ಸಂಸತ್ತಿನಲ್ಲಿ ವಾರ್ಷಿಕ ಬಜೆಟ್ ಮಂಡಿಸುವುದಕ್ಕಿಂತ ಒಂದು ದಿನ ಮುಂಚಿತವಾಗಿ ಆ ವರ್ಷದ ಆರ್ಥಿಕ ಸಮೀಕ್ಷೆ ಮಂಡಿಸುವ ರೂಢಿಯಿದ್ದು ಈ ವರ್ಷದ ಆರ್ಥಿಕ ಸಮೀಕ್ಷೆಯನ್ನು ಕೇಂದ್ರ ಹಣಕಾಸು ಸಚಿವಾಲಯ ಜನವರಿ 31ರಂದು ಬಿಡುಗಡೆಗೊಳಿಸಿದೆ. ಆರ್ಥಿಕ ಸಮೀಕ್ಷೆಯು ಹಣಕಾಸಿನ ವರ್ಷವೊಂದರ ಆರ್ಥಿಕತೆಯ ಸಾರಾಂಶವಾಗಿರುತ್ತದೆ. ಸಾಮಾನ್ಯವಾಗಿ ಆರ್ಥಿಕ ಸಮೀಕ್ಷೆಗಳು ಪ್ರಾಮಾಣಿಕ ಅಂಕಿಅಂಶಗಳನ್ನು ಒಳಗೊಂಡಿದ್ದು ಆ ವರ್ಷದ ಬಜೆಟ್ ಜನಸಾಮಾನ್ಯರ ವೈಯಕ್ತಿಕ ಬಜೆಟ್ನ ಮೇಲೆ ಹೇಗೆ ಒರಿಣಾಮ ಬೀರಲಿದೆ ಎಂಬುವುದನ್ನು ಅರಿಯಲು ಸಹಾಯಕವಾಗುತ್ತದೆ.
ಆದರೆ ಈ ಬಾರಿ ಆರ್ಥಿಕ ಸಮೀಕ್ಷೆಯನ್ನು 2024ರ ಸಾರ್ವತ್ರಿಕ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಡುಗಡೆಗೊಳಿಸಲಾಗಿದೆ ಎಂಬ ಆರೋಪ ಎದುರಿಸುತ್ತಿದೆ. ವಾಜಪೇಯಿ ಸರ್ಕಾರದ ‘ಭಾರತ ಪ್ರಕಾಶಿಸುತ್ತಿದೆ’ ಯುಗದ ಮುಂದುವರಿಕೆಯಾಗಿ 2014ರ ನಂತರದ ಭಾರತವನ್ನು ‘ಸುವರ್ಣ ಯಗ’ವಾಗಿ ಬಿಂಬಿಸಲು ಈ ಆರ್ಥಿಕ ಸಮೀಕ್ಷೆಯಲ್ಲಿ ಯತ್ನಿಸಲಾಗಿದೆ.
ಇದನ್ನು ಪೂರ್ತಿಯಾಗಿ ಅರ್ಥ ಮಾಡಿಕೊಳ್ಳಲು 1998 ರಿಂದ 2002 (ವಾಜಪೇಯಿ ಯುಗ), ಮತ್ತು 2014 ರಿಂದ 2022 (ಮೋದಿ ಯುಗ) ರವರೆಗಿನ ಎರಡು ಹಣಕಾಸಿನ ಅವಧಿಗಳ ನಡುವಿನ ಸಮಾನ ಅಂಶಗಳು ಎಂದು ತೋರಿಸುತ್ತಿರುವ ಸಮೀಕ್ಷೆಯ ಭಾಗವನ್ನು ಗಮನಿಸಬೇಕಾಗುತ್ತದೆ.

ಅಂದರೆ, ಭಾರತೀಯ ಜನತಾ ಪಕ್ಷವು ಅಧಿಕಾರದಲ್ಲಿದ್ದ ಈ ಎರಡೂ ಅವಧಿಯನ್ನು ಸಮೀಕ್ಷೆಯಲ್ಲಿ ‘ಅಚ್ಚರಿ’ ಎಂಬ ನೆಲೆಗಟ್ಟಿನಲ್ಲಿ ತೋರಿಸಲಾಗಿದೆ. 1998ರಲ್ಲಿ ನಡೆಸಿದ ಅಣುಬಾಂಬ್ ಪರೀಕ್ಷೆಯನ್ನು ಈ ಸಮೀಕ್ಷೆಯಲ್ಲಿ ಮೊದಲ ಅಚ್ಚರಿ ಎಂಬಂತೆ ಚಿತ್ರಿಸಲಾಗಿದೆ. ಹಾಗೆಯೇ ಮೋದಿ ಅವಧಿಯಲ್ಲಿ ಸಾಂಕ್ರಾಮಿಕ ರೋಗದ ಹೊರತಾಗಿಯೂ ಆರ್ಥಿಕ ಸ್ಥಿತಿಯನ್ನು ‘ಬಿಗಿಗೊಳಿಸಲಾಗಿದೆ’ ಎಂದು ತೋರಿಸಲಾಗಿದೆ.
