ಹಿಜಾಬಿಂದ ಶುರುವಾದ ವಿವಾದ ಸದ್ಯಕ್ಕೆ ಟಿಪ್ಪು ಸುಲ್ತಾನ್ ಇತಿಹಾಸಕ್ಕೆ ಬಂದು ನಿಂತಿದೆ. ಸಮಾಜ ವಿಜ್ಞಾನದಿಂದ ಟಿಪ್ಪು ಸುಲ್ತಾನ್ ಯಶೋಗಾಥೆ ತೆಗೆದು ಹಾಕುವುದು ಬಹುತೇಕ ಖಚಿತವಾಗಿದೆ. ಇದಕ್ಕೆ ಪುಷ್ಟಿ ಎಂಬಂತೆ 2019ರಲ್ಲಿ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಸರ್ಕಾರಕ್ಕೆ ನೀಡಿದ ಪತ್ರವೊಂದು ಮತ್ತೆಗೆ ಮುನ್ನಲೆಗೆ ಬಂದಿದ್ದು ಭಾರಿ ಚರ್ಚೆಗೆ ನಾಂದಿಹಾಡಿದೆ.
ಸರ್ಕಾರ ಟಿಪ್ಪು ಸುಲ್ತಾನ್ ಚರಿತ್ರೆಯನ್ನು ಪಠ್ಯದಿಂದ ಕೈ ಬಿಡಲು ಮುಂದಾಗಿದೆ. ಅನಗತ್ಯವಾಗಿ ಟಿಪ್ಪು ಸುಲ್ತಾನ್ ಬಗ್ಗೆ ವೈಭವೀಕರಿಸಿ ಇತಿಹಾಸ ತಿರುಚಿ ಸುಳ್ಳು ಕಟ್ಟಲಾಗಿದೆ ಎಂದು ಪಠ್ಯಪುಸ್ತಕ ಪರಿಷ್ಕೃತ ರಚನಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಹೇಳಿದ ಬೆನ್ನಲ್ಲೇ, ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಕೆಲ ವರ್ಷಗಳ ಹಿಂದೆ ಟಿಪ್ಪು ಸುಲ್ತಾನ್ ಚರಿತ್ರೆ ಬಗ್ಗೆ ಸರ್ಕಾರಕ್ಕೆ ಬರೆದ ಪತ್ರವೊಂದು ಇದೀಗ ಚರ್ಚೆಯ ಕೇಂದ್ರ ಬಿಂದುವಾಗಿದೆ. ಈಗಾಗಲೇ ಈ ಬಾರಿಯ ಪಠ್ಯದಿಂದ ಟಿಪ್ಪು ಸುಲ್ತಾನ್ ವೈಭವೀಕರಣಕ್ಕೆ ಬ್ರೇಕ್ ಹಾಕಲಾಗಿದ್ದು ಕೇವಲ ಟಿಪ್ಪು ಪರಿಚಯಕ್ಕೆ ಮಾತ್ರ ವಿಷಯ ಸೀಮಿತವಾಗಿರುವ ಹಾಗಿದೆ. ಇದರ ನಡುವೆ ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ ಬರೆದಿರುವ ಈ ಪತ್ರ ಮತ್ತೊಂದು ಹಂತಕ್ಕೆ ವಿವಾದವನ್ನು ಕೊಂಡೊಯ್ದಿದೆ.
16 ಪುಟ.. 51 ವಿಚಾರ.. ಇಂಗ್ಲೆಂಡ್‌ನಿಂದ ತರಿಸಿದ ದಾಖಲೆ ಇದೆ ಎಂದ ಅಪ್ಪಚ್ಚು ರಂಜನ್ !
