• Home
  • About Us
  • ಕರ್ನಾಟಕ
Wednesday, December 24, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ ಅಭಿಮತ

ಅತ್ಯಾಚಾರಕ್ಕಿಂತಲೂ ಘೋರ ಈ ಧೋರಣೆ ಮನಸ್ಥಿತಿ

ನಾ ದಿವಾಕರ by ನಾ ದಿವಾಕರ
August 27, 2021
in ಅಭಿಮತ
0
ಅತ್ಯಾಚಾರಕ್ಕಿಂತಲೂ ಘೋರ ಈ ಧೋರಣೆ ಮನಸ್ಥಿತಿ
Share on WhatsAppShare on FacebookShare on Telegram

ಸಾಂಸ್ಕೃತಿಕ ನಗರಿ, ಪ್ರವಾಸಿಗರ ಸ್ವರ್ಗ, ಚಾರಿತ್ರಿಕ ಕೇಂದ್ರ, ನಿಸರ್ಗದ ರಮ್ಯ ಕೇಂದ್ರ ಇವೆಲ್ಲವೂ ಮಾರುಕಟ್ಟೆ ಸಂಬಂಧಿತ ಪದಗಳು. ಒಂದು ನಗರ ಅಥವಾ ಪಟ್ಟಣ ಮನುಷ್ಯನ ನೆಮ್ಮದಿಗೆ ಪೂರಕವಾದ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ವಾತಾವರಣವನ್ನು ಹೊಂದಿದೆಯೋ ಇಲ್ಲವೋ ಎನ್ನುವುದು ಸಾರ್ವಜನಿಕ ಬದುಕಿನ ಪ್ರಶ್ನೆ. ಮೈಸೂರು ನಗರ ಈ ಮೇಲೆ ಹೇಳಿದ ಎಲ್ಲ ವಿಶೇಷಣಗಳನ್ನು ಹೊತ್ತುಕೊಂಡೇ ವಿಶ್ವವಿಖ್ಯಾತವಾಗಿದೆ. ಇಂದಿಗೂ ಜನಾಕರ್ಷಣೆಯ ನಗರವಾಗಿಯೇ ಉಳಿದಿದೆ. ಆದರೆ ಇತ್ತೀಚಿನ ಎರಡು ಘಟನೆಗಳಿಂದ ಮತ್ತು ಇತ್ತೀಚಿನ ವರ್ಷಗಳಲ್ಲಿ ಮೈಸೂರು ನಗರದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ಹಿನ್ನೆಲೆಯಲ್ಲಿ ಈ ವಿಶೇಷಣಗಳನ್ನು ಮರುವ್ಯಾಖ್ಯಾನ ಮಾಡಬೇಕಿದೆ.

ADVERTISEMENT

ಮಹಿಳೆಯರ ಮೇಲಿನ ದೌರ್ಜನ್ಯಗಳು ನಿತ್ಯ ನಿರಂತರವಾಗಿ ನಡೆಯುತ್ತಿದ್ದರೂ ಸಹ ನಮ್ಮ ಆಡಳಿತ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಸೂಕ್ತ ರಕ್ಷಣಾ ವ್ಯವಸ್ಥೆಯನ್ನು ರೂಪಿಸುವಲ್ಲಿ ವಿಫಲವಾಗುತ್ತಿರುವುದು ಮೇಲಿಂದ ಮೇಲೆ ಕಾಣುತ್ತಲೇ ಇದ್ದೇವೆ. ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಎರಡು ದಿನಗಳ ಹಿಂದೆ ನಡೆದಿರುವ ಸಾಮೂಹಿಕ ಅತ್ಯಾಚಾರ ಈ ನಗರದ ಪೊಲೀಸ್ ಮತ್ತು ಕಾನೂನು ವ್ಯವಸ್ಥೆಯಲ್ಲಿನ ಲೋಪಗಳನ್ನು ಮತ್ತೊಮ್ಮೆ ಬೆತ್ತಲು ಮಾಡಿದೆ. ಅತ್ಯಾಚಾರಕ್ಕೊಳಾಗದ ಯುವತಿ ಆ ಸಮಯದಲ್ಲಿ ಅಲ್ಲಿಗೆ ಹೋಗಬಾರದಿತ್ತು ಎಂಬ ರಾಜ್ಯ ಗೃಹ ಸಚಿವರ ಹೇಳಿಗೆ ನಮ್ಮ ರಾಜಕೀಯ ನಾಯಕರ ಬೌದ್ಧಿಕ ಮಟ್ಟವನ್ನೂ ಬೆತ್ತಲು ಮಾಡಿದೆ. ಬಿಜೆಪಿ ಸಚಿವರಿಂದ ಅಥವಾ ಸಂಘಪರಿವಾರದ ನಾಯಕರಿಂದ ಈ ರೀತಿಯ ಹೇಳಿಕೆ ಅಚ್ಚರಿಯುಂಟುಮಾಡುವುದಿಲ್ಲ. ಏಕೆಂದರೆ ನಿರ್ಭಯ ಪ್ರಕರಣದಲ್ಲೇ ಇವರ ಬೌದ್ಧಿಕ ದಾರಿದ್ರ್ಯದ ಪರಿಚಯವಾಗಿತ್ತು.

