ಕನ್ನಡದ ಪ್ರತಿಭಾವಂತ ಮತ್ತು ಜೀವಪರ ನಿಲುವಿನ ಕಲಾವಿದರಾಗಿದ್ದ ಪುನೀತ್ ರಾಜಕುಮಾರ್ ಈಗ ಟಿವಿ ಮೀಡಿಯಾಗಳಿಗೆ ಟಿಆರ್‌ಪಿ ಸರಕಾಗಿದ್ದಾರೆ.
ಎರಡು ದಿನದ ಹಿಂದೆ ಪುನೀತ್ ಕುಟುಂಬದವರು ಬೆಂಗಳೂರಿನ ಅರಮನೆ ಮೈದಾನದಲ್ಲಿ ಏರ್ಪಡಿಸಿದ್ದ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಇಡೀ ದಿನ ಲೈವ್ ತೋರಿಸುವ ಮೂಲಕ ಪರೋಕ್ಷವಾಗಿ ಅಪ್ಪು ನಿಲುವುಗಳನ್ನು ಟಿವಿ ಮಾಧ್ಯಮಗಳು ಅವಮಾನಿಸಿದವು.
ಇದು ಒಂದು ಸುದ್ದಿಯಾಗಿ ಬರಬೇಕು. ಅಲ್ಲಿ ಏರ್ಪಡಿಸಿದ್ದ ವ್ಯವಸ್ಥೆ ಮತ್ತು ಅಭಿಮಾನಿಗಳನ್ನು ತೋರಿಸುವುದು ಟಿವಿ ಮೀಡಿಯಾ ಕರ್ತವ್ಯ. ಆದರೆ, ಇಡೀ ದಿನ ಅನ್ನ ಸಂತರ್ಪಣೆ ತೋರಿಸುವ ಮೂಲಕ ಟಿಆರ್ಪಿ ಏರಿಕೆ ಮಾಡಿಕೊಂಡ ಟಿವಿ ಮೀಡಿಯಾಗಳ ಕ್ರಮ ಅಸಹ್ಯವಾಗಿತ್ತು.
ಅಕ್ಟೋಬರ್ 29ರಂದು ಪುನೀತ್ ನಿಧನ ಸಂಭವಿಸಿದ ದಿನದಿಂದ ನ್ಯೂಸ್ ಚಾನೆಲ್ಗಳ ಪಾಲಿಗೆ ಪುನೀತ್ ಅವರೇ ಟಿಆರ್ಪಿ ಸರಕಾಗಿದ್ದಾರೆ. ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ನಾಯಕ ನಟನ ದಿಢೀರ್ ನಿಧನದ ಕುರಿತಾಗಿ ವರದಿ ಮಾಡಲೇಬೇಕು ಮತ್ತು ಆ ಬಗ್ಗೆ ಚರ್ಚೆಗಳನ್ನು ನಡೆಸಲೇಬೇಕು. ಆದರೆ ಅದಕ್ಕೂ ಒಂದು ಸಂಹಿತೆ ಅಂತ ಇರಬೇಕಲ್ಲವೇ? ನಿರಂತರವಾಗಿ ಇಂದಿಗೆ 12-13 ದಿನಗಳ ಕಾಲ ನ್ಯೂಸ್ ಚಾನೆಲ್ಗಳು ಪುನೀತ್ ಅವರ ಕುರಿತಾಗಿ ಸುದ್ದಿ ಮತ್ತು ಕಾರ್ಯಕ್ರಮ ಮಾಡುತ್ತಲೇ ಇವೆ. ಸಾಕಷ್ಟು ಸಲ ಹೇಳಿದ್ದನ್ನೇ ಹೇಳುತ್ತ ಕನ್ನಡಿಗರಿಗೆ ಆಗಿರುವ ನೋವಿನ ದುರ್ಲಾಭ ಮಾಡಿಕೊಳ್ಳುತ್ತಿವೆ.
ಇನ್ನೊಂದು ಕಡೆ ಪ್ರಜಾವಾಣಿಯಲ್ಲಿ ಪುನೀತ್ ಕುರಿತಾಗಿ ಪ್ರಕಟವಾದ ಡಾ. ಕೆ. ಪುಟ್ಟಸ್ವಾಮಿ, ನಟ ಚೇತನ್ ಮತ್ತು ನಟಿ ಜಯಮಾಲಾರ ಬರಹಗಳು ಮತ್ತು ನಮ್ಮದೇ ʼಪ್ರತಿಧ್ವನಿʼಯಲ್ಲಿ ಪ್ರಕಟವಾದ ಶಶಿ ಸಂಪಳ್ಳಿ ಅವರ ಬರಹ ಪುನೀತ್ ಅವರ ಕುರಿತಾದ ಒಳನೋಟಗಳನ್ನು ನೀಡುವ ಮೂಲಕ, ಪುನೀತ್ರನ್ನು ಹೇಗೆ ಸ್ವೀಕರಿಸಬೇಕು ಎಂದು ವಿವರಿಸಿದವು. ಆದರೆ ಟಿವಿ ಮೀಡಿಯಾದಲ್ಲಿ ಇಂತಹ ಸೂಕ್ಷ್ಮತೆ ತುಂಬ ವಿರಳವಾಗಿತ್ತು.
