ಟಿಪ್ಪು ಮತ್ತೊಮ್ಮೆ ರಾಜಕೀಯ ಚದುರಂಗದಾಟದಲ್ಲಿ ದಾಳವಾಗಿದ್ದಾನೆ. ಎಡ ಬಲಗಳ ತಿಕ್ಕಾಟದಲ್ಲಿ, ಮತೀಯತೆ-ಸೆಕ್ಯುಲರ್ ತತ್ವಗಳ ಘರ್ಷಣೆಯ ನಡುವೆ, ಇತಿಹಾಸ-ವಾಸ್ತವಗಳ ದ್ವಂದ್ವದಲ್ಲಿ ಟಿಪ್ಪು ವಿರಾಜಮಾನನಾಗಿದ್ದಾನೆ. ಇತಿಹಾಸದ ವಿವಿಧ ಕಾಲಘಟ್ಟಗಳಲ್ಲಿ ನಡೆದಿರಬಹುದಾದ ಪ್ರಮಾದಗಳನ್ನು ಸಮಕಾಲೀನ ಸಾಮಾಜಿಕ ಸಂದರ್ಭದೊಡನೆ ಸಮೀಕರಿಸುವ ಅಪಾಯವನ್ನು ಅರಿಯಬೇಕಾದರೆ ಬಹುಶಃ ಟಿಪ್ಪು ವಿವಾದ ಒಂದು ಸ್ಪಷ್ಟ ಭೂಮಿಕೆಯಾಗುತ್ತದೆ. ವಿಶ್ವದ ಇತಿಹಾಸದಲ್ಲಿ ಎಲ್ಲ ಜನಸಮುದಾಯಗಳಿಗೂ ಸಂತೃಪ್ತಿಯಾಗುವಂತೆ ರಾಜ್ಯಭಾರ ನಡೆಸಿದ ರಾಜ ಮಹಾರಾಜರ ಆಡಳಿತವನ್ನು ಕಾಣಲಾಗುವುದಿಲ್ಲ. ಏಕೆಂದರೆ ರಾಜ, ಮಹಾರಾಜ, ಸಾಮಂತ, ಸಾಮ್ರಾಟ ಮತ್ತು ಪಾಳೇಗಾರರ ಮೂಲ ಅಸ್ತಿತ್ವ ಇದ್ದುದು ತಾವು ಆಕ್ರಮಿಸಿದ ಭೂ ಪ್ರದೇಶವನ್ನು ತಮ್ಮ ಅಧಿಪತ್ಯದಲ್ಲಿ ಉಳಿಸಿಕೊಳ್ಳುವುದರಲ್ಲಿಯೇ ಹೊರತು ಆ ಪ್ರಾಂತ್ಯಗಳಲ್ಲಿನ ಸಮಸ್ತ ಜನತೆಯ ಹಿತಾಸಕ್ತಿಯಲ್ಲಿ ಅಲ್ಲ. ರಾಜಪ್ರಭುತ್ವ ವ್ಯವಸ್ಥೆಯ ಔದರ‍್ಯ ಮತ್ತು ಅನುಕಂಪಗಳನ್ನು ಸಮಕಾಲೀನ ಸಂದರ್ಭದ ಪ್ರಜಾಸತ್ತಾತ್ಮಕ ಧೋರಣೆಯೊಡನೆ ಸಮೀಕರಿಸುವುದು ಇತಿಹಾಸಕ್ಕೆ ಅಪಚಾರ ಎಸಗಿದಂತೆ, ಮಾತ್ರವಲ್ಲ ಪ್ರಜಾತಂತ್ರ ವ್ಯವಸ್ಥೆಯನ್ನೂ ಅವಮಾನಿಸಿದಂತೆ. ಇತಿಹಾಸದ ಪುಟಗಳಲ್ಲಿ ಸ್ಥಾನವನ್ನೇ ಪಡೆಯದ ಪೌರಾಣಿಕ ಕಲ್ಪನೆಯ ರಾಮರಾಜ್ಯವನ್ನು ಸಮಕಾಲೀನ ಪ್ರಜಾತಂತ್ರ ವ್ಯವಸ್ಥೆಗೆ ಹೋಲಿಸುವ ಮೂಲಕ ಗಾಂಧಿ ಈ ತಪ್ಪನ್ನು ಮಾಡಿದ್ದರು.
