ಡಿಸೆಂಬರ್ 31ರಂದು ಸಾರಿಗೆ ನೌಕರರ ಬಂದ್ ಕರೆ ನೀಡಿರುವ ವಿಚಾರ ಮತ್ತಷ್ಟು ಕಗ್ಗಂಟಾಗಿದೆ. ಜಂಟಿ ಕ್ರಿಯಾಸಮಿತಿಯ ಮನವೊಲಿಸಲು ಸಾರಿಗೆ ಇಲಾಖೆ ವಿಫಲ ಆಗಿದೆ. ಸತತ 6ನೇ ಬಾರಿ KSRTCಯ ಕೇಂದ್ರ ಕಚೇರಿಯಲ್ಲಿ ನಡೆದ ಮನವೊಲಿಕೆ ಸಂಧಾನ ಪ್ರಯತ್ನ ವಿಫಲವಾಗಿದೆ.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ನಡೆದ ಸಂಧಾನ ಸಭೆಯಲ್ಲಿ ಇಲಾಖೆಯ ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಕ್ರಿಯಾಸಮಿತಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಲಾಯ್ತು. ಸಾರಿಗೆ ಸಚಿವರ ಪ್ರಯತ್ನವೂ ವ್ಯರ್ಥವಾಗಿದ್ದು, ಹೊಸ ವರ್ಷಕ್ಕೆ ಶ್ರೀಸಾಮಾನ್ಯರಿಗೆ ಸಾರಿಗೆ ಶಾಕ್ ಎದುರಾಗುವ ಸಾಧ್ಯತೆ ಹೆಚ್ಚಾಗಿದೆ.
ಸಾರಿಗೆ ಇಲಾಖೆಯ ಮನವೊಲಿಕೆಗೆ ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ಸೊಪ್ಪುಹಾಕಿಲ್ಲ.13 ಬೇಡಿಕೆಗಳನ್ನು ಈಡೇರಿಸದಿದ್ದರೆ ಬಂದ್ ಕೈ ಬಿಡುವ ಪ್ರಶ್ನೆಯೇ ಇಲ್ಲ ಎಂದು ಸಭೆಯಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ ಎನ್ನಲಾಗಿದೆ. ಬಿಜೆಪಿ ಅವಧಿಯಲ್ಲಾದ 5 ಸಾವಿರ ಕೋಟಿ ಹೊರೆಯಿಂದಾಗಿ ಬೇಡಿಕೆ ಈಡೇರಿಕೆ ಕಷ್ಟ ಎಂದು ಸಾರಿಗೆ ಇಲಾಖೆ ಹೇಳುತ್ತಿದೆ.
ಸಂಧಾನ ಸಭೆ ವಿಫಲವಾದ ಬಳಿಕ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಜಂಟಿ ಕ್ರಿಯಾ ಸಮಿತಿಯವರಿಗೆ ಎಲ್ಲಾ ಸಮಸ್ಯೆಗಳ ಅರಿವಿದೆ ₹5,800 ಕೋಟಿ ಸಾಲವನ್ನ ಬಿಜೆಪಿಯವರು ಬಿಟ್ಟು ಹೋಗಿದ್ದರು. ಇದರಿಂದ ಇಷ್ಟು ಸಮಸ್ಯೆಯಾಗಿದೆ, ಇಲ್ಲದಿದ್ರೆ ಇಷ್ಟು ಸಮಸ್ಯೆಯಾಗ್ತಿರ್ಲಿಲ್ಲ. ಇವತ್ತೂ ಕೂಡ ಸಾರಿಗೆ ನೌಕರರ ಕ್ರಿಯಾ ಸಮಿತಿಯ ಜೊತೆ ಮಾತುಕತೆ ಮಾಡಿದ್ದೇನೆ. ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಕೇಳಿದ್ದಾರೆ. 2 ಸಾವಿರ ಕೋಟಿ ಬಿಡುಗಡೆಯಾಗಬೇಕಿದೆ, ಕ್ಯಾಬಿನೆಟ್‌ಗೆ ಫೈಲ್ ಹೋಗ್ತಿದೆ ಎಂದಿದ್ದಾರೆ.
ಸಿಎಂ ಜೊತೆಗೂ ಸಾಕಷ್ಟೂ ಬಾರಿ ಚರ್ಚೆ ಮಾಡಿದ್ದೇವೆ. ಹಣಕಾಸು ಇಲಾಖೆಯಿಂದ ಹಣ ಬಿಡುಗಡೆಯಾದ್ರೆ ಮಾತ್ರ ಸಮಸ್ಯೆ ಬಗೆಹರಿಯುತ್ತದೆ. 30 ತಿಂಗಳ ವೇತನ ಆಯೋಗ ಕೊಡ್ಬೇಕೆಂದು ಡಿಮ್ಯಾಂಡ್ ಇದೆ. ಎಲ್ಲವನ್ನೂ ಬಗೆಹರಿಸುತ್ತೇವೆ, ಆದರೆ ಸಾರ್ವಜನಿಕರ ಹಿತದೃಷ್ಟಿಯಿಂದ ಮುಷ್ಕರ ಸರಿಯಲ್ಲ ಎಂದಿದ್ದಾರೆ.
ಸರ್ಕಾರ ಪ್ರತಿವರ್ಷವೂ ಅನುದಾನ ಕೊಡ್ತಿದೆ. ಈ ವರ್ಷ 50ಲಕ್ಷ ಅನುದಾನ ಕೊಡೊದಕ್ಕೆ ಸಿಎಂ ಆದೇಶಿಸಿದ್ದಾರೆ. ಕೆಲವು ಸ್ಪಾನ್ಸರ್‌ಗಳಿಂದಲೂ ಸಂಗ್ರಹ ಮಾಡ್ತೇವೆ ಅಂತಾನು ಸಚಿವರು ಹೇಳಿದ್ದಾರೆ. ಆದರೆ ಮುಷ್ಕರ ತಡೆಯುವ ಬಗ್ಗೆ ಯಾವುದೇ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಇನ್ನೇನಿದ್ದರು ಮುಷ್ಕರ ತಡೆಯುವ ಶಕ್ತಿ ಸಿಎಂ ಅಂಗಳ ಸೇರಿದೆ ಎನ್ನಬಹುದು.