• Home
  • About Us
  • ಕರ್ನಾಟಕ
Wednesday, July 2, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ ಅಭಿಮತ

ಅಸ್ಪೃಶ್ಯತೆಯ ನಿರ್ಮೂಲನೆಯೂ  ದಲಿತರ ಮನೆಯ ಆತಿಥ್ಯವೂ

ನಾ ದಿವಾಕರ by ನಾ ದಿವಾಕರ
October 24, 2022
in ಅಭಿಮತ
0
ಅಸ್ಪೃಶ್ಯತೆಯ ನಿರ್ಮೂಲನೆಯೂ  ದಲಿತರ ಮನೆಯ ಆತಿಥ್ಯವೂ
Share on WhatsAppShare on FacebookShare on Telegram

ಭಾರತೀಯ ಸಮಾಜದಲ್ಲಿ ಅಸ್ಪೃಶ್ಯತೆಯ ನಾನಾ ಆಯಾಮಗಳಿವೆ. ನಾನಾ ಸ್ವರೂಪಗಳೂ ಇವೆ. ಮಹಾತ್ಮ ಫುಲೆ, ಅಂಬೇಡ್ಕರ್‌ ಮುಂತಾದ ಸಮಾಜ ಸುಧಾರಕರ ಕ್ರಾಂತಿಕಾರಿ ಬೋಧನೆ ಮತ್ತು ಸಪ್ರಯತ್ನಗಳ ಹೊರತಾಗಿಯೂ ಶತಮಾನಗಳಿಂದ ತನ್ನ ಅಂತಃಸತ್ವವನ್ನು ಉಳಿಸಿಕೊಂಡು ಬಂದಿರುವ ಅಸ್ಪೃಶ್ಯತೆಯ ಆಚರಣೆ ಕಾಲದಿಂದ ಕಾಲಕ್ಕೆ ರೂಪಾಂತರ ಹೊಂದುತ್ತಾ ಆಧುನಿಕ ನಾಗರಿಕತೆಯೊಂದಿಗೆ ಮುಖಾಮುಖಿಯಾಗುತ್ತಲೇ ತನ್ನ ಅಸ್ತಿತ್ವವನ್ನು ಉಳಿಸಿಕೊಂಡುಬಂದಿದೆ. ಕಾರಣ ಎಂದರೆ ಇದು ನಾಗರಿಕತೆಯ ಪ್ರಶ್ನೆ. ಮೇಲ್ನೋಟಕ್ಕೆ ಒಂದು ನಿರ್ದಿಷ್ಟ ಜಾತಿ ಅಥವಾ ಸಮುದಾಯದ ವಿರುದ್ಧ ಆಚರಿಸಲಾಗುವ ಒಂದು ಸಾಂಪ್ರದಾಯಿಕ ನಡೆ ಎನಿಸಿದರೂ, ಒಳಹೊಕ್ಕು ನೀಡಿದಾಗ, ಭಾರತದ ಸಾಂಪ್ರದಾಯಿಕ ಸಮಾಜದಲ್ಲಿ ಅಸ್ಪೃಶ್ಯತೆ ಎನ್ನುವುದು ಎಲ್ಲ ಜಾತಿಗಳಲ್ಲೂ, ಎಲ್ಲ ಸ್ತರಗಳಲ್ಲೂ, ಎಲ್ಲ ಆಯಾಮಗಳಲ್ಲೂ ತನ್ನ ಅಸ್ತಿತ್ವವನ್ನು ಹೊಂದಿರುವುದು ಸ್ಪಷ್ಟವಾಗುತ್ತದೆ.

ADVERTISEMENT

ಆದರೆ ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ ತಳಮಟ್ಟದಲ್ಲಿರುವ ಸಮುದಾಯಗಳು ಎದುರಿಸುವ ಅಸ್ಪೃಶ್ಯತೆಯ ಆಚರಣೆಗಳು ಸಾಮಾಜಿಕ ಗೌರವ, ಘನತೆ ಮತ್ತು ಸ್ಥಾನಮಾನಗಳಿಗೆ ನೇರ ಸಂಬಂಧ ಹೊಂದಿರುತ್ತವೆ. ಅಸ್ಪೃಶ್ಯ ಸಮಾಜದ ಮನುಷ್ಯನ ನೆರಳನ್ನೂ ಸಹಿಸಿಕೊಳ್ಳದ ಹಂತದಿಂದ ಭಾರತೀಯ ಸಮಾಜ ಸಾಕಷ್ಟು ಸುಧಾರಣೆಗಳನ್ನು ಕಂಡು ಇಂದು ಮೇಲ್ನೋಟಕ್ಕೆ ಅಕ್ಕಪಕ್ಕದಲ್ಲಿದ್ದರೂ ಸಹಿಸಿಕೊಳ್ಳುವ ಹಂತವನ್ನು ತಲುಪಿದೆ. ಆದರೆ ಈ ಭೌತಿಕ ಸ್ಪರ್ಶಕ್ಕೂ, ಸಾಂಪ್ರದಾಯಿಕ ಮನಸ್ಥಿತಿಯಿಂದ ಹೊರಬರದ ಬೌದ್ಧಿಕ ಆಲೋಚನೆಗಳಿಗೂ ಇರುವ ವ್ಯತ್ಯಾಸವನ್ನು ಗುರುತಿಸದೆ ಹೋದರೆ, ಬಹುಶಃ ನಮ್ಮ ಸಮಾಜದ ಮತ್ತೊಮ್ಮೆ ಭ್ರಮಾಧೀನವಾಗುವ ಸಾಧ್ಯತೆಗಳಿವೆ.

ಶ್ರೇಣೀಕೃತ ಜಾತಿ ವ್ಯವಸ್ಥೆಯ ಬೇರುಗಳು ಇರುವುದೇ ಶ್ರೇಷ್ಠ-ಕನಿಷ್ಠಗಳ ಪರಿಕಲ್ಪನೆಯಲ್ಲಿ. ಪ್ರತಿಯೊಂದು ಜಾತಿಯೂ ಸಹ ಮೇಲರಿಮೆಯಿಂದಲೇ ಸಮಾಜವನ್ನು ನೋಡುವುದರಿಂದ, ಇತರ ಎಲ್ಲ ಜಾತಿ, ಉಪಜಾತಿಗಳನ್ನೂ ಕೆಳಜಾತಿಗಳೆಂದೇ ಪರಿಗಣಿಸುತ್ತದೆ. ಹುಟ್ಟಿನಿಂದಲೇ ಜಾತಿಯನ್ನು ಗುರುತಿಸುವ ಜಾತಿ ವ್ಯವಸ್ಥೆಯಲ್ಲಿ ಜನಿಸಿದ ಕೂಡಲೇ ಮಗುವಿಗೆ ಜಾತಿ ಅಸ್ಮಿತೆಯೊಂದನ್ನು ಆರೋಪಿಸಿಬಿಡಲಾಗುತ್ತದೆ. ಇದು ಅಂತ್ಯದವರೆಗೂ ಮುಂದುವರೆಯುವುದೇ ಅಲ್ಲದೆ, ಬದುಕಿನ ಪ್ರತಿಯೊಂದು ಹಂತದಲ್ಲೂ, ಪ್ರತಿ ಹೆಜ್ಜೆಯಲ್ಲೂ, ಪ್ರತಿ ಚಟುವಟಿಕೆ-ಆಚರಣೆ-ನಡೆ ನುಡಿಯಲ್ಲೂ, ಈ ಅಸ್ಮಿತೆಯ ನೆಲೆಯಿಂದಲೇ ಸಮಾಜ ವ್ಯಕ್ತಿಯನ್ನು ಅಳೆಯುತ್ತಾ ಹೋಗುತ್ತದೆ. ಜಾತಿಯ ಶ್ರೇಷ್ಠತೆಯನ್ನು ಕಾಪಾಡುವುದಕ್ಕೂ,  ಸಂಪ್ರದಾಯ ಮತ್ತು ಪರಂಪರೆಯನ್ನು ಪೋಷಿಸುವುದಕ್ಕೂ ನೇರವಾದ ಸಂಬಂಧವನ್ನು ಕಲ್ಪಿಸುವ ಮೂಲಕ, ಜಾತಿ ಶ್ರೇಣಿಯ ಸಾಮಾಜಿಕ ವಲಯದಲ್ಲಿ ವಿಧಿವಿಧಾನಗಳನ್ನೂ ಅಳವಡಿಸಲಾಗುತ್ತದೆ. ಈ ವಿಧಿವಿಧಾನಗಳಲ್ಲಿ ಅಸ್ಪೃಶ್ಯತೆಯ ಆಚರಣೆಯೂ ಒಂದು ಭಾಗವಾಗಿರುವುದು ಚಾರಿತ್ರಿಕ ಸತ್ಯ.

ಹಾಗಾಗಿಯೇ ಜನ್ಮದಾರಭ್ಯ ಹೊತ್ತ ಜಾತಿಯ ಕುರುಹನ್ನು ಹೊತ್ತುಕೊಂಡೇ ಬಾಳು ಸವೆಸಬೇಕಾದ ತಳಸಮುದಾಯಗಳ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಸುತ್ತಲಿನ ಸಮಾಜದೊಡನೆ ವ್ಯವಹರಿಸುವಾಗ ಅಳುಕು, ಹಿಂಜರಿಗೆ ಮತ್ತು ಮಾನಸಿಕ ಕ್ಷೋಭೆಯೊಂದಿಗೇ ನಡೆಯಬೇಕಾಗಿದೆ. ಅಪಮಾನಗಳನ್ನೂ ಹಲ್ಲೆಗಳನ್ನೂ ಅನುಭವಿಸಬೇಕಾಗಿದೆ. ಬಾಹ್ಯ ಸಮಾಜವು ತನ್ನನ್ನು ಗುರುತಿಸುವುದೇ ಜನ್ಮಕ್ಕಂಟಿದ ಜಾತಿಯ ಮೂಲಕ ಎಂಬ ಅರಿವನ್ನು ಪ್ರತಿಯೊಬ್ಬ ಅಸ್ಪೃಶ್ಯ ವ್ಯಕ್ತಿಯಲ್ಲೂ ಮೂಡಿಸುವ ಸಲುವಾಗಿಯೇ ಬಾಹ್ಯ ಸಮಾಜವೂ ಸಹ ಆಗಿಂದಾಗ್ಗೆ ತನ್ನ ಜಾತಿ ಪೀಡಿತ ಹೊದಿಕೆಗಳನ್ನು ಕಿತ್ತೆಗೆಯುವ ಪ್ರಹಸನಗಳನ್ನು ನಡೆಸುತ್ತಿರುತ್ತದೆ. “ ನಾವು ನಿಮ್ಮೊಂದಿಗಿದ್ದೇವೆ ” ಎಂದು ಎದೆತಟ್ಟಿ ಹೇಳಿಕೊಳ್ಳುವ ಈ ಬಾಹ್ಯ ಸಮಾಜ ಎಷ್ಟೇ ಜಾತಿ ಶ್ರೇಷ್ಠತೆಯ ವ್ಯಸನದಿಂದ ಪೀಡಿತವಾಗಿದ್ದರೂ, ತನ್ನದೇ ಆದ ಸ್ವಾರ್ಥ ಕಾರಣಗಳಿಗಾಗಿ, ಅಸ್ಪೃಶ್ಯ ಸಮುದಾಯಗಳೊಡನೆ ಬೆರೆತು ಒಂದಾಗುವ ನಾಟಕೀಯ ಪ್ರಹಸನಗಳನ್ನು ಏರ್ಪಡಿಸುತ್ತಿರುತ್ತದೆ.

