ಇತ್ತೀಚೆಗೆ ಕರೋನಾ ಹಾಗೂ ಗಡಿ ಕ್ಯಾತೆ ಬಳಿಕ ಚೀನಾ ವಿರುದ್ಧ ಭಾರತದಲ್ಲೂ ವ್ಯಾಪಕ ಆಕ್ರೋಶ ವ್ಯಕ್ತವಾಗತೊಡಗಿದೆ. ಪರಿಣಾಮ ಟ್ವಿಟ್ಟರ್ ನಲ್ಲಿ #BanTikTokinIndia ಅನ್ನೋ ಹ್ಯಾಷ್‌ಟ್ಯಾಗ್ ಟಾಪ್ ಟ್ರೆಂಡಿಂಗ್ ಮೂಲಕ ಟ್ವೀಟ್ ಸಮರವೇ ನಡೆದಿತ್ತು. ಕೆಲವೇ ಹೊತ್ತಿನಲ್ಲಿ ಲಕ್ಷಾಂತರ ಮಂದಿ TikTok ಗೆ ವಿದಾಯ ಹೇಳಿದ್ದರು. ಅದರ ಬೆನ್ನಿಗೆ ಭಾರತೀಯ ಇಂಜಿನಿಯರ್ ಒಬ್ಬ ಕಂಡು ಹಿಡಿದಿದ್ದನೆನ್ನಲಾದ ʼಮಿತ್ರೋಂʼ (Mitron) App ಮೊರೆ ಹೋಗಿದ್ದರು. ಇದನ್ನ TikTok ಗೆ ಎದುರಾಳಿ App ಎಂದೇ ಕರೆಯಲಾಯಿತು. ಅದಕ್ಕೂ ಜಾಸ್ತಿ, ದೇಶಾದ್ಯಂತ ಇದರ ಡೌನ್ಲೋಡ್ ರೇಟಿಂಗ್ ಕೂಡಾ ಜಾಸ್ತಿಯಾಯಿತು. ಇತ್ತೀಚೆಗಷ್ಟೇ ಈ Mitron App ಭಾರೀ ಸೆನ್ಸೇಷನ್ ಸೃಷ್ಟಿ ಮಾಡಿತ್ತು. 50 ಲಕ್ಷ ಮಂದಿ ಈ Mitron App ಮೊರೆ ಹೋಗಿದ್ದರು ಅನ್ನೋದನ್ನ ಗೂಗಲ್ ನ ʼಪ್ಲೇ ಸ್ಟೋರ್ʼ ತೋರಿಸಿತ್ತು. ಇದು ದೇಶಾದ್ಯಂತ ಸುದ್ದಿ ಕೂಡಾ ಆಯಿತು. ಕಳೆದ ಎಪ್ರಿಲ್ ತಿಂಗಳ ಆರಂಭದ ವೇಳೆಗೆ ಈ App ಬಿಡುಗಡೆ ಕಂಡಿದ್ದರೂ TikTok ನಡುವೆ ಇದು ಬಸವಳಿದು ಹೋಗಿತ್ತು. ಅಷ್ಟರ ಮಟ್ಟಿಗೆ ಚೀನಾ ದೇಶದ TikTok ಭಾರತದ ಯುವಜನರ ಮನಸ್ಸು ಗೆದ್ದಿತ್ತು. ತಮ್ಮೆಲ್ಲಾ ಅಭಿನಯ, ನೃತ್ಯ, ಕುಣಿತಕ್ಕೆಲ್ಲ TikTok App ಒಂದೊಳ್ಳೆ ವೇದಿಕೆಯನ್ನೇ ಕೊಟ್ಟಿತ್ತು. ಆದರೆ ಚೀನಾ ಮಾಡಿದ ಕುತತಂತ್ರಕ್ಕೆ ಭಾರತೀಯರು TikTok ʼಅನ್ ಇನ್‌ಸ್ಟಾಲ್ʼ ಮಾಡಿ ಪ್ರತಿರೋಧ ತೋರಿದ್ದರು.
