ಸ್ವತಂತ್ರ ಭಾರತದ ಸಂವಿಧಾನ ಜಾತ್ಯತೀತತೆಯ ಬುನಾದಿಯ ಮೇಲೆ ಸ್ಥಾಪಿಸಲಾದರೂ, ಇಲ್ಲಿ ರಾಜಕೀಯ ವ್ಯವಸ್ಥೆಯಲ್ಲಿ ಜಾತ್ಯತೀತೆಯನ್ನು ಮೂಲ ಪರಿಕಲ್ಪನೆಗಿಂತಲೂ ಭಿನ್ನವಾಗಿಯೇ ವ್ಯಾಖ್ಯಾನಿಸುತ್ತಾ ಬರಲಾಗಿದೆ. ರಾಜಕೀಯ ಅಧಿಕಾರ ಕೇಂದ್ರಗಳನ್ನು ಯಾವುದೇ ಒಂದು ನಿರ್ದಿಷ್ಟ ಮತದಿಂದ ದೂರ ಇರಿಸುವ, ಯಾವುದೇ ಮತಗಳ ಪ್ರಭಾವಕ್ಕೊಳಪಡಿಸದೆ, ಆಡಳಿತ ವ್ಯವಸ್ಥೆಯನ್ನು ಸಮಸ್ತ ಜನಕೋಟಿಯ ಹಿತದೃಷ್ಟಿಯಿಂದ ನಡೆಸುವ ಮತ್ತು ಆಡಳಿತಾರೂಢ ಪಕ್ಷಗಳು ಯಾವುದೇ ಒಂದು ಮತಕ್ಕೂ ತಮ್ಮ ನಿಷ್ಠೆಯನ್ನು ತೋರದೆ, ಸಕಲ ಜನಸಮುದಾಯಗಳ ಹಿತಾಸಕ್ತಿಗಳಿಗಾಗಿ ಯೋಜನೆಗಳನ್ನು ರೂಪಿಸುವ ತಾತ್ವಿಕ ನಿಲುವಿಗೆ ಸ್ವತಂತ್ರ ಭಾರತದ ಯಾವುದೇ ಸರ್ಕಾರವೂ ಬದ್ಧತೆಯನ್ನು ತೋರಿಲ್ಲ ಎನ್ನುವುದು ಒಪ್ಪಲೇಬೇಕಾದ ಸತ್ಯ.
ಹಿಂದುತ್ವ ರಾಜಕಾರಣ ರಾಜಕೀಯ ಸಂಕಥನದ ಭಾಗವಾಗಿ ವ್ಯಾಪಿಸುವುದಕ್ಕೆ ಮುಂಚಿತವಾಗಿಯೂ ಸಹ ಹಿಂದೂ ಮತದ ನಂಬಿಕೆಗಳು, ಆಚರಣೆಗಳು ಮತ್ತು ಕೆಲವೊಮ್ಮೆ ತಾತ್ವಿಕ ನಿಲುವುಗಳು ಸರ್ಕಾರಗಳ ಆಡಳಿತ ನೀತಿಗಳ ಮೇಲೆ ಪ್ರಭಾವ ಬೀರಿರುವುದನ್ನು ಏಳುದಶಕಗಳ ರಾಜಕಾರಣದಲ್ಲೂ ಗುರುತಿಸಬಹುದು. ಹಾಗೆಯೇ ಭಾರತದ ಸಂವಿಧಾನ ಜಾತಿ ನಿರ್ಮೂಲನೆಗೆ, ಜಾತಿ ತಾರತಮ್ಯಗಳನ್ನು ಹೋಗಲಾಡಿಸುವುದಕ್ಕೆ ಬದ್ಧವಾಗಿದ್ದು, ಅಸ್ಪೃಶ್ಯತೆಯನ್ನು ಅಧಿಕೃತವಾಗಿ ನಿಷೇಧಿಸಲಾಗಿದ್ದರೂ, ಅಧಿಕಾರ ರಾಜಕಾರಣದ ಅಂಗಳದಲ್ಲೇ ಮೇಲ್ಜಾತಿಗಳು ಪ್ರಧಾನ ಭೂಮಿಕೆ ನಿರ್ವಹಿಸಿರುವುದನ್ನೂ ಗಮನಿಸಬಹುದು. ತಮ್ಮ ಜಾತಿ ಅಸ್ಮಿತೆಯ ಕಾರಣಕ್ಕಾಗಿಯೇ ಸಂಸತ್ತಿನ, ಶಾಸನ ಸಭೆಗಳ, ಅಧಿಕಾರಶಾಹಿಯ ಅಂಗಳದಲ್ಲಿ ಅಸ್ಪೃಶ್ಯತೆಯನ್ನು ಪರೋಕ್ಷವಾಗಿಯಾದರೂ ಅನುಭವಿಸಿದ ಸಂಸದರ , ಶಾಸಕರ , ಜನಪ್ರತಿನಿಧಿಗಳ ನಿದರ್ಶನಗಳು ಹೇರಳವಾಗಿವೆ.