ಕಳೆದ ಎರಡು ದಶಕಗಳಲ್ಲಿ ಮೇಲ್ಜಾತಿಯ ರಾಜಕೀಯ ನಾಯಕರು, ಮಠಾಧೀಶರು ಮತ್ತು ಅಧ್ಯಾತ್ಮ ಗುರುಗಳು ಈ ಪ್ರಹಸನದ ಮೇಲ್ವಿಚಾರಣೆಯನ್ನು ಹೊತ್ತಿದ್ದು, ದಲಿತರ ಮನೆಯ ವಾಸ್ತವ್ಯ, ಊಟ ಇತ್ಯಾದಿಗಳ ಆತಿಥ್ಯ ಮತ್ತು ದಲಿತ ಕೇರಿಯಲ್ಲಿನ ಕಾಲ್ನಡಿಗೆ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ಕರ್ನಾಟಕದ ಮುಖ್ಯಮಂತ್ರಿಗಳು ಮತ್ತು ಸಹೋದ್ಯೋಗಿಗಳೂ ಸಹ ಇದೇ ರೀತಿಯ ಪ್ರಹಸನವನ್ನು ಪೂರೈಸಿದ್ದಾರೆ. ಈ ಹಿಂದೆಯೂ ಕೆಲವು ಮುಖ್ಯಮಂತ್ರಿಗಳು, ರಾಜಕೀಯ ನಾಯಕರು ತಮ್ಮ ಆಂತರಿಕ ಜಾತಿ ಪ್ರಜ್ಞೆಯನ್ನು ಬದಿಗಿಟ್ಟು ದಲಿತರ/ಅಸ್ಪೃಶ್ಯರ ಮನೆಗಳಲ್ಲಿ ಊಟ ಮಾಡುವುದು, ಅವರ ಮನೆಗಳಲ್ಲಿ ವಾಸ್ತವ್ಯ ಹೂಡುವುದನ್ನು ಮಾಡಿದ್ದಾರೆ.  ದಲಿತರ ಅಥವಾ ಅಸ್ಪೃಶ್ಯರ ಮನೆಯಲ್ಲಿ ಊಟ ಮಾಡಿದೆವು, ಅವರ ಮನೆಗಳಲ್ಲಿ ತಂಗಿದ್ದೆವು ಎಂದು ಘೋಷಿಸುವುದರ ಮೂಲಕವೇ, ಬಾಹ್ಯ ಸಮಾಜವು ನಿರೀಕ್ಷಿಸದ ಅಥವಾ ಅಪೇಕ್ಷಿಸದ ಒಂದು ನಡೆಗೆ ನಾವು ಸಾಕ್ಷಿಯಾಗಿದ್ದೇವೆ ಎಂದು ಬೆನ್ನುತಟ್ಟಿಕೊಳ್ಳುವ ಒಂದು ಮನೋವೃತ್ತಿಯನ್ನು ಇಲ್ಲಿ ಕಾಣಬಹುದು. ದಲಿತರ ಮನೆಗೆ ಹೋಗಿ ಊಟೋಪಚಾರ ಸ್ವೀಕರಿಸುವ ರಾಜಕೀಯ ನಾಯಕರು ತಮ್ಮ ಮನೆಗಳಿಗೆ ಅತ್ಯಂತ ಕೆಳಶ್ರೇಣಿಯಲ್ಲಿರುವ ಅಸ್ಪೃಶ್ಯರನ್ನು  ಆಹ್ವಾನಿಸಿ ಆತಿಥ್ಯ ನೀಡಲು ಸಾಧ್ಯವೇ ಎಂದು ಯೋಚಿಸಿದಾಗ ನಿರುತ್ತರರಾಗುತ್ತೇವೆ. ಒಂದು ವೇಳೆ ಹಾಗೆ ಮಾಡಿದರೂ ಮರುಕ್ಷಣವೇ ಶುದ್ಧೀಕರಣ ಪ್ರಕ್ರಿಯೆಯೂ ಯಾವುದೋ ಒಂದು ರೂಪದಲ್ಲಿ ನಡೆದಿರುತ್ತದೆ. ಇದು ವಾಸ್ತವ.

ಅಂದರೆ ಈಗಲೂ ಸಹ ʼ ನಾವು ʼ ನಮ್ಮ ಸಾಂಪ್ರದಾಯಿಕ ನಡೆಯನ್ನು ಬದಿಗಿರಿಸಿ ʼ ಅವರನ್ನು ʼ ಅಪ್ಪಿಕೊಂಡಿದ್ದೇವೆ ಅಥವಾ ಒಪ್ಪಿಕೊಂಡಿದ್ದೇವೆ ಎಂದು ಬಹಿರಂಗಪಡಿಸುವ ಒಂದು ಧೋರಣೆಯನ್ನು ಈ ರೀತಿಯ ಪ್ರಹಸನಗಳಲ್ಲಿ ಗುರುತಿಸಬಹುದು. ಸಾಂವಿಧಾನಿಕವಾಗಿ ಅಸ್ಪೃಶ್ಯತೆ ಮತ್ತು ಜಾತಿ ತಾರತಮ್ಯಗಳು ನಿಷಿದ್ಧವಾಗಿರುವ ಹೊತ್ತಿನಲ್ಲಿ, ಸಂವಿಧಾನಬದ್ಧವಾಗಿ ಆಡಳಿತ ನಡೆಸುವವರು ಯಾರೇ ಆದರೂ ಈ ಪ್ರಹಸನದ ಭಾಗಿಯಾಗುವುದನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಸಾಮಾಜಿಕಾರ್ಥಿಕ-ಸಾಂಸ್ಕೃತಿಕ ಮತ್ತು ರಾಜಕೀಯ ಪ್ರಾಬಲ್ಯವನ್ನು ಹೊಂದಿರುವ ಮೇಲ್‌ ಶ್ರೇಣಿಯ ಜಾತಿ ಸಮುದಾಯಗಳು, ಜಾತಿ ವ್ಯವಸ್ಥೆಯ ಹೊರಕವಚವನ್ನು ತೆಗೆದುಹಾಕಿದಂತೆ ತೋರಿದರೂ, ಆಂತರಿಕವಾಗಿ ಜಾತಿ ಶ್ರೇಷ್ಠತೆ, ಮೇಲರಿಮೆ ಮತ್ತು ಪಾರಮ್ಯವನ್ನು ಉಳಿಸಿಕೊಂಡೇ ಬಂದಿರುವುದು ಸ್ಪಷ್ಟವಾಗುತ್ತದೆ. ರಾಜಕೀಯ ನಾಯಕರ ಈ ನಡೆಗಳ ಹಿಂದೆ ಮತಬ್ಯಾಂಕ್‌ ರಾಜಕಾರಣವೇ ಪ್ರಧಾನವಾಗಿದ್ದರೂ, ಪರೋಕ್ಷವಾಗಿ ಶ್ರೇಣೀಕೃತ ಸಮಾಜ ನಿರ್ಮಿಸಿರುವ ಬೇಲಿಗಳನ್ನು ಯಥಾಸ್ಥಿತಿಯಲ್ಲಿ ಕಾಪಾಡುವ ಒಂದು ಸಾಂಸ್ಕೃತಿಕ ಆಯಾಮವನ್ನೂ ಇಲ್ಲಿ ಗುರುತಿಸಬಹುದು.

