ತ್ರಿಪುರಾದಲ್ಲಿ ನಡೆದ ಕೋಮು ಹಿಂಸಾಚಾರಕ್ಕೆ ಸಂಬಂದಿಸಿದಂತೆ ಅಡಳಿತ ಬಿಜೆಪಿ ಸರಕಾರದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯನ್ನು ಹತ್ತಿಕ್ಕಲು ಮುಂದಾಗಿದ್ದು, ಕೋಮು ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿ ಇಲ್ಲಿನ ಪೊಲೀಸರು 100ಕ್ಕೂ ಅಧಿಕ ವಿವಿಧ ಸಾಮಾಜಿಕ ಜಾಲತಾಣದ ಖಾತೆಯ ಮಾಲೀಕರ ವಿರುದ್ಧ ಕಾನೂನು ಬಾಹಿರ ಚಟುವಟಿಕೆಯಡಿ ಪ್ರಕರಣ ದಾಖಲಿಸಿದ್ದಾರೆ.
ರಾಜ್ಯದಲ್ಲಿ ಮಸೀದಿ ಧ್ವಂಸಕ್ಕೆ ಸಂಬಂಧಿಸಿದಂತೆ ‘ವಿಕೃತ ಮತ್ತು ಆಕ್ಷೇಪಾರ್ಹ’ ವಿಷಯಗಳನ್ನು ಪೋಸ್ಟ್ ಮಾಡಲು ಟ್ವಿಟರ್ ಖಾತೆಗಳನ್ನು ಬಳಸಲಾಗಿದೆ ಎಂದು ಆರೋಪಿಸಿ, 68 ಖಾತೆದಾರರು, ಫೇಸ್‌ಬುಕ್‌ನಲ್ಲಿ 32 ಮತ್ತು ಯುಟ್ಯೂಬ್‌ನಲ್ಲಿ ಇಬ್ಬರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ಬಗ್ಗೆ ಪಶ್ಚಿಮ ತ್ರಿಪುರಾದ ಪೊಲೀಸರು ಟ್ವಿಟರ್ ನ ಕುಂದುಕೊರತೆಗಳ ಬಗ್ಗೆ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಇದರಲ್ಲಿ 68 ಜನರ ಟ್ವಿಟರ್ ಖಾತೆಗಳ ಲಿಂಕ್ ಅನ್ನು ನಮೂದಿಸಲಾಗಿದೆ.
ಇತ್ತೀಚೆಗೆ ರಾಜ್ಯದಲ್ಲಿ ಮುಸ್ಲಿಂ ಸಮುದಾಯಗಳ ಮೇಲೆ ನಡೆದ ಘರ್ಷಣೆಗಳಿಗೆ ಸಂಬಂಧಿಸಿದಂತೆ ಟ್ವಿಟರ್ ನಲ್ಲಿ ತಿರುಚಿದ ಹೇಳಿಕೆಗಳನ್ನು ಪ್ರಕಟಿಸುತ್ತಿದ್ದಾರೆ ಎಂದು ಪತ್ರದಲ್ಲಿ ತಿಳಿಸಲಾಗಿದ್ದು, ಪೋಸ್ಟರ್ ಗಳು, ಘಟನೆಗಳ ಛಾಯಾಚಿತ್ರಗಳು, ವಿಡಿಯೋಗಳು ಧಾರ್ಮಿಕ ಗುಂಪುಗಳ ಹಾಗೂ ಸಮುದಾಯಗಳ ನಡುವೆ ದ್ವೇಷವನ್ನು ಉತ್ತೇಜಿಸುವ ಹೇಳಿಕೆಗಳನ್ನು ಒಳಗೊಂಡಿವೆ. ಇವು ಕೋಮುಗಲಭೆಗೆ ಕಾರಣವಾಗಬಹುದು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿತ್ತು. ಟ್ವಿಟರ್ ಬಳಕೆದಾರರ ಐಪಿ ವಿಳಾಸ ಮತ್ತು ಟ್ವಿಟರ್ ಖಾತೆಗಳಿಗೆ ಸೇರಿಸಲಾದ ಮೊಬೈಲ್ ಸಂಖ್ಯೆಗಳ ವಿವರಗಳನ್ನು ಪೊಲೀಸರು ಕೇಳಿದ್ದಾರೆ.
