
ಪುಣೆಯ ಲೋನಾವಾಲಾ ಪ್ರದೇಶದ ಭೂಶಿ ಅಣೆಕಟ್ಟಿನ ಹಿಂಭಾಗದ ಜಲಪಾತದಲ್ಲಿ ಪ್ರವಾಸಕ್ಕೆ ತೆರಳಿದ್ದ ಕುಟುಂಬವೊಂದರ ಇಬ್ಬರು ಅಪ್ರಾಪ್ತರು ಸೇರಿದಂತೆ ಮೂವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದು, ಇಬ್ಬರು ಮಕ್ಕಳು ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಾರಾಷ್ಟ್ರದ ಲೋನಾವಾಳಾದಲ್ಲಿ ಪ್ರವಾಹದಲ್ಲಿ ಮುಳುಗಿ 5 ಜನರ ಕುಟುಂಬ ಸಾವನ್ನಪ್ಪಿದೆ. ಜೂನ್ 30 ರಂದು ಮಧ್ಯಾಹ್ನ 12:30 ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಮೃತರನ್ನು ಶಹಿಸ್ತಾ ಅನ್ಸಾರಿ (36), ಅಮಿಮಾ ಅನ್ಸಾರಿ (13) ಮತ್ತು ಉಮೇರಾ ಅನ್ಸಾರಿ (8) ಎಂದು ಗುರುತಿಸಲಾಗಿದೆ. ನಾಪತ್ತೆಯಾದವರು ಅದ್ನಾನ್ ಅನ್ಸಾರಿ (4) ಮತ್ತು ಮರಿಯಾ ಸಯ್ಯದ್ (9). ಕುಟುಂಬವು ಪುಣೆ ನಗರದ ಸಯ್ಯದ್ ನಗರ ಪ್ರದೇಶದವರಾಗಿದ್ದಾರೆ.
ಪುಣೆ ಗ್ರಾಮಾಂತರ ಪೊಲೀಸ್ ಅಧೀಕ್ಷಕ ಪಂಕಜ್ ದೇಶಮುಖ್ ಎಎನ್‌ಐಗೆ ಜತೆ ಮಾತನಾಡಿ “ಒಬ್ಬ ಮಹಿಳೆ ಮತ್ತು ನಾಲ್ಕು ಮಕ್ಕಳು ಲೋನಾವಾಲಾದ ಭೂಶಿ ಅಣೆಕಟ್ಟಿನ ಬಳಿಯ ಜಲಪಾತಕ್ಕೆ ಹೋಗಿದ್ದರು. ಇಂದು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯ ಕೊನೆಯಲ್ಲಿ ಮೂರು ದೇಹಗಳನ್ನು ತೆಗೆಯಲಾಗಿದೆ. ಶಾಹಿಸ್ತಾ ಅನ್ಸಾರಿ (36), ಅಮಿಮಾ ಅನ್ಸಾರಿ (13), ಮತ್ತು ಉಮೇರಾ ಅನ್ಸಾರಿ (8) ಮೃತದೇಹಗಳನ್ನು ತೆಗೆಯಲಾಗಿದೆ , ಆದರೆ ಅದ್ನಾನ್ ಅನ್ಸಾರಿ (4) ಮತ್ತು ಮರಿಯಾ ಸಯ್ಯದ್ (9) ನಾಪತ್ತೆಯಾಗಿದ್ದಾರೆ ಎಂದು ಸೂಪರಿಂಟೆಂಡೆಂಟ್ ದೇಶಮುಖ್ ಹೇಳಿದ್ದಾರೆ. “ದುರಂತ ಸಂಭವಿಸಿದಾಗ ಕುಟುಂಬವು ಒಂದು ದಿನವನ್ನು ಆನಂದಿಸುತ್ತಿತ್ತು, ಕೆಲವು ಸದಸ್ಯರು ಜಲಪಾತಕ್ಕೆ ತುಂಬಾ ಹತ್ತಿರ ಪ್ರದೇಶಕ್ಕೆ ತೆರಳಿದ್ದರು ಮತ್ತು ದಿಢೀರ್ ತೀವ್ರ ಪ್ರವಾಹದಿಂದ ಕೊಚ್ಚಿಹೋದರು” ಎಂದು ದೇಶಮುಖ್ ಅವರನ್ನು ಉಲ್ಲೇಖಿಸಿ ANI ವರದಿ ಮಾಡಿದೆ.
ಲೋನಾವಾಲಾ ಪೊಲೀಸರು ಮತ್ತು ತುರ್ತು ಸೇವೆಗಳು ಮುಳುಗುಗಾರರು ಮತ್ತು ರಕ್ಷಣಾ ತಂಡಗಳನ್ನು ಒಳಗೊಂಡ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ. ನಾಪತ್ತೆಯಾಗಿರುವ ಮಕ್ಕಳ ಪತ್ತೆಗೆ ಸೋಮವಾರವೂ ಶೋಧ ಮುಂದುವರಿದಿದೆ.