ಇಲ್ಲಿ ರಾಜಕಾರಣಿಗಳ ದಲಿತ ಕೇರಿಯ ವಾಸ್ತವ್ಯ ಮತ್ತು ದಲಿತರ ಮನೆಯ ಊಟ, ಈ ಎರಡೂ ಕಾರ್ಯಕ್ರಮಗಳ ಹಿಂದಿನ ಉದ್ದೇಶವೇನು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇಲ್ಲಿ ಜಾತಿ ವ್ಯವಸ್ಥೆಯನ್ನು ಮೂಲತಃ ತಿರಸ್ಕರಿಸುವ ಉನ್ನತಾದರ್ಶಕ್ಕಿಂತಲೂ, ಬಾಹ್ಯ ಸಮಾಜದಲ್ಲಿ, ಅಧಿಕಾರ ರಾಜಕಾರಣದಲ್ಲಿ ಮತ್ತು ಸಾಮಾಜಿಕ-ಸಾಂಸ್ಕೃತಿಕ ಭೂಮಿಕೆಗಳಲ್ಲಿ ಜಾತಿ ಗೋಡೆಗಳನ್ನು ರಕ್ಷಿಸಿಕೊಳ್ಳುತ್ತಲೇ, ದಲಿತ ಸಮುದಾಯವನ್ನು “ ನಮ್ಮವರೆಂದು ” ಅಪ್ಪಿಕೊಳ್ಳುವ ಮೂಲಕ ಚುನಾವಣೆಗಳಲ್ಲಿ ಮತ ಗಳಿಸುವ ಉದ್ದೇಶವೇ ಪ್ರಧಾನವಾಗಿ ಕಾಣುತ್ತದೆ. ಹೀಗಿದ್ದರೂ ಆಡಳಿತವಲಯದಲ್ಲಿ, ಅಧಿಕಾರ ರಾಜಕಾರಣದಲ್ಲಿ ಉನ್ನತ ಸ್ಥಾನಗಳನ್ನು ನಿಷ್ಕರ್ಷೆ ಮಾಡುವಾಗ, ಈ “ ನಮ್ಮವರೆನಿಸಿಕೊಳ್ಳುವ ” ಈ ಸಮುದಾಯಗಳೇ ಪ್ರಬಲ ಜಾತಿ ಮತ್ತು ಸಾಮಾಜಿಕ ವರ್ಗಗಗಳ ಹಿಂಬಾಲಕರಾಗಿ ಮುಂದುವರೆಯಬೇಕಾಗುತ್ತದೆ.

ದಲಿತರನ್ನು ಅಪ್ಪಿಕೊಳ್ಳುವ ಅಥವಾ ಅಸ್ಪೃಶ್ಯತೆಯ ಆಚರಣೆಯನ್ನು ಧಿಕ್ಕರಿಸಿ ದಲಿತರ ಮನೆಯ ಆತಿಥ್ಯ ಸ್ವೀಕರಿಸುವ ಒಂದು ಸಾಮಾಜಿಕ ವ್ಯವಸ್ಥೆ ಉಲ್ಲೇರಹಳ್ಳಿಯ ಗುಜ್ಜುಕೋಲು ಘಟನೆಯನ್ನು, ಕೊಪ್ಪಳದ ದೇವಾಲಯದ ಘಟನೆಯನ್ನು ಹೇಗೆ ಸಹಿಸಿಕೊಳ್ಳಲು ಸಾಧ್ಯ ? ಈ ಘಟನೆಗಳಲ್ಲಿ ತಪ್ಪಿತಸ್ಥರನ್ನು ಶಿಕ್ಷಿಸುವ ಬದಲಾಗಿ ರಾಜಿ ಸಂಧಾನ ಮಾಡಲೆತ್ನಿಸುವ ಒಂದು ಸಮಾಜ ಜಾತಿ ವ್ಯವಸ್ಥೆಯ ಬೇಲಿಗಳನ್ನು ಹೇಗೆ ಭಂಜಿಸಲು ಸಾಧ್ಯ ? ಒಂದು ಅರ್ಥದಲ್ಲಿ ಯಥಾಸ್ಥಿತಿಯನ್ನು ಮುಂದುವರೆಸಿಕೊಂಡೇ, ಶತಮಾನಗಳ ತಾರತಮ್ಯಗಳನ್ನು ಸಹನೀಯ ಎಂದು ಭಾವಿಸುತ್ತಲೇ, ನೊಂದ ಸಮುದಾಯಗಳಿಗೆ ಬೆನ್ನು ನೇವರಿಸುವ ಮೂಲಕ ಸಾಂತ್ವನ ಹೇಳುವ ಜಾಣ್ಮೆಯನ್ನು ಇಲ್ಲಿ ಗಮನಿಸಬಹುದು. ಬಾಹ್ಯ ಸಮಾಜದಲ್ಲಿ ಕಾಣುವ ಜಾತಿ ಗೋಡೆಗಳ ತೆಳು ಪರದೆಗಳು, ಆಂತರಿಕವಾಗಿ ಕಬ್ಬಿಣದ ಕವಚಗಳಂತೆ ಭೇಧಭಾವಗಳ ಮೂಲ ಧಾತುಗಳನ್ನು ಸಂರಕ್ಷಿಸುವುದರಿಂದಲೇ ಆಳುವ ವರ್ಗಗಳಿಗೆ, ಪ್ರಬಲ ಸಾಮಾಜಿಕ ವರ್ಗಗಳಿಗೆ ಈ ರೀತಿಯ ಪ್ರಹಸನಗಳು ತೋರಿಕೆಯ ಪ್ರದರ್ಶನಗಳಾಗಿ ಅವಶ್ಯವಾಗಿ ಬೇಕಾಗುತ್ತವೆ.

