ಇಂದು ರಾಷ್ಟ್ರಕವಿ, ನಾಡಿನ ಹೆಮ್ಮೆಯ ಸಾಹಿತಿ ಕುವೆಂಪು ಅವರ ಜನ್ಮದಿನ. ವಿಶ್ವ ಮಾನವ ದಿನ. ಶಿವಮೊಗ್ಗದ ತೀರ್ಥಹಳ್ಳಿಯ ಕುಪ್ಪಳ್ಳಿ ಎಂಬ ಪುಟ್ಟ ಊರಲ್ಲಿ ಉದಯಿಸಿದ ಚಿಗುರು ಹೆಮ್ಮರವಾಗಿ ಅಜರಾಮರವಾಗಿ ಎಲ್ಲಾ ಪೀಳಿಗೆಗೆ ನೆರಳಾಗಿ ನಿಂತಿದೆ. ಕತೆ-ಕವನ-ಸಾಹಿತ್ಯಗಳೆಂದರೆ ಅಂತೆಕಂತೆಗಳಂತಿದ್ದ ಸಂದರ್ಭದಲ್ಲಿ ವೈಜ್ಞಾನಿಕ ತಳಹದಿಯಲ್ಲಿ ಸಾಹಿತ್ಯವನ್ನು ರಚಿಸಿ, ನಮ್ಮ ಸಮಾಜವನ್ನು ಬಡಿದೆಚ್ಚರಿಸಿದ ರೀತಿ ಅನನ್ಯ.
ವೈಜ್ಞಾನಿಕ ದೃಷ್ಟಿಕೋನದಿಂದ ಸಮಾಜದಲ್ಲಿರುವ ಮೌಢ್ಯ, ಕಂದಾಚಾರ, ಅಸಮಾನತೆಗಳನ್ನು ತೊಡೆದುಹಾಕಲು ಸಾಹಿತ್ಯದ ಮೂಲಕ ಭದ್ರ ಬುನಾದಿ ಹಾಕಿರುವ ಕುವೆಂಪು ಅವರು ಎಲ್ಲವನ್ನೂ ವೈಜ್ಞಾನಿಕ ನೆಲೆಯಲ್ಲಿ ಚಿಂತಿಸಬೇಕು, ವಿಜ್ಞಾನವೇ ಅಂತಿಮ ಎಂದು ಷರಾ ಬರೆದರು. ಪ್ರಪಂಚವನ್ನು ವೈಜ್ಞಾನಿಕ ನೆಲೆಗಟ್ಟಿನಲ್ಲಿ ಅರ್ಥೈಸಿಕೊಂಡರೆ ಬದುಕೆಷ್ಟು ಸುಂದರ ಎಂಬುದನ್ನು ಹೇಳಿಕೊಟ್ಟರು. ಕುವೆಂಪು ಅವರಂತಹ ಶ್ರೇಷ್ಠರ ನಾಡಿನಲ್ಲಿ ನಾವು ಹುಟ್ಟಿದ್ದೇವೆ ಎಂಬುದೇ ನಮಗೆ ಹೆಮ್ಮೆ.
ಕುವೆಂಪು ಅವರ ಆದರ್ಶಗಳನ್ನು, ಚಿಂತನೆಗಳನ್ನು ಒಪ್ಪಿ, ಅಪ್ಪಿ ನಡೆದುಕೊಂಡು ಬಂದಿರುವ ನಮ್ಮ ಸರ್ಕಾರ ವಿಜ್ಞಾನಕ್ಕೆ ಮೊದಲ ಆದ್ಯತೆಯನ್ನು ನೀಡುತ್ತ ಬಂದಿದೆ. ವಿದ್ಯಾರ್ಥಿಗಳಿಗೆ ಬಾಲ್ಯಾವಸ್ಥೆಯಲ್ಲೇ ವಿಜ್ಞಾನವನ್ನು ಪರಿಚಯಿಸಿದರೆ ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗುತ್ತಾರೆ ಎಂಬ ಆಶಯದೊಂದಿಗೆ ‘ಸುಲಭ ವಿಜ್ಞಾನ’ ಎಂಬ ಕಾರ್ಯಕ್ರಮಗಳು, ಮಕ್ಕಳಿಗೆ ಬಾಹ್ಯಾಕಾಶ ದರ್ಶನವನ್ನು ಕೊಟ್ಟು ವಿಜ್ಞಾನವೆಂಬ ಕೌತಕ ಜಗತ್ತಿಗೆ ಸೆಳೆಯುವ ಟೆಲಿಸ್ಕೋಪ್ ವಿತರಣೆ ಕಾರ್ಯಕ್ರಮ, ವಿಜ್ಞಾನ ನಗರ ಸ್ಥಾಪನೆ, ತಾರಾಲಯಗಳ ಸ್ಥಾಪನೆ ಹೀಗೆ ಅನೇಕ ಕಾರ್ಯಕ್ರಮಗಳನ್ನು ಬಹಳ ಮುತುವರ್ಜಿಯಿಂದ ನಡೆಸಿಕೊಂಡು ಬರುತ್ತಿದೆ.
ಭವಿಷ್ಯವನ್ನು ಕುವೆಂಪು ಅವರಂತಹ ಶ್ರೇಷ್ಠರ ವೈಚಾರಿಕತೆಗಳ ಆಧಾರದಲ್ಲಿ ಕಟ್ಟೋಣ.ವಿಶ್ವ ಮಾನವ ಪರಿಕಲ್ಪನೆಯನ್ನು ಮೈಗೂಡಿಸಿಕೊಳ್ಳೋಣ. ಎಲ್ಲರಿಗೂ ಕುವೆಂಪು ಜನ್ಮದಿನದ ಶುಭಾಶಯಗಳು.