ಡಿಸೆಂಬರ್ನಲ್ಲಿ ರಾಜ್ಯ ರಾಜಕಾರಣದಲ್ಲಿ ಕ್ರಾಂತಿ ನಡೆಯುವ ಸಾಧ್ಯತೆಯಿದ್ದು, ಕಾಂಗ್ರೆಸ್ ಸರ್ಕಾರ ಉರುಳಿಸಿ ಬಿಜೆಪಿ ಸರ್ಕಾರ ಸ್ಥಾಪನೆಗೆ ಸಾವಿರ ಕೋಟಿ ರೆಡಿ ಇಟ್ಕೊಂಡು ಕಾಯ್ತಿದ್ದಾರೆ ಎನ್ನುವ ಯತ್ನಾಳ್ ಹೇಳಿಕೆ ಭಾರೀ ಸಂಚಲನ ಸೃಷ್ಟಿಸಿದೆ. ರಾಜ್ಯದಲ್ಲಿ ಭ್ರಷ್ಟಾಚಾರದಿಂದ ಸಂಪಾದಿಸಿದ ಹಣ ಹೊಂದಿಸಿಕೊಂಡು ಕಾಯುತ್ತಿದ್ದಾರೆ. ಆದರೆ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರುವುದನ್ನು ಹೈಕಮಾಂಡ್ ಕೂಡ ಒಪ್ಪುವುದಿಲ್ಲ. ನಮ್ಮ ಒಪ್ಪಿಗೆಯೂ ಇಲ್ಲ ಎಂದು ದಾವಣಗೆರೆಯಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು.
ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಬಗ್ಗೆ ಡಿಸಿಎಂ ಡಿ.ಕೆ ಶಿವಕುಮಾರ್ ಮಾತನಾಡಿ, ಕಾಂಗ್ರೆಸ್ ಸರ್ಕಾರವನ್ನು ಬಿಳಿಸಲು ಬಿಜೆಪಿ ಯತ್ನ ನಡೆಯುತ್ತಿದೆ. 1000 ಕೋಟಿ ರೂಪಾಯಿ ರೆಡಿ ಮಾಡ್ಕೊಂಡಿದ್ದಾರೆ ಎಂದು ಶಾಸಕ ಯತ್ನಾಳ್ ಹೇಳಿದ್ದಾರೆ. ಇದರ ಮಾಹಿತಿ ನಮಗೂ ಇದೆ. ಈ ಬಗ್ಗೆ ಇವತ್ತು ಕಾಂಗ್ರೆಸ್ ಲೀಗಲ್ ಟೀಮ್ ಮೀಟಿಂಗ್ ಕರೆದಿದ್ದೇನೆ ಎಂದಿದ್ದಾರೆ ಡಿಸಿಎಂ ಡಿ. ಕೆ ಶಿವಕುಮಾರ್. 1200 ಕೋಟಿ ರೂಪಾಯಿ ರೆಡಿಯಾಗಿದೆ ಎಂಬ ಮಾಹಿತಿ ಇದೆ ಅಂತ ಹೇಳಿಕೆ ಸ್ವತಃ ಡಿಸಿಎಂ ಹೇಳಿಕೆ ಕೊಟ್ಟಿದ್ದಾರೆ. ಆ ಮೂಲಕ ಯತ್ನಾಳ್ ಹೇಳಿದ್ದ ಮಾಹಿತಿ ಸರಿಯಿದೆ ಎನ್ನುವಂತೆ ಡಿಸಿಎಂ ಡಿ.ಕೆ ಶಿವಕುಮಾರ್ ಮುದ್ರೆ ಒತ್ತಿದ್ದಾರೆ.
ಬಿಜೆಪಿ ಕಡೆಯಿಂದ ಇಷ್ಟು ಪ್ರಮಾಣದ ಹಣ ರೆಡಿಯಾಗಿದೆ ಎಂಬ ಮಾಹಿತಿ ಇದೆ ಎನ್ನುವ ಮಾಹಿತಿಯನ್ನು ಹೈಕಮಾಂಡ್ ನಾಯಕರಿಗೆ ತಿಳಿಸಿದ್ದೇನೆ. ಇದು ಇಡಿ ತನಿಖೆಯ ವ್ಯಾಪ್ತಿಗೆ ಬರುವ ವಿಚಾರ. ಇಡಿ ತನಿಖೆ ಮಾಡುವ ಸಂಬಂಧ ಹಾಗೂ ಜಾರಿ ನಿರ್ದೇಶನಾಲಯಕ್ಕೆ ದೂರು ನೀಡುವ ಸಂಬಂಧ ಇಂದು ಲೀಗಲ್ ಟೀಂ ಜೊತೆಗೆ ಚರ್ಚೆ ಮಾಡಲಿದ್ದೇನೆ. ಲೀಗಲ್ ಟೀಮ್ ಜೊತೆ ಚರ್ಚೆ ಬಳಿಕ ಮುಂದೆ ಏನು ಮಾಡಬೇಕು ಅನ್ನೋ ಬಗ್ಗೆ ನಿರ್ಧಾರ ಮಾಡ್ತೇವೆ ಎಂದಿದ್ದಾರೆ.
ಆದರೆ, ಸಾವಿರ ಕೋಟಿ ಎಂದಿದ್ದ ಯತ್ನಾಳ್ ಹೇಳಿಕೆಯನ್ನೇ ಮಾರ್ಪಾಡು ಮಾಡಿ 1200 ಕೋಟಿ ರೆಡಿಯಾಗಿದೆ ಎನ್ನುವ ಮಾಹಿತಿಯನ್ನು ಡಿಸಿಎಂ ಡಿ.ಕೆ ಶಿವಕುಮಾರ್ ನೀಡಿದ್ದಾರೆ. ಇದು ಕೇವಲ ರಾಜಕೀಯ ಆರೋಪ ಆಗಿದ್ದರೆ ಸರಿ. ಆದರೆ ಈ ಬಗ್ಗೆ ಜಾರಿ ನಿರ್ದೇಶನಾಲಯಕ್ಕೆ ದೂರು ನೀಡುವುದಾಗಿಯೂ ಉಪಮುಖ್ಯಮಂತ್ರಿಗಳು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಲೀಗಲ್ ಟೀಂ ಜೊತೆಗೆ ಚರ್ಚೆ ನಡೆಸುತ್ತೇನೆ ಎಂದಿದ್ದಾರೆ. ಈಗ ಕಾನೂನು ಕುಣಿಕೆಯಲ್ಲಿ ಡಿ.ಕೆ ಶಿವಕುಮಾರ್ ಕೂಡ ಸಿಕ್ಕಿ ಬೀಳುವ ಸಾಧ್ಯತೆಯಿದೆ. ಯತ್ನಾಳ್ ಕೇವಲ ಊಹಾಪೋಹದ ಮಾತನಾಡಿದ್ದರೆ, ಅದನ್ನು ಅಂಗೀಕರಿಸಿದ ಡಿಸಿಎಂ ಕೂಡ ಸಾಕ್ಷ್ಯ ಕೊಡಬೇಕಾಗುತ್ತದೆ.