ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೇಲೆ ಎರಡನೇ ಬಾರಿಗೆ ದೋಷಾರೋಪಣೆ ಹೊರಿಸುವ ಮೂಲಕ ಅಮೇರಿಕಾ ಸಂಸತ್ತು ಇತಿಹಾಸ ಸೃಷ್ಟಿಸಿದೆ. ಟ್ರಂಪ್ ಅಧಿಕಾರಾವಧಿ ಮುಗಿಯಲು ಇನ್ನು ಕೇವಲ ಒಂದೇ ವಾರ ಬಾಕಿಯಿರುವಾಗ ಈ ಘಟನೆ ನಡೆದಿದೆ.
ಕಳೆದ ವಾರ ಅಮೇರಿಕಾ ಸಂಸತ್ತಿನ ಮೇಲೆ ಟ್ರಂಪ್ ಬೆಂಬಲಿಗರು ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಐವರು ಸಾವನ್ನಪ್ಪಿದ್ದರು ಕೂಡಾ. ಆದರೆ, ಈ ದಾಳಿಯ ನಡುವೆಯೇ, ಅಮೇರಿಕಾದ ನೂತನ ಅಧ್ಯಕ್ಷರೆಂದು ಜೋ ಬಿಡೆನ್ ಅವರನ್ನು ಅಧಿಕೃತವಾಗಿ ಘೋಷಣೆ ಮಾಡಲಾಗಿತ್ತು. ಈಗ ಅಧಿಕೃತವಾಗಿ ಅಧ್ಯಕ್ಷ ಸ್ಥಾನವನ್ನು ತ್ಯಜಿಸಲು ಕೊನೇಯ ಅವಕಾಶವನ್ನು ಡೆಮೋಕ್ರಾಟ್ಸ್ ಪಕ್ಷದವರು ನೀಡಿದ್ದಾರೆ.
ಬುಧವಾರ ಆರಂಭವಾದ ದೋಷಾರೋಪಣೆ ಚರ್ಚೆಯಲ್ಲಿ ಬಹುತೇಕ ಸಂಸದರು ಭಾಗವಹಿಸಿದ್ದರು. ಆಶ್ಚರ್ಯವೆಂದರೆ ಸುಮಾರು ಹತ್ತು ರಿಪಬ್ಲಿಕನ್ ಸಂಸದರು ಕೂಡಾ ಈ ಚರ್ಚೆಯಲ್ಲಿ ಭಾಗವಹಿಸಿ ಟ್ರಂಪ್ ವಿರುದ್ದ ಮತ ಚಲಾಯಿಸಿದ್ದಾರೆ. ಕೊನೆಗೆ, ಟ್ರಂಪ್ ವಿರುದ್ದ ದೋಷಾರೋಪಣೆ ಸಲ್ಲಿಸಿದವರ ಪರ 232 ಮತಗಳು ಬಿದ್ದರೆ, ಟ್ರಂಪ್ ಪರವಾಗಿ ಹಾಗೂ ದೋಷಾರೋಪಣೆಯ ವಿರುದ್ದವಾಗಿ 197 ಮತಗಳು ಚಲಾವಣೆಯಾದವು.
ಇದರೊಂದಿಗೆ, ಟ್ರಂಪ್ ಎರಡನೇ ಬಾರಿಗೆ ವಾಗ್ದಂಡನೆಗೂ ಒಳಗಾಗಿದ್ದಾರೆ. ಈ ವೇಳೆ ಸಂಸತ್ತಿನಲ್ಲಿ ಮಾತನಾಡಿದ ಸ್ಪೀಕರ್ ನ್ಯಾನ್ಸಿ ಪೆಲೋಸಿ “ಟ್ರಂಪ್ ಹೊರ ಹೋಗಲೇಬೇಕು. ಅವರು ಈ ವೇಳೆ ದೇಶಕ್ಕೆ ಅತ್ಯಂತ ಅಪಾಯಕಾರಿ ವ್ಯಕ್ತಿ,” ಎಂದು ಅಭಿಪ್ರಾಯಪಟ್ಟಿದ್ದಾರೆ.