ಸಮೀಕ್ಷೆಯು ವಾಜಪೇಯಿ ಅವರ ‘ಬ್ಯಾಂಕುಗಳ ಸ್ವತ್ತು ರಿಕವರಿ’, ‘ಖಾಸಗೀಕರಣ’ ಮತ್ತು “ಅನಿಯಂತ್ರಿತ ಬಡ್ಡಿ ದರ’ದಂತಹ ರಚನಾತ್ಮಕ ಕ್ರಮಗಳನ್ನು ಆರ್ಥಿಕತೆಯನ್ನು ಮತ್ತೆ ಹಳಿಗೆ ತರುವ ಪ್ರಯತ್ನ ಎಂಬಂತೆ ಪಟ್ಟಿ ಮಾಡಿದರೆ, ಮೋದಿ ಆಡಳಿತದಿಂದ ಕೈಗೊಂಡ ಸುಧಾರಣೆಗಳ ಪಟ್ಟಿಗೆ ಸರಕು ಮತ್ತು ಮಾರಾಟ ತೆರಿಗೆ (ಜಿಎಸ್ಟಿ) ಮಾತ್ರವಲ್ಲದೆ, ಸರ್ಕಾರದ ಸ್ವತ್ತುಗಳು ಮತ್ತು ತೆರಿಗೆ ಸುಧಾರಣೆಗಳಿಗಾಗಿ ಹೆಚ್ಚಿನ ಖಾಸಗೀಕರಣ, ಲಸಿಕಾ ವಿತರಣೆಯನ್ನೂ ಸೇರಿಸಲಾಗಿದ್ದು, ಇದನ್ನೂ ‘ಸುಧಾರಣೆ’ ಎಂದೇ ಕರೆಯಲಾಗಿದೆ.
ಹಾಗಾಗಿಯೇ ಈ ವರ್ಷದ ಆರ್ಥಿಕ ಸಮೀಕ್ಷೆಯನ್ನು ಮೂಲಭೂತವಾಗಿ ರಾಜಕೀಯ ದಾಖಲೆಯೆಂದು ಕರೆಯಲಾಗುತ್ತಿದ್ದು, 2024 ರ ಚುನಾವಣೆಗೆ ಮೊದಲು ಮೋದಿ ಸರ್ಕಾರದ ಕೊನೆಯ ಪೂರ್ಣ ಬಜೆಟ್ ಅನ್ನು ಮಂಡಿಸುವ ಹಿನ್ನೆಲೆಯಲ್ಲಿ ಜನಸಾಮಾನ್ಯರ ಕಣ್ಣಿಗೆ ಮಣ್ಣೆರಚಲು ಈ ಆರ್ಥಿಕ ಸಮೀಕ್ಷೆಯನ್ನು ಬಳಸಲಾಗಿದೆ ಎನ್ನಲಾಗುತ್ತಿದೆ.
ಮೊದಲನೆಯದಾಗಿ ಇದು ‘ಬಲಪಂಥೀಯ ಆರ್ಥಿಕ ಪಥವನ್ನು’ ಸ್ಥಾಪಿಸುವ ಪ್ರಯತ್ನದಲ್ಲಿ ಇತ್ತೀಚಿನ ಭಾರತೀಯ ಆರ್ಥಿಕ ಇತಿಹಾಸದಲ್ಲಿನ ಕೇವಲ ಎರಡು ಅವಧಿಗಳನ್ನು ಮಾತ್ರ ಆಯ್ಕೆ ಮಾಡುತ್ತದೆ – ವಾಜಪೇಯಿ ಮತ್ತು ಮೋದಿ ಯುಗಗಳು.
