ಅವಿವಾಹಿತ, ತಮ್ಮ ಪತಿ ಅಥವಾ ಕುಟುಂಬದಿಂದ ಬೇರ್ಪಟ್ಟಿರುವ ತಮಿಳುನಾಡಿನ ಒಂಟಿ ಮಹಿಳೆಯರನ್ನು ‘ಕುಟುಂಬ’ ಎಂದು ಗುರುತಿಸಲಾಗುವುದು ಎಂದು ಹೇಳಿರುವ ತಮಿಳು ನಾಡಿನ ಸರ್ಕಾರ ಈ ಮಹಿಳೆಯರು ಇನ್ನು ಮುಂದೆ ನಾಗರಿಕ ಸರಬರಾಜು ಇಲಾಖೆಯಿಂದ ಪಡಿತರ ಚೀಟಿಗಳನ್ನು ಪಡೆಯಬಹುದು ಎಂದಿದೆ.
ಇವರೂ ಸಹ ಪಡಿತರ ಚೀಟಿ ಪಡೆಯಲು ಇತರ ಎಲ್ಲರಂತೆಯೇ ಅರ್ಜಿ ಸಲಿಸಬೇಕಿದೆ. ಹೊಸ ಕಾರ್ಡ್ ಪಡೆಯಲು ಅರ್ಜಿದಾರರು ಗ್ಯಾಸ್ ಸಂಪರ್ಕ ಹೊಂದಿರುವ ಅಡುಗೆ ಮನೆ ಅಥವಾ ಇತರ ಅಡುಗೆ ಸೌಲಭ್ಯವನ್ನು ಹೊಂದಿರಬೇಕು. ತನ್ನ ಆಧಾರ್ ಕಾರ್ಡ್ ಮತ್ತು ಗ್ಯಾಸ್ ಬಿಲ್ ವಿವರಗಳೊಂದಿಗೆ ಒಂಟಿಯಾಗಿ ವಾಸಿಸುವವ ವಿವರಗಳನ್ನು ಲಿಖಿತವಾಗಿ ಸಲ್ಲಿಸಬೇಕು. ಇದರ ನಂತರ, ಮನೆಯನ್ನು ಕಂದಾಯ ನಿರೀಕ್ಷಕರು ಲೆಕ್ಕಪರಿಶೋಧನೆ ಮಾಡಿ ಕಾರ್ಡ್ ನೀಡುವ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ.
ತಮ್ಮ ಸಂಗಾತಿಯಿಂದ ಕಾನೂನುಬದ್ಧವಾಗಿ ಬೇರ್ಪಡದೆ ಬೇರೆಯದೇ ಆಗಿ ಜೀವಿಸುವ ಮಹಿಳೆಯರಿಗೆ ಈ ಹಿಂದೆ ಪಡಿತರ ಚೀಟಿ ಪಡೆಯಲು ಸಾಧ್ಯವಿರಲಿಲ್ಲ. ಇದನ್ನು ತಪ್ಪಿಸಲು ಮಹಿಳೆಯರಿಗೆ ಅನುಕೂಲವಾಗುವಂತೆ ಕಾನೂನಿನಲ್ಲಿ ತಿದ್ದುಪಡಿ ಮಾಡಲಾಗಿದೆ.
ಪ್ರಸ್ತುತ ನಿಯಮಗಳ ಪ್ರಕಾರ ವ್ಯಕ್ತಿಯು ಮರಣಹೊಂದಿದ್ದರೆ, ವಿವಾಹಕ್ಕೊಳಪಟ್ಟರೆ, ದತ್ತು ಪಡೆದಿದ್ದರೆ ಅಥವಾ ವಿಚ್ಛೇದನ ಪಡೆದಿದ್ದರೆ ಮಾತ್ರ ಕುಟುಂಬದ ಸದಸ್ಯರ ಹೆಸರನ್ನು ಪಡಿತರ ಚೀಟಿಯಿಂದ ತೆಗೆದುಹಾಕಬಹುದು. ಆದರೆ ಇನ್ನು ಮುಂದೆ ಒಂಟಿ ಮಹಿಳೆಯರೂ ಹೊಸ ಕಾರ್ಡ್‌ಗೆ ಅರ್ಜಿ ಹಾಕಬಹುದು.