ಅನ್ನ ಸಂತರ್ಪಣೆಯ ದಿನದಂದು ಅರಮನೆಯಲ್ಲಿ ತಾತ್ಕಾಲಿಕವಾಗಿ ನಿರ್ಮಿಸಲಾಗಿದ್ದ ಬೃಹತ್ ಅಡುಗೆ ಮನೆಯಲ್ಲಿ ಬಹುಪಾಲು ನ್ಯೂಸ್ ಚಾನೆಲ್ಗಳು ಠಿಕಾಣಿ ಹೂಡಿದ್ದವು ಊಟದ ಮೆನು ಪ್ರಕಟಿಸುತ್ತ ಅಡುಗೆ ಪಾತ್ರೆಗಳ ಒಳಗೇ ಕ್ಯಾಮೆರಾ ತೂರಿಸುತ್ತಿದ್ದವು. ಯಾವ ಅಡುಗೆಗೆ ಎಷ್ಟು ಉಪ್ಪು ಹಾಕಿದರು, ಅದನ್ನು ತಯಾರು ಮಾಡುತ್ತಿರುವವರು ಯಾರು ಎಂಬೆಲ್ಲ ವಿವರಗಳನ್ನು ರೋಚಕವಾಗಿ ತೋರಿಸುತ್ತಿದ್ದವು.
ಬಲಗೈಯಿಂದ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು ಎಂಬ ನಿಲುವಿನ ಪುನೀತ್ ಅವರಿಗೆ ಮಾಡಿದ ಅವಮಾನ ಇದಲ್ಲವೇ?
ಈ ಕುರಿತಾಗಿ ʼಪ್ರತಿಧ್ವನಿʼಗೆ ಪ್ರತಿಕ್ರಿಯೆ ನೀಡಿದ ಚಿತ್ರ ನಿರ್ದೇಶಕ ಮತ್ತು ಲೇಖಕ ಎನ್. ಎಸ್ ಶಂಕರ್, ʼಭಾವನಾತ್ಮಕ ವಿಷಯ ಸಿಕ್ಕರೆ ಸಾಕು, ಅದು ನ್ಯೂಸ್ ಚಾನೆಲ್ಗಳ ಪಾಲಿಗೆ ಹಬ್ಬ. ಪುನೀತ್ ನಿಧನದ ಸಂಗತಿ ಮತ್ತು ಆ ಪರಿಣಾಮಕಾರಿಯಾಗಿ ಜನರಲ್ಲಿ ಉಂಟಾದ ದುಃಖ-ನೋವಿನ ವಿಷಯವನ್ನು ಬಹುಪಾಲು ಚಾನೆಲ್ಗಳು ದುರ್ಬಳಕೆ ಮಾಡಿಕೊಂಡವುʼ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗಣಿ ಲೂಟಿ V/s ಪೃಥ್ವಿ!
ಇಲ್ಲಿ ಒಂದಿಷ್ಟು ವೈರುಧ್ಯಗಳನ್ನು ಗಮನಿಸಿ. ಸಾರಿಗೆ ಸಚಿವ ಶ್ರೀರಾಮುಲು ಪದೇ ಪದೇ ಕಾಣಿಸಿಕೊಂಡರು. ಅಲ್ಲಿ ಬಳ್ಳಾರಿಯಲ್ಲಿ ಶಾಸಕ ಸೋಮಶೇಖರ್ ರೆಡ್ಡಿ ಪುನೀತ್ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಆಯೋಜಿಸಿ ಪುನೀತ್ ಕುರಿತಾಗಿ ವಿಪರೀತ ಮಾತನಾಡಿದರು. ಈ ಸಂದರ್ಭದಲ್ಲಿ ನಮ್ಮ ಟಿವಿ ಮೀಡಿಯಾ ʼಪೃಥ್ವಿʼ ಸಿನಿಮಾದ ಚರ್ಚೆಯನ್ನು ಕೈಗೊಳ್ಳಬೇಕಿತ್ತು. ಆದರೆ ಅವು ಮಾಡಿದ್ದೇಬೇರೆ. ರಾಮುಲು ಮತ್ತು ಸೋಮಶೇಖರ್ ರೆಡ್ಡಿಗಳಿಗೆ ಅನಗತ್ಯ ಫೋಕಸ್ ಕೊಟ್ಟವು.
