ಮಳೆಗೆ ನಗರದ ಮೈಲೂರಿನ ಸರ್ಕಾರಿ ಶಾಲಾ ಕೊಠಡಿಯ ಗೋಡೆ ಕುಸಿದು ಬಿದ್ದಿದ್ದು, ಪೌರಾಡಳಿತ ಸಚಿವ ರಹೀಂ ಖಾನ್ (Rahim Khan) ಅವರು ಭೇಟಿ ನೀಡಿ ಪರಿಶೀಲಿಸಿದರು.
ಶಾಲಾ ಕಟ್ಟಡದ ಫಿಟ್ನೆಸ್(School Building Fitness) ಕುರಿತು ತಕ್ಷಣವೇ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸ್ಥಳದಲ್ಲಿದ್ದ ಉಪವಿಭಾಗಾಧಿಕಾರಿ ಲವೀಶ್ ಒರ್ಡಿಯಾ ಅವರಿಗೆ ಭಾನುವಾರ ಸೂಚನೆ ನೀಡಿದರು.
ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಸಚಿವರು, ಎಲ್ಲ ಸರ್ಕಾರಿ ಶಾಲೆಗಳು ಅಗತ್ಯ ಅತ್ಯಾಧುನಿಕ ಮೂಲಸೌಕರ್ಯಗಳೊಂದಿಗೆ ಸುರಕ್ಷಿತವಾಗಿರಿಸುವುದಕ್ಕೆ ಸರ್ಕಾರ ಬದ್ಧವಾಗಿದೆ. ಹಳೆಯ ಕಟ್ಟಡಗಳನ್ನು ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಅನುದಾನ ಒದಗಿಸಲಾಗುವುದು. ಮೈಲೂರ್ ಶಾಲೆಯ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡುವ ನಿಟ್ಟಿನಲ್ಲಿ ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ನಾನು ಈಗಾಗಲೇ ಹಲವು ಹೊಸ ಶಾಲಾ ಕಟ್ಟಡ, ಹಾಸ್ಟೆಲ್ಗಳನ್ನು ನಿರ್ಮಿಸಿಕೊಟ್ಟಿದ್ದೇನೆ. ಮಹಿಳಾ ಪದವಿ ಕಾಲೇಜಿಗೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ₹10 ಕೋಟಿ ಅನುದಾನ ಒದಗಿಸಲಾಗಿದ್ದು, ಶೀಘ್ರದಲ್ಲೇ ಕೆಲಸ ಆರಂಭವಾಗಲಿದೆ ಎಂದು ಹೇಳಿದರು.
ಶಿಕ್ಷಣ ಸೇರಿದಂತೆ ಮೈಲೂರ್ ಬಡಾವಣೆಯ ಸಮಗ್ರ ಅಭಿವೃದ್ಧಿ ಮಾಡಲಾಗುವುದು. ಹೊಸ ರಸ್ತೆ, ಚರಂಡಿ, ವಿದ್ಯುತ್ ದೀಪಗಳನ್ನು ಅಳವಡಿಸಿ ಅಭಿವೃದ್ಧಿ ಪಡಿಸಲಾಗುವುದು ಎಂದರು.
ಡಿಯುಡಿಸಿ ಯೋಜನಾ ನಿರ್ದೇಶಕ ಮೋತಿಲಾಲ್ ಲಮಾಣಿ, ನಗರಸಭೆ ಪೌರಾಯುಕ್ತ ಶಿವರಾಜ ರಾಠೋಡ್, ಗ್ರೇಡ್-2 ತಹಶೀಲ್ದಾರ್ ಜಿಯಾಉಲ್ಲಾ, ಬಿಇಒ ಅಖಿಲಾಂಡೇಶ್ವರಿ, ಕಾಂಗ್ರೆಸ್ ಮುಖಂಡ ಶೌಕತ್ ಅಲಿ ಮತ್ತಿತರರು ಹಾಜರಿದ್ದರು