ಎರಡನೆಯದಾಗಿ ಈ ಸಮೀಕ್ಷೆಯು, ಇದು ‘ಅಮೃತ್ ಕಾಲ್’ (ಸುವರ್ಣ ಯುಗ) ಎಂಬುದು ‘ಇಂಡಿಯಾ ಶೈನಿಂಗ್’ ವಿದ್ಯಮಾನದ ಮುಂದುವರಿಕೆ ಎಂದು ನಿರೂಪಣೆಯನ್ನು ರೂಪಿಸಲು ಪ್ರಯತ್ನಿಸುತ್ತದೆ. ಬಹುಶಃ ಈ ನಿರೂಪಣೆಯು ಒಂದು ಪಕ್ಷವಾಗಿ ಬಿಜೆಪಿ ಯಾವಾಗಲೂ ‘ರಾಷ್ಟ್ರೀಯ ಭದ್ರತೆ’ಯನ್ನು ಮೊದಲ ಆದ್ಯತೆಯಾಗಿ ಪರಿಗಣಿಸುತ್ತದೆ ಎಂಬುವುದನ್ನು ಒತ್ತಿ ಒತ್ತಿ ಹೇಳಲು ಪ್ರಯತ್ನಿಸುತ್ತಿರುವಂತೆ ತೋರುತ್ತದೆ.
ಸಮೀಕ್ಷೆಯು ರಾಜಕೀಕರಣಗೊಂಡಿದೆ ಎಂದು ಹೇಳಲು ಮೂರನೇ ಕಾರಣವೆಂದರೆ 2002 ಮತ್ತು 2014 ರ ಆರಂಭದ ನಡುವಿನ ಸಮಯದ ಸಂಪೂರ್ಣ ಅವಜ್ಞೆ. ಯಾಕೆಂದರೆ ಮನಮೋಹನ್ ಸಿಂಗ್ ಅಧಿಕಾರದಲ್ಲಿದ್ದ ಈ ಕಾಲದಲ್ಲೇ ನಿಜಕ್ಕೂ ಜನರ ಜೇಬಿನಲ್ಲಿ ದುಡ್ಡು ಓಡಾಡಿದ್ದು. 1998 ಮತ್ತು 2002 ರ ನಡುವೆ ಬಿಜೆಪಿ ಸರ್ಕಾರವು ನಡೆಸಿದ ರಚನಾತ್ಮಕ ಸುಧಾರಣೆಗಳು ‘2003 ರ ನಂತರ ಫಲಿತಾಂಶ ತೋರಿವೆ’ ಎಂದು ಹೇಳುವ ‘ಬೆಳವಣಿಗೆಯ ಆದಾಯ’ ವಿಭಾಗದಲ್ಲಿ ಆ ಅವಧಿಯ ಪರೋಕ್ಷ ಉಲ್ಲೇಖವನ್ನು ಮಾಡಲಾಗಿದೆ. ಆದರೆ ದೇಶದ ಆರ್ಥಿಕ ಪಥವೂ ಸಹ ವಿದೇಶಿ ವ್ಯವಹಾರಗಳಂತೆಯೇ ನಿರಂತರತೆಯಾಗಿದ್ದು, ಒಂದು ಸರ್ಕಾರದ ನೀತಿಗಳು ನಂತರದ ಅವಧಿಗೆ ಸಹಾಯ ಮಾಡಬಹುದು ಅಥವಾ ಹಾನಿ ಮಾಡಬಹುದು ಎಂಬುವುದನ್ನು ಮರೆಮಾಚಲಾಗಿದೆ.
ಅಲ್ಲದೆ, ಭಾರತದಲ್ಲಿ ಇದುವರೆಗಿನ ಯಾವ ಸರ್ಕಾರವೂ ಕೂಡ ಒಂದು ಸರ್ಕಾರದ ಹಣಕಾಸಿನ ನಿರ್ಧಾರಗಳನ್ನು ರಾಜಕೀಯ ಸಿದ್ಧಾಂತದ ಆಧಾರದ ಮೇಲೆ ವಿಭಾಗಿಸುವ ಪ್ರಯತ್ನವನ್ನು ಮಾಡಿಲ್ಲ. ಈ ಮಾದರಿಯನ್ನು ಉಲ್ಲಂಘಿಸಿ ಹೊಸದಾಗಿ ಮಂಡಿಸಿದ ಆರ್ಥಿಕ ಸಮೀಕ್ಷೆಯ ಮೂಲಕ ಮೋದಿ ಸರ್ಕಾರವು ಖಂಡಿತವಾಗಿಯೂ ಹೊಸ ಉದಾಹರಣೆಯನ್ನು ನಿರ್ಮಿಸಿಕೊಟ್ಟಿದೆ.
ಮೂಲ: thewire