ಜಾತ್ಯತೀತತೆಯನ್ನು ಕೇವಲ ಹಿಂದೂ , ಮುಸ್ಲಿಂ, ಕ್ರೈಸ್ತ ಮತ್ತು ಸಿಖ್ ಮತಗಳ ಚೌಕಟ್ಟಿನಲ್ಲೇ ವ್ಯಾಖ್ಯಾನಿಸುತ್ತಾ, ವೈದಿಕ ಸಂಸ್ಕೃತಿಯನ್ನು ಆಚರಣೆಯ ಮಟ್ಟದಲ್ಲಿ ಅವೈದಿಕರ ಮೇಲೆ ಹೇರುತ್ತಾ ಆಡಳಿತ ವ್ಯವಸ್ಥೆಯಲ್ಲೂ ವ್ಯವಸ್ಥಿತವಾಗಿ ಬೆಳೆಸಿಕೊಂಡು ಬಂದಿರುವುದನ್ನು ಈ ಏಳು ದಶಕಗಳ ರಾಜಕಾರಣದಲ್ಲಿ ಸ್ಪಷ್ಟವಾಗಿ ಗುರುತಿಸಬಹುದು. ಇತ್ತೀಚಿನ ದಿನಗಳಲ್ಲಿ “ ಬ್ರಾಹ್ಮಣ್ಯ ” ಎಂಬ ಪದಬಳಕೆಯಿಂದ ಪ್ರಚಲಿತವಾಗುತ್ತಿರುವ ಈ ವೈದಿಕ ಸಂಸ್ಕೃತಿಯನ್ನು ಅವೈದಿಕರೂ, ಅಂಬೇಡ್ಕರ್‍ವಾದಕ್ಕೆ ಬದ್ಧರಾಗಿರುವವರೂ, ಜಾತ್ಯತೀತ ಮೌಲ್ಯಗಳಿಗೆ ನಿಷ್ಠೆ ಹೊಂದಿರುವವರೂ, ಅಧಿಕಾರ ರಾಜಕಾರಣದ ಒತ್ತಡಗಳಿಗೆ ಮಣಿದು ಒಪ್ಪಿಕೊಂಡೇ ಬಂದಿದ್ದಾರೆ. ವಾಸ್ತು ದೋಷ ಪರಿಹಾರದಿಂದ ಹಿಡಿದು ಹೋಮ, ಹವನ, ಯಜ್ಞ , ಪೂಜೆಗಳವರೆಗೆ ಈ ವೈದಿಕ ಸಂಸ್ಕೃತಿ ಭಾರತದ ಆಡಳಿತ ವ್ಯವಸ್ಥೆಯಲ್ಲಿ, ಆಚರಣೆಗಳ ಮಟ್ಟದಲ್ಲಿಯಾದರೂ, ಹಾಸುಹೊಕ್ಕಾಗಿದೆ. ಸಂವಿಧಾನವನ್ನು ಎದೆಗವುಚಿಕೊಂಡು ಅಂಬೇಡ್ಕರರತ್ತ ವಾಲುತ್ತಲೇ ಬೌದ್ಧ ಧರ್ಮಕ್ಕೆ ನಿಷ್ಠೆ ತೋರುವ ಅಪಾರ ಸಂಖ್ಯೆಯ ಜನಪ್ರತಿನಿಧಿಗಳು ಈ ಪ್ರಕ್ರಿಯೆಯಲ್ಲಿ ಸಮ್ಮತಿಯೊಂದಿಗೆ , ಮೌನ ಭಿನ್ನಮತದೊಂದಿಗೆ, ಹೆಚ್ಚಿನ ಪ್ರತಿರೋಧ ಇಲ್ಲದೆಯೇ ಭಾಗಿಯಾಗುತ್ತಿದ್ದಾರೆ.
ಅಯೋಧ್ಯೆ ರಾಮಮಂದಿರದ ಬೆಳವಣಿಗೆಗಳ ನಂತರ ಭಾರತದಲ್ಲಿ ಸೆಕ್ಯುಲರ್ ರಾಜಕಾರಣ ಕವಲೊಡೆದಿದೆ. ಅಲ್ಲಿಯವರೆಗೂ ಸೆಕ್ಯುಲರಿಸಂ ಅಥವಾ ಜಾತ್ಯತೀತತೆಯ ಅಪಭ್ರಂಶವನ್ನೇ ಅಸಲಿ ಎಂದು ಪರಿಭಾವಿಸಿ, ನಂಬಿಸಿ ಪಾಲಿಸುತ್ತಿದ್ದ ಕಾಂಗ್ರೆಸ್ ಪಕ್ಷ ತನ್ನೆಲ್ಲಾ ಪ್ರಮಾದಗಳ ಹೊರತಾಗಿಯೂ ದೇಶದ ಅಧಿಕಾರ ರಾಜಕಾರಣದ ಆವರಣದಲ್ಲಿ ಜಾತ್ಯತೀತ ಪಾಳಯದ ಮುಖವಾಣಿಯಾಗಿ ರೂಪುಗೊಳ್ಳಲು ಯತ್ನಿಸುತ್ತಿದೆ. ಕಾಂಗ್ರೆಸ್ ಪಕ್ಷದೊಳಗೆ ಅಂತರ್ಮುಖಿಯಾಗಿ ಪ್ರವಹಿಸುತ್ತಿದ್ದ ವೈದಿಕ ಸಂಸ್ಕೃತಿ ಅಥವಾ ಬ್ರಾಹ್ಮಣ್ಯದ ಛಾಯೆಯಲ್ಲೇ ತನ್ನ ರಾಜಕೀಯ ಭೂಮಿಕೆಯನ್ನೂ ರೂಪಿಸಿಕೊಂಡು ಬಂದ ಹಿಂದುತ್ವ ರಾಜಕಾರಣ ನೇರವಾಗಿ ಹಿಂದೂ ಮತವನ್ನು ಪ್ರತಿನಿಧಿಸುವ ಹಾಗೂ ಹಿಂದೂ ಜನಸಮುದಾಯದ ರಕ್ಷಣೆಗಾಗಿ ಕಟಿಬದ್ಧವಾದ ಹಿಂದುತ್ವ ರಾಜಕಾರಣವನ್ನು ಅನಾವರಣಗೊಳಿಸಿತ್ತು. ಅಯೋಧ್ಯೆ ರಾಮಮಂದಿರ ವಿವಾದದ ಪ್ರಾರಂಭಿಕ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದರ ಒಳಸುಳಿಗಳೂ ಅರ್ಥವಾದೀತು.
