ದಾವಣಗೆರೆಯಲ್ಲಿ ಜರುಗಿದ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ 75ನೆಯ ಜನ್ಮದಿನೋತ್ಸವದ ನಂತರ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿದೆ. ಇಡೀ ರಾಜ್ಯದ ಜನತೆ ಮಳೆಗಾಲದ ಅವಾಂತರಗಳಿಂದ ಜರ್ಝರಿತರಾಗಿದ್ದಾರೆ, ಮಳೆಹಾನಿಯಿಂದ ರಾಜ್ಯದ ಎಲ್ಲ ಜಿಲ್ಲೆಗಳೂ ತೀವ್ರ ಸಂಕಷ್ಟಕ್ಕೀಡಾಗಿವೆ, ಅನೇಕ ದುರಂತಗಳು ಸಂಭವಿಸಿವೆ, 50ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ, ಈ ವಾತಾವರಣದಲ್ಲಿ ಇಂತಹ ಒಂದು ಸಾರ್ವಜನಿಕ ತೋರಿಕೆಯ ಉತ್ಸವ ಅಗತ್ಯವಿತ್ತೇ ಎಂಬ ಪ್ರಶ್ನೆ ಕೇವಲ ರಾಜಕೀಯ ಟೀಕೆಯಾಗಿ ಮಾತ್ರ ಕಾಣಲು ಸಾಧ್ಯ. ಸಿದ್ಧರಾಮೋತ್ಸವದಿಂದ ವಿಚಲಿತವಾಗಿರುವ ರಾಜ್ಯ ಬಿಜೆಪಿ ಮತ್ತು ಆಡಳಿತಾರೂಢ ಸರ್ಕಾರ, ಮುಂಬರುವ ಚುನಾವಣೆಗಳ ದೃಷ್ಟಿಯಿಂದ ಆಂತರಿಕ ದುರಸ್ತಿಗೆ ಮುಂದಾಗಿರುವುದನ್ನು ಗಮನಿಸಿದರೆ, ಸಿದ್ಧರಾಮಯ್ಯನವರ ಜನ್ಮದಿನೋತ್ಸವ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿರುವುದು ಸ್ಪಷ್ಟವಾಗುತ್ತದೆ. ಕಾಂಗ್ರೆಸ್ ಪಕ್ಷದೊಳಗಿನ ಅಧಿಕಾರ ಹಂಚಿಕೆಯ ಆಂತರಿಕ ಸಂಘರ್ಷದ ನಡುವೆಯೇ, ಕರ್ನಾಟಕದ ಜನತೆಗೆ ಒಂದು ಭರವಸೆಯನ್ನು ನೀಡುವ ಮಟ್ಟಿಗೆ ಈ ಉತ್ಸವ ಪ್ರಭಾವ ಬೀರಿರುವುದು ಸ್ಪಷ್ಟ.
ಬೂರ್ಷ್ವಾ ರಾಜಕಾರಣದಲ್ಲಿ ಪ್ರಭಾವಿ ನಾಯಕರನ್ನು ವೈಭವೀಕರಿಸುವ ಮೂಲಕ, ಪಕ್ಷದ ಸಾರ್ವಜನಿಕ ಅಸ್ತಿತ್ವವನ್ನು ನಿರೂಪಿಸುವುದು ಮತ್ತು ಸಾಮಾನ್ಯ ಜನರನ್ನು ಆಕರ್ಷಿಸುವುದು ವಿಶಿಷ್ಟವೇನೂ ಅಲ್ಲ. ಪ್ರಬಲ ನಾಯಕ ಮತ್ತು ದಕ್ಷ ಆಡಳಿತಗಾರ ಈ ಎರಡು ಸೂತ್ರಗಳನ್ನೂ ಅನ್ವಯಿಸಬಹುದಾದ ರಾಜಕೀಯ ನಾಯಕರು ಮಾತ್ರವೇ ಭಾರತದ ವರ್ತಮಾನದ ರಾಜಕಾರಣದಲ್ಲಿ ಜನಮನ್ನಣೆ ಗಳಿಸಲು ಸಾಧ್ಯವಾಗುತ್ತದೆ. ತಾತ್ವಿಕವಾಗಿ ಜಾತಿ ರಾಜಕಾರಣದ ಬೇರುಗಳು ಶಿಥಿಲವಾಗಿ, ಪ್ರಜಾಸತ್ತೆಯ ಬೇರುಗಳು ಗಟ್ಟಿಯಾಗುವುದು ಅಪೇಕ್ಷಣೀಯವಾದರೂ, ಭಾರತದ ಬಂಡವಾಳಶಾಹಿ ಅರ್ಥವ್ಯವಸ್ಥೆ ಮತ್ತು ಅರೆ ಊಳಿಗಮಾನ್ಯ ಸಾಮಾಜಿಕ ವ್ಯವಸ್ಥೆಯಲ್ಲಿ ಜಾತಿ ಸಮೀಕರಣವೇ ರಾಜಕೀಯ ಅಧಿಕಾರಕ್ಕೆ ನಿರ್ಣಾಯಕವಾಗಿರುವುದು ಸುಡು ವಾಸ್ತವ. ಪ್ರಸ್ತುತ ಸಂದರ್ಭದಲ್ಲಿ ಪ್ರಬಲ ಸಮುದಾಯವನ್ನು ಎರಡು ನೆಲೆಯಲ್ಲಿ ವಿಶ್ಲೇಷಿಸಲಾಗುತ್ತಿದೆ. ಉತ್ಪಾದನೆಯ ಮೂಲಗಳನ್ನು ಮತ್ತು ಉತ್ಪಾದನಾಸಾಧನಗಳನ್ನು ನಿಯಂತ್ರಿಸುವ, ಮಾರುಕಟ್ಟೆ ಆರ್ಥಿಕತೆಗೆ ಪೂರಕವಾಗಿ ಸ್ಪಂದಿಸುವ ಸಾಂಸ್ಥಿಕ ನೆಲೆ ಪ್ರಧಾನವಾಗುತ್ತದೆ. ಮತ್ತೊಂದು ನೆಲೆಯಲ್ಲಿ ಬಂಡವಾಳಶಾಹಿ ಅಭಿವೃದ್ಧಿ ಪಥದಲ್ಲಿ ಸಮೃದ್ಧ ಸಮಾಜವನ್ನು ನಿರ್ಮಿಸುವ ಭರವಸೆಯೊಂದಿಗೆ ಸಮುದಾಯದ ಮತದಾರರಲ್ಲಿ ( ಸಮಸ್ತ ಜನತೆಯಲ್ಲೂ ಸಹ) ವಿಶ್ವಾಸ/ಭ್ರಮೆ ಮೂಡಿಸುವ ಮೂಲಕ ಜನಬೆಂಬಲವನ್ನು ಕ್ರೋಢೀಕರಿಸುವುದು ಅನುಷಂಗಿಕವಾದರೂ, ಚುನಾವಣೆಯ ಸಂದರ್ಭದಲ್ಲಿ ನಿರ್ಣಾಯಕವಾಗುತ್ತದೆ.
ಕರ್ನಾಟಕದ ರಾಜಕಾರಣ ತನ್ನ ಸಾಂವಿಧಾನಿಕ-ಸಾಮಾಜಿಕ ಮೌಲ್ಯಗಳ ಕವಚವನ್ನು ಕಳೆದುಕೊಂಡು, ಬಂಡವಾಳಶಾಹಿಯ ಮಾರುಕಟ್ಟೆ ಆರ್ಥಿಕತೆ ಮತ್ತು ಅದಕ್ಕೆ ಪೂರಕವಾದಂತಹ ಸಂಪನ್ಮೂಲ ಬಳಕೆಯ ಹಾದಿಯಲ್ಲಿ ಅಧಿಕಾರ ಕೇಂದ್ರಗಳನ್ನು ರೂಪಿಸುತ್ತಿರುವುದು ಸ್ಪಷ್ಟವಾಗುತ್ತಿದೆ. ಇದರೊಂದಿಗೆ ಬಿಜೆಪಿಯ ಹಿಂದುತ್ವ ರಾಜಕಾರಣವು ಕೋಮು ಧೃವೀಕರಣದ ಮೂಲಕ ತನ್ನ ಕಾರ್ಯಸೂಚಿಯನ್ನು ಕಾರ್ಯಗತಗೊಳಿಸಲು ಯತ್ನಿಸುತ್ತಿದೆ. ಹಿಂದುತ್ವ ರಾಜಕಾರಣವು ಮೂಲತಃ ನವ ಉದಾರವಾದದ ಮಾರುಕಟ್ಟೆ ಆರ್ಥಿಕತೆಯೊಂದಿಗೆ ಸಮನ್ವಯ ಸಾಧಿಸುವ ಗುರಿಯನ್ನು ಹೊಂದಿರುವುದರಿಂದ, ಕರ್ನಾಟಕದಲ್ಲಿ ಕಾರ್ಪೋರೇಟ್ ಮಾರುಕಟ್ಟೆಯನ್ನು ಪೋಷಿಸಲು ನೆರವಾಗುವ ಕೃಷಿ ನೀತಿ, ಭೂ ಸ್ವಾಧೀನ ನೀತಿ, ಅರಣ್ಯ ನೀತಿ, ಕಾರ್ಮಿಕ ಸಂಹಿತೆ ಮತ್ತು ಶಿಕ್ಷಣ ನೀತಿಗಳನ್ನು ವ್ಯವಸ್ಥಿತವಾಗಿ ಜಾರಿಗೊಳಿಸಲಾಗುತ್ತಿದೆ. ಈ ಮಾರುಕಟ್ಟೆ ನೀತಿಗಳನ್ನು ಜಾರಿಗೊಳಿಸಲು ಬಂಡವಾಳಶಾಹಿ ವ್ಯವಸ್ಥೆಗೆ ಪ್ರಬಲ-ದಕ್ಷ ನಾಯಕತ್ವದ ಅವಶ್ಯಕತೆ ಇದೆ. ಈ ಎರಡೂ ಲಕ್ಷಣಗಳನ್ನು ಸಾಪೇಕ್ಷವಾಗಿಯೇ ನೋಡಿದಾಗ, ಜನಸಾಮಾನ್ಯರನ್ನು ಹತೋಟಿಯಲ್ಲಿಡುವ ಒಂದು ಹೊಸ ಆಡಳಿತ ಪರಂಪರೆ ಸ್ಪಷ್ಟವಾಗಿ ಕಾಣಲು ಸಾಧ್ಯ.