ಬೇರೆ ನಟರು ತಿರಸ್ಕಸಿದ್ದರು ಎನ್ನಲಾದ ʼಪೃಥ್ವಿʼ ಸಿನಿಮಾವನ್ನು ಅಪ್ಪು ಒಪ್ಪಿಕೊಂಡಿದ್ದರು. ಬಳ್ಳಾರಿಯ ಗಣಿ ಲೂಟಿಯ ಕುರಿತಾದ ವಸ್ತುನಿಷ್ಠ ಚಿತ್ರವದು. ಬಳ್ಳಾರಿಯ ಜಿಲ್ಲಾಧಿಕಾರಿಯಾಗಿ ಗಣಿ ಲೂಟಿಯ ವಿರುದ್ಧ ಸಮರ ಸಾರುವ ಪಾತ್ರವದು. ಅದರಲ್ಲಿ ರಾಮುಲು ಮತ್ತು ಜನಾರ್ಧನ ರೆಡ್ಡಿಗಳ ವಿಲನ್ ಪಾತ್ರಗಳನ್ನು ಸೃಷ್ಟಿಸುವ ಮೂಲಕ ನಿರ್ದೇಶಕ ದಿಟ್ಟ ಹೆಜ್ಜೆ ಇಟ್ಟಿದ್ದರು. ಬಳ್ಳಾರಿಯಲ್ಲೇ ಈ ಚಿತ್ರದ ಶೂಟಿಂಗ್ ನಡೆದಿತ್ತು. ಈ ಸಿನಿಮಾ ಬಿಡುಗಡೆಯ ನಂತರ ರೆಡ್ಡಿ-ರಾಮುಲುಗಳಿಗೆ ಸಾಕಷ್ಟು ಮುಜುಗರವಾಗಿತ್ತು.
ನಂತರದಲ್ಲಿ ಸೋಮಶೇಖರ್ ರೆಡ್ಡಿ ಕೆಎಂಎಫ್ ಅಧ್ಯಕ್ಷರಾಗಿದ್ದ ಅವಧಿಯಲ್ಲಿ, ನಂದಿನಿ ಪ್ರಾಡಕ್ಟ್ಗಳಿಗೆ ಪುನೀತ್ ರಾಯಭಾರಿ ಎಂದು ಘೋಷಿಸಿದ್ದರು. ಇದಕ್ಕೆ ಪುನೀತ್ ಅನುಮತಿ ಪಡೆದಿರಲಿಲ್ಲ. ಸೋಮಶೇಖರ ರೆಡ್ಡಿಯನ್ನು ಮನೆಗೆ ಚಹಾಕ್ಕೆ ಆಹ್ವಾನಿಸಿದ ಪುನೀತ್, ತನ್ನ ಅನುಮತಿ ಇಲ್ಲದೇ ಘೋಷಣೆ ಮಾಡಿದ್ದನ್ನು ಆಕ್ಷೇಪಿಸಿದ್ದರು ಎಂದು ಖಚಿತ ಮೂಲಗಳು ತಿಳಿಸಿವೆ. ನಂದಿನಿ ರಾಯಭಾರಿ ಆಗುವುದು ಹೆಮ್ಮೆಯ ವಿಷಯ ಎಂದು ರಾಯಭಾರಿಯಾದ ಅವರು, ಅನುಮತಿ ಇಲ್ಲದೇ ಘೋಷಣೆ ಮಾಡಿದ್ದ ಸೋಮಶೇಖರ್ ರೆಡ್ಡಿಯವರನ್ನು ಸೈಲಂಟಾಗಿಯೇ ತರಾಟೆಗೆ ತೆಗೆದುಕೊಂಡಿದ್ದರಂತೆ.
ಈಗ ರಾಮುಲು-ರೆಡ್ಡಿಗಳು ಪುನೀತ್ ಭಜನೆ ಮಾಡುತ್ತಿದ್ದಾರೆ. ಅವರಿಗೂ ಈ ಸಂದರ್ಭ ಲಾಭದ ವಸ್ತುವೇ. ಈ ಸಂದರ್ಭ ಬಳಸಿಕೊಂಡು ಟಿವಿ ಮಾಧ್ಯಮಗಳು ವಿಭಿನ್ನ ಚರ್ಚೆ ಹುಟ್ಟು ಹಾಕಬಹುದಿತ್ತು.
