ಬೆಂಗಳೂರು: ಬೆಂಗಳೂರು(Bangalore) ಹೊರವಲಯದ ಸಾದರಮಂಗಲ ಪ್ರದೇಶದಲ್ಲಿ ಬಿಎಂಟಿಸಿ(BMTC) ಬಸ್‌ಗೆ ರೈಲು ಡಿಕ್ಕಿಯಾಗಿದೆ. ಇಂದು ಬೆಳಗ್ಗೆ ಈ ಘಟನೆ ನಡೆದಿದೆ. ರೈಲ್ವೆ ಪ್ಯಾರಲ್ ರೋಡ್‌ನಲ್ಲಿ ಬಸ್ ರಿವರ್ಸ್ ತೆಗೆದುಕೊಳ್ಳುವ ವೇಳೆ ಏಕಾಏಕಿ ರೈಲು ಬಂದು ಬಸ್‌ಗೆ ಗುದ್ದಿದೆ. ಅದೃಷ್ಟವಶಾತ್ ಬಸ್‌ನಲ್ಲಿ ಯಾವುದೇ ಪ್ರಯಾಣಿಕರು ಇರದ ಕಾರಣ ದೊಡ್ಡ ಅವಘಡವೊಂದು ತಪ್ಪಿದಂತಾಗಿದೆ.

ಸಾದರಮಂಗಲ ಡಿಪೋ 51ಕ್ಕೆ ಸೇರಿದ ಬಿಎಂಟಿಸಿ ಬಸ್ ಕಾಡುಗೋಡಿ ಬಸ್ ಸ್ಟ್ಯಾಂಡ್ ಕಡೆ ತೆರಳಬೇಕಿತ್ತು. ಈ ವೇಳೆ ಚಾಲಕ ರೈಲ್ವೆ ಪ್ಯಾರಲ್ ರಸ್ತೆಯತ್ತ ಬಸ್‌ನ್ನು ರಿವರ್ಸ್ ತೆಗೆದುಕೊಂಡಿದ್ದು, ಅದೇ ಸಮಯದಲ್ಲಿ ಬಂದ ರೈಲು ಬಸ್ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಡಿಕ್ಕಿಯ ಪರಿಣಾಮವಾಗಿ ಬಸ್‌ನ ಹಿಂಭಾಗಕ್ಕೆ ಭಾರೀ ಹಾನಿಯಾಗಿದ್ದು, ಕೆಲಕಾಲ ರೈಲು ಸಂಚಾರದಲ್ಲೂ ಅಡಚಣೆ ಉಂಟಾಯಿತು. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ರೈಲ್ವೆ ಸಿಬ್ಬಂದಿ ಹಾಗೂ ಬಿಎಂಟಿಸಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದಲ್ಲಿ ಯಾರಿಗೂ ಪ್ರಾಣಾಪಾಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದ್ದು, ಬಸ್ ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣವೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ.