ಈ ಮಾರುಕಟ್ಟೆ ನೀತಿಗಳು ಜನಸಾಮಾನ್ಯರನ್ನು ದಾರಿದ್ರ್ಯದಂಚಿಗೆ ದೂಡುತ್ತಿದ್ದರೂ ಸಹ, ತಮ್ಮ ನಿತ್ಯ ಜೀವನದ ಸಂಕಷ್ಟ ಮತ್ತು ಸವಾಲುಗಳಿಗೆ ಪರಿಹಾರೋಪಾಯಗಳನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ. ಮಾರುಕಟ್ಟೆ ವ್ಯವಸ್ಥೆ ಸೃಷ್ಟಿಸುವ ಬಡವ-ಶ್ರೀಮಂತರ ನಡುವಿನ ಅಂತರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದರೂ, ರೂಪಾಂತರಗೊಳ್ಳುತ್ತಿರುವ ತಾರತಮ್ಯದ ನೀತಿಗಳು ಮತ್ತು ದಬ್ಬಾಳಿಕೆ-ದೌರ್ಜನ್ಯದ ಆಯಾಮಗಳನ್ನು ಗುರುತಿಸುವಲ್ಲಿ ಸಮಾಜ ವಿಫಲವಾಗಿರುವುದನ್ನು ತಳಮಟ್ಟದಿಂದಲೇ ಗುರುತಿಸಬಹುದು. ಒಂದು ವಿಘಟಿತ ಸಮಾಜದಲ್ಲಿ ಮಾತ್ರವೇ ಇಂತಹ ವಿಲಕ್ಷಣಗಳು ಕಾಣಲು ಸಾಧ್ಯ ಎಂಬ ವಾಸ್ತವಾಂಶದ ನೆಲೆಯಲ್ಲಿ ನೋಡಿದಾಗ, ಕರ್ನಾಟಕದ ರಾಜಕಾರಣದಲ್ಲಿ ತೀವ್ರವಾಗುತ್ತಿರುವ ಕೋಮು ಧೃವೀಕರಣ ಮತ್ತು ಮತಧರ್ಮ ಆಧಾರಿತ ಸಾಂಸ್ಕೃತಿಕ ಬೆಳವಣಿಗೆಗಳನ್ನು ಅರ್ಥಮಾಡಿಕೊಳ್ಳುವುದು ಸುಲಭಸಾಧ್ಯ. ಜೀವನೋಪಾಯದ ಮಾರ್ಗಗಳಿಂದ, ಮೂಲಭೂತ ಸಾಂವಿಧಾನಿಕ ಸವಲತ್ತುಗಳಿಂದ ವಂಚಿತರಾಗುತ್ತಿದ್ದರೂ ಸಾಮಾನ್ಯ ಜನತೆ ತಮ್ಮ ಶತ್ರುವನ್ನು ಮಾರುಕಟ್ಟೆಯಲ್ಲಿ ಕಾಣದೆ, ಅನ್ಯ ಮತಧರ್ಮದಲ್ಲೋ, ಧರ್ಮೀಯರಲ್ಲೋ ಕಾಣುವಂತಹ ಒಂದು ಭ್ರಮಾತ್ಮಕ ವಾತಾವರಣವನ್ನು ವ್ಯವಸ್ಥಿತವಾಗಿಯೇ ಸೃಷ್ಟಿಸಲಾಗಿದೆ. ಭ್ರಮಾಧೀನ ಜನತೆ ಸಹಜವಾಗಿಯೇ ಜಾತಿಮತಗಳ ಅಸ್ಮಿತೆಗಳ ಮೂಲಕ ತಮ್ಮ ಅಸ್ತಿತ್ವವನ್ನು ಕಾಪಾಡಿಕೊಳ್ಳಲು ಯತ್ನಿಸುತ್ತಿದ್ದಾರೆ.