ನಂತರದಲ್ಲಿ ಭಾರತದ ಜಾತ್ಯತೀತತೆ ಹಿಂದೂ ಪರ/ವಿರೋಧದ ನೆಲೆಯಲ್ಲಿ ವ್ಯಾಖ್ಯಾನಕ್ಕೊಳಪಟ್ಟಿತ್ತು. ಈ ನೂತನ ರಾಜಕೀಯ ವ್ಯಾಖ್ಯಾನದಲ್ಲೇ ಕಾಂಗ್ರೆಸ್ ಬಿಜೆಪಿಯ ಹಿಂದುತ್ವವಾದಕ್ಕೆ ಮುಖಾಮುಖಿಯಾಗಿ ಒಂದು ಜಾತ್ಯತೀತ ಪಕ್ಷ ಎಂದು ಗುರುತಿಸಲ್ಪಟ್ಟಿದೆ. ಇಂದಿನ ರಾಜಕೀಯ ಸನ್ನಿವೇಶದಲ್ಲಿ ಇದು ಸ್ವೀಕೃತವೂ ಆಗಿದೆ. ಬಿಜೆಪಿ ಸಂಘಪರಿವಾರ ಅನುಸರಿಸುತ್ತಿರುವ ಹಿಂದೂ ಕೋಮುವಾದಿ ರಾಜಕಾರಣಕ್ಕೆ ಪರ್ಯಾಯವಾಗಿ ನಿಲ್ಲಬಲ್ಲ ರಾಜಕೀಯ ಸಾಮರ್ಥ್ಯ ಹೊಂದಿರುವುದರಿಂದ ಕಾಂಗ್ರೆಸ್ ಜಾತ್ಯತೀತ ವಲಯದ ಪ್ರಧಾನ ಪಕ್ಷವಾಗಿ ಕಂಡುಬರುತ್ತದೆ. ಕರ್ನಾಟಕದಲ್ಲಿ ಬಿಜೆಪಿ ಒಂದು ಪ್ರಬಲ ಶಕ್ತಿಯಾಗಿ ಬೆಳೆಯುತ್ತಿರುವ ಸಂದರ್ಭದಲ್ಲಿ, ಕೋಮುವಾದಿ ರಾಜಕಾರಣದ ವಿರುದ್ಧ ಜಾತ್ಯತೀತ ಶಕ್ತಿಗಳ ಧೃವೀಕರಣ ಅತ್ಯವಶ್ಯವಾಗಿದ್ದು ಈ ಪಾಳಯವನ್ನು ಕಾಂಗ್ರೆಸ್ ನಾಯಕ ಸಿದ್ಧರಾಮಯ್ಯ ಪ್ರತಿನಿಧಿಸುತ್ತಾರೆ.
ವ್ಯಕ್ತಿಗತವಾಗಿ ಜಾತ್ಯತೀತ ನಿಲುವುಗಳನ್ನು ಪ್ರತಿಪಾದಿಸುವ ಮತ್ತು ಸಮಾಜವಾದಿ ಆಶಯಗಳಲ್ಲಿ ವಿಶ್ವಾಸ ಇರಿಸಿಕೊಂಡಿರುವ ಅಹಿಂದ ಹಿನ್ನೆಲೆಯ ಸಿದ್ಧರಾಮಯ್ಯ ಅವರ ಜಾತ್ಯತೀತತೆಯನ್ನು ಚಿತ್ರ ನಟ ಚೇತನ್ ಅಹಿಂಸಾ ಪ್ರಶ್ನಿಸಿದಾಗ ಉಂಟಾದ ರಾಜಕೀಯ ಮತ್ತು ಸೈದ್ಧಾಂತಿಕ ಸಂಚಲನವನ್ನು ಈ ಹಿನ್ನೆಲೆಯಲ್ಲೇ ವಿಶ್ಲೇಷಿಸಬೇಕಾಗುತ್ತದೆ. ಪಾಶ್ಚಿಮಾತ್ಯ ದೃಷ್ಟಿಕೋನದ ಅಥವಾ ತನ್ನ ಮೂಲ ಅರ್ಥವನ್ನು ಬಿಂಬಿಸುವಂತಹ ಸೆಕ್ಯುಲರ್ ರಾಜಕಾರಣವನ್ನು ಭಾರತ ಕಂಡಿಯೇ ಇಲ್ಲ. ಹಾಗೆಯೇ ಜಾತ್ಯತೀತ ಎಂದು ಎದೆತಟ್ಟಿಕೊಳ್ಳುವ ಕಾಂಗ್ರೆಸ್ ಪಕ್ಷವು ಇಂದಿಗೂ ಸಹ ವೈದಿಕಶಾಹಿ ಸಂಸ್ಕøತಿಯನ್ನು ಆಚರಣೆಗಳ ಮಟ್ಟಿಗಾದರೂ ಉಳಿಸಿಕೊಂಡೇ ಬಂದಿರುವುದನ್ನು ಸಹ ಗಮನಿಸಬೇಕಿದೆ. ಕಾಂಗ್ರೆಸ್ ನಾಯಕ ಸಿದ್ಧರಾಮಯ್ಯನವರ ಬ್ರಾಹ್ಮಣ್ಯವನ್ನು ಕುರಿತ ಚೇತನ್ ಅವರ ಹೇಳಿಕೆಯು ಬಹುಶಃ ಈ ಹಿನ್ನೆಲೆಯಲ್ಲೇ ವ್ಯಕ್ತವಾಗಿರಬಹುದು.
