ಮೈಸೂರು : ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಜಾರಿಗೊಳಿಸಿರುವ ಶಕ್ತಿ ಯೋಜನೆಯನ್ನು ವ್ಯಂಗ್ಯ ಮಾಡುವವರು ಮನುವಾದಿಗಳು ಎಂದು ಸಚಿವ ಡಾ.ಹೆಚ್.ಸಿ ಮಹದೇವಪ್ಪ ಟಾಂಗ್ ನೀಡಿದ್ದಾರೆ. ಮೈಸೂರಿನಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು, ರಾಜ್ಯದ ಮಹಿಳೆಯರ ಸಬಲೀಕರಣಕ್ಕೆಂದು ಈ ಯೋಜನೆ ಜಾರಿ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಶಕ್ತಿಯೋಜನೆ ಇಡೀ ರಾಷ್ಟ್ರದಲ್ಲಿ ಮೊದಲ ಬಾರಿ ಅನುಷ್ಠಾನಕ್ಕೆ ಬಂದಿದ್ದು ತೀವ್ರ ಸಂಚಲನ ಉಂಟು ಮಾಡಿದೆ.ಇದಕ್ಕೆ ವಾರ್ಷಿಕವಾಗಿ 4050 ಕೋಟಿ ವೆಚ್ಚವಾಗಲಿದೆ.ಮಹಿಳೆಯರ ಸಬಲೀಕರಣಕ್ಕಾಗಿ ಶಕ್ತಿ ಯೋಜನೆ ಜಾರಿ ಮೂಲಕ ಕಾಂಗ್ರೆಸ್ ಮೊದಲ ಹೆಜ್ಜೆ ಇಟ್ಟಿದೆ.ಈ ಮೂಲಕ ನಾವು ಗ್ಯಾರಂಟಿ ಕುಳ ಎಂಬುದನ್ನು ಸಾಬೀತು ಮಾಡಿದ್ದೇವೆ ಎಂದು ಹೇಳಿದ್ದಾರೆ.

ರಾಜ್ಯದ ಬಹುತೇಕ ಮಹಿಳೆಯರು ಇದುವರೆಗೆ ಎಲ್ಲಿಗೂ ಪ್ರವಾಸಕ್ಕೆ ಹೋಗಿಲ್ಲ.ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಯನ್ನು ಮಹಿಳೆಯರು ಸದುಪಯೋಗ ಪಡಿಸಿಕೊಳ್ಳಬೇಕು.ಶಕ್ತಿ ಯೋಜನೆಯನ್ನು ವ್ಯಂಗ್ಯ ಮಾಡುತ್ತಿರುವವರು ಮನುವಾದಿಗಳು.ಮಹಿಳೆಯರಿಗೆ ಸಮಾನತೆ ನೀಡುವ ಸಲುವಾಗಿ ಹಿಂದೂ ಕೋಡ್ ಬಿಲ್ ಜಾರಿಯಾದಾಗ ಮನುವಾದಿಗಳು ವಿರೋಧ ಮಾಡಿದ್ದರು. ಮಹಿಳೆಯರಿಗೆ ಸಮಾನತೆ ಸ್ವಾತಂತ್ರ್ಯ ಕೊಡುವುದನ್ನು ಈ ಮನುವಾದಿಗಳು ವಿರೋಧಿಸಿದ್ದರು.
ನಾವು ಸುಳ್ಳನ್ನು ಸತ್ಯ ಮಾಡೋಕೆ ಹೊರಟಿಲ್ಲ. ಎಲ್ಲರ ಕಣ್ಣಿಗೂ ಕಾಣುವಂತೆ ಕಾರ್ಯಗತ ಮಾಡಿದ್ದೇವೆ ಎಂದು ಸಚಿವ ಡಾ. ಹೆಚ್.ಸಿ ಮಹದೇವಪ್ಪ ಮೈಸೂರಿನಲ್ಲಿ ಹೇಳಿದ್ದಾರೆ.