ಈ ಸಂದಿಗ್ಧತೆಯ ನಡುವೆಯೇ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ 2023ರ ಚುನಾವಣೆಗಳಲ್ಲಿ ಮರಳಿ ಅಧಿಕಾರಕ್ಕೆ ಬರುವ ಪೂರ್ಣ ವಿಶ್ವಾಸದೊಂದಿಗೆ ಸಿದ್ಧರಾಮೋತ್ಸವ, ಅಮೃತ ಮಹೋತ್ಸವದ ಕಾಲ್ನಡಿಗೆ, ಪಾದಯಾತ್ರೆಗಳ ಮೂಲಕ ಪರಿಹಾರೋಪಾಯಗಳನ್ನು ಶೋಧಿಸುತ್ತಿದ್ದಾರೆ. ಚುನಾವಣಾ ಫಲಿತಾಂಶಗಳನ್ನು ಬದಿಗಿಟ್ಟು ನೋಡಿದಾಗ, ಕರ್ನಾಟಕದ ಜನತೆಗೆ ಒಂದು ಪರ್ಯಾಯ ಆಡಳಿತ ವ್ಯವಸ್ಥೆ ಅತ್ಯವಶ್ಯವಾಗಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ನೋಡಿದಾಗ ಸಿದ್ಧರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷದ ಮುಂದಿನ ಸವಾಲುಗಳು ಜಟಿಲವಾಗಿಯೇ ಕಾಣುತ್ತವೆ. ಸಾಮಾಜಿಕವಾಗಿ ವಿಘಟಿತವಾದ, ಸಾಂಸ್ಕೃತಿಕವಾಗಿ ಭಗ್ನಗೊಂಡ ಮತ್ತು ಸಾಮಾನ್ಯರ ದೃಷ್ಟಿಯಿಂದ ಆರ್ಥಿಕವಾಗಿ ಶಿಥಿಲವಾಗುತ್ತಿರುವ ಒಂದು ರಾಜ್ಯಕ್ಕೆ ಪ್ರಜಾಸತ್ತಾತ್ಮಕ ಮಾರ್ಗದಲ್ಲಿ ಕಾಯಕಲ್ಪ ಒದಗಿಸಬೇಕಾದ ಗುರುತರ ಹೊಣೆಗಾರಿಕೆಯನ್ನು ಕಾಂಗ್ರೆಸ್ ಪಕ್ಷ ಹೊರಬೇಕಾಗುತ್ತದೆ. ಕಾಂಗ್ರೆಸ್ ಪಕ್ಷದಲ್ಲಿ ಮೂಲತಃ ಈ ಕ್ಷಮತೆ ಅಥವಾ ಧೋರಣೆ ಇದೆಯೋ ಇಲ್ಲವೋ ಎನ್ನುವ ಜಿಜ್ಞಾಸೆಯೊಂದಿಗೇ, ಕರ್ನಾಟಕದ ಮತದಾರರು ಮುಂದಿನ ಸರ್ಕಾರವನ್ನು ಆಯ್ಕೆ ಮಾಡಬೇಕಿದೆ.
ಕರ್ನಾಟಕದ ಪಾಲಿಗೆ ಇಂದು ಬದಲಿ ಸರ್ಕಾರಕ್ಕಿಂತಲೂ ಹೆಚ್ಚು ಅವಶ್ಯವಾಗಿರುವುದು ಪರ್ಯಾಯ ಆಡಳಿತ ನೀತಿ ಮತ್ತು ವ್ಯವಸ್ಥೆ. ಆಡಳಿತಾರೂಢ ಬಿಜೆಪಿ ಸರ್ಕಾರ ತನ್ನ ಕಾರ್ಯಸೂಚಿಗನುಗುಣವಾಗಿ ಹೊಸ ಶಿಕ್ಷಣ ನೀತಿಯನ್ನು ಜಾರಿಗೊಳಿಸಿದೆ. ಹಿಂದುತ್ವ ರಾಜಕಾರಣದ ನೆಲೆಯಲ್ಲಿ ಶಾಲಾ ಪಠ್ಯಕ್ರಮದ ಪರಿಷ್ಕರಣೆಯನ್ನೂ ಸಹ ಬಹುಪಾಲು ಯಶಸ್ವಿಯಾಗಿಯೇ ಮಾಡಿದೆ. ಕಾರ್ಪೋರೇಟ್ ಮಾರುಕಟ್ಟೆ ಮತ್ತು ಬಂಡವಳಿಗರಿಗೆ ನೆರವಾಗುವಂತೆ ಭೂಸ್ವಾಧೀನ ಕಾಯ್ದೆಯನ್ನು ತಿದ್ದುಪಡಿ ಮಾಡಿದೆ. ಕೇಂದ್ರ ಸರ್ಕಾರವು ನೂತನ ಕೃಷಿ ಕಾಯ್ದೆಗಳನ್ನು ಹಿಂಪಡೆದರೂ, ಕರ್ನಾಟಕ ಸರ್ಕಾರ ಹೊಸ ಕಾಯ್ದೆಯನ್ನು ವ್ಯವಸ್ಥಿತವಾಗಿ ಜಾರಿಗೊಳಿಸುತ್ತಿದೆ. ಪಶ್ಚಿಮ ಘಟ್ಟಗಳ ರಕ್ಷಣೆಗಾಗಿ ಅತಿಸೂಕ್ಷ್ಮ ಪ್ರದೇಶಗಳನ್ನು ಗುರುತಿಸುವ ಕಸ್ತೂರಿ ರಂಗನ್ ವರದಿಗೆ ವ್ಯಕ್ತವಾಗುತ್ತಿರುವ ಒಮ್ಮತದ ರಾಜಕೀಯ ವಿರೋಧ ಇದನ್ನೇ ಸೂಚಿಸುತ್ತದೆ. ಹೊಸ ಶಿಕ್ಷಣ ನೀತಿಯು ರಾಜ್ಯದ ಶೈಕ್ಷಣಿಕ ವಲಯದಲ್ಲಿ ಮಹತ್ತರವಾದ ಬದಲಾವಣೆಗಳನ್ನು ಜಾರಿಗೊಳಿಸಲಿದ್ದು, ಪ್ರಾಥಮಿಕ ಹಂತದಿಂದಲೇ ಶಿಕ್ಷಣವನ್ನು ವಾಣಿಜ್ಯೀಕರಣಗೊಳಿಸುವ , ಉನ್ನತ ಶಿಕ್ಷಣವನ್ನು ಕಾರ್ಪೋರೇಟೀಕರಣಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಒಂದು ಹೆಜ್ಜೆ ಮುಂದಿದೆ.
ಮತ್ತೊಂದೆಡೆ ಮತೀಯವಾದ, ಮತಾಂಧತೆ ಮತ್ತು ಕೋಮುಧೃವೀಕರಣದಲ್ಲಿ ಉತ್ತರಪ್ರದೇಶವನ್ನೂ ಮೀರಿಸುತ್ತಿರುವ ಕರ್ನಾಟಕದ ಸಾಮಾಜಿಕ-ಸಾಂಸ್ಕೃತಿಕ ವಾತಾವರಣ, ಈ ರಾಜ್ಯ ಇಷ್ಟು ವರ್ಷಗಳ ಕಾಲ ಕಾಪಿಟ್ಟುಕೊಂಡು ಬಂದ ಒಂದು ಸಮನ್ವಯದ ಸಂಸ್ಕೃತಿಗೆ ವ್ಯತಿರಿಕ್ತವಾಗಿದೆ. ಒಂದು ಸೌಹಾರ್ದಯುತ ಸಮಾಜವು ತನ್ನ ಸಾಂಸ್ಕೃತಿಕ ನೆಲೆಯನ್ನು ಕಳೆದುಕೊಂಡರೆ ಏನಾಗುತ್ತದೆ ಎನ್ನುವುದನ್ನು ಕರಾವಳಿಯಲ್ಲಿ ನಡೆಯುತ್ತಿರುವ ಘಟನೆಗಳು ಸ್ಪಷ್ಟವಾಗಿ ನಿರೂಪಿಸುತ್ತಿವೆ. ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಡುವಿನ ಸಮನ್ವಯದ ಬದುಕಿಗೆ ಭಂಗ ತರುವಂತಹ ಕೆಲವೇ ಸಂಘಟನೆಗಳು ರಾಜ್ಯದಲ್ಲಿ ಸಕ್ರಿಯವಾಗಿದ್ದು, ಎರಡೂ ಸಮುದಾಯಗಳಲ್ಲಿನ ಯುವ ಸಮೂಹವು ಮತಾಂಧತೆ ಮತ್ತು ಮತೀಯ ಸಂಕುಚಿತ ಭಾವನೆಗಳಿಗೆ ಬಲಿಯಾಗಿರುವುದು ಇಡೀ ರಾಜ್ಯದಲ್ಲಿ ಪ್ರಕ್ಷುಬ್ಧ ವಾತಾವರಣವನ್ನು ಸೃಷ್ಟಿಸಿದೆ. ಇತ್ತೀಚೆಗೆ ನಡೆದ ಸರಣಿ ಹತ್ಯೆಗಳು ಮತ್ತು ಘಟನೆಗಳು ಇದಕ್ಕೆ ಸಾಕ್ಷಿಯಾಗಿವೆ. ಆಡಳಿತ ವೈಫಲ್ಯ ಮತ್ತು ಅಧಿಕಾರಾರೂಢ ಪಕ್ಷದ ಸಂಕುಚಿತ ರಾಜಕಾರಣದ ಹೊರತಾಗಿಯೂ ಸಮಾಜದಲ್ಲಿ ಬೇರೂರುತ್ತಿರುವ ಜಾತಿ ಮತಗಳ ವೈಮನಸ್ಯ ದಿನದಿಂದ ದಿನಕ್ಕೆ ತೀಕ್ಷ್ಣವಾಗುತ್ತಿರುವುದು ಚಿಂತೆಗೀಡುಮಾಡುವ ವಿಚಾರವೂ ಆಗಿದೆ.