ಇಂದು ನಾವು ಪ್ರಜಾತಂತ್ರ ವ್ಯವಸ್ಥೆಯ ಉನ್ನತ ಹಂತ ತಲುಪಿದ್ದೇವೆ. ಸಮ ಸಮಾಜ, ಸಮಾನತೆ, ಅಭಿವ್ಯಕ್ತಿ ಸ್ವಾತಂತ್ರ್ಯ, ವಾಕ್ ಸ್ವಾತಂತ್ರ್ಯ, ಪ್ರಜಾ ಆಡಳಿತ, ಸಾರ್ವಭೌಮ ಪೌರತ್ವ ಇವೇ ಮುಂತಾದ ಉದಾತ್ತ ಚಿಂತನೆಗಳನ್ನು ಮೈಗೂಡಿಸಿಕೊಂಡಿದ್ದೇವೆ. ಅಧಿಕಾರಸ್ಥ ರಾಜಕಾರಣಿಗಳಲ್ಲಿ, ಆಡಳಿತ ವ್ಯವಸ್ಥೆಯಲ್ಲಿ ಈ ಮೌಲ್ಯಗಳು ನಶಿಸಿಹೋಗುತ್ತಿದ್ದರೂ ಜನಸಾಮಾನ್ಯರಲ್ಲಿ ಇನ್ನೂ ಜೀವಂತವಾಗಿದೆ. ತಮ್ಮ ಅಧಿಕಾರ ವ್ಯಾಪ್ತಿಯನ್ನು ಉಳಿಸಿಕೊಳ್ಳಲು, ಅಧಿಪತ್ಯವನ್ನು ಕಾಪಾಡಲು ಆಧುನಿಕ ಪ್ರಜಾತಂತ್ರ ವ್ಯವಸ್ಥೆಯಲ್ಲಿನ ಆಳ್ವಿಕರು ಔದರ‍್ಯದ ನೆಲೆಯಲ್ಲಿ ಜನಸಾಮಾನ್ಯರಿಗೆ ಒದಗಿಸುವ ಸವಲತ್ತುಗಳು, ಸೌರ‍್ಯಗಳು ಮತ್ತು ರಿಯಾಯಿತಿಗಳು ಶೋಷಿತ, ದಮನಿತ ಶ್ರಮಿಕ ವರ್ಗಗಳ ಬಾಳನ್ನು ಹಸನಾಗಿಸುವುದೋ ಇಲ್ಲವೋ ಎನ್ನುವುದು ಚರ್ಚಾಸ್ಪದ. ಆದರೆ ಈ ಔದರ‍್ಯದ ಉರುಳು ಪ್ರಜೆಗಳನ್ನು ಸ್ಥಾಪಿತ ವ್ಯವಸ್ಥೆಯೊಂದಿಗೆ ಬಂಧಿಸುವುದರೊಂದಿಗೇ ಆಳ್ವಿಕರ ಅಸ್ತಿತ್ವವನ್ನೂ ಕಾಪಾಡುತ್ತದೆ. ಈ ಔದರ‍್ಯ ಮತ್ತು ಅನುಕಂಪಗಳ ನಡುವೆಯೇ ಆಧುನಿಕ ದೊರೆಗಳು ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಧರ್ಮ, ಜಾತಿ, ಭಾಷೆ ಮತ್ತು ಪ್ರಾಂತೀಯ ಭಾವನೆಗಳನ್ನು ಬಂಡವಾಳವನ್ನಾಗಿ ಮಾಡಿಕೊಂಡು ಜನಸಾಮಾನ್ಯರ ನಡುವಿನ ಕಂದರಗಳನ್ನು ಹಿಗ್ಗಿಸುತ್ತಲೇ ಹೋಗುತ್ತಿರುವುದನ್ನು ಸ್ವತಂತ್ರ ಭಾರತದ ಇತಿಹಾಸದಲ್ಲಿ ಕಂಡಿದ್ದೇವೆ.
ಯಾವುದೇ ರೀತಿಯ ಅಡಳಿತ ವ್ಯವಸ್ಥೆ ಇರಲಿ, ಆಳ್ವಿಕರಿಗೆ ಭೂಪ್ರದೇಶದ ಮೇಲಿನ ವ್ಯಾಮೋಹ ಒಂದೇ ರೀತಿಯದ್ದಾಗಿರುತ್ತದೆ. ಮಾನವ ಮತ್ತು ಭೂಮಿಯ ನಡುವೆ ಒಂದು ಅವಿನಾಭಾವ ಸಂಬಂಧವಿದೆ. ತುಂಡು ಭೂಮಿಗಾಗಿ ಹಾತೊರೆಯುವ ಸಾಮಾನ್ಯ ಮನುಷ್ಯನ ಹಪಾಹಪಿಯ ಹಿಂದೆ ಬದುಕುವ ಆಕಾಂಕ್ಷೆ ಮಾತ್ರವೇ ಇರುತ್ತದೆ. ಬಿಮಲ್ ರಾಯ್ ಅವರ ದೋ ಬೀಘಾ ಜಮೀನ್ ಚಿತ್ರದಲ್ಲಿ ಇದರ ಹೃದಯಸ್ಪರ್ಶಿ ಚಿತ್ರಣವನ್ನು ಕಾಣಬಹುದು. ತನ್ನ ಬದುಕು ಕಟ್ಟಿಕೊಳ್ಳಲು ಮಾನವ ಭೂಮಿಯನ್ನು ಆಶ್ರಯಿಸುತ್ತಾನೆ, ನೈಸರ್ಗಿಕ ಸಂಪನ್ಮೂಲಗಳನ್ನು ಆಶ್ರಯಿಸುತ್ತಾನೆ. ನಿಸರ್ಗವನ್ನು ಪೂಜಿಸುತ್ತಾನೆ. ನೆಲ, ಜಲ, ವಾಯು ಮತ್ತು ಅರಣ್ಯ ಸಂಪತ್ತುಗಳು ಮಾನವನ ಅಭ್ಯುದಯಕ್ಕಾಗಿಯೇ ಇರುವ ಆಕರಗಳು ಎಂದು ಭಾವಿಸುತ್ತಾನೆ. ಆದರೆ ಈ ಸಂಪನ್ಮೂಲಗಳ ಮೇಲೆ ತನ್ನ ಅಧಿಪತ್ಯ ಸಾಧಿಸುವ ಮೂಲಕ ಒಂದು ಪ್ರಭುತ್ವ ಜನಸಾಮಾನ್ಯರನ್ನು ಹಿಡಿದಿಟ್ಟುಕೊಳ್ಳುತ್ತದೆ. ಸಂಪತ್ತಿನ ಸಮಾನ ವಿತರಣೆಯೇ ಜೀವಾಳವಾಗಿರುವ ಪ್ರಜಾತಂತ್ರ ವ್ಯವಸ್ಥೆಯಲ್ಲೇ ಈ ಅಧಿಪತ್ಯ ಮತ್ತು ಅತಿಕ್ರಮಣ ಧೋರಣೆ ದಟ್ಟವಾಗಿರುವಾಗ ಇನ್ನು ಸರ್ವಾಧಿಕಾರದ ಮೂರ್ತ ಸ್ವರೂಪವಾದ ರಾಜಪ್ರಭುತ್ವದಲ್ಲಿ ಇಲ್ಲದಿರಲು ಹೇಗೆ ಸಾಧ್ಯ. ಪ್ರಭುತ್ವದ ಔದರ‍್ಯ ಮತ್ತು ಅನುಕಂಪ ಈ ನಿಯಂತ್ರಣದ ಕೀಲಿಗಳೇ ಹೊರತು, ಹೃದಯಸ್ಪರ್ಶಿ ಸಂವೇದನೆಯ ಸೂಚಕವಲ್ಲ. ಇದು ಟಿಪ್ಪು ಕಾಲಕ್ಕೂ ಸತ್ಯ, ಅಕ್ಬರನ ಕಾಲಕ್ಕೂ ಸತ್ಯ, ಮೋದಿ ಯುಗಕ್ಕೂ ಅಷ್ಟೇ ಸತ್ಯ.
ಆದರೂ ನಾವು ಶತಮಾನಗಳ ಹಿಂದಿನ ಸಾಮ್ರಾಟರಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಅರಸುತ್ತಿದ್ದೇವೆ. ಸಾಮ್ರಾಟರ ಔದರ‍್ಯದಲ್ಲಿ ಪ್ರಜಾತಂತ್ರದ ಛಾಯೆಯನ್ನು ಕಾಣಲಿಚ್ಚಿಸುತ್ತಿದ್ದೇವೆ. ನಿಜ, ಇತಿಹಾಸದಲ್ಲಿ ಆಗಿ ಹೋದ ದೊರೆಗಳು , ಯಾವುದೇ ಧರ್ಮಕ್ಕೆ ನಿಷ್ಠರಾಗಿರಲಿ, ತಾವು ಆಕ್ರಮಿಸಿದ ಪ್ರಾಂತ್ಯದಲ್ಲಿ ತಮ್ಮ ಅಧಿಪತ್ಯ ಸಾಧಿಸಲು ಧರ್ಮ ಮತ್ತು ಧಾರ್ಮಿಕ ನೆಲೆಗಳನ್ನು ಅಧಿಪತ್ಯದ ಭೂಮಿಕೆಗಳಂತೆಯೇ ಪರಿಗಣಿಸಿದ್ದಾರೆ. ಅಷ್ಟೇಕೆ ಬ್ರಿಟೀಷ್ ವಸಾಹತು ಆಳ್ವಿಕೆಯಲ್ಲೂ ಇದೇ ವಿದ್ಯಮಾನವನ್ನು ಕಾಣಬಹುದು. ಕಾರಣ ಸ್ಪಷ್ಟ. ಭಾರತದಲ್ಲಿ ಜನಸಾಮಾನ್ಯರನ್ನು ಒಂದುಗೂಡಿಸಲು ಧರ್ಮ ಎಷ್ಟು ಸಹಕಾರಿಯಾಗುವುದೋ , ಜನರಲ್ಲಿ ಒಡಕು ಉಂಟುಮಾಡಲೂ ಅಷ್ಟೇ ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ದೇವಾಲಯ, ಮಸೀದಿ, ಇಗರ್ಜಿ, ಮಠ ಮಾನ್ಯಗಳು ಕೇಂದ್ರ ಬಿಂದುಗಳಾಗುತ್ತವೆ. ಸ್ವತಂತ್ರ ಭಾರತದ ಇತಿಹಾಸದಲ್ಲೇ, ವಿಶ್ವದ ಅತಿ ದೊಡ್ಡ ಪ್ರಜಾತಂತ್ರ ರಾಷ್ಟ್ರಎಂಬ ಹೆಗ್ಗಳಿಕೆಯನ್ನು ಹೊತ್ತುಕೊಂಡೇ, ಈ ಹೀನ ರಾಜಕಾರಣವನ್ನು ಕಂಡಿದ್ದೇವೆ. ಖಾಲಿಸ್ತಾನ ಚಳುವಳಿ, ಶಹಬಾನೋ ಪ್ರಕರಣ, ಬಾಬ್ರಿ ಮಸೀದಿಯ ಧ್ವಂಸ, ರಾಮಮಂದಿರ ವಿವಾದ, ಈದ್ಗಾ ಮೈದಾನದ ವಿವಾದ, ಬಾಬಾ ಬುಡನ್‌ಗಿರಿ ವಿವಾದ ಗೋದ್ರಾ , ಗುಜರಾತ್ ಮತ್ತು ಗೋರಕ್ಷಣೆಯ ಹಪಾಹಪಿ ಹೀಗೆ ಧಾರ್ಮಿಕ ನೆಲೆಗಳು ಮತ್ತು ಮತೀಯ ಅಸ್ಮಿತೆಗಳು ರಾಜಕೀಯ ಅಧಿಪತ್ಯಕ್ಕೆ ಚಿಮ್ಮುಹಲಗೆಗಳಾಗಿರುವುದನ್ನು ಕಂಡಿದ್ದೇವೆ. ಇದೇ ಧೋರಣೆಯನ್ನು ಟಿಪ್ಪುವಿನಂತಹ ಎರಡು ಶತಮಾನಗಳ ಹಿಂದಿನ ಸಾಮ್ರಾಟನಲ್ಲಿ ಕಂಡರೆ ಅಚ್ಚರಿಯೇಕೆ. ಸ್ವಾಭಾವಿಕ ಎನಿಸಬೇಕಲ್ಲವೇ ?
