ರಾಜ್ಯದಲ್ಲಿ ಹಿಂದೂ ಮುಸ್ಲೀಂ ಸಾಮರಸ್ಯ ಸಹಾಭಾಳ್ವೆ ದಕ್ಕೆಯಾಗುವಂತಹ ಹಲವು ಪ್ರಕರಣಗಳು, ಘಟನೆಗಳು ಕಳೆದ ಆರೇಳು ತಿಂಗಳಿನಿಂದ ನಡೆಯುತ್ತಿದೆ. ಮೊದಲು ಹಿಜಾಬ್ ವಿಚಾರದಲ್ಲಿ ಶುರುವಾದ ಧರ್ಮ ಸಂಘರ್ಷ ಬೇರೆ ಬೇರೆ ಆಯಾಮಗಳನ್ನ ಪಡೆದುಕೊಳ್ಳುತ್ತಿದೆ. ಮುಸ್ಲಿಂ ವ್ಯಾಪಾರ, ಹಲಾಲ್ ಮಾಂಸ ನಿಷೇಧ ಬಳಿಕ ಮೇಲುಕೋಟೆ ಚಲುವನಾರಾಯಣಸ್ವಾಮಿ ದೇವಾಲಯದಲ್ಲಿ ಪ್ರತಿ ದಿನ ಸಂಜೆ 7 ಗಂಟೆಗೆ ನಡೆಯುವ ಸಲಾಂ ಆರತಿವರೆಗೂ ಬಂದು ನಿಂತಿದೆ.
ಹೌದು, ಮೇಲುಕೋಟೆ ಚಲುವನಾರಾಯಣಸ್ವಾಮಿ ದೇವಾಲಯದಲ್ಲಿ ಪ್ರತಿ ದಿನ ಸಂಜೆ 7 ಗಂಟೆಗೆ ನಡೆಯುವ ಸಲಾಂ ಆರತಿ ಪೂಜೆಯ ಹೆಸರನ್ನು ಸಂಧ್ಯಾ ಆರತಿ ಎಂದು ಬದಲಾಯಿಸಿ ಮಂಡ್ಯ ಜಿಲ್ಲಾಧಿಕಾರಿಗಳು ಆದೇಶ ಪತ್ರವನ್ನು ಹೊರಡಿಸಿದ್ದು ಜಾರಿಗಾಗಿ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರ ಗ್ರೀಸ್ ಸಿಗ್ನಲ್ಗಾಗಿ ಕಾಯುತ್ತಿದ್ದಾರೆ.
ಮಂಡ್ಯ ಜಿಲ್ಲೆ ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಸ್ಥಾನದಲ್ಲಿ ದೀವಟಿಗೆ ಸಲಾಂ ನಡೆಯುತ್ತದೆ. ಪ್ರತಿನಿತ್ಯ ಸಂಜೆ 7 ಗಂಟೆಗೆ ದೀವಟಿಗೆ ಸಲಾಂ ಆರತಿ ಮಾಡಲಾಗುತ್ತದೆ. ಗರ್ಭಗುಡಿಯ ಪೂಜೆ ಬಳಿಕ ಆಚೆಗೆ ಪಂಜು ಹಿಡಿದು ಬರುವ ವ್ಯಕ್ತಿ ನಡುವನ್ನ ಅರ್ಧ ಬಗ್ಗಿಸಿ ದೇವರಿಗೆ ಆರತಿ ಮಾಡುತ್ತಾರೆ. ಈ ಆರತಿಯನ್ನ ದೀವಟಿಗೆ ಸಲಾಂ ಎಂದು ಕರೆಯುತ್ತಾರೆ. ಇದು ಟಿಪ್ಪು ಸುಲ್ತಾನ್ ಆಡಳಿತ ಅವಧಿಯಲ್ಲಿ ಆರಂಭವಾದ ಪದ್ದತಿ. ಈ ಪದ್ದತಿಯನ್ನು ದೇವಸ್ಥಾನದ ಆಡಳಿತ ಮಂಡಳಿ ಇಲ್ಲಿಯವರೆಗೂ ಪಾಲಿಸಿಕೊಂಡು ಬಂದಿತ್ತು. ಆದರೆ ಕೆಲ ಹಿಂದೂ ಸಂಘಟನೆಗಳು ಮೇಲುಕೋಟೆಯಲ್ಲಿ ನಡೆಯುವ ಸಲಾಂ ಆರತಿ ನಿಲ್ಲಿಸುವಂತೆ ಜಿಲ್ಲಾಡಳಿತ, ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಧರ್ಮಿಕ ದತ್ತಿ ಇಲಾಖೆಗೆ ಮನವಿ ಪತ್ರ ಕೂಡ ಸಲ್ಲಿಸಿ ಒತ್ತಾಯಿಸಿತ್ತು.