ಈ ವೈಯಕ್ತಿಕ ಬೀಸು ಹೇಳಿಕೆಗಳನ್ನು ನೀಡುವ ಮುನ್ನ, ತಮ್ಮ ಸಾರ್ವಜನಿಕ ಜೀವನದಲ್ಲಿ ಈಗತಾನೇ ಕಾಲೂರುತ್ತಿರುವ ಚೇತನ್ ಅಹಿಂಸಾ ಪ್ರಸ್ತುತ ರಾಜಕೀಯ ಸನ್ನಿವೇಶಗಳನ್ನು ಮತ್ತು ಇಂದಿನ ಅನಿವಾರ್ಯತೆಗಳನ್ನೂ ಗಮನಿಸಬೇಕಿತ್ತು. ಎಡಪಕ್ಷಗಳನ್ನು ಹೊರತುಪಡಿಸಿದರೆ, ಭಾರತದ ರಾಜಕಾರಣದಲ್ಲಿ ಜಾತ್ಯತೀತತೆಯನ್ನು ಅಳೆಯುವ ಮಾನದಂಡವನ್ನು ಯಾವ ಪಕ್ಷಗಳಿಗೂ ಅನ್ವಯಿಸಲಾಗುವುದಿಲ್ಲ. ಪ್ರಾದೇಶಿಕ ಪಕ್ಷಗಳಲ್ಲೂ ಸಹ ಲಲ್ಲೂ ಯಾದವ್ ಅವರ ಆರ್‍ಜೆಡಿ ಮತ್ತೊ ಕೊಂಚಮಟ್ಟಿಗೆ ತಮಿಳುನಾಡಿನ ಡಿಎಂಕೆ ಬಿಜೆಪಿ ಪಾಳಯದಿಂದ ದೂರ ಉಳಿದುಕೊಂಡು ತಮ್ಮ ಜಾತ್ಯತೀತ ಚಹರೆಯನ್ನು ಕಾಪಾಡಿಕೊಂಡುಬಂದಿವೆ. ಇಂದು ಭಾರತದ ರಾಜಕೀಯ ಸ್ಥಿತ್ಯಂತರಗಳು ಗಂಭೀರ ಸ್ವರೂಪ ಪಡೆದಿವೆ. ಜಾತ್ಯತೀತ ಎಂದು ಹೇಳಿಕೊಳ್ಳುವ ಪಕ್ಷಗಳೂ ಸಹ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅನಿವಾರ್ಯತೆಯನ್ನು ಎದುರಿಸುತ್ತಿವೆ.
ಬಿಜೆಪಿ ಸಂಘಪರಿವಾರದ ಹಿಂದುತ್ವ ರಾಜಕಾರಣ ದೇಶದೆಲ್ಲೆಡೆ ಪ್ರಬಲವಾಗುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮೇಲಿನ ಹೊಣೆ ಮತ್ತು ಹೊರೆ ಎರಡೂ ಹೆಚ್ಚಾಗಿಯೇ ಇದೆ. ಬಿಜೆಪಿಯನ್ನು ರಾಜ್ಯಮಟ್ಟದಲ್ಲಿ ಮತ್ತು ರಾಷ್ಟ್ರಮಟ್ಟದಲ್ಲಿ ಮಣಿಸಲು ಜಾತ್ಯತೀತ ಎಂದು ಹೇಳಿಕೊಳ್ಳುವ ಎಲ್ಲ ರಾಜಕೀಯ ಪಕ್ಷಗಳನ್ನೂ ಒಂದುಗೂಡಿಸಿ ಒಂದು ಸಂಯುಕ್ತ ವೇದಿಕೆಯನ್ನು ರೂಪಿಸುವ ಹೊಣೆಯನ್ನು ಕಾಂಗ್ರೆಸ್ ಪಕ್ಷ ತಡವಾಗಿಯೂ ಅರಿತಿರುವುದರಿಂದಲೇ ಇತ್ತೀಚೆಗೆ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ಪರ್ಯಾಯ ವೇದಿಕೆಯನ್ನು ರಚಿಸುವ ಹಿನ್ನೆಲೆಯಲ್ಲಿ ಎಲ್ಲ ವಿರೋಧ ಪಕ್ಷಗಳೊಡನೆ ಸಮಾಲೋಚನೆ ನಡೆಸಿದ್ದಾರೆ. ಆದರೆ ಇದು ಕೇವಲ ಅಧಿಕಾರ ರಾಜಕಾರಣದ ಕಸರತ್ತು ಮಾತ್ರ ಎನ್ನುವುದನ್ನು ಗಮನಿಸಬೇಕಿದೆ. ಹಿಂದೂ ಮತ್ತು ಮುಸ್ಲಿಂ ಮೂಲಭೂತವಾದದ ವಿರುದ್ಧ ಹಾಗೂ ಎರಡೂ ಮತಗಳ ಮತಾಂಧ ಶಕ್ತಿಗಳಿಂದ ದೂರ ಇದ್ದುಕೊಂಡೇ ಒಂದು ಪ್ರಜಾಸತ್ತಾತ್ಮಕ ವೇದಿಕೆಯನ್ನು ರೂಪಿಸುವುದು ಇಂದಿನ ಅವಶ್ಯಕತೆಯೂ ಆಗಿದೆ.
