈಫ್ ಜಾಕೆಟ್‌ಗಳನ್ನು ಒದಗಿಸಿದ್ದರೂ, ಕೆಲವರು ಲೈಫ್ ಜಾಕೆಟ್ ಧರಿಸದೇ ಇದ್ದ ಶಂಕೆ ವ್ಯಕ್ತವಾಗಿದೆ. ಲೈಫ್ ಜಾಕೆಟ್ ಧರಿಸದೇ ಇರುವುದೇ ಈ ಅವಘಡಕ್ಕೆ ಕಾರಣ ಎನ್ನಲಾಗುತ್ತಿದೆ.

ಘಟನೆ ನಡೆದ ಕೂಡಲೇ ಸ್ಥಳೀಯರು ರಕ್ಷಣೆಗೆ ಧಾವಿಸಿ ಎಲ್ಲರನ್ನು ಸಮುದ್ರದಿಂದ ಸುರಕ್ಷಿತವಾಗಿ ಹೊರತೆಗೆದಿದ್ದಾರೆ. ಬೋಟ್‌ನಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಪಾಲಿಸಲಾಗಿತ್ತೇ ಎಂಬುದರ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಮೃತರು ಹಾಗೂ ಅಸ್ವಸ್ಥಗೊಂಡ ಪ್ರವಾಸಿಗರು ಮೈಸೂರಿನ ಸರಸ್ವತಿಪುರಂ ನಿವಾಸಿಗಳು ಎನ್ನುವುದು ಸದ್ಯದ ಮಾಹಿತಿಯಾಗಿದೆ. ಒಟ್ಟು 28 ಪ್ರವಾಸಿಗರ ತಂಡ ಉಡುಪಿಗೆ ಆಗಮಿಸಿದ್ದು, ಎರಡು ಪ್ರವಾಸಿ ಬೋಟ್‌ಗಳಲ್ಲಿ ತಲಾ 14 ಮಂದಿ ವಿಹಾರಕ್ಕೆ ತೆರಳಿದ್ದರು. ಈ ದುರಂತ ಸುಹಾನ್ ಹಾಗೂ ಸೂಫಿಯಾನ ಮಾಲೀಕತ್ವದ ಟೂರಿಸ್ಟ್ ಬೋಟ್‌ನಲ್ಲಿ ಸಂಭವಿಸಿದೆ ಎನ್ನಲಾಗಿದೆ.