ಹೀಗೆ Mitron App ಮೊರೆ ಹೋಗಿದ್ದವರಿಗೆ ಇದೀಗ ಮತ್ತೊಂದು ಶಾಕಿಂಗ್ ನ್ಯೂಸ್ ಕಾದಿದೆ. ಸ್ವತಃ ಮಾಹಿತಿ ಮತ್ತು ತಂತ್ರಜ್ಞಾನ ಹಾಗೂ ಎಲೆಕ್ಟ್ರಾನಿಕ್ಸ್ ಸಚಿವ ರವಿಶಂಕರ್ ಪ್ರಸಾದ್ ಅವರೇ ಅಭಿನಂದಿಸಿ ಬೆನ್ನು ತಟ್ಟಿದ್ದ ಐಐಟಿ ವಿದ್ಯಾರ್ಥಿ, Mitron App ಸಂಶೋಧಕ ಎಂದು ಗುರುತಿಸಲ್ಪಟ್ಟ ಶಿವಾಂಕ್ ಅಗರ್‌ವಾಲ್ ತಯಾರಿಸಿದ App ದೇಸಿ ಅಲ್ಲ ಎನ್ನುವ ಸುದ್ದಿಯೊಂದು ಹೊರಬಿದ್ದಿದೆ. ಬದಲಿಗೆ ಇದು ನೆರೆಯ ಪಾಕಿಸ್ತಾನದಿಂದ Source Code ಖರೀದಿಸಿ ಮಾಡಿರುವ App ಎನ್ನುವುದಾಗಿ ರಾಷ್ಟ್ರೀಯ ಮಾಧ್ಯಮಗಳು ಸುದ್ದಿ ಮಾಡಿವೆ.
ಅಂದಹಾಗೆ ಪಾಕಿಸ್ತಾನದಲ್ಲಿ ಈಗಾಗಲೇ TikTok ಗೆ ಸವಾಲಾಗಿ ಅಲ್ಲಿನ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಸೇರಿಕೊಂಡು TicTic ಅನ್ನೋ App ತಯಾರಿಸಿದ್ದರು. ಇದರ Source Code ಅನ್ನು ಶಿವಾಂಕ್ ಅಗರ್‌ವಾಲ್ 34 ಡಾಲರ್ (ಸುಮಾರು 2,500 ರೂ.) ತೆತ್ತು ಖರೀದಿಸಿದ್ದರು. ಆನಂತರ ಅದನ್ನ ಮರುನಾಮಕರಣಗೊಳಿಸಿ ಭಾರತದಲ್ಲಿ ʼMitronʼ ಅನ್ನೋ ಹೆಸರಿನಡಿ ಬ್ರ್ಯಾಂಡ್ ಕ್ರಿಯೇಟ್ ಮಾಡಿದ್ದರು. TikTok ನೀಡುವ ಪ್ರತಿಯೊಂದು ಸೌಲಭ್ಯವವನ್ನೂ ಈ Mitron App ಕೂಡಾ ನೀಡುತ್ತಿದೆ. ಆದ್ದರಿಂದ ಸಹಜವಾಗಿಯೇ ಭಾರತದ ಯುವ ಜನತೆ TikTok ಗೆ ಗುಡ್ ಬೈ ಹೇಳುತ್ತಲೇ ಈ App ನ್ನು ಅಪ್ಪಿಕೊಂಡಿದ್ದಾರೆ.
ಅದ್ಯಾವಾಗ ಚೈನಾ ವಿರುದ್ಧ ಯುವಜನತೆ ತಿರುಗಿ ಬಿದ್ದರೋ, ಅದಾಗ ಲಾಭ ಪಡೆದ Mitron App 50 ಲಕ್ಷ ಜನರನ್ನ ತನ್ನತ್ತ ಬರ ಸೆಳೆಯಿತು. ಚೀನಾ ವಿರೋಧಿ ಭಾವನೆ ಹಾಗೂ ದೇಸಿ ಕಲ್ಪನೆ ಹೆಚ್ಚು ಹೆಚ್ಚು ಡೌನ್ಲೋಡ್ ಮಾಡುವಂತೆ ಮಾಡಿತ್ತು. ಆದರೆ ಸದ್ಯ ಈ App ನಲ್ಲಿ ಎರಡು ಭದ್ರತಾ ದೋಷಗಳು ಕಂಡು ಬಂದಿರುವುದಾಗಿ ʼದಿ ಕ್ವಿಂಟ್ʼ ವರದಿ ಮಾಡಿದೆ.