ಭಾರತದ 75ನೆಯ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲೂ ದಲಿತ/ಅಸ್ಪೃಶ್ಯ ಸಮುದಾಯಗಳು ಸಾಂವಿಧಾನಿಕವಾಗಿ ಗಳಿಸಿರುವ ಶಕ್ತಿ ಸಾಮರ್ಥ್ಯಗಳ ಹೊರತಾಗಿಯೂ ರಾಜಕೀಯ ದಾಳಗಳಾಗಿಯೇ ಇರುವುದು ಈ ಪ್ರಹಸನಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಪಾದಯಾತ್ರೆ, ವಾಸ್ತವ್ಯ ಮತ್ತು ಭೋಜನಗಳ ಮೂಲಕ ಜಾತಿ ಗೋಡೆಗಳನ್ನು ತಾತ್ಕಾಲಿಕವಾಗಿ ಕೆಡವಲಿಚ್ಚಿಸುವ ಆಳುವ ವರ್ಗಗಳಿಗೆ ಸಂವಿಧಾನ ಪ್ರಜ್ಞೆ ಮತ್ತು ನೈತಿಕತೆ ಜಾಗೃತವಾಗಿದ್ದಲ್ಲಿ, ಈ ಹೊತ್ತಿಗೆ ಭಾರತದಲ್ಲಿ ಕನಿಷ್ಠ ಅಸ್ಪೃಶ್ಯತೆಯ ಆಚರಣೆಯಾದರೂ ಕೊನೆಯಾಗಬೇಕಿತ್ತು. ಅಧಿಕಾರ ರಾಜಕಾರಣದ ಸಮೀಪಕ್ಕೆ ತಲುಪಿದ್ದರೂ ಸಹ ದಲಿತರು ಆಡಳಿತ ವ್ಯವಸ್ಥೆಯಲ್ಲಿ, ಅಧಿಕಾರಶಾಹಿಯಲ್ಲಿ ಮತ್ತು ರಾಜಕೀಯ ಅಧಿಕಾರದ ಉನ್ನತ ಸ್ತರಗಳಲ್ಲಿ ಇಂದಿಗೂ ಪ್ರಾತಿನಿಧ್ಯಕ್ಕಾಗಿ ಹೋರಾಡಬೇಕಿರುವುದು ದುರಂತ ಅಲ್ಲವೇ ? ದಲಿತ ನಾಯಕರೊಬ್ಬರು ರಾಷ್ಟ್ರೀಯ ಪಕ್ಷವೊಂದರ ರಾಷ್ಟ್ರಾಧ್ಯಕ್ಷರಾಗುವುದು ಈ ಹೊತ್ತಿಗೆ ಭಾರತದಲ್ಲಿ ಸಹಜ-ಸ್ವಾಭಾವಿಕ ಪ್ರಕ್ರಿಯೆ ಎನಿಸಬೇಕಿತ್ತು. ಆದರೆ ಇಂದು ಅಪರೂಪದ ಘಟನೆಯಂತೆ ಸಂಭ್ರಮಿಸಬೇಕಾಗಿದೆ. ಏಕೆಂದರೆ ಇದು ಊಹಿಸಲೂ ಸಾಧ್ಯವಾಗದ ಒಂದು ವಿದ್ಯಮಾನ. ದಲಿತ ನಾಯಕರೊಬ್ಬರು ಪಕ್ಷದಲ್ಲಿ ಉನ್ನತ ಸ್ಥಾನಕ್ಕೇರಿರುವುದನ್ನು, ʼ ಇದೂ ಸಾಧ್ಯ ʼ ಎಂದು ತೋರಿಸುವ ಬದಲು, ʼ ಇದೇ ವಾಸ್ತವ ʼ ಎಂದು ತೋರಿಸುವ ರೀತಿಯಲ್ಲಿ ನಮ್ಮ ಸಮಾಜ-ರಾಜಕೀಯ ವ್ಯವಸ್ಥೆ ವರ್ತಿಸಿದ್ದರೆ, ವರ್ತಮಾನದ ಭಾರತ ಅಂಬೇಡ್ಕರರ ಆಶಯಗಳಿಗೆ ಹತ್ತಿರ ತಲುಪಿದೆ ಎಂದು ಭಾವಿಸಲು ಸಾಧ್ಯವಿತ್ತು.