2019 ನವೆಂಬರ್ 7 ರಂದು ಶಾಸಕ ಅಪ್ಪಚ್ಚು ರಂಜನ್ ಆಗಿನ ಮುಖ್ಯಮಂತ್ರಿಗಳಾದ ಯಡಿಯೂರಪ್ಪನಿಗೆ 51 ವಿಚಾರಗಳನ್ನೊಳಗೊಂಡ 16 ಪುಟಗಳ ವರದಿ ಪತ್ರವೊಂದನ್ನು ಕೊಟ್ಟಿದ್ದರು. ಇಂಗ್ಲೆಂಡ್ ನಿಂದ ತರಿಸಿಕೊಂಡ ವಿಲಿಯಂ ಕ್ರಿಕ್ ಪ್ಯಾಟ್ರಿಕ್ ಬರೆದಿರುವ ಕೃತಿಯನ್ನು ಆಧರಿಸಿ ಈ ಪತ್ರದಲ್ಲಿ ವಿಚಾರಗಳನ್ನು ಹೇಳಲಾಗಿದೆ. ಟಿಪ್ಪುವೊಬ್ಬ ಮತಾಂಧ. ಆತ ಹಿಂದೂಗಳ ಮಾರಣಹೋಮ ನಡೆಸಿದ್ದಾನೆ. ಕೊಡವರನ್ನು ಮತಾಂತರ ಮಾಡಿ ಹಿಂಸೆ ಮಾಡಿದ್ದಾನೆ. ಮತ್ತು ಸ್ವತಃ ಟಿಪ್ಪು ತಂದೆ ಹೈದಾರಾಲಿಯೇ ಟಿಪ್ಪು ಬಗ್ಗೆ ಸಂಶಯಹೊಂದಿದ್ದರು ಎಂದು ಪತ್ರದಲ್ಲಿ ದಾಖಲಿಸಲಾಗಿದೆ.
ಇನ್ನು ಈಗಿನ ಸರ್ಕಾರಕ್ಕೂ ಅಪ್ಪಚ್ಚು ರಂಜನ್ ಅದೇ ಹಳೆಯ ವರದಿಯ ಪ್ರತಿಯನ್ನು ನೀಡಿದ್ದಾರೆ. ಈ ಬಗ್ಗೆ ಮಾತನಾಡಿದ ಶಿಕ್ಷಣ ಸಚಿವ ಬಿಸಿ ನಾಗೇಶ್, ಅಪ್ಪಚ್ಚು ರಂಜನ್ ವರದಿ ಪತ್ರವೊಂದನ್ನು ಕೊಟ್ಟಿದ್ದಾರೆ. ಅದರಲ್ಲಿ ಇಂಗ್ಲೆಂಡ್ ನಿಂದ ತರಿಸಿರುವ ಇತಿಹಾಸ ಪುಸ್ತಕದ ದಾಖಲೆ ಇದೆ. ಅದರ ಬಗ್ಗೆ ವಿವರವಾಗಿ ಚರ್ಚೆ ಮಾಡಿ ಮುಂದಿನ ಕ್ರಮ ತೆಗೆದುಕೊಳ್ಳುತ್ತವೆ ಎಂದರು. ಒಟ್ಟಾರೆ ಟಿಪ್ಪು ಸುಲ್ತಾನ್ ಇತಿಹಾಸಕ್ಕೆ ಸಮಾಜ ವಿಜ್ಞಾನ ವಿಷಯದಿಂದ ಬಹುತೇಕ್ ಕೋಕ್ ನೀಡಲಾಗಿದೆ. ಇನ್ನೇನಿದ್ದರೂ ಕೇವಲ ಟಿಪ್ಪು ಪರಿಚಯಕ್ಕೆ ಮಾತ್ರ ಸೀಮಿತವಾಗಿ ಇರಿಸಲಾಗಿದೆ. ಇದರ ಜೊತೆಗೆ ಮೂರುವರ್ಷಗಳ ಹಿಂದೆ ಅಪ್ಪಚ್ಚು ರಂಜನ್ ಸರ್ಕಾರಕ್ಕೆ ಬರೆದಿರುವ ವರದಿ ಪತ್ರ ಮುನ್ನೆಲೆಗೆ ಬಂದಿದ್ದು ವಿವಾದವನ್ನು ಮತ್ತಷ್ಟು ತಾರಕಕ್ಕೇರುವಂತೆ ಮಾಡಿದ್ದಾರೆ.