ಇದರಲ್ಲಿರುವ ಲಾಗಿನ ಆಯ್ಕೆಗಳು ಅತೀ ದುರ್ಬಲವಾಗಿದೆ ಅಂತಾ ಐಟಿ ತಂತ್ರಜ್ಞರು ಕೂಡಾ ಅಭಿಪ್ರಾಯಪಟ್ಟಿದ್ದಾರೆ. ಆದರೆ ಇದೀಗ 50 ಲಕ್ಷ ಮಿಕ್ಕ ಡೌನ್ಲೋಡ್ ಆಗುತ್ತಿದ್ದಂತೆ ಶಿವಾಂಕ್ ಅಗರ್‌ವಾಲ್ ಈ App ನ್ನು ಅಭಿವೃದ್ಧಿಪಡಿಸಿದವರು ಎಂದೇ ಭಾವಿಸಲಾಗಿತ್ತು. ಇಷ್ಟಾಗುತ್ತಲೇ ಎಚ್ಚೆತ್ತುಕೊಂಡ TicTic App ಅಭಿವೃದ್ಧಿಪಡಿಸಿದ QBoxus ಭಾರತೀಯ ಮಾಧ್ಯಮಗಳನ್ನು ಸಂಪರ್ಕಿಸಿದ್ದು, ಅದರ ಹಿನ್ನೆಲೆಯನ್ನ ತಿಳಿಸಿದ್ದಾರೆ.
ʼಟೈಮ್ಸ್ ಆಫ್ ಇಂಡಿಯಾʼ ಆಂಗ್ಲ ಪತ್ರಿಕೆಯನ್ನ ಸಂಪರ್ಕಿಸಿರುವ QBoxus ತಂಡದ ಸದಸ್ಯ ಇರ್ಫಾನ್ ಶೇಖ್, “ಇದು TicTic App ಯಥಾವತ್ತಾದ ನಕಲು ಆಗಿರುತ್ತದೆ. ನೀವು ನಿಮ್ಮ ತಂತ್ರಜ್ಞರೊಂದಿಗೆ TicTic ಹಾಗೂ Mitron ಈ ಎರಡೂ App ಗಳ ಪರೀಕ್ಷಿಸಿಕೊಳ್ಳಿ” ಎಂದಿದ್ದಾನೆ.
ಅಲ್ಲದೇ, QBoxus ತಂಡದ ಮುಖ್ಯ ವ್ಯವಹಾರವೇ ಪ್ರಮುಖ App ಗಳನ್ನು ಅಭಿವೃದ್ಧಿಪಡಿಸುವುದ ಇಲ್ಲವೇ ಇತರೆ ಹೆಸರಾಂತ App ಗಳನ್ನು ತದ್ರೂಪಿ App ಗಳಾಗಿ ಅಭಿವೃದ್ಧಿ ಪಡಿಸುವುದಾಗಿದೆ. ಇದೇ ರೀತಿ TicTic App ನ souce code ನ್ನು 277 ಸಂಸ್ಥೆಗಳು ಹೊಂದಿದ್ದು, ನಮ್ಮ ಮುಖ್ಯ ಉದ್ದೇಶವೇ ಆರಂಭಿಕ ಹಂತದ App ಅಭಿವೃದ್ಧಿ ಪಡಿಸುವವರಿಗೆ ಕಡಿಮೆ ಬಜೆಟ್‌ನಲ್ಲಿ Souce Code ನೀಡುವುದಾಗಿದೆ. ಆದ್ದರಿಂದ ಹೆಚ್ಚಿನ ಪರಿಶ್ರಮವಿಲ್ಲದೇ ಅದನ್ನ ಸುಲಭವಾಗಿ ಅಭಿವೃದ್ಧಿಪಡಿಸಬಹುದು. ಆದರೆ ನಮಗೆ Mitron App ಗೆ Souce Code ನೀಡಿರೋದಕ್ಕೆ ಸಮಸ್ಯೆ ಇಲ್ಲ. ಆದರೆ ಮಾಧ್ಯಮಗಳು ಅದನ್ನು ಅಭಿವೃದ್ಧಿಪಡಿಸಿದ ಕ್ರೆಡಿಟ್ ಅನ್ನು ಇನ್ಯಾರಿಗೋ ನೀಡುತ್ತಿದೆ. ಆದ್ದರಿಂದ ಅದನ್ನು ಅಭಿವೃದ್ಧಿ ಪಡಿಸಿದ ಮೂಲ ಸಂಶೋಧಕರಿಗೆ ಸಲ್ಲಬೇಕು” ಎಂದು ಇರ್ಫಾನ್ ಶೇಖ್ ʼಟೈಮ್ಸ್ ಆಫ್ ಇಂಡಿಯಾʼಕ್ಕೆ ತಿಳಿಸಿದ್ದಾರೆ. ಆದರೆ App ನಲ್ಲಿ ಭದ್ರತಾ ಲೋಪಗಳಿವೆ ಅನ್ನೋದನ್ನ ಅವರು ನಿರಾಕರಿಸಿದ್ದಾರೆ.
ಆದರೆ ಭಾರತೀಯ ಐಟಿ ತಂತ್ರಜ್ಞರು ಮೂಲ App TicTic ನಲ್ಲಿಯೇ ಆ ಸಮಸ್ಯೆಗಳು ಇರೋದಾಗಿ ತಿಳಿಸಿದ್ದಾರೆ. ಇನ್ನು Mitron App ಬೆಂಗಳೂರು ಮೂಲದ್ದು ಎನ್ನುವ ಒಕ್ಕಣೆ ಅದರ ವೆಬ್‌ಸೈಟ್ ನಲ್ಲಿ ಕಾಣಬಹುದಾಗಿದೆ. ಆದರೆ ಈ ಕುರಿತ ಗೊಂದಲದ ಬಗ್ಗೆ Mitron App ನ ಯಾವುದೇ ಸಿಬ್ಬಂದಿ ಪ್ರತಿಕ್ರಿಯೆ ನೀಡಿಲ್ಲ.

ಒಟ್ಟಿನಲ್ಲಿ ಪಕ್ಕಾ ದೇಸಿ App ಎನಿಸಿಕೊಂಡಿದ್ದ Mitron ಕೂಡಾ ಪಾಕಿಸ್ತಾನದ ಸೈಬರ್ ತಂತ್ರಜ್ಞರ Source Code ನಿಂದ ತಯಾರಿಸಲಾದ App ಅನ್ನೋದು ದಿಗಿಲು ಹುಟ್ಟಿಸಿದೆ. ಕಾರಣ, ಮೊದಲೇ ಹನಿ ಟ್ರ್ಯಾಪ್ ಹಾಗೂ ಮಾಹಿತಿ ಕದಿಯುವ ಅಭ್ಯಾಸ ಹೊಂದಿರುವ ಪಾಕಿಸ್ತಾನಿಯರು Mitron App ಮೂಲಕ ಇಲ್ಲಿನ ಆಗುಹೋಗುಗಳ ಬಗ್ಗೆ ಹಾಗೂ ಇನ್ನಿತರ ದತ್ತಾಂಶಗಳಿಗೂ ಕನ್ನ ಹಾಕಲಾರರು ಎಂದು ಸುಲಭವಾಗಿ ಹೇಳಲಾಗದು. ಅದರ ಬೆನ್ನಿಗೆ 50 ಲಕ್ಷ ದಾಟಿದ್ದ Mitron App ಬಳಕೆದಾರರ ಸಂಖ್ಯೆ ದಿಢೀರ್ ಕುಸಿತ ಕಂಡರೂ ಅಚ್ಚರಿಪಡುವಂತಿಲ್ಲ.