೧೮ನೆಯ ಶತಮಾನದ ಸಾಮ್ರಾಟನೊಬ್ಬನನ್ನು ಸಮಕಾಲೀನ ಪ್ರಜಾತಂತ್ರದ ನೆಲೆಯಲ್ಲಿಟ್ಟು, ಆಧುನಿಕ ಆಡಳಿತ ವ್ಯವಸ್ಥೆಯ ಮಾನದಂಡಗಳ ಮುಖೇನ ವ್ಯಾಖ್ಯಾನಿಸುವುದು ಸಮರ್ಥನೀಯವಲ್ಲ. ಏಕೆಂದರೆ ಟಿಪ್ಪು ಪ್ರಜಾತಂತ್ರ ವ್ಯವಸ್ಥೆಯ ಹರಿಕಾರನಲ್ಲ. ಅಥವಾ ಸಮತಾ ಸಮಾಜದ ಪ್ರತಿಪಾದಕನೂ ಆಗಿರಲಿಲ್ಲ. ಆದರೆ ಇತರ ರಾಜರುಗಳಂತೆ ಸಾಮಾಜಿಕವಾಗಿ ನಿಷ್ಕಿçಯನೂ ಆಗಿರಲಿಲ್ಲ. ಒಬ್ಬ ಸಾಮ್ರಾಟನಾಗಿ ಟಿಪ್ಪು ಕೈಗೊಂಡ ಜನಾನುರಾಗಿ ಕ್ರಮಗಳು ಸಮಕಾಲೀನ ರಾಜಕಾರಣಕ್ಕೆ ಮಾರ್ಗದರ್ಶಕವಾಗುವಂತಿರುವುದು ಚಾರಿತ್ರಿಕ ಸತ್ಯ. ಅವನ ಆಳ್ವಿಕೆಯಲ್ಲಿ ಎಷ್ಟೇ ಜನಪರ ಕಾಳಜಿ ಕಂಡುಬಂದಿದ್ದರೂ ಒಬ್ಬ ಸಾಮ್ರಾಟ ತನ್ನ ಸಾಮ್ರಾಜ್ಯ ವಿಸ್ತರಣೆಗೆ ಅನುಸರಿಸಬೇಕಾದ ಎಲ್ಲ ಮಾರ್ಗಗಳನ್ನೂ ಟಿಪ್ಪು ಅನುಸರಿಸಿರಬಹುದು. ತಾನು ಆಕ್ರಮಿಸಿದ ಪ್ರದೇಶದ ಮೇಲೆ ಅಧಿಪತ್ಯ ಸಾಧಿಸಲು ಪೂಜಾಸ್ಥಳಗಳನ್ನು ಆಕ್ರಮಿಸುವುದು, ಧ್ವಂಸ ಮಾಡುವುದು, ಜನಸಾಮಾನ್ಯರನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳಲು ಕೆಲವು ವಾಮಮಾರ್ಗಗಳನ್ನು ಅನುಸರಿಸುವುದು ರಾಜಪರಂಪರೆಯ ವಿಶಿಷ್ಟ ಲಕ್ಷಣ. ಮಲಬಾರ್ ಮತ್ತು ಕೊಡಗು ಪ್ರಾಂತ್ಯಗಳಲ್ಲಿ ಟಿಪ್ಪು ನಡೆಸಿದ ಮತಾಂತರ ಮತ್ತು ಹತ್ಯಾಕಾಂಡಗಳನ್ನೇ ಪ್ರಧಾನವಾಗಿ ನೋಡುವ ಮುನ್ನ ಈ ಪ್ರಾಂತ್ಯಗಳಲ್ಲಿ ಬೇರೂರಿದ್ದ ಪಾಳೆಗಾರಿಕೆ ಮತ್ತು ಭೂಮಾಲೀಕರ ಅಟ್ಟಹಾಸವನ್ನು ಟಿಪ್ಪು ಮಟ್ಟ ಹಾಕಿದ್ದನ್ನೂ ಗಮನಿಸಬೇಕಾಗುತ್ತದೆ. ಇಷ್ಟಕ್ಕೂ ಮತಾಂತರವನ್ನು ಅಪರಾಧ ಎಂದೇಕೆ ಪರಿಗಣಿಸಬೇಕು ?