ಸಲಾಂ ಆರತಿಯನ್ನ ವಿರೋಧಿಸಿ ಕೆಲ ಹಿಂದೂ ಸಂಘಟನೆಗಳು ಆಕ್ಷೇ ಪ ಎತ್ತಿವೆ. ಹಾಗಾಗಿಪೂಜೆ ಹೆಸರನ್ನ ಬದಲಿಸುವಂತೆ ಮಂಡ್ಯದಲ್ಲಿರುವ ಮೇಲುಕೋಟೆ ಚಲುವನಾರಾಯಣಸ್ವಾಮಿ ದೇಗುಲ ಮಂಡಳಿ ಮಂಡ್ಯ ಜಿಲ್ಲಾಧಿಕಾರಿ ಎಸ್. ಅಶ್ವಥಿಗೆ ಪತ್ರ ಬರೆದಿತ್ತು . ಮಂಡ್ಯ ಡಿಸಿ ಮೂಲಕ ಮುಜರಾಯಿ ಇಲಾಖೆ ಆಯುಕ್ತರಿಗೆ ಪತ್ರ ರವಾನೆಯಾಗಿತ್ತು . ಸಲಾಂ ಆರತಿ ಹೆಸರನ್ನ ಬದಲಿಸಬಹುದು ಎಂದು ಡಿಸಿ ಪತ್ರದಲ್ಲಿ ತಮ್ಮ ಅಭಿಪ್ರಾಯ ದಾಖಲಿಸಿದ್ದಾರೆ.
ದೇವಸ್ಥಾನ ಆಡಳಿತ ಸಲಾಂ ಆರತಿ ಹೆಸರು ಬದಲಿಸುವ ಕುರಿತು ಸಭೆ ನಡೆಸಿದ್ದು ಎಲ್ಲರೂ ಒಮ್ಮತದಿಂದ ಒಪ್ಪಿ ಹೆಸರನ್ನು ಬದಲಿಸಲು ನಿರ್ಧರಿಸಿ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿದ ನಂತರವಷ್ಟೇ ಜಿಲ್ಲಾಧಿಕಾರಿ ದತ್ತಿ ಇಲಾಖೆಗೆ ಪತ್ರ ಬರೆದಿದ್ದು, ಮುಜರಾಯಿ ಇಲಾಖೆ ಆಯುಕ್ತರಿಂದ ಅಧಿಕೃತವಾಗಿ ಒಪ್ಪಿಗೆಯ ಆದೇಶ ಮಾತ್ರ ಹೊರಬೀಳಬೇಕಿದೆ.
ಪ್ರಸಿದ್ಧ ಮೇಲುಕೋಟೆಯಲ್ಲಿ ಚಾಲ್ತಿಯಲ್ಲಿರುವ ಆರತಿಯನ್ನು ಸಲಾಂ ಆರತಿ ಎಂಬ ಹೆಸರಿನಿಂದ ಕರೆಯಲಾಗುತ್ತಿ ದೆ. ಇದರ ಹೆಸರು ಬದಲಿಸಬೇಕು ಎಂದು ಮೇಲುಕೋಟೆ ಸ್ಥಾನಿಕರಾದ ಶ್ರೀ ನಿವಾಸ್ ಸರ್ಕಾರಕ್ಕೆ ಮಾರ್ಚ್ 31 2022ರಂದು ಮನವಿ ಮಾಡಿದ್ದರು.
ಪೂಜಾ ಸ್ಥಳ ಕಾಯ್ದೆ 1991 ರ ಪ್ರಕಾರ ಹಾಗೂ ಹಿಂದೂ ಧಾರ್ಮಿಕ ದತ್ತಿ ಕಾಯ್ದೆ ಪ್ರಕಾರ ಯಾವುದೇ ಅನೂಚಾನವಾಗಿ ನಡೆದುಕೊಂಡು ಬಂದಿರುವ ಪರಂಪರಾಗತ ಆಚರಣೆಗಳನ್ನು ಪೂಜಾ ವಿಧಾನಗಳನ್ನು ಬದಲಿಸುವಂತಿಲ್ಲ ಎಂದು ತಿಳಿಸಿದ್ದರು ಇದನ್ನು ಸ್ಪಷ್ಟವಾಗಿ ಜಿಲ್ಲಾಡಳಿತ ಉಲ್ಲಂಘಿಸಿದ್ದಾರೆ ಎಂದು ಸಾರ್ವಜನಿಕರ ಆಕ್ರೋಶ ವ್ಯಕ್ತವಾಗುತ್ತಿದೆ.
ದಾನ ,ದತ್ತಿ, ಭಕ್ತಿ ಮುಂತಾದ ಹಲವು ಕಾರಣಗಳಿಂದ ಧಾರ್ಮಿಕ ಸಾಮರಸ್ಯ ಹಾಗೂ ಸೌಹಾರ್ಧತೆಯ ಪರಂಪರೆ ಎಲ್ಲಾ ಭಾರತೀಯ ಧಾರ್ಮಿಕ ಪರಂಪರೆಯ ಮೂಲಭೂತ ಲಕ್ಷಣವಾಗಿದೆ. ಇದೇ ಭಾರತದ ವೈಶಿಷ್ಟ್ಯ ಇಂತಹ ವೈವಿಧ್ಯಮಯ ವಿಶಿಷ್ಠತೆಯ ನಾಶ ಪರಂಪರೆ ಮತ್ತು ಇತಿಹಾಸ ಕ್ಕೆ ಮಾಡುವ ದ್ರೋಹ ಎಂಬುದು ಸಾರ್ವಜನಿಕರ ಮಾತಾಗಿದೆ.