ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್(Dinesh Gundu Rao) ಅವರು ಇಂದು ಮಲ್ಲೇಶ್ವರಂನ ಕೆಸಿ ಜನರಲ್ ಆಸ್ಪತ್ರೆಗೆ(KC General Hospital) ಭೇಟಿ ನೀಡಿ, ಆಸ್ಪತ್ರೆಯಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳು ಹಾಗೂ ಆಸ್ಪತ್ರೆಯ ಸಮಸ್ಯೆಗಳ ಕುರಿತು ಪರಿಶೀಲನೆ ನಡೆಸಿದರು.

ಬೆಂಗಳೂರು ಉತ್ತರ ಭಾಗ ಹಾಗೂ ಸುತ್ತಮುತ್ತಲ ಪ್ರದೇಶದ ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ, ಮಾರ್ಚ್ ತಿಂಗಳಲ್ಲಿ ಮಲ್ಲೇಶ್ವರಂ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಸುಸಜ್ಜಿತ ಟ್ರಾಮಾ ಕೇರ್ ಸೆಂಟರ್ ನೂತನ ಕಟ್ಟಡದಲ್ಲಿ ಪ್ರಾರಂಭವಾಗಲಿದೆ.
ಇದನ್ನೂ ಓದಿ: ತಮಿಳುನಾಡು, ಕೇರಳ ಬಳಿಕ ಕರ್ನಾಟಕದಲ್ಲಿಯೂ ರಾಜ್ಯಪಾಲರು VS ರಾಜ್ಯ ಸರ್ಕಾರ: ಕಾರಣವೇನು..?
50 ಬೆಡ್‌ಗ ಈ ಟ್ರಾಮಾ ಕೇರ್ ಸೆಂಟರ್‌ನಲ್ಲಿ 14 HDU ಹಾಸಿಗೆಗಳು, 15 ಐಸಿಯು ಹಾಸಿಗೆಗಳು, 2 ಶಸ್ತ್ರಚಿಕಿತ್ಸಾ ಕೊಠಡಿಗಳು ಇರಲಿದ್ದು, ಇದರಿಂದ ಅಪಘಾತ ಹಾಗೂ ತುರ್ತು ಚಿಕಿತ್ಸೆಗೆ ಒಳಗಾಗುವ ರೋಗಿಗಳಿಗೆ ಅತ್ಯಾಧುನಿಕ ಚಿಕಿತ್ಸೆ ಲಭ್ಯವಾಗಲಿದೆ.

ಇನ್ನು ಕೆಸಿ ಜನರಲ್ ಆಸ್ಪತ್ರೆಯಲ್ಲಿ ಬ್ಲಡ್ ಬ್ಯಾಂಕ್ ಹಾಗೂ ಡಿಎನ್‌ಬಿ (DNB) ಅಧ್ಯಯನಕ್ಕಾಗಿ ನೂತನ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿದೆ. ಇದೇ ವೇಳೆ ತಾಯಿ–ಮಕ್ಕಳ ಆಸ್ಪತ್ರೆಯೂ ಹೊಸ ಸುಸಜ್ಜಿತ ಕಟ್ಟಡದಲ್ಲಿ ಇದೇ ವರ್ಷದ ಡಿಸೆಂಬರ್ ವೇಳೆಗೆ ಲೋಕಾರ್ಪಣೆಗೊಳ್ಳಲಿದೆ ಎನ್ನುವ ಮಾಹಿತಿಯನ್ನು ಸಚಿವರು ಹಂಚಿಕೊಂಡಿದ್ದಾರೆ.

ಈ ವೇಳೆ ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾ ಗೌಡಗೆ ಬೆದರಿಕೆ ಹಾಕಿರುವ ರಾಜೀವ್ ಗೌಡ ಬಂಧನ ವಿಚಾರವಾಗಿ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ಈವರೆಗೂ ಬಂಧಿಸಿಲ್ಲ ಅಂದ್ರೆ ಅವರು ಎಲ್ಲೋ ತಪ್ಪಿಸಿಕೊಂಡು ಓಡಾಡುತ್ತಾ ಇದ್ದಾರೆ. ಬಂಧಿಸಲು ನಮ್ಮ ಸರ್ಕಾರ ಎಲ್ಲ ಕ್ರಮ ಕೈಗೊಳ್ಳುತ್ತದೆ. ಕಾನೂನಿಗಿಂತ ದೊಡ್ಡವರು ಯಾರು ಇಲ್ಲ. ನಮ್ಮ ಪಕ್ಷದವರೇ ಆಗಲಿ, ಬೇರೆ ಪಕ್ಷದವರೇ ಆಗಲಿ ತಪ್ಪು ಮಾಡಿದರೆ ಕಡ್ಡಾಯವಾಗಿ ಕ್ರಮ ಆಗಬೇಕು, ಆಗುತ್ತದೆ ಎಂದು ಸ್ಪಷ್ಟವಾಗಿ ತಿಳಿಸಿದರು.













