ಫೋಟೋ ಗೀಳಿಗಾಗಿ ಆನೆ ಸನಿಹಕ್ಕೆ ತೆರಳಿದ್ದ ಪ್ರಯಾಣಿಕನ ಮೇಲೆ ಒಂಟಿಯಾನೆ ದಾಳಿ ನಡೆಸಿ ಗಾಯಗೊಳಿಸಿದೆ. ಈ ಘಟನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಭಾನುವಾರ ಸಂಜೆ ನಡೆದಿದೆ.

ಪ್ರಯಾಣಿಕನ ಈ ಹುಚ್ಚಾಟಕ್ಕೆ ವನ್ಯಜೀವಿ ಪ್ರಿಯರು ಆಕ್ರೋಶ ಹೊರಹಾಕಿದ್ದಾರೆ.

ತಮಿಳುನಾಡಿನಿಂದ ಗುಂಡ್ಲುಪೇಟೆಗೆ ಬರುವ ಮಾರ್ಗ ಮಧ್ಯೆ ರಸ್ತೆ ಬದಿಯಲ್ಲಿ ನಿಂತಿದ್ದ ಒಂಟಿ ಆನೆಯ ಸನಿಹಕ್ಕೆ ತೆರಳಿ ಫೋಟೋ ಕ್ಲಿಕ್ಕಿಸಲು ಮುಂದಾಗಿದ್ದ ಆಸಾಮಿಯನ್ನ ಅಟ್ಟಿಸಿಕೊಂಡು ಹೋಗಿದೆ. ಈ ವೇಳೆ ಕೆಳಗೆ ಬಿದ್ದ ವ್ಯಕ್ತಿಯನ್ನ ಕಾಲಿನಿಂದ ಒದ್ದು ಅಲ್ಲಿಂದ ತೆರಳಿದೆ.

ಅದೃಷ್ಟವಶಾತ್ ಪ್ರಯಾಣಿಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ನಂತರ ಆತನನ್ನ ಜೊತೆಯಲ್ಲಿದ್ದವರು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಬಂಡಿಪುರ ಹುಲಿ ಯೋಜನೆ ನಿರ್ದೇಶಕ ಪ್ರಭಾಕರನ್ ತಿಳಿಸಿದ್ದಾರೆ