ಆದರೆ ಅತ್ಯಾಚಾರ ಅಥವಾ ಲೈಂಗಿಕ ದೌರ್ಜನ್ಯಕ್ಕೀಡಾದ ಸಂತ್ರಸ್ತೆಯರನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಈ ಧೋರಣೆ ನಮ್ಮ ಸಮಾಜದಲ್ಲಿ ಲೈಂಗಿಕ ಅಪರಾಧಗಳ ಹೆಚ್ಚಳಕ್ಕೂ ಕಾರಣವಾಗಿರುವುದನ್ನು ಈ ಸಂದರ್ಭದಲ್ಲಿ ಗಮನಿಸಬೇಕಿದೆ. “ ಯುವಕ ಯುವತಿ ಸಂಜೆ 7.30ರ ಸಮಯದಲ್ಲಿ ಅಲ್ಲಿಗೆ ಹೋಗಬಾರದಿತ್ತು, ಅದು ನಿರ್ಜನವಾದ ಪ್ರದೇಶ ಅಲ್ಲಿಗೆ ಹೋಗಬಾರದಿತ್ತು ,,,,,” ಎಂದು ಗೃಹ ಸಚಿವರೇ ಹೇಳಿದರೆ, ಅತ್ಯಾಚಾರಿ ಮನಸುಗಳಿಗೆ ಮತ್ತಷ್ಟು ಉತ್ತೇಜನ ನೀಡಿದಂತಾಗುವುದಿಲ್ಲವೇ? ಅಪರಾಧಿಗಳ ದುಷ್ಕೃತ್ಯಗಳಿಗೆ ಒಂದು ಸಮರ್ಥನೆ ನೀಡಿದಂತಾಗುವುದಿಲ್ಲವೇ? ಒಬ್ಬ ಮಹಿಳೆ ಅತ್ಯಾಚಾರಕ್ಕೊಳಗಾಗುವುದೆಂದರೆ ಕೇವಲ ದೈಹಿಕವಾಗಿ, ಲೈಂಗಿಕ ದೌರ್ಜನ್ಯಕ್ಕೊಳಗಾಗುವುದು ಮಾತ್ರವೇ ಅಲ್ಲ. ಅದು ಆಕೆಯ ಮಾನಸಿಕ ಸ್ಥಿತಿಯನ್ನೇ ಪಲ್ಲಟಗೊಳಿಸುತ್ತದೆ. ಆ ಸಂದರ್ಭದಲ್ಲಿ ಕಾಮುಕ ಪುರುಷರು ತೋರುವ ವಿಕೃತ ಕ್ರೌರ್ಯ ಸಂತ್ರಸ್ತ ಮಹಿಳೆಯವನ್ನು ಜೀವನಪರ್ಯಂತ ಕಾಡುತ್ತದೆ. ಈ ಹಿಂಸಾಚಾರವನ್ನು ಕೇವಲ ಒಂದು ಕಾನೂನು ಸುವ್ಯವಸ್ಥೆಯ ಚೌಕಟ್ಟಿನಲ್ಲೋ ಅಥವಾ ಸಾಮಾಜಿಕ ನೆಲೆಯಲ್ಲೋ ವ್ಯಾಖ್ಯಾನಿಸುವುದು ನಮ್ಮೊಳಗಿನ ಅಸೂಕ್ಷ್ಮತೆಯನ್ನು ತೋರುತ್ತದೆ.