ಮದುವೆ, ಎಂಗೇಜಮೆಂಟ್ ಲೈವ್!
ಗಣ್ಯರ ಅದರಲ್ಲೂ ಸಿನಿಮಾದವರ ಕುಟುಂಬಗಳಿಗೆ ಸಂಬಂಧಿಸಿದ ಮದುವೆ ಮತ್ತು ಎಂಗೇಜ್ಮೆಂಟ್ಗಳನ್ನು ಲೈವ್ ಆಗಿ ತೋರಿಸುವುದು ಕೂಡ ನಮ್ಮ ಟಿವಿ ಮೀಡಿಯಾಗಳಿಗೆ ಲಾಭದ ವಸ್ತುವೇ. ಒಂದು ಕೌಟುಂಬಿಕ ಕಾರ್ಯಕ್ರಮ ಸಾರ್ವಜನಿಕವಲ್ಲ ಎಂಬ ಕನಿಷ್ಠ ಅರಿವನ್ನು ಹೊಂದಿರದ ಬಹುಪಾಲು ಟಿವಿ ಮೀಡಿಯಾಗಳು , ಒಮ್ಮೊಮ್ಮೆ ಅದನ್ನು ಪ್ರಾಯೋಜಿತ ಕಾರ್ಯಕ್ರಮದಂತೆ ಬಿಂಬಿಸುತ್ತವೆ.
ಅದೇ ಅರಮನೆ ಮೈದಾನದಲ್ಲಿ ನಡೆದ ಎರಡು ಕಾರ್ಯಕ್ರಮಗಳನ್ನು ನೆನಪು ಮಾಡಿಕೊಳ್ಳೋಣ. ಜನಾರ್ಧನ ರೆಡ್ಡಿಯ ಮಗಳ ಮದುವೆ ಕೂಡ ಲಾಭದ ವಸ್ತುವೇ ಆಗಿತ್ತು. ಅದೇ ಮೈದಾನದಲ್ಲಿ ನಡೆದ ನಟ ಶಿವರಾಜಕುಮಾರ್ ಅವರ ಪುತ್ರಿಯ ಎಂಗೇಜ್ಮೆಂಟ್ ಕೂಡ ನ್ಯೂಸ್ ಚಾನೆಲ್ಗಳ ಪಾಲಿಗೆ ಟಿಆರ್ಪಿ ಸರಕಾಗಿತ್ತು. ಅದೇ ಸಂದರ್ಭದಲ್ಲಿ ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲೂಕಿನ ಗ್ರಾಮವೊಂದರ ಹೊಲದಲ್ಲಿ ಕರಿಯಪ್ಪ ಎಂಬ ಬಾಲಕ ಕೊಳವೆ ಬಾವಿಯಲ್ಲಿ ಬಿದ್ದ ಸುದ್ದಿ ಬಂತು. ಆ ಬಾಲಕನನ್ನು ಉಳಿಸುವ ಕಾರ್ಯಾಚರಣೆಗೆ ಪ್ರಾಮುಖ್ಯ ನೀಡುವುದೋ ಅಥವಾ ನಟನ ಮಗಳ ಎಂಗೇಜ್ಮೆಂಟ್ಗೆ ಆದ್ಯತೆ ನೀಡುವುದೋ ಎಂದು ಮೀಡಿಯಾಗಳು ಚಡಪಡಿಸಿ, ಎರಡೂ ಟಿಆರ್ಪಿ ಸರಕುಗಳನ್ನು ಬ್ಯಾಲೆನ್ಸ್ ಆಗಿ ತೋರಿಸಿದವು!
ಈಗ 12-13 ದಿನದಿಂದ ಪುನೀತ್ ಸಾವನ್ನು ಬಳಸಿಕೊಳ್ಳುತ್ತಿವೆ. ಕನ್ನಡದ ಯೂತ್ ಐಕಾನ್ ಆಗಿ ಪುನೀತರನ್ನು ಮುನ್ನೆಲೆಗೆ ತರುವ ಕೆಲಸ ಮಾಡಬೇಕಿದ್ದ ಮಾಧ್ಯಮಗಳು ಅನ್ನ ಸಂತರ್ಪಣೆಯ ಅಡುಗೆ ಮನೆಯಲ್ಲಿ ಕ್ಯಾಂಪ್ ಹಾಕಿದ್ದು ನಮ್ಮ ಕಾಲದ ಹೊಸ ವ್ಯಂಗ್ಯವಲ್ಲವೇ?