ಭಾರತೀಯ ಮಹಿಳಾ ಹಾಕಿ ತಂಡವು ಮೂರಿ ಬಾರಿ ಒಲಿಂಪಿಕ್ಸ್ ಚಾಂಪಿಯನ್ಸ್ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ರೋಚಕವಾಗಿ ಮಣಿಸುವ ಮೂಲಕ ಟೋಕಿಯೋ ಒಲಿಂಪಿಕ್ಸ್ನಲ್ಲಿ ಸೆಮಿಫೈನಲ್ಗೆ ಲಗ್ಗೆಯಿಟ್ಟಿದೆ. ಈ ಮೂಲಕ ಒಲಿಂಪಿಕ್ಸ್ ಇತಿಹಾಸದಲ್ಲಿ ಮೊದಲ ಬಾರಿಗೆ ಬಳಿಕ ಭಾರತೀಯ ಮಹಿಳಾ ಹಾಕಿ ತಂಡವು ಸೆಮಿಫೈನಲ್ ಪ್ರವೇಶಿಸಿ ಇತಿಹಾಸ ನಿರ್ಮಿಸಿದೆ.
ಮೊದಲ ಕ್ವಾರ್ಟರ್ನಲ್ಲಿ ಎರಡು ತಂಡಗಳು ಗೋಲು ಬಾರಿಸಲು ಸಾಕಷ್ಟು ಪ್ರಯತ್ನಿಸಿದವಾದರೂ ಗೋಲು ಬಾರಿಸಲು ಸಾಧ್ಯವಾಗಲಿಲ್ಲ. ಆದರೆ ಎರಡನೇ ಕ್ವಾರ್ಟರ್ನ 22ನೇ ನಿಮಿಷದಲ್ಲಿ ಗುರ್ಜಿತ್ ಕೌರ್ ಗೋಲು ಬಾರಿಸುವ ಮೂಲಕ ಭಾರತಕ್ಕೆ ಮುನ್ನಡೆ ಒದಗಿಸಿಕೊಟ್ಟರು. ಇದರೊಂದಿಗೆ ಮೊದಲಾರ್ಧ ಮುಕ್ತಾಯದ ವೇಳೆಗೆ ಭಾರತ 1-0 ಮುನ್ನಡೆ ಕಾಯ್ದುಕೊಂಡಿತು.
ದ್ವಿತಿಯಾರ್ಧದಲ್ಲಿ ಆಸ್ಟ್ರೇಲಿಯಾಗೆ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ಗೋಲಾಗಿ ಪರಿವರ್ತಿಸಿಕೊಳ್ಳಲು ಯಶಸ್ವಿಯಾಗಲಿಲ್ಲ. 2016ರ ರಿಯೋ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಆಸ್ಟ್ರೇಲಿಯಾ ತಂಡದ ಅಭಿಯಾನ ಟೋಕಿಯೋ ಒಲಿಂಪಿಕ್ಸ್ನಲ್ಲಿ ಕ್ವಾರ್ಟರ್ ಫೈನಲ್ನಲ್ಲೇ ಅಂತ್ಯವಾಗಿದೆ.
