ಬೆಂಗಳೂರನ್ನು ಹೊರತುಪಡಿಸಿದ್ರೆ ಬೆಳಗಾವಿ ಅತ್ಯಂತ ದೊಡ್ಡ ಜಿಲ್ಲೆ. ಬರೋಬ್ಬರಿ 18 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಕುಂದಾನಗರಿ ಎರಡು ಲೋಕಸಭಾ ಕ್ಷೇತ್ರಗಳನ್ನೂ ಹೊಂದಿದೆ. ಕರ್ನಾಟಕ ರಾಜಕಾರಣದಲ್ಲಿ ಬೆಳಗಾವಿ ಜಿಲ್ಲೆ ಅತ್ಯಂತ ಪ್ರಭಾವಶಾಲಿ ಎಂದು ಕರೆಯಬಹುದು. ಇದೇ ಕಾರಣಕ್ಕೆ ರಾಜಕಾರಣಿಗಳು ಬೆಳಗಾವಿ ಮೇಲೆ ಹಿಡಿತ ಸಾಧಿಸುವ ಪ್ರಯತ್ನ ಮಾಡುತ್ತಾರೆ. ಬೆಳಗಾವಿ ರಾಜಕಾರಣದ ಮೇಲೆ ಹಿಡಿತ ಸಾಧಿಸುವ ವಿಚಾರಕ್ಕೆ ಕೆಲವು ವರ್ಷಗಳ ಹಿಂದೆ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿತ್ತು. ಇದಿಗ ಮತ್ತೆ ಕಾಂಗ್ರೆಸ್‌ನ ಟ್ರಬಲ್ ಶೂಟರ್ ಡಿ.ಕೆ ಶಿವಕುಮಾರ್ ಬೆಳಗಾವಿಗೆ ಎಂಟ್ರಿಯಾಗಿದ್ದಾರೆ.
ಕಷ್ಟ ಕಾಲದಲ್ಲಿ ಕೈ ಹಿಡಿದವರನ್ನು ನಾವು ಕೈ ಬಿಡಲ್ಲ..!
ವಿಶೇಷ ವಿಮಾನದಲ್ಲಿ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಡಿಸಿಎಂ ಡಿ.ಕೆ ಶಿವಕುಮಾರ್ ಅವರನ್ನು ಸಚಿವರಾದ ಸತೀಶ್ ಜಾರಕಿಹೊಳಿ ಹಾಗು ಲಕ್ಷ್ಮೀ ಹೆಬ್ಬಾಳ್ಕರ್ ಸ್ವಾಗತ ಮಾಡಿದ್ರು. ಶಾಸಕ ಲಕ್ಷ್ಮಣ ಸವದಿ ಸಚಿವ ಸ್ಥಾನ ಸಿಗದಿದ್ದಕ್ಕೆ ಅಸಮಾಧಾನಗೊಂಡಿರುವ ಹಿನ್ನೆಲೆಯಲ್ಲಿ ಸಮಾಧಾನ ಮಾಡಲು ಡಿ.ಕೆ ಶಿವಕುಮಾರ್ ಭೇಟಿ ನೀಡಿದ್ದು, ಲಕ್ಷ್ಮಣ ಸವದಿ ಅವರನ್ನು ಭೇಟಿಯಾಗಿ ಸಮಾಧಾನ ಮಾಡುವ ಉದ್ದೇಶ ಹೊಂದಿದ್ದಾರೆ ಎನ್ನಲಾಗಿದೆ. ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಡಿ.ಕೆ ಶಿವಕುಮಾರ್, ಇಂದು, ನಾಳೆ ಲಕ್ಷ್ಮಣ ಸವದಿ, ಜಗದೀಶ್ ಶೆಟ್ಟರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸುತ್ತೇನೆ. ಕಷ್ಟ ಕಾಲದಲ್ಲಿ ನಮ್ಮ ಪಕ್ಷಕ್ಕೆ ಬಂದು ಶಕ್ತಿ ತುಂಬಿದ್ದಾರೆ. ನನಗೆ ಮಾತನಾಡಲು ಸಮಯ ಸಿಕ್ಕಿರಲಿಲ್ಲ. ಸಂಪೂರ್ಣವಾಗಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದೆ. ಲಕ್ಷ್ಮಣ ಸವದಿ ಸಾಹೇಬರಿಗೆ ಹಾಗು ಜಗದೀಶ್ ಶೆಟ್ಟರ್ ಸಾಹೇಬರಿಗೆ ಭೇಟಿ ಮಾಡಲು ಬಂದಿದ್ದೇನೆ. ಸಚಿವ ಸ್ಥಾನ ಸಿಗದಿದ್ದಕ್ಕೆ ಬೇಸರಗೊಂಡಿದ್ದಾರಾ..? ಎಂಬ ಪ್ರಶ್ನೆಗೆ ಯಾರಿಗೂ ಬೇಸರ ಇಲ್ಲಾ, ನಾನು ಒಬ್ಬ ಪಕ್ಷ ಅಧ್ಯಕ್ಷನಾಗಿ ಬಂದಿದ್ದೇನೆ. ಸಚಿವ ಸ್ಥಾನ ಸಿಗುವ ನಿರೀಕ್ಷೆಯಲ್ಲಿ ಸವದಿ ಹಾಗು ಶೆಟ್ಟರ್ ಇದ್ದರಾ..? ಎಂಬ ಪ್ರಶ್ನೆಗೆ ಅದು ನನಗೆ ಗೊತ್ತಿಲ್ಲ, ಕಾಂಗ್ರೆಸ್ ಪಕ್ಷ ಯಾರನ್ನೂ ಕೈ ಬಿಡುವುದಿಲ್ಲ. ಯಾವಾಗ ಎನೂ ಎತ್ತ ಅಂತಾ ಕೇಳಬೇಡಿ ಎಂದು ತೆರಳಿದ್ದಾರೆ.
ಸವದಿ ಭೇಟಿ ಮಾಡಿ ಚರ್ಚೆ, ಇಂದು ಶೆಟ್ಟರ್ ಭೇಟಿ..!
ಬೆಳಗಾವಿಯ ಸದಾಶಿವನಗರದಲ್ಲಿರುವ ಲಕ್ಷ್ಮಣ ಸವದಿ ನಿವಾಸಕ್ಕೆ ಭೇಟಿ ನೀಡಿದ್ದ ಡಿಸಿಎಂ ಡಿ.ಕೆ ಶಿವಕುಮಾರ್, ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಿದ್ದ ಲಕ್ಷ್ಮಣ ಸವದಿ ಅವರ ಜೊತೆಗೆ ಮಾತನಾಡಿ, ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನಮಾನ ನೀಡುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಸಚಿವರಾದ ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್, ಶಾಸಕರಾದ ಬಾಬಾ ಸಾಹೇಬ್ ಪಾಟೀಲ್, ಆಸೀಫ್ ಸೇಠ್, ಎಂಎಲ್‌ಸಿ ಚನ್ನರಾಜ ಹಟ್ಟಿಹೊಳಿ ಕೂಡ ಹಾಜರಿದ್ದರು. ಇನ್ನು ಇವತ್ತು ಹುಬ್ಬಳ್ಳಿಗೆ ಭೇಟಿ ನೀಡಿ ಚುನಾವಣೆಯಲ್ಲಿ ಸೋಲುಂಡಿರುವ ಜಗದೀಶ್ ಶೆಟ್ಟರ್ ಅವರನ್ನು ಭೇಟಿ ಮಾಡಿ ಮುಂದಿನ ದಿನಗಳಲ್ಲಿ ಪಕ್ಷ ಉತ್ತಮ ರೀತಿಯಲ್ಲಿ ನಡೆಸಿಕೊಳ್ಳಲಿದೆ. ಲಕ್ಷ್ಮಣ ಸವದಿ ಹಾಗು ಜಗದೀಶ್ ಶೆಟ್ಟರ್ ಅವರಿಗೆ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ಕೊಡುವ ಬಗ್ಗೆ ಇಬ್ಬರೂ ನಾಯಕರ ಜೊತೆಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಡಿಕೆಶಿ ಮಾಸ್ಟರ್ ಪ್ಲ್ಯಾನ್ ಹಿಂದಿನ ರಹಸ್ಯ ಏನು..?
ಬೆಳಗಾವಿಯಲ್ಲಿ ಲಕ್ಷ್ಮಣ ಸವದಿ ರಾಜಕೀಯವಾಗಿ ಡಿ.ಕೆ ಶಿವಕುಮಾರ್‌ಗೆ ಬಲವಾಗಿ ನಿಲ್ಲುವಂತಹ ನಾಯಕನಾಗಬೇಕು. ಈ ಮೂಲಕ ಎದುರಾಳಿ ಆಗಿರುವ ರಮೇಶ್ ಜಾರಕಿಹೊಳಿ ಶಕ್ತಿಯನ್ನು ನೆಲಸಮ ಮಾಡಬೇಕು ಎನ್ನುವುದು ಡಿಸಿಎಂ ಡಿ.ಕೆ ಶಿವಕುಮಾರ್ ರಾಜಕೀಯ ಲೆಕ್ಕಾಚಾರ. ಇನ್ನು ಮುಂದಿನ ವರ್ಷ ಲೋಕಸಭಾ ಚುನಾವಣೆ ನಡೆಯಲಿದ್ದು, ಲಿಂಗಾಯತ ನಾಯಕರನ್ನು ಸೂಕ್ತ ರೀತಿಯಲ್ಲಿ ನಡೆಸಿಕೊಳ್ಳದೆ ಹೋದರೆ ಲಿಂಗಾಯತ ಮತಗಳು ಛಿದ್ರ ಆಗುವ ಭಯವಿದೆ. ಇನ್ನು ಬೆಳಗಾವಿ ಹಾಗು ಹುಬ್ಬಳ್ಳಿ-ಧಾರವಾಡ ಭಾಗದಲ್ಲಿ ಲಕ್ಷ್ಮಣ ಸವದಿ ಹಾಗು ಜಗದೀಶ್ ಶೆಟ್ಟರ್ ಅವರಿಗೆ ರಾಜಕೀಯವಾಗಿ ಬಲ ತುಂಬಿದರೆ ಲೋಕಸಭಾ ಚುನಾವಣೆಯಲ್ಲಿ ಲಿಂಗಾಯತ ಸಮುದಾಯವನ್ನು ಓಲೈಸಿಕೊಳ್ಳುವುದು ಸುಲಭ ಆಗಲಿದೆ. ಲಿಂಗಾಯತ ಸಮುದಾಯ ವಿಧಾನಸಭಾ ಚುನಾವಣೆಯಲ್ಲಿ ಬೆಂಬಲ ಕೊಟ್ಟಂತೆ ಲೋಕಸಭೆಯಲ್ಲೂ ಬೆಂಬಲ ಸಿಕ್ಕರೆ ಖಂಡಿತ ಕರ್ನಾಟಕದಲ್ಲಿ ಹೆಚ್ಚು ಸ್ಥಾನ ಗೆಲ್ಲಬಹುದು ಅನ್ನೋದು ಟ್ರಬಲ್ ಶೂಟರ್ ಮುಂದಾಲೋಚನೆ. ಇದೇ ಕಾರಣಕ್ಕಾಗಿ ಈ ಇಬ್ಬರೂ ನಾಯಕರಿಗೂ ಸೂಕ್ತ ಸ್ಥಾನಮಾನ ನೀಡುವ ಬಗ್ಗೆ ಸಿಎಂ ಜೊತೆಗೆ ಚರ್ಚೆ ನಡೆಸಿ ಸಂದೇಶ ಹೊತ್ತು ತೆರಳಿದ್ದಾರೆ ಎನ್ನಲಾಗ್ತಿದೆ. ಶೀಘ್ರದಲ್ಲೇ ಇಬ್ಬರಿಗೂ ಸೂಕ್ತಸ್ಥಾನಮಾನಗಳು ಸಿಗುವ ನಿರೀಕ್ಷೆ ಇದೆ.
ಕೃಷ್ಣಮಣಿ