ಬಾಂಗ್ಲಾದೇಶದಲ್ಲಿ ದುರ್ಗಾಪೂಜಾ ಮಂಟಪ ಧ್ವಂಸ ಪ್ರಕರಣ!
ಈ ಹಿಂದೆ ಬಾಂಗ್ಲಾದೇಶದಲ್ಲಿ ದುರ್ಗಾಪೂಜಾ ಮಂಟಪವನ್ನು ಧ್ವಂಸಗೊಳಿಸಿದ್ದನ್ನು ವಿರೋಧಿಸಿ ಬಿಜೆಪಿ ಬೆಂಬಲಿತ ಸಂಘಟನೆಗಳಾದ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಮೆರವಣಿಗೆಯನ್ನು ನಡೆಸಿದ್ದವು. ಈ ವೇಳೆ ವಿಎಚ್‌ಪಿ ಕಾರ್ಯಕರ್ತರ ಒಂದು ವಿಭಾಗವು ಚಮ್ಟಿಲ್ಲಾ ಪ್ರದೇಶದಲ್ಲಿ ಮಸೀದಿಯನ್ನು ಧ್ವಂಸಗೊಳಿಸಿ, ಸುಮಾರು 800 ಗಜಗಳಷ್ಟು ದೂರದಲ್ಲಿರುವ ರೋವಾ ಬಜಾರ್ ಪ್ರದೇಶದ ಮೂರು ಮನೆಗಳು ಮತ್ತು ಮೂರು ಅಂಗಡಿಗಳನ್ನು ಧ್ವಂಸ ಮಾಡಿದ್ದವು.
ಇದೇ ಸಂದರ್ಭದಲ್ಲಿ ತ್ರಿಪುರಾದಲ್ಲಿ ನಡೆದ ಕೋಮುಗಲಭೆ ಕುರಿತು ಸತ್ಯಶೋಧನೆ ನಡೆಸಿದ ತಂಡದ ಭಾಗವಾಗಿದ್ದ ಇಬ್ಬರು ವಕೀಲರ ಮೇಲೆ ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದು, ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ.
ರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆಗಳ ಒಕ್ಕೂಟದ ಕಾರ್ಯದರ್ಶಿ ಅಡ್ವೊಕೇಟ್ ಅನ್ಸರ್ ಇಂದೋರಿ ಮತ್ತು ನಾಗರೀಕ ಹಕ್ಕುಗಳ ಸಂಘಟನೆಯಾದ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟಿಸ್ (ಪಿಯುಸಿಎಲ್, ದೆಹಲಿ)ನ ವಕೀಲರಾದ ಮುಖೇಶ್ ಅವರಿಗೆ ತ್ರಿಪುರಾ ಪೊಲೀಸರು ನೋಟಿಸ್ ಕಳುಹಿಸಿದ್ದಾರೆ.ಈ ನೋಟಿಸ್ ನಲ್ಲಿ ಹೇಳಿಕೆಗಳನ್ನು, ಕಾಮೆಂಟ್ ಗಳನ್ನು ತಕ್ಷಣವೇ ಅಳಿಸಿ ಹಾಕಬೇಕು, ಅನಂತರ, ನವೆಂಬರ್ 10ರೊಳಗೆ ಪಶ್ಚಿಮ ಅಗರ್ತಲಾ ಪೊಲೀಸ್ ಠಾಣೆಯ ಮುಂದೆ ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿದೆ.