ಗ್ರೂಪ್ ಹಂತದ ಮೊದಲ ಮೂರು ಪಂದ್ಯಗಳಲ್ಲಿ ಹ್ಯಾಟ್ರಿಕ್ ಸೋಲು ಅನುಭವಿಸಿದ ಭಾರತ ಮಹಿಳಾ ಹಾಕಿ ತಂಡವು ಆ ಬಳಿಕ ಎರಡು ಪಂದ್ಯಗಳನ್ನು ಗೆದ್ದು ನಾಕೌಟ್ ಹಂತಕ್ಕೇರಿತ್ತು. ಆಸ್ಟ್ರೇಲಿಯಾ ಎದುರು ಗುರ್ಜಿತ್ ಕೌರ್ ಗೋಲು ಬಾರಿಸಿ ಭಾರತಕ್ಕೆ ಮುನ್ನಡೆ ಒದಗಿಸಿಕೊಟ್ಟರಾದರೂ, ಗೋಲ್ ಕೀಪರ್ ಸವಿತಾ ಪೂನಿಯಾ ಆಸ್ಟ್ರೇಲಿಯಾದ ಎದುರು ಅಕ್ಷರಶಃ ದೈತ್ಯ ಗೋಡೆಯಾಗಿ ನಿಲ್ಲುವ ಮೂಲಕ ಭಾರತ ಗೆಲುವು ಸಾಧಿಸಲು ನೆರವಾದರು. ಆಸ್ಟ್ರೇಲಿಯಾ ಆಟಗಾರ್ತಿಯರು 9 ಬಾರಿ ಗೋಲು ಬಾರಿಸುವ ಅವಕಾಶವನ್ನು ಸವಿತಾ ಪೂನಿಯಾ ವಿಫಲಗೊಳಿಸುವಲ್ಲಿ ಯಶಸ್ವಿಯಾದರು.
ಒಲಿಂಪಿಕ್ಸ್ ಇತಿಹಾಸದಲ್ಲಿ 41 ವರ್ಷಗಳ ಬಳಿಕ ಎಂಟರಘಟ್ಟಕ್ಕೇರಿರುವ ಭಾರತ ಮಹಿಳಾ ತಂಡ ಇಂದು ನಡೆದ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಮಣಿಸಿ ಸೆಮಿಫೈನಲ್ ಪ್ರವೇಶಿಸಿದೆ.
ಭಾರತೀಯ ಮಹಿಳಾ ತಂಡವು ಆಸ್ಟ್ರೇಲಿಯಾವನ್ನು 1-0 ಅಂತರದಿಂದ ಸೋಲಿಸಿ ಇತಿಹಾಸದಲ್ಲಿ ಮೊದಲ ಬಾರಿಗೆ ಸೆಮಿಫೈನಲ್ ಪ್ರವೇಶಿಸಿದೆ. ಎ ಗುಂಪಿನಲ್ಲಿ ಹ್ಯಾಟ್ರಿಕ್ ಸೋಲಿನ ನಡುವೆಯೂ ಕಡೇ ಎರಡು ಪಂದ್ಯಗಳಲ್ಲಿ ಉತ್ತಮ ನಿರ್ವಹಣೆ ತೋರಿದ ಭಾರತ ತಂಡ, 6 ಪಾಯಿಂಟ್ಸ್ಗಳೊಂದಿಗೆ 4ನೇ ಸ್ಥಾನಿಯಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸಿತ್ತು. ಕಡೇ ಎರಡು ಹಣಾಹಣಿಯಲ್ಲಿ ಐರ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ಎದುರು ಜಯ ದಾಖಲಿಸಿತ್ತು. ಮಹಿಳಾ ತಂಡ 1980ರ ಮಾಸ್ಕೋ ಒಲಿಂಪಿಕ್ಸ್ನಲ್ಲಿ ಮೊದಲ ಬಾರಿಗೆ ಅರ್ಹತೆ ಗಿಟ್ಟಿಸಿಕೊಂಡಾಗ ಎಂಟರಘಟ್ಟಕ್ಕೇರಿದ ಸಾಧನೆ ಮಾಡಿತ್ತು.
ವಿಶ್ವ ನಂ.4 ಆಸ್ಟ್ರೇಲಿಯಾ ತಂಡವೇ ಫೆವರಿಟ್ ಎನಿಸಿದರೂ ವಿಶ್ವ ನಂ.10ನೇ ಸ್ಥಾನದಲ್ಲಿರುವ ಭಾರತ, ಅಚ್ಚರಿ ಫಲಿತಾಂಶ ನೀಡಿದೆ. ಅರ್ಜೆಂಟೀನಾವನ್ನು ಮುಂದಿನ ಸೆಮಿಫೈನಲ್ನಲ್ಲಿ ಭಾರತ ಎದುರಿಸಲಿದೆ