ಬೆಂಗಳೂರು: ಈ ಬಜೆಟ್ ಬಿಸಿಲು ಕುದುರೆಯಿದ್ದಂತೆ. ಯಾರ ಕಣ್ಣಿಗೂ ಕಾಣದು, ಕೈಗೂ ಸಿಗದು ಎಂದು ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕರ್ನಾಟಕ ಬಜೆಟ್ ಕುರಿತು ಪ್ರತಿಕ್ರಿಯಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದು ವಿಧಾನಸಭೆಯಲ್ಲಿ ಬಜೆಟ್ ಮಂಡನೆ ಮಾಡಿದ್ದಾರೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, ಬಿಜೆಪಿಯವರ ಡಬಲ್ ಇಂಜಿನ್ ಕೆಟ್ಟು ನಿಂತು ಹೊಗೆ ಬರುತ್ತಿದೆ. ಬೊಮ್ಮಾಯಿ ಅವರು ತಾವೂ ಒಂದು ಬಜೆಟ್ ಮಂಡಿಸಿದ್ದೇವೆ ಎಂದು ಹೇಳಿಕೊಳ್ಳಲು ಇದರ ಪ್ರತಿಯನ್ನು ಮನೆಯಲ್ಲಿ ಇಟ್ಟುಕೊಳ್ಳಬಹುದು ಅಷ್ಟೇ. ಅದನ್ನು ಜಾತ್ರೆಯ ಕನ್ನಡಕ ಹಾಕಿಕೊಂಡು ನೋಡಬೇಕು ಎಂದು ವ್ಯಂಗ್ಯವಾಡಿದ್ದಾರೆ.
ರಾಮನಗರದಲ್ಲಿ ರಾಮಮಂದಿರ ಕಟ್ಟುವ ಕುರಿತು ಪ್ರತಿಕ್ರಿಯಿಸಿ, ಮೊದಲು ಅವರ ಪಕ್ಷದ ಕಚೇರಿ ಕಟ್ಟಲು ಹೇಳಿ ಎಂದು ತಿರುಗೇಟು ನೀಡಿದರು.
ದಮ್ಮು, ತಾಕತ್ತಿನ ಬಗ್ಗೆ ಮಾತನಾಡುವ ಮುಖ್ಯಮಂತ್ರಿಗಳಿಗೆ ಬಜೆಟ್ ಓದುವಾಗ ಸ್ವರವೇ ಇರಲಿಲ್ಲ. ಈ ಬಜೆಟ್’ನಲ್ಲಿ ರೈತರು, ಕಾರ್ಮಿಕರು, ಯುವಕರು, ವರ್ತಕರು ಯಾರಿಗೂ ಲಾಭವಿಲ್ಲ. ಈ ಬಜೆಟ್ ನಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಬಗ್ಗೆಯೂ ಮಾತನಾಡಿಲ್ಲ. ಸ್ವಯಂ ಉದ್ಯೋಗ ಯೋಜನೆಗಳೂ ಇಲ್ಲ. ಹೀಗಾಗಿ ಈ ಬಜೆಟ್ ನಿಂದ ಯಾವುದೇ ವರ್ಗಕ್ಕೂ ಪ್ರಯೋಜನ ಆಗುವುದಿಲ್ಲ ಎಂದು ಕಿಡಿಕಾರಿದರು.
ಬೆಂಗಳೂರು ಅಂತಾರಾಷ್ಟ್ರೀಯ ನಗರ. ಇದರ ಅಭಿವೃದ್ಧಿಗೆ ಯಾವುದೇ ಕಾರ್ಯಯೋಜನೆ ಇಲ್ಲ. ಬೆಂಗಳೂರಿನ ರಸ್ತೆ ಗುಂಡಿಗೆ 7100 ಕೋಟಿ ವೆಚ್ಚ ಮಾಡಿದ್ದು, ಇದರಲ್ಲಿ ಯಾವ ರಸ್ತೆಗೆ ಎಷ್ಟು ಖರ್ಚು ಮಾಡಿದ್ದಾರೆ, ಎಷ್ಟು ರಸ್ತೆ ಗುಂಡಿ ಮುಕ್ತ ಮಾಡಿದ್ದಾರೆ ಎಂಬ ಯಾವುದೇ ಮಾಹಿತಿ ಇಲ್ಲ. ರಾಜ್ಯಕ್ಕೆ ಭ್ರಷ್ಟಾಚಾರದ ಕಳಂಕ ಅಂಟಿದ್ದು, ಈ ವಿಚಾರವಾಗಿ ಭ್ರಷ್ಟಾಚಾರ ನಿಗ್ರಹದ ಬಗ್ಗೆ ಯಾವುದೇ ಪ್ರಸ್ತಾಪ ಮಾಡಿಲ್ಲ ಎಂದರು.
