ವಿಶ್ವದ ಅತೀ ದೊಡ್ಡ ಹಾಗೂ ಪ್ರಬಲ ಸಾಮಾಜಿಕ ಜಾಲತಾಣ ವೇದಿಕೆ ಟ್ವಿಟರ್ ಇದೀಗ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಪಾಲಾಗಿದೆ.
ಹೌದು, ವಿಶ್ವದ ನಂ.1 ಶ್ರೀಮಂತ ಎಲಾನ್ ಮಸ್ಕ್ ಅವರು ಸಾಮಾಜಿಕ ಜಾಲತಾಣ ಟ್ವೀಟರ್ ಕಂಪನಿಯನ್ನು ಖರೀದಿ ಮಾಡುವ ವಿಚಾರ ಅಂತಿಮವಾಗಿದ್ದು, ಸುಮಾರು 3 ಲಕ್ಷ ಕೋಟಿ ರೂ.ಗೆ ಖರೀದಿ ಮಾಡಲಾಗಿದೆ ಎಂದು ಟ್ವೀಟರ್ ಘೋಷಣೆ ಮಾಡಿದೆ.
ಮಸ್ಕ್ ಈಗಾಗಲೇ ಶೇ. 9.1 ರಷ್ಟು ಷೇರುಗಳನ್ನು ಹೊಂದುವ ಮೂಲಕ ಅತಿದೊಡ್ಡ ಷೇರುದಾರ ಎನಿಸಿಕೊಂಡಿದ್ದರು ಹಾಗೂ ಟ್ವೀಟರ್ ಗಳನ್ನು ಖರೀದಿಸಲು ಏಪ್ರಿಲ್ 14 ರಂದು 3 ಲಕ್ಷ ಕೋಟಿ ರೂ. ಮೊತ್ತದ ಆಫರ್ ನೀಡಿದ್ದರು. ಅಲ್ಲದೆ ತಮ್ಮ ಶೇ. 9 ಪಾಲನ್ನು ಬಿಟ್ಟು ಉಳಿದ 91 ರಷ್ಟು ಪ್ರತಿ ಷೇರಿಗೆ 4,150 ರೂ. ನೀಡುವುದಾಗಿ ಹೇಳಿದ್ದರು.
ಟ್ವೀಟರ್ ಉನ್ನತ ಅಧಿಕಾರಿಗಳು ಹಾಗೂ ಮಸ್ಕ್ ನಡುವೆ ಸೋಮವಾರ ಇಡೀ ದಿನ ನಿರಂತರ ಮಾತುಕತೆ ನಡೆದಿದ್ದು, ಅಂತಿಮವಾಗಿ ಪ್ರತಿ ಷೇರಿಗೆ 4,150 ರೂ. ನೀಡುವುದಾಗಿ ಮಸ್ಕ್ ಹಾಗೂ ಟ್ವೀಟರ್ ನಡುವೆ ಒಪ್ಪಂದ ನಡೆದಿದೆ ಎಂದು ಟ್ವಿಟರ್ ತಿಳಿಸಿದೆ.
ಇದೀಗ ಈ ಎಲ್ಲಾ ವಿಚಾರ ನಿಜವಾಗಿದೆ. ಎಲಾನ್ ಮಸ್ಕ್ ಟ್ವಿಟರ್ ಖರೀದಿಸಿದ್ದಾರೆ. ವಿಶ್ವದ ಶ್ರೀಮಂತ ಉದ್ಯಮಿ ಇದೀಗ ಸಾಮಾಜಿಕ ಜಾಲತಾಣ ದಿಗ್ಗಜನನ್ನೇ ತೆಕ್ಕೆಗೆ ತೆಗೆದುಕೊಂಡಿದ್ದಾರೆ.
ಟೆಸ್ಲಾ ಎಲೆಕ್ಟ್ರಿಕ್ ಕಾರು ಕಂಪನಿಯ ಸಿಇಒ ಆಗಿರುವ ಎಲಾನ್ ಮಸ್ಕ್ ಸ್ಪೇಸ್ ಎಕ್ಸ್ ಸಂಸ್ಥೆ ಸ್ಥಾಪಿಸಿದ್ದಾರೆ. ಈ ಮೂಲಕ ಮಂಗಳಯಾನಕ್ಕೂ ಸಜ್ಜಾಗಿದ್ದಾರೆ. ಇನ್ನು ಎಲಾನ್ ಮಸ್ಕ್ ಸ್ಟಾರ್ ಲಿಂಕ್ ಬ್ರಾಂಡ್ ಬ್ಯಾಂಡ್ ಸೇವೆ ವಿಶ್ವದಲ್ಲೇ ಜನಪ್ರಿಯವಾಗಿದೆ.