ದಕ್ಷಿಣ ಭಾರತದ ಮೂವರು ಮುಖ್ಯಮಂತ್ರಿಗಳಾದ ಕೆ. ಚಂದ್ರಶೇಖರ ರಾವ್, ವೈಎಸ್ ಜಗನ್ಮೋಹನ್ ರೆಡ್ಡಿ ಮತ್ತು ಎಂ.ಕೆ. ಸ್ಟಾಲಿನ್ ಹೆಚ್ಚು ಕಡಿಮೆ ಒಂದೇ ಸಮಯದಲ್ಲಿ ದೆಹಲಿಗೆ ಭೇಟಿ ನೀಡಿದ್ದು ರಾಷ್ಟ್ರ ರಾಜಕೀಯದಲ್ಲಿ ಹೊಸ ರೀತಿಯ ಕುತೂಹಲ ಹುಟ್ಟುಹಾಕಿದೆ. 2024ರ ಲೋಕಸಭೆ ಚುನಾವಣೆಗೂ ಮೊದಲು ಈ ಮೂವರು ಮುಖ್ಯಮಂತ್ರಿಗಳು ರಾಷ್ಟ್ರೀಯ ಇಮೇಜ್ ವೃದ್ಧಿಸಿಕೊಳ್ಳುವ ಮತ್ತು ರಾಷ್ಟ್ರ ರಾಜಕಾರಣದಲ್ಲಿ ತಮ್ಮ ಪ್ರಸ್ತುತತೆಯನ್ನು ನಿರ್ಮಿಸುವ ಸಲುವಾಗಿಯೇ ದೆಹಲಿಗೆ ಬಂದಿದ್ದರು ಎಂದು ಹೇಳಲಾಗುತ್ತಿದೆ.
ರಾಷ್ಟ್ರ ಮಟ್ಟದಲ್ಲಿ ಈಗ ತೃತೀಯ ರಂಗ ರಚನೆಗೆ ಸದ್ದಿಲ್ಲದೆ ತಯಾರಿ ನಡೆಯುತ್ತಿರುವುದರಿಂದ, ಕಾಂಗ್ರೆಸ್ ಪಕ್ಷದ ಹೊಳಪು ಕಡಿಮೆ ಆಗಿರುವುದರಿಂದ ಪ್ರಾದೇಶಿಕ ಪಕ್ಷಗಳಾದ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ), ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಮತ್ತು ವೈಎಸ್‌ಆರ್ ಕಾಂಗ್ರೆಸ್ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆ ಹೊಂದಿವೆ. ಹಾಗಾಗಿಯೇ ಮೂವರು ಮುಖ್ಯಮಂತ್ರಿಗಳು ಏಕಕಾಲದಲ್ಲಿ ದೆಹಲಿಗೆ ಭೇಟಿ ನೀಡಿದ್ದಾರೆ. ಈ ಮೂವರು ಪರಸ್ಪರ ಭೇಟಿ ಆಗಿಲ್ಲವಾದರೂ ಎಲ್ಲರ ಗುರಿ ಒಂದೇ ಎಂದು ಹೇಳಲಾಗುತ್ತಿದೆ.
ನಿರ್ಣಾಯಕ ಪಾತ್ರದ ಸುಳಿವು ನೀಡಿದ ಸ್ಟಾಲಿನ್

ಎಂಕೆ ಸ್ಟಾಲಿನ್ ಅವರ ಮೂರು ದಿನಗಳ ದೆಹಲಿಯ ಭೇಟಿಯು ಹಲವಾರು ರೀತಿಯಲ್ಲಿ ಪ್ರಾಮುಖ್ಯತೆ ಪಡೆದುಕೊಂಡಿದೆ. ತಮಿಳುನಾಡಿನಿಂದ ಹೊರಗಿರುವ ಡಿಎಂಕೆಯ ಮೊದಲ ಕಚೇರಿಯಾದ ‘ಅಣ್ಣಾ-ಕಲೈಂಜರ್ ಅರಿವಾಲಯಂ’ ಉದ್ಘಾಟನೆಯಿಂದ, ರಾಷ್ಟ್ರ ರಾಜಧಾನಿಯಲ್ಲಿ ಅವರ ಆತ್ಮಚರಿತ್ರೆಯ ಬಿಡುಗಡೆಯ ಸಮಯದಲ್ಲಿ ಬಿಜೆಪಿ ವಿರೋಧಿ ಮಿತ್ರಪಕ್ಷಗಳ ಉಪಸ್ಥಿತಿಯವರೆಗೆ ಸ್ಟಾಲಿನ್ “ದಿಲಿ ಡೋರ್ ನಹಿ” ಎಂಬ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ಇದಕ್ಕೆ ದೆಹಲಿಯಲ್ಲಿರುವ ಡಿಎಂಕೆ ಕಚೇರಿಯು ರಾಷ್ಟ್ರೀಯ ರಾಜಕೀಯದಲ್ಲಿ ಡಿಎಂಕೆ ಮತ್ತು ದ್ರಾವಿಡ ಮಾದರಿಯು ವಹಿಸುವ ಅನಿವಾರ್ಯ ಪಾತ್ರದ ಬಲವಾದ ಸಂಕೇತವಾಗಿದೆ ಎಂಬ ಸ್ಟಾಲಿನ್ ಹೇಳಿಕೆ ಬಹಳ ಒಳ್ಳೆಯ ಉದಾಹರಣೆ. ರಾಹುಲ್ ಗಾಂಧಿ, ಒಮರ್ ಅಬ್ದುಲ್ಲಾ, ಪಿಣರಾಯಿ ವಿಜಯನ್ ಮತ್ತು ತೇಜಸ್ವಿ ಯಾದವ್ ಮತ್ತಿತರರು ಸ್ಟಾಲಿನ್ ಆತ್ಮಚರಿತ್ರೆ ಬಿಡುಗಡೆ ವೇಳೆ ಉಪಸ್ಥಿತರಿದ್ದುದು ಇನ್ನೊಂದು ಉತ್ತಮ ಉದಾಹರಣೆ. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರೊಂದಿಗೆ ದೆಹಲಿಯ ಸರ್ಕಾರಿ ಶಾಲೆಗಳು ಮತ್ತು ಮೊಹಲ್ಲಾ ಕ್ಲಿನಿಕ್ ಗಳಿಗೆ ಭೇಟಿ ನೀಡಿದ್ದು, ಆಮ್ ಆದ್ಮಿ ಪಕ್ಷದೊಂದಿಗೆ ಡಿಎಂಕೆ ಸಂಬಂಧಗಳನ್ನು ಬಲಪಡಿಸುವ ಮತ್ತು ಬಿಜೆಪಿ ವಿರೋಧಿ ಮಿತ್ರರಿಂದ ಬೆಂಬಲವನ್ನು ಪಡೆಯುವ ಹೆಜ್ಜೆ ಎನ್ನಲಾಗಿದೆ.
ಕುತೂಹಲಕಾರಿಯಾದ ವಿಷಯ ಏನೆಂದರೆ 2019ರ ಚುನಾವಣೆಯಲ್ಲಿ ಪಕ್ಷವು 24 ಚುನಾಯಿತ ಸಂಸದರನ್ನು ಕೆಳಮನೆಗೆ ಕಳುಹಿಸಿದ ನಂತರ ಡಿಎಂಕೆ ಲೋಕಸಭೆಯಲ್ಲಿ ಮೂರನೇ ಅತಿದೊಡ್ಡ ಪಕ್ಷವಾಗಿದೆ. ಹಾಗಾಗಿ 1980 ಮತ್ತು 1990ರ ದಶಕದಲ್ಲಿ ತಂದೆ ಕರುಣಾನಿಧಿ ಮಾಡಿದಂತೆ 2024ರ ಮೊದಲು ಸ್ಟಾಲಿನ್ ಯುಪಿಎ ಅಥವಾ ತೃತೀಯ ರಂಗವನ್ನು ಅಧಿಕಾರಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಕೆ. ಚಂದ್ರಶೇಖರ ರಾವ್ ಅಥವಾ ಮಮತಾ ಬ್ಯಾನರ್ಜಿ ಅವರಂತಹ ಇತರ ಪ್ರಾದೇಶಿಕ ಪಕ್ಷದ ನಾಯಕರಿಗೆ ಹೋಲಿಸಿದರೆ ಸ್ಟಾಲಿನ್ ಗಾಂಧಿ ಕುಟುಂಬದೊಂದಿಗೆ ಹೆಚ್ಚು ಹತ್ತಿರವಾಗಿದ್ದಾರೆ ಎಂಬುದು ಕೂಡ ಪ್ರಮುಖ ಸಂಗತಿಯಾಗಿದೆ.
ಜಗನ್ ಮೋಹನ್ ರೆಡ್ಡಿ ರಹಸ್ಯ

ಜಗನ್ ಮೋಹನ್ ರೆಡ್ಡಿ ಅವರ ವೈಎಸ್ಆರ್ ಕಾಂಗ್ರೆಸ್ ಪಕ್ಷವು ಡಿಎಂಕೆಗಿಂತ ಹಿಂದೆ ಉಳಿದಿಲ್ಲ. ಆಂಧ್ರಪ್ರದೇಶದ 25 ಲೋಕಸಭಾ ಸ್ಥಾನಗಳ ಪೈಕಿ ವೈಎಸ್‌ಆರ್‌ಸಿಪಿ 2019ರ ಚುನಾವಣೆಯಲ್ಲಿ 22 ಸ್ಥಾನಗಳನ್ನು ಗೆದ್ದಿದೆ. 2024ರಲ್ಲೂ ವೈಎಸ್ಆರ್ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ. ಅಲ್ಲದೆ ಸ್ಟಾಲಿನ್ ಅವರಂತೆ ಜಗನ್ ಕೂಡ ಕಲ್ಯಾಣ ಕಾರ್ಯಕ್ರಮಗಳಿಗೆ ಒತ್ತು ನೀಡುತ್ತಿದ್ದಾರೆ. ವಿವಿಧ ಕಲ್ಯಾಣ ಯೋಜನೆಗಳ ಹೆಸರಿನಲ್ಲಿ ಬಡವರು ಮತ್ತು ಮಧ್ಯಮ ವರ್ಗದವರಿಗೆ ನೇರ ಹಣ ವರ್ಗಾವಣೆ ಮಾಡಿರುವುದು ಅವರನ್ನು ಜನಾನುರಾಗಿಯನ್ನಾಗಿ ಮಾಡಿದೆ. ಆದರೆ ಕೇಂದ್ರದ ಬಿಜೆಪಿ ಸರ್ಕಾರ ಜೊತೆಗೆ ಜಗನ್ ಸಂಬಂಧ ಹೇಗಿದೆ ಎಂಬುದು ನಿಗೂಢವಾಗಿಯೇ ಉಳಿದಿದೆ. ಇತ್ತೀಚೆಗಷ್ಟೇ ಪ್ರತ್ಯೇಕ ರಾಜ್ಯವಾಗಿರುವ ಆಂಧ್ರಪ್ರದೇಶದಕ್ಕೆ ಅಭಿವೃದ್ಧಿ ಯೋಜನೆಗಳಿಗಾಗಿ ಕೇಂದ್ರದ ಹಣಕಾಸಿನ ನೆರವು ಬೇಕಾಗಿದೆ. ಈ ಹಿನ್ನೆಲೆಯಲ್ಲಿ ಅವರು ಬಿಜೆಪಿ ಬಗ್ಗೆ ಮೃಧು ಧೋರಣೆ ತಾಳಬಹುದು ಎಂಬ ಅಂದಾಜಿದೆ.
ಸದ್ಯ ಆಂಧ್ರದಲ್ಲಿ ಕಾಂಗ್ರೆಸ್ ಪ್ರಬಲವಾಗಿಲ್ಲ. ಅಲ್ಲದೆ ತಮ್ಮನ್ನು ಬಂಧಿಸಲು ಕಾಂಗ್ರೆಸ್ ಪಕ್ಷವೇ ಕಾರಣ ಎಂದು ಜಗನ್ ಮೋಹನ್ ರೆಡ್ಡಿ ನಂಬಿರುವುದರಿಂದ ಅವರಿಗೆ ಬಿಜೆಪಿಗೆ ಹತ್ತಿರವಾಗುವುದನ್ನು ಬಿಟ್ಟು ಬೇರೆ ದಾರಿಯಿಲ್ಲ. 2019ರ ಚುನಾವಣೆ ವೇಳೆ ಕರ್ನಾಟಕ, ಗುಜರಾತ್ ಮತ್ತು ಇತರ ರಾಜ್ಯಗಳಲ್ಲಿ ಮೋದಿ-ಶಾ ನಾಯಕತ್ವವನ್ನು ಸೋಲಿಸಲು ಚಂದ್ರಬಾಬು ನಾಯ್ಡು ಹೆಚ್ಚು ತೊಡಗಿಸಿಕೊಂಡಿದ್ದರಿಂದ ಬಿಜೆಪಿ ಕೂಡ ಜಗನ್ ಮೋಹನ್ ರೆಡ್ಡಿ ಜೊತೆಗಿರಲು ಬಯಸುತ್ತದೆ. ಜಗನ್ ಅವರನ್ನು ಬಳಸಿಕೊಂಡು ಟಿಡಿಪಿ ಮತ್ತು ನಾಯ್ಡು ಅವರನ್ನು ಕೆಡವಲು ಬಿಜೆಪಿ ಪ್ಲಾನ್ ಮಾಡಿದೆ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ.
ದೆಹಲಿಯಡೆಗೆ ಆಕರ್ಷಿತರಾಗಿರುವ ಚಂದ್ರಶೇಖರ್ ರಾವ್

ಚಂದ್ರಶೇಖರ ರಾವ್ ಅವರಿಗೆ ಇದ್ದಕ್ಕಿದ್ದಂತೆ ದೆಹಲಿಯ ಸೆಳೆತ ಹೆಚ್ಚಾಗಿದೆ. ಸಂಜಯ್ ಕುಮಾರ್ ಝಾ ಅವರನ್ನು ದೆಹಲಿಯಲ್ಲಿ ತಮ್ಮ ಪತ್ರಿಕಾ ಸಂಪರ್ಕ ಅಧಿಕಾರಿಯಾಗಿ ನೇಮಿಸಿದ್ದಾರೆ. ದೆಹಲಿಯಲ್ಲಿ ಮೊಕ್ಕಾಂ ಹೂಡಿದ್ದ ರಾವ್, ತೆಲಂಗಾಣ ರೈತರ ಪರವಾಗಿ ದನಿ ಎತ್ತುವ ಮತ್ತು ಭತ್ತ ಖರೀದಿ ವಿಚಾರದಲ್ಲಿ ಕೇಂದ್ರವನ್ನು ಬಯಲಿಗೆಳೆಯುವ ಉದ್ದೇಶವನ್ನು ತಿಳಿಸಿದ್ದಾರೆ. ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ತೆಲಂಗಾಣದಲ್ಲೂ ಚಂದ್ರಶೇಖರ ರಾವ್ ಕಾರ್ಯವೈಖರಿ ಬದಲಾಗಿದೆ. ತಮ್ಮ ಫಾರಂ ಹೌಸ್ ನಿಂದಲೇ ಅಧಿಕಾರ ನಡೆಸುತ್ತಿದ್ದಾರೆ ಎಂಬ ಕುಖ್ಯಾತಿಯಿಂದ ಹೊರಬರಲು ಈಗ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು ಆರಂಭಿಸಿದ್ದಾರೆ. ಕರೋನಾ ವೇಳೆ ಕಾಣೆಯಾಗಿದ್ದ ಅವರು ಈಗ ಇದ್ದಕ್ಕಿದ್ದಂತೆ ಸಕ್ರಿಯರಾಗಿರುವುದು ಅಚ್ಚರಿ ಉಂಟುಮಾಡಿದೆ. 2014ರಲ್ಲಿ ಅವರು ಸಿಎಂ ಆಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ಸಾಮಾಜಿಕ ಅಭಿವೃದ್ಧಿ ಯೋಜನೆಗಳನ್ನು ಪ್ರಾರಂಭಿಸುವುದರತ್ತ ಚಿತ್ತ ಹರಿಸಿದ್ದಾರೆ. ಏಕೆಂದರೆ ಸದ್ಯ ಬಿಜೆಪಿಯೇತರ ಮಿತ್ರಪಕ್ಷಗಳ ಬೆಂಬಲವನ್ನು ಒಟ್ಟುಗೂಡಿಸಿ ಪರ್ಯಾಯ ರಂಗ ಸ್ಥಾಪಿಸುವುದು ಚಂದ್ರಶೇಖರ್ ರಾವ್ ಅವರ ಆಲೋಚನೆ ಎನ್ನಲಾಗಿದೆ.
ಹೀಗೆ ದಕ್ಷಿಣ ಭಾರತದ ಮೂವರು ಮುಖ್ಯಮಂತ್ರಿಗಳಾದ ಕೆ. ಚಂದ್ರಶೇಖರ ರಾವ್, ವೈಎಸ್ ಜಗನ್ಮೋಹನ್ ರೆಡ್ಡಿ ಮತ್ತು ಎಂ.ಕೆ. ಸ್ಟಾಲಿನ್ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ತಮ್ಮದೇಯಾದ ರಾಜಕೀಯ ದಾಳ ಉರುಳಿಸಿದ್ದಾರೆ. ನಿಜಕ್ಕೂ ರಾಷ್ಟ್ರ ರಾಜಕಾರಣದಲ್ಲಿ ದಕ್ಷಿಣದ ಈ ಮೂರು ಮುಖ್ಯಮಂತ್ರಿಗಳು ಪ್ರಮುಖ ಪಾತ್ರವಹಿಸುವರೇ ಎಂಬುದನ್ನು ಕಾದುನೋಡಬೇಕು.