ಈ ನಿಟ್ಟಿನಲ್ಲಿ ಕರ್ನಾಟಕದಲ್ಲೂ ಒಂದು ಪರ್ಯಾಯ ಶಕ್ತಿ ಅನಿವಾರ್ಯವಾಗಿ ಬೇಕಿದೆ. ಸದ್ಯದ ಪರಿಸ್ಥಿತಿಯಲ್ಲಿ, ರಾಜಕೀಯ ನೆಲೆಯಲ್ಲಿ ಈ ಪರ್ಯಾಯಕ್ಕೆ ಮುಂದಾಳತ್ತ ವಹಿಸುವ ಜವಾಬ್ದಾರಿ ಕಾಂಗ್ರೆಸ್ ಪಕ್ಷದ ಮೇಲೆ, ವಿಶೇಷವಾಗಿ ಸಿದ್ಧರಾಮಯ್ಯ ಅವರ ಮೇಲಿದೆ. ಇಲ್ಲಿ ಕಾಂಗ್ರೆಸ್ ಪಕ್ಷವನ್ನಾಗಲೀ, ಬಿಜೆಪಿಯನ್ನಾಗಲೀ ಇಲ್ಲವಾಗಿಸುವುದಕ್ಕಿಂತಲೂ, ಎರಡೂ ಪಕ್ಷಗಳನ್ನು ಹೊರತುಪಡಿಸಿ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಮತ್ತು ಎಲ್ಲ ಶೋಷಿತ ವರ್ಗಗಳನ್ನು ಪ್ರತಿನಿಧಿಸುವ ಒಂದು ಪರ್ಯಾಯ ಶಕ್ತಿ ಉದಯಿಸುವುದು ಈ ಹೊತ್ತಿನ ತುರ್ತು. ಈ ಪರ್ಯಾಯದ ಪ್ರಯತ್ನಗಳು ನಿರಂತರವಾಗಿ, ಸಂಘಟನೆಗಳ ನೆಲೆಯಲ್ಲಿ ನಡೆಯುತ್ತಲೇ ಇದ್ದರೂ, ಭಾರತದ ಅಧಿಕಾರ ರಾಜಕಾರಣದಲ್ಲಿ ಈ ಪ್ರಯತ್ನಗಳು ಒಂದು ಸ್ಥಾನ ಪಡೆದುಕೊಳ್ಳಲು ಜನಸಾಮಾನ್ಯರಲ್ಲಿ ಸಾಕಷ್ಟು ರಾಜಕೀಯ ಪ್ರಜ್ಞೆಯನ್ನು ಬೆಳೆಸಬೇಕಿದೆ.
ಕರ್ನಾಟಕದಲ್ಲಿ ಸಂಘಟನಾತ್ಮಕವಾಗಿ ಪ್ರಬಲವಾಗಿದ್ದರೂ, ರಾಜಕೀಯ ನೆಲೆಯಲ್ಲಿ ದುರ್ಬಲವಾಗಿಯೇ ಉಳಿದಿರುವ ಎಡಪಕ್ಷಗಳು, ದಲಿತ ಸಂಘಟನೆಗಳು, ಮಹಿಳಾ ಚಳುವಳಿಗಳು ಮತ್ತು ಅಹಿಂದ ಗುಂಪುಗಳು ಈ ಪ್ರಯತ್ನದಲ್ಲಿ ನಿರಂತರವಾಗಿ ತೊಡಗಿವೆ. ಈ ಪ್ರಯತ್ನಗಳಿಗೆ ಪೂರಕವಾದಂತಹ ಒಂದು ರಾಜಕೀಯ ಭೂಮಿಕೆಯನ್ನು ನೀಡುವ ಕನಿಷ್ಟ ಪ್ರಯತ್ನವನ್ನು ಕಾಂಗ್ರೆಸ್ ಪಕ್ಷ ಮಾಡಲು ಸಾಧ್ಯವಿದೆ. ಇಲ್ಲಿ ಮಾಜಿ ಮುಖ್ಯಮಂತ್ರಿ ಮತ್ತು ಅಹಿಂದ ನಾಯಕರೆಂದೇ ಬಿಂಬಿಸಲ್ಪಟ್ಟಿರುವ ಸಮಾಜವಾದಿ ಸಿದ್ಧರಾಮಯ್ಯ ಪ್ರಧಾನ ಭೂಮಿಕೆ ವಹಿಸಬೇಕಾದ ಅನಿವಾರ್ಯತೆಯೂ ಇದೆ. ತಮ್ಮ ಪಕ್ಷದ ಚೌಕಟ್ಟಿನಿಂದ ಹೊರಬರಲಾಗದೆ, ಕಾಂಗ್ರೆಸ್ ಪಕ್ಷದ ವೇದಿಕೆಯಿಂದಲೇ ಈ ಪ್ರಯತ್ನದಲ್ಲಿ ತೊಡಗಿರುವ ಸಿದ್ಧರಾಮಯ್ಯ ಬಿಜೆಪಿಯೇತರ ಶಕ್ತಿಗಳಲ್ಲಿ ಒಂದು ಆಶಾಭಾವನೆಯನ್ನು ಮೂಡಿಸಿದ್ದರೆ ಅಚ್ಚರಿ ಪಡಬೇಕಿಲ್ಲ.