ಕೇಳಿಬರುತ್ತಿರುವ ಪ್ರಮುಖ ಹೆಸರುಗಳು ಯಾವುವು?
ಈ ಪ್ರಕರಣದಲ್ಲಿ ಹೆಸರಿಸಲಾದ ಪ್ರಮುಖ ಟ್ವಿಟರ್ ಖಾತೆಗಳಲ್ಲಿ ಇಂಡಿಯನ್ ಅಮೇರಿಕನ್ ಮುಸ್ಲಿಂ ಕೌನ್ಸಿಲ್, ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಜೈಪುರ ಮೂಲದ ಪ್ರಾಧ್ಯಾಪಕ ಸಲೀಂ ಎಂಜಿನಿಯರ್, ಬ್ರಿಟಿಷ್ ಪತ್ರಿಕೆ ಬೈಲೈನ್ ಟೈಮ್ಸ್‌ನ ಜಾಗತಿಕ ವರದಿಗಾರ ಸಿಜೆ ವೆರ್ಲೆಮನ್, ಜಫರುಲ್ ಇಸ್ಲಾಂ ಖಾನ್, ದೆಹಲಿ ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ, ಪಂಜಾಬ್ ಪ್ರದೇಶ ಕಾಂಗ್ರೆಸ್ ಅಲ್ಪಸಂಖ್ಯಾತ ಇಲಾಖೆ, ವಿದ್ಯಾರ್ಥಿ ಕಾರ್ಯಕರ್ತ ಶಾರ್ಜೀಲ್ ಉಸ್ಮಾನಿ ಮತ್ತು ಭಾರತೀಯ ಪತ್ರಕರ್ತರಾದ ಶ್ಯಾಮ್ ಮೀರಾ ಸಿಂಗ್, ಜಹಾಂಗೀರ್ ಅಲಿ ಮತ್ತು ಸರ್ತಾಜ್ ಆಲಂ ಇತರರ ಹೆಸರುಗಳು ಕೇಳಿಬರುತ್ತಿವೆ.
ಬಹುಪಾಲು ಪರ್ತಕರ್ತರೇ ಆಗಿದ್ದಾರೆ!
68 ಖಾತೆಗಳಲ್ಲಿ ಹಲವಾರು ಮಂದಿ ಪತ್ರಕರ್ತರೇ ತಮ್ಮ ಟ್ವಿಟರ್ ಖಾತೆಗಳಿಂದ ಹಿಂಸಾಚಾರದ ಕುರಿತು ವರದಿ ಮಾಡುತ್ತಿದ್ದು, ಇವರಲ್ಲಿ ಬಹುಪಾಲು ಮುಸ್ಲಿಮರೇ ಆಗಿದ್ದಾರೆ. ಕೆಲವರು ಮಾತ್ರ ಇತರ ಸಮುದಾಯಗಳಾದವರಿದ್ದಾರೆ. ಇದರಿಂದ ಗಲಭೆಗಳು ವಿಕೋಪಕ್ಕೆ ಹೋಗುತ್ತಿವೆ ಎಂಬ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ.
”ಪ್ರಕರಣದಲ್ಲಿ ನಾವು ಇನ್ನೂ ಯಾರನ್ನೂ ಬಂಧಿಸಿಲ್ಲ. ನಾವು ಸಾಮಾಜಿಕ ಜಾಲತಾಣಗಳ ಪೋಸ್ಟ್ಗಳನ್ನು ಗಮನದಲ್ಲಿಟ್ಟುಕೊಂಡು ಪ್ರಕರಣವನ್ನು ದಾಖಲಿಸಿದ್ದೇವೆ. ನಾನು ಯಾವುದೇ ಹೆಚ್ಚಿನ ಕಾಮೆಂಟ್ ಮಾಡಲು ಬಯಸುವುದಿಲ್ಲ ಎಂದು ಸಹಾಯಕ ಇನ್ಸ್ಪೆಕ್ಟರ್ ಜನರಲ್ ಸುಬ್ರತಾ ಚಕ್ರವರ್ತಿ ತಿಳಿಸಿದ್ದಾರೆ.
ಮಾಜಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದ) ಸಂಸದ ಜಿತೇಂದ್ರ ಚೌಧರಿ ಮಾತನಾಡಿ, ಪೊಲೀಸ್ ಕ್ರಮವು “ಅಸಾಂವಿಧಾನಿಕ ಮತ್ತು ಅನೈತಿಕ” ಮತ್ತು ಭಾರತದ ಜನರಿಗೆ ಭಾರತೀಯ ಸಂವಿಧಾನವು ಖಾತರಿಪಡಿಸಿದ ನಾಗರಿಕ ಹಕ್ಕುಗಳ ಸಿದ್ಧಾಂತದ ವಿರುದ್ಧವಾಗಿದೆ. ಸಂಘ ಪರಿವಾರದ ಕಾರ್ಯಕರ್ತರು ಹಿಂಸಾಚಾರದಲ್ಲಿ ತೊಡಗಿರುವುದು ಸತ್ಯ. ರಾಜ್ಯದಲ್ಲಿ ಕೋಮುಗಲಭೆ ನಡೆದಿದೆ. ಅದಕ್ಕೆ ಸಂವೇದನಾಶೀಲರು ಸ್ಪಂದಿಸುವುದು ಸಹಜ. ಪೊಲೀಸ್ ಕ್ರಮವು ತ್ರಿಪುರಾದಲ್ಲಿ ಶಾಂತಿಯನ್ನು ಕಾಪಾಡುವಲ್ಲಿ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ಸ್ವಂತ ವೈಫಲ್ಯವನ್ನು ಮರೆಮಾಡುವ ಪ್ರಯತ್ನವಾಗಿದೆ ಎಂದರು.
ನನಗೆ ಭದ್ರತೆ ಬೇಕು- ಸುಶ್ಮಿತಾ ದೇವ್
ಈ ಬಗ್ಗೆ ಮಾತನಾಡಿರುವ ತೃಣಮೂಲ ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ಸುಶ್ಮಿತಾ ದೇವ್, ಯಾರಾದರೂ ತಪ್ಪು ಮಾಹಿತಿ ನೀಡಿದರೆ, ಕಾನೂನುಬಾಹಿರ ಕಾನೂನಿನಡಿ ಅನ್ವಯಿಸಬಹುದು, ಆದರೆ ಸತ್ಯಶೋಧನಾ ಸಮಿತಿಗಳು ಕಠಿಣ ಕಾಯ್ದೆಯಡಿ ಬರಲು ಸಾಧ್ಯವಿಲ್ಲ. “ನಾನು ಆ ಸ್ಥಳಕ್ಕೆ ಭೇಟಿ ನೀಡಲು ಸಾಧ್ಯವಿಲ್ಲ. ನಾನು ಅಗರ್ತಲಾದಿಂದ ಹೊರಬಂದರೆ, ಪೋಲಿಸರು ನನ್ನನ್ನು ಹೊಡೆಯುತ್ತಾರೆ. ನಾನು ಅಲ್ಲಿಗೆ ಹೋಗಲು ಸಿದ್ಧಳಿರುವುದರಿಂದ ನನಗೆ ಭದ್ರತೆ ನೀಡಬೇಕು ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಅಲ್ಲಿಗೆ ಕಾಂಗ್ರೆಸ್ ತಂಡವೂ ಹೋಗಿತ್ತು. ಹಾಗಾದರೆ ಅವರು ಕಾಂಗ್ರೆಸ್ ವಿರುದ್ಧ ಏಕೆ ಪ್ರಕರಣ ದಾಖಲಿಸಿಲ್ಲ? ಎಂದು ಪ್ರಶ್ನಿಸಿದ್ದಾರೆ.