ಇತಿಹಾಸದ ಯಾವುದೇ ಕಾಲಘಟ್ಟದಲ್ಲೂ, ಯಾವುದೇ ಸಾಮ್ರಾಟನೂ ಎಲ್ಲ ಜನಸಮುದಾಯಗಳನ್ನು ಸಂತೃಪ್ತಿಗೊಳಿಸಿರುವ ಉದಾಹರಣೆಗಳಿಲ್ಲ. ಹಾಗಾಗಿ ಒಂದು ನಿರ್ದಿಷ್ಟ ಸಾಮುದಾಯಿಕ ದೃಷ್ಟಿಕೋನದಿಂದ ಇತಿಹಾಸವನ್ನು ಕೆದಕಿ ಒಬ್ಬ ಜನಾನುರಾಗಿ ಸಾಮ್ರಾಟನನ್ನು ಖಳನಾಯಕನಂತೆ ಬಿಂಬಿಸುವುದು ಸಮರ್ಥನೀಯವಲ್ಲ. ಬ್ರಿಟೀಷರ ವಿರುದ್ಧ ಸೊಲ್ಲೆತ್ತದೆ ತಮ್ಮ ಮೈಸೂರು ಸಂಸ್ಥಾನದ ಅಸ್ತಿತ್ವ ಉಳಿಸಿಕೊಳ್ಳಲು ರಾಜೀ ಮಾಡಿಕೊಂಡ ಮೈಸೂರು ಒಡೆಯರು, ಸ್ವಾತಂತ್ರ್ಯ ನಂತರ ಭಾರತದೊಡನೆ ವಿಲೀನಗೊಳ್ಳುವುದನ್ನೂ ವಿರೋಧಿಸಿ ರಾಮಸ್ವಾಮಿ ಎಂಬ ಮೈಸೂರಿನ ಯುವಕನ ಬಲಿದಾನ ನೀಡಿದ್ದು ಈಗ ಇತಿಹಾಸ. ಆದರೂ ಒಡೆಯರ್ ಆಡಳಿತದ ಅನೇಕ ಜನಪರ ಯೋಜನೆಗಳು, ಚಿಂತನೆಗಳನ್ನು ನಾವು ನೆನೆಯುತ್ತೇವೆ. ಒಡೆಯರ್ ವಂಶಜರಿಗೆ ವ್ಯತಿರಿಕ್ತವಾಗಿ ಬ್ರಿಟೀಷರ ವಿರುದ್ಧ ವೀರೋಚಿತ ಹೋರಾಟ ನಡೆಸಿ ಹುತಾತ್ಮನಾದ ಟಿಪ್ಪು ಏಕೆ ಸ್ಮರಣೀಯನಾಗಬಾರದು ?
ಸರ್ಕಾರ ಟಿಪ್ಪು ಜಯಂತಿ ಆಚರಿಸುವುದು ಒಂದು ರಾಜಕೀಯ ತಂತ್ರಗಾರಿಕೆಯಷ್ಟೆ. ದುರಂತವೆಂದರೆ ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮಕ್ಕೂ ಮುನ್ನವೇ ಬ್ರಿಟೀಷರ ವಿರುದ್ಧ ಸ್ವಾತಂತ್ರ್ಯದ ಕಹಳೆ ಮೊಳಗಿದ ಒಬ್ಬ ಸಾಮ್ರಾಟನನ್ನು ಮತೀಯ ಅಸ್ಮಿತೆಯಿಂದ ನೋಡಲಾಗುತ್ತಿದೆ. ಆಡಳಿತಾರೂಢ ಪಕ್ಷಕ್ಕೆ ಟಿಪ್ಪು ಮುಸ್ಲಿಂ ಪ್ರತಿನಿಧಿಯಾಗಿ ಕಂಡರೆ ಸಂಘಪರಿವಾರಕ್ಕೆ ಹಿಂದೂ ವಿರೋಧಿಯಾಗಿ ಕಾಣುತ್ತಾನೆ. ಈ ಎರಡೂ ನೆಲೆಗಳಲ್ಲಿ ಸಮಾನವಾದ ಅಂಶವೆಂದರೆ ಮತೀಯ ರಾಜಕಾರಣವಷ್ಟೆ. ಆಧುನಿಕ ಭಾರತದಲ್ಲಿ ಜಯಂತಿಗಳ ಆಚರಣೆಗಳು ಜಾತಿ ಮತ್ತು ಮತೀಯ ನೆಲೆಯಲ್ಲೇ ಅನಾವರಣಗೊಳ್ಳುತ್ತಿರುವುದು ವಾಸ್ತವ. ಇತಿಹಾಸದ ಹೆಜ್ಜೆ ಗುರುತುಗಳನ್ನು ವ್ಯವಸ್ಥಿತವಾಗಿ ಅಳಿಸಿಹಾಕುವ ಪ್ರಯತ್ನಗಳಿಗೆ ಟಿಪ್ಪು ಸಹ ಬಲಿಯಾಗುತ್ತಿರುವುದು ದುರಂತವಷ್ಟೆ. ಟಿಪ್ಪು ಸುಲ್ತಾನನನ್ನು ಅಳಿಸಿಹಾಕಬಹುದು ಆದರೆ ಆತನ ಹೆಜ್ಜೆ ಗುರುತುಗಳನ್ನು ಅಳಿಸಿಹಾಕುವುದು ಸಾಧ್ಯವಿಲ್ಲ.