ಸಾಂಸ್ಕ್ರತಿಕ ನಗರಿ ಮೈಸೂರು ಮೃಗಾಲಯದ ಕೂರ್ಗಳ್ಳಿ ಪುನರ್ವಸತಿ ಕೇಂದ್ರದಲ್ಲಿ ಮೂಗ ಎಂಬ ಹುಲಿ ಸಾವನ್ನಪ್ಪಿದ್ದಾನೆ. ಚಾಮರಾಜನಗರ ಜಿಲ್ಲೆಯ ಬಂಡೀಪುರ ಅಭಯಾರಣ್ಯದಲ್ಲಿ ಮೂಗ ಎಂದೇ ಈ ಹುಲಿ ಖ್ಯಾತ ಗಳಿಸಿತ್ತು.
ಸದಾ ಲವಲವಿಕೆಯಿಂದ ಇರುತ್ತಿದ್ದ ಮೂಗ ಸಪಾರಿ ಪ್ರಿಯರ ಮೈನ್ ಅಟ್ರ್ಯಾಕ್ಷನ್ ಆಗಿದ್ದನು. ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದಲ್ಲಿ ಕಾಡಾನೆಯೊಂದಿಗೆ ಕಾದಾಟಕ್ಕಿಳಿದಿದ್ದ ಮೂಗ ಖ್ಯಾತಿಯ ಹುಲಿ ಇದಾಗಿದೆ. ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದ ಸಪಾರಿ ವಲಯದಲ್ಲಿ ಅಕ್ಟೋಬರ್ 20 ರಂದು ಈ ಘಟನೆ ನಡೆದಿತ್ತು.
ಏಳು ವರ್ಷ ವಯಸ್ಸಿನ ಮೂಗ ಹುಲಿ ಕಾಡಾನೆಯೊಂದಿಗೆ ಕಾದಾಟ ನಡೆಸಿ ತೀವ್ರವಾಗಿ ಗಾಯಗೊಂಡಿತ್ತು. ಆನೆ ಹಾಗೂ ಹುಲಿ ನಡುವೆ ನಡೆದ ಕಾದಾಟದಲ್ಲಿ ಆನೆ ದಂತದಿಂದ ಬಲವಾಗಿ ತಿವಿದಿತ್ತು.
ಗಜರಾಜನ ತಿವಿತಕ್ಕೆ ನೆಲಕಚ್ಚಿದ್ದ ಹುಲಿಗೆ ಕರುಳು ಮತ್ತು ಶ್ವಾಸಕೋಶ ಕಾಣುವಷ್ಟು ಆಳದ ಗಾಯವಾಗಿತ್ತು. ನೋವಿನಿಂದ ನರಳಾಡುತ್ತಿದ್ದ ಹುಲಿಯನ್ನು ರಕ್ಷಿಸಿದ ಅರಣ್ಯ ಇಲಾಖೆ ಸಿಬ್ಬಂದಿ, ಮೈಸೂರಿನ ಮೃಗಾಲಯದ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಿ ಚಿಕಿತ್ಸೆ ನೀಡುತ್ತಿದ್ದರು.
ಹೊಟ್ಟೆ ಭಾಗದಲ್ಲಿ ರಂದ್ರವಾಗಿದ್ದ ಹುಲಿಗೆ ಪಶು ವೈದ್ಯರ ತಂಡದಿಂದ ಶಸ್ತ್ರ ಚಿಕಿತ್ಸೆ ನಡೆಸಲಾಗಿತ್ತು. ಚಿಕಿತ್ಸೆ ನಂತರ ಚೇತರಿಸಿಕೊಂಡಂತೆ ಕಂಡು ಬಂದ ಹುಲಿ ಆಹಾರವನ್ನು ಸೇವಿಸತೊಡಗಿತ್ತು. ಆದರೆ ಈಗ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ.
ಹೊಟ್ಟೆಯಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಿ ಅಂಗಾಂಗಳಿಗೂ ಹಾನಿಯುಂಟಾಗಿರುವ ಕುರಿತು ಮರಣೋತ್ತರ ಪರೀಕ್ಷೆಯಲ್ಲಿ ದೃಢ ವಾಗಿದೆ. ಈಗ ನಿಯಮಾನುಸಾರ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೂಗನ ಅಂತ್ಯಕ್ರಿಯೆ ನಡೆಸಲಾಗಿದೆ.