ಸಾಗರ ತಾಲ್ಲೂಕಿನ ಅಂಬಾರಗೋಡ್ಲು-ಕಳಸವಳ್ಳಿ ನಡುವೆ ಸೇತುವೆ ನಿರ್ಮಾಣ ಕಾಮಗಾರಿ ಕರೊನಾ ಲಾಕ್ ಡೌನ್ ನಡುವೆಯೂ ನಿರಂತರವಾಗಿ ಸಾಗಿದೆ.
ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು 2.42 ಕಿ.ಮೀ ಉದ್ದದ ಸೇತುವೆ ನಿರ್ಮಾಣ ಕಾರ್ಯ ಆರಂಭವಾಗಿದೆ. ಹಿನ್ನೀರಿನ ಎರಡೂ ದಡಗಳಲ್ಲಿ ಸೇತುವೆಗೆ ಪೂರಕ ರಸ್ತೆ ನಿರ್ಮಾಣ ಕೂಡ ಮಾಡಲಾಗುತ್ತಿದೆ. ಇನ್ನು ಈ ಕಾಮಾಗರಿಯನ್ನು ಮಧ್ಯಪ್ರದೇಶ ಮೂಲದ ದಿಲೀಪ್ ಬಿಲ್ಡ್ ಕಾನ್ ಕಂಪನಿಯು ಗುತ್ತಿಗೆ ಪಡೆದಿದೆ.
24 ಪಿಲ್ಲರ್ಗಳನ್ನು ಬಳಸಿ ಈ ಸೇತುವೆ ನಿರ್ಮಾಣ ಮಾಡುತ್ತಿದ್ದು, ಆರು ಪಿಲ್ಲರ್ಗಳು ನೀರಿನಲ್ಲಿ ಬರಲಿದೆ. ಈಗಾಗಲೇ ಸೇತುವೆ ನಿರ್ಮಾಣದ ಶೇ.50ರಷ್ಟು ಕಾಮಗಾರಿ ಮುಗಿದಿದ್ದು, ಬಹುತೇಕ ಪಿಲ್ಲರ್ ನಿರ್ಮಾಣ ಪೂರ್ಣಗೊಂಡಿದೆ.

ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅಧಿಕಾರವಧಿಯ ಸಮಯದಿಂದಲೂ ಈ ಮಾರ್ಗಕ್ಕೆ ಸೇತುವೆ ನಿರ್ಮಾಣದ ಕೂಗು ಕೇಳಿ ಬಂದಿತ್ತು. ಆದರೆ, ಈ ಕಾರ್ಯ ನೆನೆಗುದಿಗೆ ಬಿದ್ದ ಪರಿಣಾಮ ಜನ ಲಾಂಚ್ ಮೂಲಕವೇ ಓಡಾಟ ನಡೆಸುತ್ತಿದ್ದಾರೆ. 2013ರಲ್ಲಿ ಸೇತುವೆ ನಿರ್ಮಾಣಕ್ಕೆ ಅಧಿಕೃತ ಘೋಷಣೆ ಮಾಡಿ ಸರ್ವೆ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು. ಬಳಿಕ 2018ರಲ್ಲಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಕಾಮಗಾರಿಗೆ ಚಾಲನೆ ನೀಡಿದ್ದರು. ಸದ್ಯ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನದಲ್ಲಿ ಸೇತುವೆ ಕಾಮಗಾರಿ ನಡೆಯುತ್ತಿದೆ. ಸೇತುವೆ ಜೊತೆಗೆ ಬೈಂದೂರು-ರಾಣೆಬೆನ್ನೂರು ರಾಷ್ಟ್ರಿಯ ಹೆದ್ದಾರಿ ಮಾರ್ಗ ಘೋಷಣೆಯಾಗಿದ್ದು, ಆ ಕಾಮಗಾರಿ ಕೂಡ ಆರಂಭವಾಗಿದೆ.
ಅಂಬಾರಗೋಡ್ಲು-ಕಳಸವಳ್ಳಿ ಮಾರ್ಗದಲ್ಲಿ ಸಂಚರಿಸುವ ಜನರಿಗೆ ಇಲ್ಲಿನ ಲಾಂಚ್ ಒಂದೇ ಏಕೈಕ ಮಾರ್ಗ. ಸದ್ಯ ಮಾಮೂಲಿಯಂತೆ ಈ ಲಾಂಚ್ ಕಾರ್ಯನಿರ್ವಹಿಸುತ್ತಿದ್ದು, ಮುಂದಿನ ದಿನಗಳಲ್ಲಿ ಈ ಸೇವೆಯಲ್ಲಿ ವ್ಯತ್ಯಾಸವಾಗಬಹುದು.
ಸಾಗರ ತಾಲೂಕು ತುಮರಿ ಪಂಚಾಯತಿ ವ್ಯಾಪ್ತಿಯ ಇಲ್ಲಿನ ಸಿಂಗದೂರು ಕ್ಷೇತ್ರಕ್ಕೆ ಬರುವ ಭಕ್ತರ ಸಂಖ್ಯೆ ಕೂಡ ಹೆಚ್ಚು. ಈ ಪ್ರದೇಶಕ್ಕೆ ಅಂಬಾರಗೊಡ್ಲು ಮಾರ್ಗದ ಹಿನ್ನೀರಿನ ಮೂಲಕ ಕಳಸವಳ್ಳಿಗೆ ತೆರಳಬೇಕಾಗಿದ್ದು, ಇದು ಪ್ರಯಾಸದಾಯಕವಾಗಿತ್ತು. ಇದನ್ನು ಬಿಟ್ಟರೆ ಜೋಗದ ಅಥವಾ ನಿಟ್ಟೂರು ಮಾರ್ಗ ಬಳಸಿ ತಲುಪಬೇಕಿತ್ತು.
ಈಗ ಈ ಸೇತುವೆ ನಿರ್ಮಾಣದಿಂದ ಜನರು ತೊಂದರೆ ಪಡುವುದು ತಪ್ಪಲಿದ್ದು, ಜನರ ಬಹುದಿನದ ಕನಸು ನನಸಾಗಲಿದೆ. ಜೊತೆಗೆ ಕೊಲ್ಲೂರು ಮತ್ತು ಉಡುಪಿಗೆ ಮಲೆನಾಡು ಸಂಪರ್ಕ ಕಲ್ಪಿಸುವ ಮಾರ್ಗ ಇನ್ನಷ್ಟು ಹತ್ತಿರ ಕೂಡ ಆಗಲಿದೆ.