ಆದರೆ ನಾವಿನ್ನೂ ಬಹಳಷ್ಟು ದೂರ ಕ್ರಮಿಸಬೇಕಿದೆ. ಮೀಸಲಾತಿಯನ್ನೂ ಒಳಗೊಂಡಂತೆ, ದಲಿತರ ನ್ಯಾಯಯುತವಾದ ಸಾಂವಿಧಾನಿಕ ಹಕ್ಕುಗಳನ್ನು ನೀಡುವ ಒಂದು ಸಹಜ ಪ್ರಕ್ರಿಯೆಯನ್ನೂ ಆಳುವ ವರ್ಗಗಳು ಚುನಾವಣಾ ರಾಜಕಾರಣದ ದೃಷ್ಟಿಯಿಂದಲೇ ನೋಡುತ್ತಿರುವುದು ದುರಂತ ಅಲ್ಲವೇ ? ರಾಜ್ಯ ಸರ್ಕಾರ ಮೀಸಲಾತಿ ಹೆಚ್ಚಿಸಿರುವ ಸಂದರ್ಭವೂ ಇದನ್ನೇ ಸೂಚಿಸುತ್ತದೆ. ಅಂದರೆ ದೇಶದ ಜನಸಂಖ್ಯೆಯ ಕಾಲುಭಾಗದಷ್ಟಿರುವ ಒಂದು ಬೃಹತ್‌ ಸಮುದಾಯ ಬಾಹ್ಯ ಸಮಾಜದ ಅಧಿಕಾರ ಹಸ್ತಾಂತರ ಮತ್ತು ವಿಲೇವಾರಿಗೆ ಸೇತುವೆಗಳಾಗುತ್ತಿದೆಯೇ ? ರಾಜಕೀಯ ಪಗಡೆಯಾಟದಲ್ಲಿ ಕೆಲವೊಮ್ಮೆ ದಾಳಗಳಾಗಿ ಕೆಲವೊಮ್ಮೆ ಕಾಯಿಗಳಾಗಿ ಬಳಸಲ್ಪಡುತ್ತಿದೆಯೇ ? ಮೀಸಲಾತಿ ಮತ್ತು ಒಳಮೀಸಲಾತಿ ಮುಂತಾದ ಸಾಂವಿಧಾನಿಕ ಹಕ್ಕುಗಳನ್ನೂ ಸಹ ದಲಿತ ಸಮುದಾಯಗಳು, ಅವಕಾಶವಂಚಿತರು, ಅಂಚಿಗೆ ತಳ್ಳಲ್ಪಟ್ಟವರು ಹೋರಾಟಗಳ ಮೂಲಕ ಪಡೆದುಕೊಳ್ಳಬೇಕಿದೆ. ಈ ಮೀಸಲಾತಿಯನ್ನು ವಿರೋಧಿಸುವ ಒಂದು ವರ್ಗವೂ ಇಂದಿಗೂ ನಮ್ಮ ಸಮಾಜದ ಆಂತರ್ಯದಲ್ಲಿ ಜೀವಂತವಾಗಿರುವುದನ್ನೂ ಗಮನಿಸಬೇಕಿದೆ.

ಈ ವರ್ಗವೇ ಅಸ್ಪೃಶ್ಯತೆಯ ಆಚರಣೆಯನ್ನೂ ಸಹ ಸಂಪ್ರದಾಯದ ಹೆಸರಿನಲ್ಲಿ, ವಿಧಿವಿಧಾನಗಳ ನೆಪದಲ್ಲಿ ಪಾಲಿಸಿಕೊಂಡು ಬರುತ್ತಿದೆ. ಉಲ್ಲೇರಹಳ್ಳಿಯ ಗುಜ್ಜುಕೋಲು ಘಟನೆಯಲ್ಲಿ ಇದನ್ನು ನೇರವಾಗಿಯೇ ಗಮನಿಸಬಹುದು. ಮೂಲತಃ ಅಸ್ಪಶ್ಯತೆಯ ಪರಿಕಲ್ಪನೆಯ ಮೂಲ ಧಾತು ಇರುವುದೇ ಭೌತಿಕ ಸ್ಪರ್ಶ ಮತ್ತು ಬೌದ್ಧಿಕ ಸಾಂಗತ್ಯಗಳಲ್ಲಿ. ಮೇಲ್ಜಾತಿಗಳ ಅಡುಗೆ ಕೋಣೆಯಿಂದಲೇ ಆರಂಭವಾಗುವ ಅಸ್ಪೃಶ್ಯತೆಯು, ಸಾಂಪ್ರದಾಯಿಕ ಸಮಾಜದ ಎಲ್ಲ ಸಾಂಸ್ಕೃತಿಕ ಸ್ತರಗಳಲ್ಲೂ, ಎಲ್ಲ ಆಚರಣೆಗಳಲ್ಲೂ ತನ್ನದೇ ಆದ ರೀತಿಯಲ್ಲಿ ವ್ಯಾಪಿಸಿಕೊಂಡಿದೆ. ಹಾಗಾಗಿಯೇ ಈ ಸಾಂಪ್ರದಾಯಿಕತೆಯನ್ನು ಕಾಪಾಡುವ ಧಾರ್ಮಿಕ ಕೇಂದ್ರಗಳೂ, ದೇವಾಲಯಗಳೂ ಸಹ ಅಸ್ಪೃಶ್ಯ ಸಮುದಾಯಗಳಿಗೆ ಇಂದಿಗೂ ಸ್ಪರ್ಶಾತೀತವೇ ಆಗಿ ಕಂಡುಬರುತ್ತವೆ.

ಆಧುನಿಕ ಸಮಾಜದ ನಾಗರಿಕತೆಯ ನಡುವೆ, ನಗರೀಕರಣದ ಅನಿವಾರ್ಯತೆ ಪರಿಣಾಮ ಭೌತಿಕವಾಗಿ ಅಸ್ಪೃಶ್ಯತೆ ಇಂದು ಮೇಲ್ನೋಟಕ್ಕೆ ಕಾಣಲಾಗುವುದಿಲ್ಲ. ಆದರೆ ಬೌದ್ಧಿಕವಾಗಿ ನಗರ ಜೀವನದ ಪ್ರತಿ ಸ್ತರದಲ್ಲೂ ಜಾತಿ ತಾರತಮ್ಯದ ಅಸ್ಪಷ್ಟ ಗೋಡೆಗಳು ಏಳುತ್ತಲೇ ಇವೆ. ನಗರ ಜೀವನದಲ್ಲಿ ಜಾತಿಯನ್ನು ಗುರುತಿಸಲು ಆಹಾರ ಪದ್ಧತಿಯನ್ನು ಪ್ರಧಾನವಾಗಿ ಬಳಸಲಾಗುತ್ತಿರುವುದು ಈ ವಿದ್ಯಮಾನದ ಒಂದು ಭಾಗ. ಸಸ್ಯಾಹಾರಿಗಳಿಗೆ ಮಾತ್ರ ಎನ್ನುವ ಫಲಕಗಳು, ವಿಶೇಷ ಸಂದರ್ಭಗಳಲ್ಲಿ ಮಾಂಸ ಮಾರಾಟ ನಿಷೇಧಿಸುವ ಸ್ವೀಕೃತ ನಿಬಂಧನೆಗಳು, ನಿರ್ದಿಷ್ಟ ಜಾತಿಗಳಿಗಾಗಿಯೇ ನಿರ್ಮಿಸಲಾಗುತ್ತಿರುವ ಗೃಹ ಸಮುಚ್ಚಯಗಳು, ಬಡಾವಣೆಗಳು ಇವೆಲ್ಲವೂ ಸಹ ಬೌದ್ಧಿಕ ಅಸ್ಪೃಶ್ಯತೆಯ ವಿಭಿನ್ನ ರೂಪಾಂತರಿಗಳಾಗಿ ಕಾಣುತ್ತವೆ. ಕೊಪ್ಪಳ, ಉಲ್ಲೇರಹಳ್ಳಿ ಘಟನೆಗಳು ಭೌತಿಕ ಅಸ್ಪೃಶ್ಯತೆಯ ಮೂಲ ಸ್ವರೂಪವನ್ನು ಬಿಂಬಿಸುತ್ತವೆ. ಈ ಎರಡೂ ಧೃವಗಳ ನಡುವೆಯೇ ದಲಿತ/ಅಸ್ಪೃಶ್ಯ ಸಮುದಾಯಗಳು ತಮ್ಮದೇ ಆದ ಅಸ್ತಿತ್ವ ಮತ್ತು ಅಸ್ಮಿತೆಯನ್ನು ಕಂಡುಕೊಳ್ಳಲು ಯತ್ನಿಸುತ್ತಿವೆ. ಬೌದ್ಧ ಧಮ್ಮ ಈ ನಿಟ್ಟಿನಲ್ಲಿ ಒಂದು ತೆರೆದ ಬಾಗಿಲಿನಂತೆ ಕಾಣುತ್ತದೆ.

ಕೊನೆಯದಾಗಿ, ಚುನಾವಣಾ ರಾಜಕಾರಣದಲ್ಲಿ, ಔದ್ಯಮಿಕ ವಲಯದಲ್ಲಿ, ಔದ್ಯೋಗಿಕ ಕ್ಷೇತ್ರದಲ್ಲಿ, ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಶೇ 25ರಷ್ಟು ಕೊಡುಗೆ ನೀಡುವ ಬೃಹತ್‌ ಸಮುದಾಯ ಬಹುಸಾಂಸ್ಕೃತಿಕ ಭಾರತದ, ಸಮನ್ವಯ-ಸೌಹಾರ್ದತೆಯ ಭಾರತದ ಅವಿಚ್ಛಿನ್ನ ಅಂಗವಾಗಿ ದೇಶವನ್ನು ಮುನ್ನಡೆಸುತ್ತಿರುವುದು ಸ್ಪಷ್ಟ. ಮೀಸಲಾತಿಯಂತಹ ಸಾಂವಿಧಾನಿಕ ಸವಲತ್ತುಗಳು ಈ ಬೃಹತ್‌ ಸಮುದಾಯದ ಒಂದು ಸಣ್ಣ ಭಾಗವನ್ನೂ ತಲುಪಿಲ್ಲ ಎನ್ನುವ ವಾಸ್ತವವನ್ನು ಅರಿತೇ ನೋಡುವುದಾದರೆ, ದೇಶವನ್ನು ಕಟ್ಟುವ ಪ್ರಕ್ರಿಯೆಯಲ್ಲಿ ಸದಾ ಕ್ರಿಯಾಶೀಲವಾಗಿರುವ ತಳಸಮುದಾಯಗಳ ಶ್ರಮಜೀವಿಗಳು ಭಾರತವನ್ನು 75 ವರ್ಷಗಳ ಕಾಲ ತಮ್ಮ ಶ್ರಮ ಮತ್ತು ಬೆವರಿನ ಮೂಲಕವೇ ಮುನ್ನಡೆಸಿಕೊಂಡುಬಂದಿದ್ದಾರೆ. ಈ ಬೃಹತ್‌ ಜನಸಂಖ್ಯೆ ಜಾತಿ ದೌರ್ಜನ್ಯ, ತಾರತಮ್ಯ ಹಾಗೂ ಅಸ್ಪೃಶ್ಯತೆಯಂತಹ ಹೀನಾಚರಣೆಯ ಸಂಕೋಲೆಗಳಿಂದ ವಿಮೋಚನೆ ಪಡೆಯಬೇಕಿದೆ. ಬಂಡವಾಳಶಾಹಿಯ ಹಿಡಿತ ಮತ್ತು ಕಾರ್ಪೋರೇಟ್‌ ಮಾರುಕಟ್ಟೆಯ ನವ ಉದಾರವಾದದ ಪಾರಮ್ಯದಲ್ಲಿ ಮತ್ತಷ್ಟು ಅವಕಾಶವಂಚಿತರಾಗುತ್ತಿರುವ, ಅಂಚಿಗೆ ತಳ್ಳಲ್ಪಡುತ್ತಿರುವ ತಳಸಮುದಾಯಗಳು, ಆದಿವಾಸಿಗಳು, ಬುಡಕಟ್ಟು ಸಮುದಾಯಗಳು ಈ ವಿಮೋಚನೆಯನ್ನು ಬಯಸುತ್ತಾರೆ.