ರಾಜ್ಯದ ರಾಜಕೀಯ ವಸ್ತುಸ್ಥಿತಿಯ ಹಿನ್ನೆಲೆಯಲ್ಲಿ ಇದು ಒಪ್ಪಲೇಬೇಕಾದ ವಾಸ್ತವ. ಆದರೆ ಇದನ್ನು ಮೀರಿದ ಭಿನ್ನ ಆಲೋಚನೆ ಮಾಡುವುದು ತಪ್ಪೇನಿಲ್ಲ. ರಾಜ್ಯದ ಪ್ರಾದೇಶಿಕ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಹೇಳುವುದಾದರೆ ಕರ್ನಾಟಕಕ್ಕೆ ಒಂದು ನೈಜ ಜಾತ್ಯತೀತ, ಜನಪರ, ಶೋಷಿತರ ಪರವಾದ ಪರ್ಯಾಯ ರಾಜಕೀಯ ಶಕ್ತಿಯ ಅವಶ್ಯಕತೆ ಎಂದಿಗಿಂತಲೂ ಇಂದು ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಒಂದು ಪ್ರಜಾಸತ್ತಾತ್ಮಕ ವೇದಿಕೆಯ ಮೂಲಕ ಹೋರಾಟಗಳನ್ನು ರೂಪಿಸುತ್ತಲೇ, ಜನಸಾಮಾನ್ಯರಲ್ಲಿ, ಯುವಕರಲ್ಲಿ ಪ್ರಜಾಸತ್ತೆ ಮತ್ತು ಸಂವಿಧಾನದ ಮೌಲ್ಯಗಳನ್ನು ಬಿತ್ತುತ್ತಾ, ರಾಜಕೀಯ ಪ್ರಜ್ಞೆ ಬೆಳೆಸಬೇಕಾದ ಅನಿವಾರ್ಯತೆ ಒಂದು ಸವಾಲಿನಂತೆ ನಮ್ಮೆದುರಿನಲ್ಲಿದೆ. ಈ ಪ್ರಜಾಸತ್ತಾತ್ಮಕ ಚಳುವಳಿಯನ್ನು ಮುಖ್ಯವಾಹಿನಿಯ ರಾಜಕೀಯ ಪಕ್ಷಗಳನ್ನು ಹೊರಗಿಟ್ಟು ರೂಪಿಸಿದಲ್ಲಿ ರಾಜ್ಯ ರಾಜಕಾರಣಕ್ಕೆ ಹೊಂದು ಹೊಸ ಆಯಾಮವನ್ನು ನೀಡಬಹುದು.
ಆದರೆ ಈ ಗುರಿಯನ್ನು ಸಾಕಾರಗೊಳಿಸುವ ಹಾದಿಯಲ್ಲಿ ನಮ್ಮ ದೃಷ್ಟಿ ಇರಬೇಕಾದುದು ಪ್ರಜಾಪ್ರಭುತ್ವದ ಉಳಿವು,, ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯನ್ನು ಸಾಕಾರಗೊಳಿಸುವುದು, ಶೋಷಣೆಯ ಅಂತ್ಯ ಮತ್ತು ಸಂವಿಧಾನದ ರಕ್ಷಣೆ ಮಾತ್ರ ಅಲ್ಲವೇ ? ಈ ಪ್ರಯತ್ನಗಳಿಗೆ ಅಡ್ಡಿಯಾಗುವಂತಹ ಯಾವುದೇ ರಾಜಕೀಯ ಪಕ್ಷಗಳನ್ನು ಹೊರಗಿಟ್ಟೇ ಚಳುವಳಿಗಳನ್ನು ರೂಪಿಸುವುದೂ ಇಂದಿನ ಅನಿವಾರ್ಯತೆಯೇ. ಅದು ಕಾಂಗ್ರೆಸ್ ಪಕ್ಷವಾದರೂ ಸರಿಯೇ. ಒಂದು ಪರ್ಯಾಯ ರಾಜಕೀಯವನ್ನು ರೂಪಿಸುವ ನಿಟ್ಟಿನಲ್ಲಿ ಎದುರಿಸಬೇಕಾದ ಸವಾಲುಗಳು ಇವು. ಇಲ್ಲಿ ಪ್ರಚಲಿತ ಮುಖ್ಯವಾಹಿನಿಯ ರಾಜಕೀಯ ಪಕ್ಷಗಳ ಒಟ್ಟಾರೆ ನೀತಿಗಳು, ಆಡಳಿತ ನೀತಿಗಳು ಮತ್ತು ರಾಜಕೀಯ ಕಾರ್ಯಕ್ರಮಗಳು ನಮಗೆ ಮುಖ್ಯವಾಗುತ್ತದೆ. ಇಂತಹ ಒಂದು ಹೋರಾಟವಾಗಲೀ, ಚಳುವಳಿಯಾಗಲೀ ಕರ್ನಾಟಕದಲ್ಲಿ ರೂಪುಗೊಳ್ಳುತ್ತಿಲ್ಲ ಎನ್ನುವುದು ವಾಸ್ತವ. ಹಾಗಾಗಿಯೇ ಈ ನಿರ್ವಾತವನ್ನು ಸಿದ್ಧರಾಮಯ್ಯ ಮುಂದಾಳತ್ವದ ಕಾಂಗ್ರೆಸ್ ಪಕ್ಷ ತುಂಬಲು ಪ್ರಯತ್ನಿಸುತ್ತಿದೆ.
ಈ ಸಂದರ್ಭದಲ್ಲಿ ಚಿತ್ರ ನಟ ಚೇತನ್ ಅಹಿಂಸಾ ಮೊದಲು ಕಾಂಗ್ರೆಸ್ ಪಕ್ಷವನ್ನು ನಿರ್ನಾಮ ಮಾಡಿ ನಂತರ ಸಮಾನತೆಯ ಸಿದ್ಧಾಂತದಡಿ ಬಿಜೆಪಿಯನ್ನು ಇಲ್ಲವಾಗಿಸುವ ಮಾತುಗಳನ್ನಾಡಿರುವುದು ರಾಜಕೀಯ ಅಪ್ರಬುದ್ಧತೆ ಎನಿಸುತ್ತದೆ. ಈ ಅಭಿಪ್ರಾಯಗಳ ಹಿಂದಿನ ವ್ಯಕ್ತಿಗತ ಇಂಗಿತ ಅಥವಾ ಸಂಘಟನಾತ್ಮಕ ಧೋರಣೆಗಳನ್ನು ಬದಿಗಿಟ್ಟು ನೋಡಿದರೂ, ಯಾವುದೇ ಒಂದು ಪರ್ಯಾಯ ರಾಜಕೀಯ ಶಕ್ತಿಯನ್ನು ಕಟ್ಟುವ ನಿಟ್ಟಿನಲ್ಲಿ ಈ ರೀತಿಯ ಯೋಚನೆಗಳು ಫಲಕಾರಿಯಾಗುವುದಿಲ್ಲ. ಕಾಂಗ್ರೆಸ್ ಪಕ್ಷದ ರಾಜಕೀಯ ಮತ್ತು ಸೈದ್ಧಾಂತಿಕ ಲೋಪಗಳು ಏನೇ ಇದ್ದರೂ, ಇಂದಿಗೂ ತಳಮಟ್ಟದ ಕಾರ್ಯಕರ್ತರ ಬೃಹತ್ ಪಡೆಯನ್ನು ಹೊಂದಿರುವ ಒಂದು ರಾಜಕೀಯ ಪಕ್ಷವನ್ನು ಇಲ್ಲವಾಗಿಸಿ ಮತ್ತೊಂದು ಪ್ರಬಲ ರಾಜಕೀಯ ಪಕ್ಷದ ವಿರುದ್ಧ ಹೋರಾಡುವ ಆಲೋಚನೆ ರಾಜಕೀಯ ಅಪ್ರಬುದ್ಧತೆಯ ಸಂಕೇತವೇ ಎನಿಸುತ್ತದೆ.
1980ರ ನಂತರದ ಭಾರತದ ರಾಜಕಾರಣದಲ್ಲಿ ಜಾತಿ ರಾಜಕಾರಣವೇ ಪ್ರಧಾನವಾಗಿರುವುದನ್ನು ಸಹ ಈ ಸಂದರ್ಭದಲ್ಲಿ ಗಂಭೀರವಾಗಿ ಯೋಚಿಸಬೇಕಿದೆ. ಸಿದ್ಧರಾಮಯ್ಯ ಅವರನ್ನು ಜಾತಿವಾದಿ ಎಂದು ವ್ಯಕ್ತಿಗತವಾಗಿ ನಿಂದಿಸುವುದರ ಬದಲು, ನೂರು ವರ್ಷಗಳ ಇತಿಹಾಸ ಇರುವ ಒಂದು ರಾಷ್ಟ್ರಮಟ್ಟದ ರಾಜಕೀಯ ಪಕ್ಷವೂ ಏಕೆ ತನ್ನ ಜಾತಿಸಮೀಕರಣದ ರಾಜಕಾರಣದಿಂದ ಮುಕ್ತವಾಗಲು ಸಾಧ್ಯವಾಗದು ಎಂಬ ಪ್ರಶ್ನೆ ಚೇತನ್ ಅವರನ್ನು ಕಾಡಬೇಕಿತ್ತಲ್ಲವೇ ? ಹಿಂದುತ್ವ ಮತ್ತು ಹಿಂದೂ ಮತೀಯ ರಾಜಕಾರಣವನ್ನೇ ಪ್ರತಿಪಾದಿಸುವ ಬಿಜೆಪಿ ಸಹ ರಾಜ್ಯದಲ್ಲಿ ಜಾತಿ ರಾಜಕಾರಣಕ್ಕೆ ಮಣಿದು, ಲಿಂಗಾಯತ ಮತಗಳನ್ನೇ ಅವಲಂಬಿಸುವಂತಾಗಿದೆ. ಈ ಪರಿಸ್ಥಿತಿಯಲ್ಲಿ ರಾಜ್ಯ ರಾಜಕಾರಣದ ಪ್ರತಿಯೊಬ್ಬ ನಾಯಕರೂ ಜಾತಿ ಸಮೀಕರಣದಿಂದಾಚೆಗೆ ನೋಡಲಾರದ ಅಸಹಾಯಕ ಪರಿಸ್ಥಿತಿಯಲ್ಲಿದ್ದಾರೆ. ಸಿದ್ಧರಾಮಯ್ಯ ಹೊರತೇನಲ್ಲ.