ಸಾಮಾಜಿಕ-ಸಾಂಸ್ಕೃತಿಕ ನೆಲೆಯಲ್ಲಿ ಸಮಾಜದಲ್ಲಿ ಬೇರೂರುತ್ತಿರುವ ಈ ಮನಸ್ಥಿತಿಯನ್ನು, ಅಸಹಿಷ್ಣುತೆಯನ್ನು, ಮತೀಯ ದ್ವೇಷ ಮತ್ತು ಜಾತಿ ತಾರತಮ್ಯಗಳನ್ನು ಹೋಗಲಾಡಿಸುವ ಸಾಮಾಜಿಕ ಜವಾಬ್ದಾರಿಯೂ ರಾಜಕೀಯ ಪಕ್ಷಗಳ ಮೇಲಿರುತ್ತದೆ. ಈ ಕಟು ವಾಸ್ತವವನ್ನು ಜಾತ್ಯತೀತ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಅರ್ಥಮಾಡಿಕೊಳ್ಳಬೇಕಿದೆ. ಮತಾಂಧತೆಯಾಗಲೀ, ಜಾತಿ ವೈಷಮ್ಯಗಳಾಗಲೀ ಶೂನ್ಯದಲ್ಲಿ ಉದ್ಭವಿಸುವುದಿಲ್ಲ. ಆರ್ಥಿಕ ಅಸಮಾನತೆ ಮತ್ತು ಶೋಷಣೆಯ ನೆಲೆಯಲ್ಲಿ ಸಮಾಜದಲ್ಲಿ ಕಂಡುಬರುವ ಒಳಬೇಗುದಿಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಲು ಮತೀಯ ಶಕ್ತಿಗಳು ಸದಾ ಉತ್ಸುಕವಾಗಿಯೇ ಇರುತ್ತವೆ. ಈ ಒಳಬೇಗುದಿಯು ಆಕ್ರೋಶವಾಗಿ ರೂಪುಗೊಂಡಾಗ ಪ್ರವೀಣ್ ನೆಟ್ಟಾರು, ಫಾಜಿಲ್, ಹರ್ಷ ಇಂತಹ ಯುವಕರು ಬಲಿಪಶುಗಳಾಗುತ್ತಾರೆ. ಕರ್ನಾಟಕದ ಕೋಮು ರಾಜಕಾರಣಕ್ಕೆ ಬಲಿಯಾಗುತ್ತಿರುವ ತಳಸಮುದಾಯದ ಯುವಕರತ್ತ ಒಮ್ಮೆ ನೋಡಿದರೆ ಈ ವಾಸ್ತವವನ್ನು ಸುಲಭವಾಗಿ ಗ್ರಹಿಸಬಹುದು. ಅಸಮಾನತೆ ಮತ್ತು ಶೋಷಣೆಯ ಮೂಲ ಧಾತು ನಮ್ಮ ರಾಜಕೀಯ ವ್ಯವಸ್ಥೆ ಪೋಷಿಸುತ್ತಿರುವ ಮಾರುಕಟ್ಟೆ ಆರ್ಥಿಕತೆಯಲ್ಲೇ ಇದೆ ಎನ್ನುವುದನ್ನು ಗುರುತಿಸದೆ ಹೋದರೆ, ಯಾವುದೇ ಪರ್ಯಾಯದ ಧ್ವನಿ ಕೇವಲ ಅಲಂಕಾರಿಕವಾಗಿ ಕಾಣಲಷ್ಟೇ ಸಾಧ್ಯ.