ದಲಿತರ ಮನೆಯ ವಾಸ್ತವ್ಯ ಮತ್ತು ಭೋಜನದ ಪ್ರಹಸನಗಳು ಈ ಸುಡುವಾಸ್ತವವನ್ನು ಗೇಲಿ ಮಾಡುವಂತಹ ರಾಜಕೀಯ ನಡೆಗಳೇ ಹೊರತು, ಸಾಮಾಜಿಕ ಜವಾಬ್ದಾರಿಯ ನಡೆಗಳಾಗಲು ಸಾಧ್ಯವಿಲ್ಲ.

Tags: BJPCongress Partyಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಡಿಸೆಂಬರ್‌ನಲ್ಲಿ ತೆರೆಗೆ ವಾಸಂತಿ ನಲಿದಾಗ

Next Post

ಭಯದಿಂದ ಹಳ್ಳಿ ತೊರೆದ ಬಿಲ್ಕಿಸ್‌; ಸನ್ನಡತೆಯ ಆಧಾರದ ಮೇಲೆ ಹಳ್ಳಿಗೆ ಮರಳಿದ ಮತಾಂಧ ಅತ್ಯಾಚಾರಿಗಳು

Related Posts

Top Story

ಸಿಬಿಎಸ್‌ಇ 2025: 10ನೇ ಮತ್ತು 12ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

by ಪ್ರತಿಧ್ವನಿ
January 12, 2025
0

ಕೇಂದ್ರ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) 2025ನೇ ಸಾಲಿನ 10ನೇ ಮತ್ತು 12ನೇ ತರಗತಿಯ ಪರೀಕ್ಷೆಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ಪ್ರಕಾರ, ಪರೀಕ್ಷೆಗಳು ಫೆಬ್ರವರಿ 15,...

Read moreDetails

ಹಿರಿಯ ಸಾಹಿತಿ ನಾಡೋಜಾ ನಾ. ಡಿಸೋಜಾ ನಿಧನ..

January 6, 2025

ಅಭಿಮಾನಿಗಳ ಹಾಗೂ ಚಿತ್ರತಂಡದವರ ಗೆಲುವಿನ ನಗುವನ್ನು ನೋಡಿ ನಾನು ಸಂಭ್ರಮಿಸುತ್ತಿದ್ದೇನೆ .

December 31, 2024

Central Govt: ಕೇಂದ್ರ ಸರ್ಕಾರದಿಂದ ರೈತರಿಗೆ ಸಂತಸದ ಸುದ್ದಿ.. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಣೆ..!!

December 6, 2024

ಉಪೇಂದ್ರ ನಿರ್ದೇಶಿಸಿ, ನಟಿಸಿರುವ “UI” ಚಿತ್ರ ಡಿಸೆಂಬರ್ 20 ರಂದು ಬಿಡುಗಡೆ..

December 3, 2024
Next Post
ಬಿಲ್ಕಿಸ್‌ ಬಾನೋ ಪ್ರಕರಣ ಕೇವಲ ಹಿಂದೂಮುಸ್ಲಿಂ ಪ್ರಶ್ನೆ ಅಲ್ಲ

ಭಯದಿಂದ ಹಳ್ಳಿ ತೊರೆದ ಬಿಲ್ಕಿಸ್‌; ಸನ್ನಡತೆಯ ಆಧಾರದ ಮೇಲೆ ಹಳ್ಳಿಗೆ ಮರಳಿದ ಮತಾಂಧ ಅತ್ಯಾಚಾರಿಗಳು

Please login to join discussion

Recent News

ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಮತ್ತು ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಅಗತ್ಯ ಕ್ರಮ
Top Story

ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಮತ್ತು ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಅಗತ್ಯ ಕ್ರಮ

by ಪ್ರತಿಧ್ವನಿ
July 1, 2025
ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌
Top Story

ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌

by ಪ್ರತಿಧ್ವನಿ
July 1, 2025
ಸಿದ್ದರಾಮಯ್ಯ ಲಕ್ಕಿ ಲಾಟರಿ ಹೊಡೆದುಬಿಟ್ಟ.. ಅವನನ್ನು ಸೋನಿಯಾಗೆ ಭೇಟಿ ಮಾಡಿದಿದ್ದೇ ನಾನು : ಬಿ.ಆರ್ ಪಾಟೀಲ್ 
Top Story

ಸಿದ್ದರಾಮಯ್ಯ ಲಕ್ಕಿ ಲಾಟರಿ ಹೊಡೆದುಬಿಟ್ಟ.. ಅವನನ್ನು ಸೋನಿಯಾಗೆ ಭೇಟಿ ಮಾಡಿದಿದ್ದೇ ನಾನು : ಬಿ.ಆರ್ ಪಾಟೀಲ್ 

by Chetan
July 1, 2025
ಸ್ಮಾರ್ಟ್‌ ಸಿಟಿ ಎಂಬ ಕನಸು ಮತ್ತು ವಾಸ್ತವ
Top Story

ಸ್ಮಾರ್ಟ್‌ ಸಿಟಿ ಎಂಬ ಕನಸು ಮತ್ತು ವಾಸ್ತವ

by ನಾ ದಿವಾಕರ
July 1, 2025
ದುಬೈನಲ್ಲಿ ರಾಸ್ ಅಲ್ ಖೈಮಾಹ್‌ʼದ ಆಡಳಿತಗಾರರನ್ನು ಭೇಟಿಯಾದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ
Top Story

ದುಬೈನಲ್ಲಿ ರಾಸ್ ಅಲ್ ಖೈಮಾಹ್‌ʼದ ಆಡಳಿತಗಾರರನ್ನು ಭೇಟಿಯಾದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ

by ಪ್ರತಿಧ್ವನಿ
July 1, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಮತ್ತು ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಅಗತ್ಯ ಕ್ರಮ

ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಮತ್ತು ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಅಗತ್ಯ ಕ್ರಮ

July 1, 2025
ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌

ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌

July 1, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada