ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾಗಿಯಾಗಿರುವ ಬಾಕ್ಸಿಂಗ್ ತಂಡದಲ್ಲಿ ತಂಡದ ಅಧಿಕೃತ ವೈದ್ಯರೇ ಇಲ್ಲ ಎನ್ನುವ ಆಘಾತಕಾರಿ ಅಂಶ ವರದಿಯಾಗಿದೆ. ಆಕ್ರಮಣಕಾರಿ ಕ್ರೀಡೆಯಾಗಿರುವ ಬಾಕ್ಸಿಂಗ್‌ನಲ್ಲಿ ಕ್ರೀಡಾಪಟುಗಳು ದೈಹಿಕವಾಗಿ ಗಾಯಗೊಳ್ಳುವುದು ಸಾಮಾನ್ಯವೇ ಆದರೂ, ಭಾರತೀಯ ತಂಡಕ್ಕೆ ಸ್ಪರ್ಧಾ ಸಮಯದಲ್ಲಿ ಒಬ್ಬ ವೈದ್ಯರಿಲ್ಲದಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಲಷ್ಟೇ ನಮ್ಮ ಸರ್ಕಾರ ಗಮನಕೊಡುತ್ತದೆ, ಹೊರತು ಮೂಲಭೂತ ಸೌಕರ್ಯಗಳನ್ನು ನೀಡುವಲ್ಲಿ ಒತ್ತು ನೀಡುತ್ತಿಲ್ಲ ಎಂಬ ಆರೋಪಕ್ಕೆ ಇದು ಇನ್ನಷ್ಟು ಪುಷ್ಟಿ ನೀಡಿದೆ.
ಗುರುವಾರ, ಜಮೈಕನ್ ಬಾಕ್ಸರ್ ರಿಚಾರ್ಡೊ ಬ್ರೌನ್ ನೊಂದಿಗೆ 91 ಕೆಜಿ ವಿಭಾಗದಲ್ಲಿ ಮುಖಾಮುಖಿಯಾದ ಭಾರತದ ಬಾಕ್ಸರ್ ಸತೀಶ್ ಕುಮಾರ್ ಅವರ ಬಲಗಣ್ಣ ಮೇಲೆ ಗಾಯವಾಗಿ ರಕ್ತ ಚಿಮ್ಮಿತ್ತು. ತಂಡದ ಉನ್ನತ ಕಾರ್ಯಕ್ಷಮತೆಯ ನಿರ್ದೇಶಕ ಸ್ಯಾಂಟಿಯಾಗೊ ನೀವಾ ಮತ್ತು ಮುಖ್ಯ ರಾಷ್ಟ್ರೀಯ ತರಬೇತುದಾರ ಸಿಎ ಕುಟ್ಟಪ್ಪ ಅವರು ಸತೀಶ್ ಕುಮಾರ್‌ರ ತಕ್ಷಣದ ಶುಶ್ರೂಷೆಯನ್ನು ಮಾಡಿದ್ದಾರೆ.
ಅದೇ ರೀತಿ, ಜಪಾನಿನ ಬಾಕ್ಸರ್ ಮೆನ್ಸಾಹ್ ಒಕಝಾವ ಅವರನ್ನು ಎದುರಿಸಿದ ವಿಕಾಸ್ ಕೃಷ್ಣನ್ ಎಡಗಣ್ಣಿನ ಭಾಗದಲ್ಲೂ ಗಾಯವಾದಾಗ ತಂಡದವರೇ ಪ್ರಾಥಮಿಕ ಆರೈಕೆ ಮಾಡಿದ್ದರು.
ಒಟ್ಟಾರೆ, ಅಧಿಕೃತ ತಂಡದ ವೈದ್ಯರ ಸೇವೆ ಇಲ್ಲದೆಯೇ ಒಂಬತ್ತು ಸದಸ್ಯರ ಭಾರತೀಯ ಬಾಕ್ಸಿಂಗ್ ತಂಡವು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುತ್ತಿದೆ.
ಭಾರತ ತಂಡದಲ್ಲಿ ವೈದ್ಯ ಕರಣ್‌ಜೀತ್ ಸಿಂಗ್ ತಂಡದ ಅಧಿಕೃತ ವೈದ್ಯರು ಎಂದು ಹೆಸರಿಸಬೇಕಿತ್ತು, ಆದರೆ, ಅವರನ್ನು ಹೆಚ್ಚುವರಿ ಅಧಿಕಾರಿ ಎಂದು ಉಲ್ಲೇಖಿಸಿರುವುದರಿಂದ ಅವರು ಅಥ್ಲೀಟ್‌ಗಳ ವಾಸಪ್ರದೇಶದಿಂದ ಹೊರಗೆ ಉಳಿಯಬೇಕಾಗಿ ಬಂದಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಟೋಕಿಯೊ 2020 ಸಂಘಟಕರು ಅವರ ಪಿ-ಟಿಎಪಿ (ವೈಯಕ್ತಿಕ-ತರಬೇತಿ ಸಹಾಯಕ ಕಾರ್ಯಕ್ರಮ) ಮಾನ್ಯತೆ ಮೇಲೆ ಅಥ್ಲೀಟ್‌ಗಳು ತಂಗುವ ಕಡೆಗೆ ‘ಸ್ಥಳ ಪ್ರವೇಶ’ವನ್ನು ಅನುಮತಿಸಿಲ್ಲ. ಇನ್ನೋರ್ವ ವೈದ್ಯ ಆಯುಷ್ ಯೆಖಂಡೆ ಅವರಿಗೂ ಇದೇ ಸಮಸ್ಯೆ ಎದುರಾಗಿದೆ, ಅವರು ಟೋಕಿಯೊದ ಹೋಟೆಲ್ ಒಂದರಲ್ಲಿ ತಂಗಿದ್ದಾರೆ.
ಪರಿಣಾಮ, ಭಾರತೀಯ ಬಾಕ್ಸರ್‌ಗಳು ತಮ್ಮ ಗಾಯಗಳ ಶುಷ್ರೂಷೆಗೆ ಅಥ್ಲೀಟ್‌ಗಳ ಗ್ರಾಮದಿಂದ ಹೊರ ಬರಲೇಬೇಕಾದ ಅನಿವಾರ್ಯತೆ ಇದೆ.