ಮಾಜಿ ಸಿಎಂ ಸಿದ್ದರಾಮಯ್ಯರವರನ್ನು ವಿರೋಧಿಸುವವರು ಗೋಡ್ಸೆ ಬೆಂಬಲಿಗರಷ್ಟೆ ಹೊರತು ಡಾ|| ಬಿ.ಆರ್.ಅಂಬೇಡ್ಕರ್ರವರ ಅನುಯಾಯಿಗಳಲ್ಲ. ಅವರನ್ನು ಪ್ರಶ್ನಿಸುವ ಹಕ್ಕು ಬಿಜೆಪಿಯವರಿಗಿಲ್ಲ ಎಂದು ಮಂಗಳೂರಿನಲ್ಲಿ ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಯು.ಟಿ.ಖಾದರ್ ಹೇಳಿದ್ದಾರೆ.
ಬಾಬಾ ಸಾಹೇಬ್ ಡಾ|| ಬಿ.ಆರ್.ಅಂಬೇಡ್ಕರ್ರವರು ಬರೆದ ಸಂವಿಧಾನವನ್ನು ಸುಟ್ಟವರು ಈಗ ಸಿದ್ದರಾಮಯ್ಯನವರ ಬಗ್ಗೆ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿಗೆ ನಿಜವಾಗಲೂ ಎಸ್ಸಿ-ಎಸ್ಟಿ ಜನಾಂಗದ ಬಗ್ಗೆ ಕಾಳಜಿ ಇದ್ದರೆ ಹಿಂದುಳಿದವರ ಕಲ್ಯಾಣಕ್ಕಾಗಿ ಹಿಂದಿನ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ಎಲ್ಲಾ ಯೋಜನೆಗಳನ್ನು ಮುಂದುವರೆಸಬೇಕು ಎಂದು ಖಾದರ್ ಆಗ್ರಹಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಎಂಸಿಸಿ ವ್ಯಾಪ್ತಿಯ ಸುರತ್ಕಲ್ ವೃತ್ತಕ್ಕೆ ಸಾರ್ವಕರ್ ಹೆಸರಿಡುವ ಬದಲು ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ದಿಗೆ ಕೊಡುಗೆ ನೀಡಿದ ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ, ಶ್ರೀನಿವಾಸ ಮಲ್ಯ, ಕುದ್ಮಲ್ ರಂಗರಾವ್ ಹೆಸರಿಡಿ,ಇದರಿಂದ ಮುಂದಿನ ಪೀಳಿಗೆಗೆ ಇತಿಹಾಸ ತಿಳಿಯುತ್ತದೆ. ರಾಷ್ಟ್ರೀಯ, ರಾಜ್ಯ ನಾಯಕರ ಹೆಸರಿಡುವ ಬದಲು ಇಲ್ಲಿನವರ ಹೆಸರನ್ನು ಇಡುವುದರಲ್ಲಿ ಒಂದು ಅರ್ಥವಿದೆ. ಅದರ ಬದಲು ವೃತ್ತಕ್ಕೆ ಸಾರ್ವಕರ್ ಹೆಸರಿಡುವ ಮುಂಚೆ ಬಿಜೆಪಿಯವರು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳುವುದು ಸೂಕ್ತ ಎಂದು ಹೇಳಿದ್ದಾರೆ.
ಇತ್ತೀಚಿಗೆ ನಡೆದ ಹಾನಗಲ್ ಮತ್ತು ಸಿಂಧಗಿ ಉಪಚುನಾವಣೆಯ ಬಗ್ಗೆ ಮಾತನಾಡಿದ ಖಾದರ್ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಲ್ಲ ಅದು ಜನರ ಗೆಲುವು ಎಂದು ಬಣ್ಣಿಸಿದ್ದಾರೆ. ದೇಶದಲ್ಲಿ ನಡೆದ ಉಪಚುನಾವಣೆಗಳಲ್ಲಿ ಬಿಜೆಪಿ ತೀವ್ರ ಹಿನ್ನಡೆ ಅನುಭವಿಸಿದ ಕಾರಣ ಪೆಟ್ರೋಲ್ ಮತ್ತು ಡೀಸಲ್ ಬೆಲೆಯನ್ನ ಕಡಿಮೆ ಮಾಡಿದೆ. ಆದರೆ, ಅಗತ್ಯ ವಸ್ತುಗಳ ಬೆಲೆ ಕಡಿಮೆ ಮಾಡುವ ಯಾವುದೇ ಪ್ರಯತ್ನ ನಡೆದಿಲ್ಲ ಎಂದು ಆರೋಪಿಸಿದ್ದಾರೆ.
ಕಳೆದ ಏಳು ವರ್ಷಗಳಲ್ಲಿ ಬಿಜೆಪಿ ಸರ್ಕಾರದ ಸಾಧನೆ ಏನೆಂದರೆ ಪೆಟ್ರೋಲ್ ಮತ್ತು ಡೀಸಲ್ ಬೆಲೆಯನ್ನ 100 ರೂಪಾಯಿಗಳ ಗಡಿ ದಾಟಿಸಿದ್ದು ಅದೇ ಬಿಜೆಪಿ ಸರ್ಕಾರದ ದೊಡ್ಡ ಸಾಧನೆ ಎಂದು ಕಿಡಿಕಾರಿದ್ದಾರೆ.
ಸಾರ್ವಜನಿಕರ ಆಕ್ರೋಶಕ್ಕೆ ಮಣಿದು ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸಲ್ ಬೆಲೆಯನ್ನ ಕಡಿಮೆ ಮಾಡಿದೆ. ಚೀನಾ, ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ ಮ್ತು ನೇಪಾಳಕ್ಕಿಂತ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸಲ್ ದರ ಹೆಚ್ಚಿದೆ ಎಂದು ಮಾಜಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.