ನೂತನ ಕಾರ್ಮಿಕ ಸಂಹಿತೆಗಳ ಮೂಲಕ ಕರ್ನಾಟಕದ ಶ್ರಮಜೀವಿ ವರ್ಗದ, ಶಿಕ್ಷಣ ನೀತಿಯ ಮೂಲಕ ವಿದ್ಯಾರ್ಥಿ ಯುವ ಸಮೂಹದ, ಕೃಷಿ ಕಾಯ್ದೆ-ಭೂಸ್ವಾಧೀನ ಕಾಯ್ದೆಯ ಮೂಲಕ ರೈತಾಪಿಯ, ಅರಣ್ಯ ಕಾಯ್ದೆಯ ಮೂಲಕ ಆದಿವಾಸಿ ಸಮುದಾಯಗಳ ಮತ್ತು ಸಹಜವಾಗಿಯೇ ಈ ಎಲ್ಲ ವಿದ್ಯಮಾನಗಳಿಂದ ಹೆಚ್ಚು ಬಾಧಿತರಾಗುವ ಮಹಿಳಾ ಸಮುದಾಯದ ಜೀವನ ಮತ್ತು ಜೀವನೋಪಾಯದ ನೆಲೆಗಳನ್ನು ಕಾರ್ಪೋರೇಟ್ ಮಾರುಕಟ್ಟೆಯ ನಿಯಂತ್ರಣಕ್ಕೆ ಒಪ್ಪಿಸುವ ಒಂದು ಸನ್ನಿವೇಶವನ್ನು ರಾಜ್ಯದ ಜನತೆ ಎದುರಿಸುತ್ತಿದೆ. ಕರ್ನಾಟಕದ ಮತ್ತು ಭಾರತದ ಜನತೆ ಎದುರಿಸುತ್ತಿರುವ ಪ್ರಮುಖ ಸವಾಲು ನವ ಉದಾರವಾದವೇ ಆಗಿದೆ ಎನ್ನುವುದು ವಾಸ್ತವ. ಇದರೊಂದಿಗೆ ಬಿಜೆಪಿ ಸರ್ಕಾರ ಜಾರಿಗೊಳಿಸಿರುವ ಗೋಹತ್ಯೆ ನಿಷೇಧ ಕಾಯ್ದೆ ಮತ್ತು ಮತಾಂತರ ನಿಷೇಧ ಕಾಯ್ದೆಗಳು ಕೇವಲ ಅಲ್ಪಸಂಖ್ಯಾತ ಸಮುದಾಯಗಳಿಗಷ್ಟೇ ಅಲ್ಲದೆ ತಳಸಮುದಾಯಗಳ ಬದುಕಿಗೂ ಮಾರಕವಾಗಿವೆ. ರಾಜ್ಯದ ಬಹುಸಂಖ್ಯೆಯನ್ನು ಪ್ರತಿನಿಧಿಸುವ ಸಮುದಾಯಗಳ ಜೀವನ ಮತ್ತು ಜೀವನೋಪಾಯದ ಮಾರ್ಗಗಳು ಮತ್ತು ಸಾಮಾಜಿಕ-ಸಾಂಸ್ಕೃತಿಕ ಬದುಕಿನ ನೆಲೆಗಳು ಈ ಕಾಯ್ದೆಗಳಿಂದ ಪ್ರಭಾವಕ್ಕೊಳಗಾಗುತ್ತವೆ.
ಹೊಸ ಶಿಕ್ಷಣ ನೀತಿಯಿಂದ ಶಿಕ್ಷಣ ವಂಚಿತರ ಸಂಖ್ಯೆ ಹೆಚ್ಚಾಗುವುದೇ ಅಲ್ಲದೆ ಈಗಾಗಲೇ ಶಿಥಿಲವಾಗಿರುವ ಗ್ರಾಮೀಣ ಆರ್ಥಿಕತೆಯ ಮೇಲೆ ಹೆಚ್ಚಿನ ಪರಿಣಾಮ ಉಂಟಾಗುತ್ತದೆ. ನೂತನ ಕಾರ್ಮಿಕ ಸಂಹಿತೆಗಳಿಂದ ಉದ್ಭವಿಸುವ ಉದ್ಯೋಗ ಕ್ಷೇತ್ರದ ಬಿಕ್ಕಟ್ಟುಗಳು ಹೆಚ್ಚು ಕಾರ್ಮಿಕರನ್ನು ಶ್ರಮಜೀವಿ ವರ್ಗವಾಗಿ ಪರಿವರ್ತಿಸುತ್ತದೆ. ಮಾರುಕಟ್ಟೆ ಆರ್ಥಿಕತೆಗೆ ಪೂರಕವಾಗಿ ನಗರೀಕರಣ ಪ್ರಕ್ರಿಯೆಯು ತೀವ್ರಗೊಂಡಂತೆಲ್ಲಾ ಗ್ರಾಮೀಣ ವಲಸೆ ಕಾರ್ಮಿಕರ ಸಂಖ್ಯೆಯೂ ಹೆಚ್ಚಾಗುವುದರಿಂದ ಆರ್ಥಿಕ ಅಸಮಾನತೆಗಳು ಇನ್ನೂ ತೀವ್ರವಾಗುತ್ತಲೇ ಹೋಗುತ್ತದೆ. ಈ ಸಮಸ್ಯೆಗಳ ನಡುವೆಯೇ ನಮ್ಮ ಸಮಾಜ ತನ್ನ ಸಮನ್ವಯದ ಲಕ್ಷಣಗಳನ್ನು ಕಳೆದುಕೊಳ್ಳುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ದಲಿತರ ಮೇಲಿನ ಜಾತಿದ್ವೇಷದ ದಾಳಿಗಳು, ಅಸ್ಪೃಶ್ಯತೆಯ ಆಚರಣೆ, ಮಹಿಳೆಯರ ಮೇಲಿನ ಅತ್ಯಾಚಾರ ಮತ್ತು ದೌರ್ಜನ್ಯಗಳು ತೀವ್ರವಾಗುತ್ತಿರುವ ಸನ್ನಿವೇಶದಲ್ಲಿ ಆರ್ಥಿಕ ಅಸಮಾನತೆಗಳು ತೀವ್ರವಾದಂತೆಲ್ಲಾ ಸಾಮಾಜಿಕ ಕ್ಷೋಭೆಯೂ ತೀಕ್ಷ್ಣವಾಗುತ್ತಲೇ ಹೋಗುತ್ತದೆ.