ಮಹಿಳೆಯರಿಗೆ ನಾವು 2 ಸಾವಿರ ಪ್ರೋತ್ಸಾಹ ಧನ ನೀಡುವುದಾಗಿ ಹೇಳಿದ್ದೆವು. ಆದರೆ ಸರ್ಕಾರ ಈಗ ಬಿಪಿಎಲ್ ಕುಟುಂಬದ ಮಹಿಳೆಯರಿಗೆ 500 ರೂ ನೀಡುವುದಾಗಿ ಹೇಳಿದ್ದಾರೆ. ಇದರಿಂದ ಏನು ಸಹಾಯವಾಗುತ್ತದೆ? ಬೆಲೆ ಏರಿಕೆ ಹೆಚ್ಚಾಗಿದ್ದು, ಈ ಸರ್ಕಾರ ಯಾರಿಗಾಗರೂ ಪರಿಹಾರ ನೀಡಿದ್ದಾರಾ? ಪೆಟ್ರೋಲ್ ಹಾಗೂ ಡೀಸೆಲ್ ತೆರಿಗೆ ಮೂಲಕ ಲಕ್ಷಾಂತರ ಕೋಟಿ ಹಣ ಸಂಗ್ರಹಿಸಿದ್ದು, ಮತ್ತೆ ಅದು ಜನರಿಗೆ ನೀಡುತ್ತಿಲ್ಲ. ಜಿಎಸ್ಟಿ ಮೂಲಕ ಸಾವಿರಾರು ಕೋಟಿ ಸಂಗ್ರಹಿಸಿದ್ದು ಆ ಹಣವನ್ನು ರಾಜ್ಯಕ್ಕೆ ಸಮರ್ಪಕವಾಗಿ ಅನುದಾನ ನೀಡುತ್ತಿಲ್ಲ. ತಮ್ಮ ಶಾಸಕರ ಕ್ಷೇತ್ರಗಳಲ್ಲಿ ಅನುಕೂಲವಾಗುವಂತೆ ಕೆಲವು ಘೋಷಣೆ ಮಾಡಿದ್ದಾರೆ. ಕಳೆದ ಬಜೆಟ್ ನಲ್ಲಿ ಮೇಕೆದಾಟು, ಮಹದಾಯಿ, ಕೃಷ್ಣ ಯೋಜನೆ ವಿಚಾರವಾಗಿ ಹಣ ಮೀಸಲಿಟ್ಟ ಸರ್ಕಾರ ಒಂದು ನಯಾ ಪೈಸೆ ಖರ್ಚು ಮಾಡಿಲ್ಲ ಎಂದು ಕಿಡಿಕಾರಿದರು.
ಬಜೆಟ್ ನಿಂದ ಕಾಂಗ್ರೆಸ್ ಪ್ರಣಾಳಿಕೆ ಶಕ್ತಿ ಬಂದಿದೆ
ಈ ಬಜೆಟ್ ನಿಂದ ಕಾಂಗ್ರೆಸ್ ಪ್ರಣಾಳಿಕೆಗೆ ಧಕ್ಕೆಯಾಗುತ್ತದೆಯೇ ಎಂದು ಕೇಳಿದ ಪ್ರಶ್ನೆಗೆ, ‘ಈ ಬಜೆಟ್ ನಿಂದ ಕಾಂಗ್ರೆಸ್ ಪ್ರಣಾಳಿಕೆಗೆ ಶಕ್ತಿ ಬಂದಿದೆ. ನಮ್ಮ ಪ್ರಣಾಳಿಕೆ ಜನರಿಗೆ ಆರ್ಥಿಕ ಶಕ್ತಿ ತುಂಬುತ್ತದೆ ಎಂದರು.
ಅರ್ಕಾವತಿ ನದಿ ಸ್ವಚ್ಛ ಮಾಡಿದ್ದಾರಾ?
ಈ ಗಂಡು ಕಸ ಗುಡಿಸಿ ಜಿಲ್ಲೆ ಕ್ಲೀನ್ ಮಾಡುತ್ತೇನೆ ಎಂದಿದ್ದ. ಏನು ಕ್ಲೀನ್ ಮಾಡಿದ್ದಾನೆ? ಅರ್ಕಾವತಿ ನದಿಯಲ್ಲಿ ಹೋಗುತ್ತಿರುವ ಕೊಳಚೆ ನೀರು ಸ್ವಚ್ಛ ಮಾಡಿದ್ದಾರಾ? ಯಾವುದಾದರೂ ಒಂದು ಭ್ರಷ್ಟಾಚಾರ ನಿಲ್ಲಿಸಿದ್ದಾರಾ? ನಿನ್ನೆ ನಮ್ಮ ನಾಯಕ ಸಿದ್ದರಾಮಯ್ಯ ಅವರನ್ನು ಹೊಡೆದು ಹಾಕಿ ಎಂದು ಹೇಳಿಕೆ ನೀಡಿದ್ದಾನೆ. ಇವರ ಇಲಾಖೆಯಲ್ಲಿ ಭ್ರಷ್ಟಾಚಾರದ ಬಗ್ಗೆ ಸಂಸದ ಪ್ರತಾಪ್ ಸಿಂಹ ಮಾತನಾಡಿದ್ದಾರೆ ಎಂದು ಹರಿಹಾಯ್ದರು.