ಪ್ರತ್ಯೇಕವಾಗಿ ವಾಸಿಸುವ ತನ್ನ ಹೆಂಡತಿಯ ಹೆಸರನ್ನು ರೇಷನ್ ಕಾರ್ಡ್‌ನಿಂದ ತೆಗೆದುಹಾಕಲು ಪತಿ ಸಿದ್ಧವಿಲ್ಲದಿದ್ದಾಗ, ಮಹಿಳೆಯು ಸಂವಿಧಾನದ ಅಡಿಯಲ್ಲಿ ಖಾತರಿಪಡಿಸಿದ ತನ್ನ ಆಹಾರ ಭದ್ರತೆಯನ್ನು ಕಳೆದುಕೊಳ್ಳುತ್ತಾಳೆ. ಆದ್ದರಿಂದ, ಮಹಿಳೆಯ ಸ್ವಯಂ ಘೋಷಣೆಯ ಆಧಾರದ ಮೇಲೆ ಕ್ಷೇತ್ರ ಪರಿಶೀಲನಾ ವರದಿಯ ನಂತರ ನಾಗರಿಕ ಸರಬರಾಜು ವಲಯದ ಅಧಿಕಾರಿಗಳು ಪತಿಯ ಪಡಿತರ ಚೀಟಿಯಿಂದ ಆಕೆಯ ಹೆಸರನ್ನು ತೆಗೆದುಹಾಕಬಹುದು ಮತ್ತು ಅವರಿಗೆ ಹೊಸದನ್ನು ನೀಡಬಹುದು ಎಂಬುವುದಾಗಿ ಸರ್ಕಾರದ ಅಧಿಕೃತ ಹೇಳಿಕೆಯು ಉಲ್ಲೇಖಿಸಿದೆ.
ಈ ಹಿಂದೆ, ಮಕ್ಕಳೊಂದಿಗೆ ಅಥವಾ ಇಲ್ಲದೆ ಪ್ರತ್ಯೇಕವಾಗಿ ವಾಸಿಸುವ ವಿವಾಹಿತ ಮಹಿಳೆ ಕಾನೂನುಬದ್ಧವಾಗಿ ಪತಿಯಿಂದ ಬೇರ್ಪಟ್ಟ ಹೊರತು ಪಡಿತರ ಚೀಟಿ ಪಡೆಯಲು ಅರ್ಹರಾಗಿರಲಿಲ್ಲ. ಅವಿವಾಹಿತ ಮಹಿಳೆಯರನ್ನು ‘ಕುಟುಂಬ’ ಎಂದು ಪರಿಗಣಿಸಲಾಗುತ್ತಿರಲಿಲ್ಲ. ಇದು ಪೋಷಕರಿಂದ ಮತ್ತು ಪತಿಯಿಂದ ಬೇರ್ಪಟ್ಟ ಮಹಿಳೆಯರನ್ನು ಸರ್ಕಾರಿ ಸೌಲಭ್ಯಗಳಿಂದ ದೂರವಿಟ್ಟಿತ್ತು.
ಅಖಿಲ ಭಾರತ ಪ್ರಜಾಸತ್ತಾತ್ಮಕ ಮಹಿಳಾ ಸಂಘ (ಎಐಡಿಡಬ್ಲ್ಯುಎ)ವು ಒಂಟಿ ಮಹಿಳೆಯರಿಗೆ, ವಿಶೇಷವಾಗಿ ಕಡಿಮೆ ಆದಾಯದ ಸ್ತರದಿಂದ ಬಂದವರಿಗೆ ಪಡಿತರ ಚೀಟಿಗಳನ್ನು ಒದಗಿಸುವ ಬಗ್ಗೆ ಅನೇಕ ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ತಮಿಳು ನಾಡು ಸರ್ಕಾರದ ಹೊಸ ನೀತಿಯನ್ನು ಸ್ವಾಗತಿಸಿರುವ ಸಂಘವು ಇದರ ಪ್ರಯೋಜನಗಳು ಅಗತ್ಯವಿರುವವರಿಗೆ ತಲುಪುತ್ತವೆ ಎಂದು ವಿಶ್ವಾಸ ವ್ಯಕ್ತಪಡಿಸಿದೆ. ಇದು ರಾಜ್ಯ ಸರ್ಕಾರದ ಅತ್ಯುತ್ತಮ ಮತ್ತು ಪ್ರಗತಿಪರ ನಿರ್ಧಾರಗಳಲ್ಲಿ ಒಂದಾಗಿದೆ ಎಂದು ಸಂಘ ಹೇಳಿದೆ. ಎಐಡಿಡಬ್ಲ್ಯೂಎ ರಾಜ್ಯ ಕಾರ್ಯದರ್ಶಿ ಎಸ್‌ಕೆ ಪೊನ್ನುತ್ತಾಯಿ ಮಾತನಾಡಿ “ಲಾಕ್‌ಡೌನ್ ಘೋಷಣೆಯಾದಾಗ ಮಹಿಳೆಯರು ಪೊಂಗಲ್ ಮತ್ತು ಇತರ ಹಬ್ಬಗಳ ಸಮಯದಲ್ಲಿ ಪಡಿತರ ಚೀಟಿಗಳ ಕೊರತೆಯಿಂದಾಗಿ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗಿರಲಿಲ್ಲ. ಈಗ ಸರ್ಕಾರದ ಈ ನಿರ್ಧಾರವು ಆಹಾರ ಭದ್ರತೆ ಮತ್ತು ಉಳಿದ ಎಲ್ಲಾ ಪ್ರಯೋಜನಗಳು ಅಗತ್ಯವಿರುವವರಿಗೆ ತಲುಪುವುದನ್ನು ಖಚಿತಪಡಿಸುತ್ತದೆ” ಎಂದು ಹೇಳಿದ್ದಾರೆ.
‘ಒಂದು ಕುಟುಂಬಕ್ಕೆ ಒಂದು ಪಡಿತರ ಚೀಟಿ’ ಪರಿಕಲ್ಪನೆಯ ಕುರಿತು ಮಾತನಾಡಿದ ಹಿರಿಯ ವಕೀಲೆ ಸುಧಾ ರಾಮಲಿಂಗಂ “ನಾವು ಯಾವಾಗಲೂ ಪಿತೃಪ್ರಧಾನ ಸಂಸ್ಕೃತಿಯಿಂದ ಮಾರ್ಗದರ್ಶನ ಪಡೆದುಕೊಂಡವರು. ಮಹಿಳೆಯರು ಗಂಡನ ಕುಟುಂಬದಲ್ಲಿ ವಾಸಿಸುತ್ತಾರೆ ಮತ್ತು ಸ್ವಂತವಾಗಿ ಪ್ರಯೋಜನಗಳನ್ನು ಪಡೆಯಲು ಸಾಧ್ಯವಿಲ್ಲ ಎಂಬುವುದು ಇದೇ ಸಂಸ್ಕೃತಿಯ ನಂಬಿಕೆ” ಎಂದು ಹೇಳಿದ್ದಾರೆ.
ತಮಿಳುನಾಡು ಸರ್ಕಾರವು ಕೈಗೊಂಡಿರುವ ಈ ಐತಿಹಾಸಿಕ ನಿರ್ಧಾರವು ಮಹಿಳೆಯರ ಬದುಕಿನಲ್ಲಿ ಅತಿ ಮುಖ್ಯವಾದ ಪಾತ್ರ ನಿರ್ವಹಿಸಲಿದ್ದು ಪತಿಯಿಂದ ಅಥವಾ ಕುಟುಂಬದಿಂದ ದೂರವಿರಲು ಬಯಸಿ ಆರ್ಥಿಕ ಕಾರಣದಿದ ಬೇರ್ಪಡಲಾಗದ ಮಹಿಳೆಯರಿಗೆ ಬಲ ತುಂಬಲಿದೆ. ಈಗಾಗಲೇ ಈ ನಿರ್ಧಾರಕ್ಕೆ ಪ್ರಗತಿಪರ ವಲಯದಿಂದ ತೀವ್ರ ಬೆಂಬಲ ವ್ಯಕ್ತವಾಗಿದ್ದು ದೇಶಾದ್ಯಂತ ಈ ನೀತಿ ಅಳವಡಿಸಿಕೊಳ್ಳುವಂತೆ ಒತ್ತಾಯ ಕೇಳಿಬಂದಿದೆ.