ಆದರೆ ಈ ಹಿನ್ನೆಲೆಯಲ್ಲೇ ಸಿದ್ಧರಾಮಯ್ಯ ಅವರನ್ನು ‘ ಜಾತಿವಾದಿ ’ ಎಂದಾಗಲೀ, ಬ್ರಾಹ್ಮಣ್ಯವನ್ನು ಬೇರೂರಿಸುವ ನಾಯಕರೆಂದಾಗಲೀ ಮೂದಲಿಸುವುದು ಕೇವಲ ರಾಜಕೀಯ ಹೇಳಿಕೆಯಾಗುತ್ತದೆ. ತಮ್ಮ ಆಡಳಿತಾವಧಿಯಲ್ಲಿ ಸಿದ್ಧರಾಮಯ್ಯನವರು ಅನುಸರಿಸಿದ ಕೆಲವು ನೀತಿಗಳು ಜಾತಿವಾದಿ ರಾಜಕಾರಣಕ್ಕೆ ಪುಷ್ಟಿ ನೀಡುವಂತೆ ತೋರಿದರೂ ಸಹ ಅದನ್ನು ಸರಿಪಡಿಸಿಕೊಳ್ಳುವ ಸಮಯ ಈಗ ಎದುರಾಗಿದೆ. ಈ ಆರೋಪ ಪ್ರತ್ಯಾರೋಪಗಳಿಂದಾಚೆಗೆ ನೋಡಿದಾಗ, ಕಾಂಗ್ರೆಸ್ ಪಕ್ಷವೂ ಸಹ ಲಿಂಗಾಯತ ಮತಗಳಿಗಾಗಿ, ಅಹಿಂದ ಮತಗಳಿಗಾಗಿ ಮತ್ತು ಹಿಂದೂಗಳ ಮತಗಳಿಗಾಗಿಯೂ ತನ್ನ ರಾಜಕೀಯ ನಿಲುವುಗಳಲ್ಲಿ ಮಾರ್ಪಾಡು ಮಾಡಿಕೊಳ್ಳುವುದನ್ನು ಅಲ್ಲಗಳೆಯಲಾಗುವುದಿಲ್ಲ. ದೇವಾಲಯಗಳನ್ನು ತೆರವುಗೊಳಿಸುವ ವಿಚಾರದಲ್ಲಿ ಬಿಜೆಪಿಗಿಂತಲೂ ಮುಂಚಿತವಾಗಿಯೇ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದ್ದನ್ನು ಈ ಹಿನ್ನೆಲೆಯಲ್ಲೇ ನೋಡಬೇಕಾಗುತ್ತದೆ.
ಭಾರತದ ಅಧಿಕಾರ ರಾಜಕಾರಣದ ವಲಯದಲ್ಲಿ ವೈದಿಕಶಾಹಿ ಸಂಸ್ಕೃತಿಯೂ ಸಹ ಹಾಸುಹೊಕ್ಕಾಗಿದ್ದು ಹಾಗೆಯೇ ಪರೋಕ್ಷವಾದ ಮೇಲ್ಜಾತಿಯ ಪಾರಮ್ಯವೂ ಅಧಿಕವಾಗಿಯೇ ಇದೆ.“ ಬ್ರಾಹ್ಮಣ್ಯ ” ಎಂಬ ಸೀಮಿತಾರ್ಥದ ಚೌಕಟ್ಟಿನಲ್ಲಿ ಇದನ್ನು ವ್ಯಾಖ್ಯಾನಿಸುವುದಕ್ಕಿಂತಲೂ ಭಾರತದ ನೆಲದಲ್ಲಿ ನೈಜ ಜಾತ್ಯತೀತತೆಯನ್ನು, ಮತನಿಷ್ಠೆಯಿಂದ ದೂರವಾದ, ಸಂವಿಧಾನಬದ್ಧವಾದ, ಜಾತಿ-ಮತ ಕೇಂದ್ರಿತ ತಾರತಮ್ಯಗಳನ್ನು ಹೋಗಲಾಡಿಸುವ ಒಂದು ಆಡಳಿತ ಕೇಂದ್ರವನ್ನು ರೂಪಿಸುವ ನಿಟ್ಟಿನಲ್ಲಿ ಪ್ರಜಾಸತ್ತಾತ್ಮಕ ಜನಾಂದೋಲನವನ್ನು ರೂಪಿಸುವುದು ನಮ್ಮ ಆದ್ಯತೆಯಾಗಬೇಕಿದೆ. ಚೇತನ್ ಮಾತ್ರವೇ ಅಲ್ಲ, ಪರ್ಯಾಯ ರಾಜಕಾರಣದ ಆಲೋಚನೆ ಮಾಡುವ ಯಾವುದೇ ಯುವಕರಲ್ಲಿ ಈ ಪ್ರಜ್ಞೆ ಜಾಗೃತವಾಗಿರಬೇಕು. ಪ್ರಜಾಪ್ರಭುತ್ವ ಬಲಗೊಳ್ಳುವುದು ವ್ಯಕ್ತಿಕೇಂದ್ರಿತ ರಾಜಕಾರಣದ ಮೂಲಕ ಅಲ್ಲ, ಸಮಷ್ಟಿ ಪ್ರಜ್ಞೆಯ ಮೂಲಕ ಎನ್ನುವ ಸರಳ ಸತ್ಯವನ್ನು ಅರ್ಥಮಾಡಿಕೊಳ್ಳಬೇಕಿದೆ.