ಚಿಕ್ಕಮಗಳೂರು : ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಟಿಕೆಟ್ ಹಂಚಿಕೆಯ ಟೆನ್ಶನ್ ಜೋರಾಗಿದೆ. ಇತ್ತ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಂಗ್ರೆಸ್ಗೆ ಟಿಕೆಟ್ ಹಂಚಿಕೆ ಮಾಡೋದು ಕಬ್ಬಿಣದ ಕಡಲೆಯಾಗಿ ಪರಿಣಮಿಸಿದೆ. ಒಂದು ಕ್ಷೇತ್ರವನ್ನು ಹೊರತುಪಡಿಸಿ ಇನ್ನುಳಿದ ನಾಲ್ಕು ಕ್ಷೇತ್ರಗಳಲ್ಲಿ ಯಾರಿಗೆ ಟಿಕೆಟ್ ನೀಡೋದು ಅನ್ನೋದೇ ಕಾಂಗ್ರೆಸ್ ವರಿಷ್ಠರಿಗೆ ತಲೆನೋವಾಗಿ ಪರಿಣಮಿಸಿದೆ.
ಚಿಕ್ಕಮಗಳೂರು ಕ್ಷೇತ್ರದಲ್ಲಿ ವಲಸಿಗ ಹಾಗೂ ಮೂಲ ಕಾಂಗ್ರೆಸ್ಸಿಗರ ನಡುವೆ ಫೈಟಿಂಗ್ ಜೋರಾಗಿದೆ. ವಲಸಿಗರಿಗೆ ಟಿಕಟ್ ನೀಡಿದರೆ ಮೂಲ ಕಾಂಗ್ರೆಸ್ಸಿಗರು ಸಾಮೂಹಿಕ ರಾಜೀನಾಮೆ ನೀಡುವ ಎಚ್ಚರಿಕೆ ನೀಡ್ತಿದ್ದಾರೆ. ಬಿಜೆಪಿ ನಾಯಕ ಸಿ.ಟಿ ರವಿಗೆ ಠಕ್ಕರ್ ನೀಡುವ ಸಲುವಾಗಿ ಕಾಂಗ್ರೆಸ್ ಹೈಕಮಾಂಡ್ ಲಿಂಗಾಯತ ಅಸ್ತ್ರ ಬಳಕೆ ಮಾಡಲು ಮುಂದಾಗಿತ್ತು. ಇದಕ್ಕಾಗಿ ವಲಸಿಗ ಲಿಂಗಾಯತ ನಾಯಕರಿಗೆ ಗಾಳ ಹಾಕಿತ್ತು.
ಆದರೆ ಈ ಲಿಂಗಾಯತ ಅಸ್ತ್ರಕ್ಕೆ ಇದೀಗ ಮೂಲ ಕಾಂಗ್ರೆಸ್ಸಿಗರು ಅಡ್ಡಿಯಾಗಿದ್ದಾರೆ. ಮೂಡಿಗೆರೆ ಕ್ಷೇತ್ರದಲ್ಲಿ ಮಾಜಿ ಸಚಿವೆ ಮೋಟಮ್ಮ ಪುತ್ರಿಯ ವಿರುದ್ಧ ಇದೀಗ ಅಸಮಾಧಾನದ ಕೂಗು ಕೇಳಿ ಬರ್ತಿದೆ. ನಯನಾ ಮೋಟಮ್ಮರಿಗೆ ಪಕ್ಷದಿಂದ ಟಿಕೆಟ್ ನೀಡಿದಲ್ಲಿ ಪಕ್ಷ ತೊರೆಯುವುದಾಗಿ ಮೂಲ ಕಾಂಗ್ರೆಸ್ಸಿಗರು ಎಚ್ಚರಿಕೆ ನೀಡಿದ್ದಾರೆ.
ಇತ್ತ ತರಿಕೇರೆ ಕ್ಷೇತ್ರದಲ್ಲಿ ಮಾಜಿ ಶಾಸಕ ಶ್ರೀನಿವಾಸ್ಗೆ ಟಿಕೆಟ್ ನೀಡದಂತೆ ಕೂಗು ಕೇಳಿ ಬರ್ತಿದೆ. ಕಳೆದ ಬಾರಿ ಕಾಂಗ್ರೆಸ್ನಿಂದ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಶ್ರೀನಿವಾಸ್ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಶ್ರೀನಿವಾಸ್ ವಿರುದ್ಧ ಅಸಮಾಧಾನ ಇದ್ದರಿಂದ ಅವರು ಶಾಸಕರಾಗಿದ್ದರೂ ಸಹ ಕಾಂಗ್ರೆಸ್ ಟಿಕೆಟ್ ನೀಡಿರಲಿಲ್ಲ.
ತರೀಕೆರೆ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ 13 ಮಂದಿ ಟಿಕೆಟ್ ಆಕಾಂಕ್ಷಿಗಳಿದ್ದು ಯಾರಿಗೆ ಟಿಕೆಟ್ ನೀಡಿದ್ರೂ ಬಂಡಾಯ ಫಿಕ್ಸ್ ಆಗಿದೆ. ಕುರುಬ ವಿರೋಧಿ , ಪಕ್ಷ ವಿರೋಧಿ ಎಂದು ಸಿದ್ದರಾಮಯ್ಯ ಆಪ್ತರಾಗಿರುವ ಶ್ರೀನಿವಾಸ್ ವಿರುದ್ಧ ತರೀಕೆರೆ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ಹೊರಹಾಕ್ತಿದ್ದಾರೆ.
ಕಡೂರು ಕ್ಷೇತ್ರದಲ್ಲಿಯೂ ವಲಸೆ ಹಾಗೂ ಮೂಲ ಕಾರ್ಯಕರ್ತರ ನಡುವೆ ಕಿರಿಕ್ ಜೋರಾಗಿದೆ. ವೈ.ಎಸ್ ವಿ ದತ್ತಾರಿಗೆ ಟಿಕೆಟ್ ನೀಡಿದರೆ ಬಂಡಾಯ ಏಳುತ್ತೇವೆ ಎಂದು ಮೂಲ ಕಾಂಗ್ರೆಸ್ಸಿಗರು ಹೇಳ್ತಿದ್ದಾರೆ. ಶೃಂಗೇರಿ ವಿಧಾನಸಭಾ ಕ್ಷೇತ್ರ ಒಂದನ್ನು ಹೊರತುಪಡಿಸಿ ಇನ್ನುಳಿದಂತೆ ಚಿಕ್ಕಮಗಳೂರು ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ನಿಂದ ಬಂಡಾಯದ ಕೂಗು ಹೆಚ್ಚಾಗಿದೆ.