2023ರ ಚುನಾವಣೆಗಳ ನಂತರ ಅಧಿಕಾರಕ್ಕೆ ಬರುವ ಆಕಾಂಕ್ಷೆ ಮತ್ತು ಕನಸನ್ನು ಹೊತ್ತ ಕಾಂಗ್ರೆಸ್ ಪಕ್ಷದ ಮುಂದೆ ಈ ಎಲ್ಲ ಸವಾಲುಗಳೂ ಇರುವುದನ್ನು ಈಗಲೇ ಗಮನಿಸಬೇಕಿದೆ. ಮನೆಮನೆಗೆ ರಾಷ್ಟ್ರಧ್ವಜವನ್ನು ತಲುಪಿಸುವ ಈ ಹೊತ್ತಿನಲ್ಲಿ ಶಿಥಿಲವಾಗುತ್ತಿರುವ ಸಾಂವಿಧಾನಿಕ ಮೌಲ್ಯಗಳನ್ನೂ ತಲುಪಿಸುವ ಜವಾಬ್ದಾರಿ ಒಂದು ರಾಜಕೀಯ ಪಕ್ಷದ ಮೇಲಿರುತ್ತದೆ. ಒಂದು ಬೂರ್ಷ್ವಾ ಪಕ್ಷವಾಗಿ ಕಾಂಗ್ರೆಸ್ ಈ ಮಾನದಂಡಗಳ ವ್ಯಾಪ್ತಿಗೆ ಒಳಪಡುವುದೋ ಇಲ್ಲವೋ ಎನ್ನುವ ಜಿಜ್ಞಾಸೆಯ ನಡುವೆಯೇ, ಕರ್ನಾಟಕದ ರಾಜಕಾರಣದಲ್ಲಿ ಮತ್ತೊಂದು ಪರ್ಯಾಯ ನೆಲೆ ಇಲ್ಲದಿರುವುದರಿಂದ, ಕಾಂಗ್ರೆಸ್ ಮತ್ತು ಸಿದ್ಧರಾಮಯ್ಯ ಅವರ ಮೇಲಿನ ನೈತಿಕ, ಸಾಮಾಜಿಕ, ಸಾಂವಿಧಾನಿಕ ಜವಾಬ್ದಾರಿ ತುಸು ಹೆಚ್ಚಾಗಿಯೇ ಇರುತ್ತದೆ. ಸಾಮಾಜಿಕ ಸಾಮರಸ್ಯ, ಸಾಂಸ್ಕೃತಿಕ ಸಮನ್ವಯತೆ ಮತ್ತು ಸೌಹಾರ್ದತೆ, ಆರ್ಥಿಕ ಸಮಾನತೆ ಮತ್ತು ಸಾಂವಿಧಾನಿಕ ಪ್ರಜಾಸತ್ತೆಯನ್ನು ಮರುಸ್ಥಾಪಿಸುವ ಗುರುತರ ಜವಾಬ್ದಾರಿಯೊಂದಿಗೇ ಸಿದ್ಧರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷ ಮುಂದಿನ ದಿನಗಳಲ್ಲಿ ಕಾರ್ಯೋನ್ಮುಖರಾಗಬೇಕಿದೆ. ಕರ್ನಾಟಕದ ಜನತೆ ಬಯಸುತ್ತಿರುವುದು ಪರ್ಯಾಯ ಸರ್ಕಾರವನ್ನಲ್ಲ ಒಂದು ಪರ್ಯಾಯ ಆಡಳಿತ ಸಂಸ್ಕೃತಿಯನ್ನು, ಸಾಮಾಜಿಕ ವಾತಾವರಣವನ್ನು, ಸಾಂಸ್ಕೃತಿಕ ಪರಿಸರವನ್ನು ಮತ್ತು ಆರ್ಥಿಕ ನೆಲೆಯನ್ನು.
ಈ ನಿರೀಕ್ಷೆಗಳನ್ನು ಸಾಕಾರಗೊಳಿಸುವ ಜವಾಬ್ದಾರಿ ಸದ್ಯದ ಪರಿಸ್ಥಿತಿಯಲ್ಲಿ ರಾಜಕೀಯವಾಗಿ ಕಾಂಗ್ರೆಸ್ ಪಕ್ಷದ ಮೇಲಿದೆ. ಉಳಿದಂತೆ ಕರ್ನಾಟಕದ ಪ್ರಜ್ಞಾವಂತ ಜನತೆಯ ಮೇಲಂತೂ ಇದ್ದೇ ಇದೆ.