ಸಮಯ, ಸಂದರ್ಭ, ಕೌಟುಂಬಿಕ ಚೌಕಟ್ಟು ಮತ್ತು ಪರಿಸರ, ಸಾಮಾಜಿಕ ಮತ್ತು ಧಾರ್ಮಿಕ ಕಟ್ಟಳೆಗಳು ಮತ್ತು ಸ್ಥಳ, ಈ ಎಲ್ಲವೂ ಸಹ ಅತ್ಯಾಚಾರದ ಸಂದರ್ಭದಲ್ಲಿ ಅಸಂಗತ ಎನಿಸುವಷ್ಟು ಮಟ್ಟಿಗೆ ಭಾರತದಲ್ಲಿ ಮಹಿಳೆಯರು ಅತ್ಯಾಚಾರಕ್ಕೊಳಗಾಗುತ್ತಿದ್ದಾರೆ. ದೇಶದ ರಾಜಧಾನಿ ದೆಹಲಿ, ಆರ್ಥಿಕ ರಾಜಧಾನಿ ಮುಂಬಯಿ, ಈಗ ಸಾಂಸ್ಕೃತಿಕ ನಗರಿ ಮೈಸೂರು, ಮಸೀದಿ, ಚರ್ಚು, ದೇವಾಲಯ, ಶಾಲೆ, ಕಾಲೇಜು, ಸರ್ಕಾರಿ ಕಚೇರಿ, ಖಾಸಗಿ ಕಂಪನಿ ಈ ಯಾವುದೇ ಜಾಗಗಳೂ ಮಹಿಳೆಯರಿಗೆ ಸುರಕ್ಷಿತವಾಗಿಲ್ಲ. ಮುಂಜಾನೆ, ಅಪರಾಹ್ನ, ಸಂಜೆ, ರಾತ್ರಿ ಯಾವ ಸಮಯದಲ್ಲೂ ಅತ್ಯಾಚಾರಗಳು ನಿಂತಿಲ್ಲ. ಸಂಬಂಧಿಕರು, ಪರಿಚಯಸ್ಥರು, ನೆರೆಹೊರೆಯವರು, ಅಧಿಕಾರಿಗಳು, ಅಧಿಕಾರಸ್ಥರು, ಶಿಕ್ಷಕರು, ರಾಜಕೀಯ ನಾಯಕರು ಈ ಯಾರಿಂದಲೂ ಮಹಿಳೆ ಸುರಕ್ಷಿತವಾಗಿಲ್ಲ. ಇದು #ಆತ್ಮನಿರ್ಭರ ಭಾರತದ ವಾಸ್ತವ.

ದುರಂತ ಎಂದರೆ ಸಾಂಸ್ಕೃತಿಕ ರಾಜಕಾರಣದ ರಾಯಭಾರಿಗಳಿಗೆ ಅತ್ಯಾಚಾರಕ್ಕೊಳಗಾದ ಮಹಿಳೆಯೇ ಮೊದಲ ಅಪರಾಧಿಯಾಗಿ ಕಾಣುತ್ತಾಳೆ. ಮಾನ್ಯ ಗೃಹ ಸಚಿವರೂ ಇದೇ ರಾಯಭಾರಿತ್ವದ ಪ್ರತಿನಿಧಿಯಾಗಿಯೇ ಮಾತನಾಡಿದ್ದಾರೆ. ನಿರ್ಭಯಾಳಿಂದ ಹಾಥ್ರಸ್ವರೆಗೆ ಸಂತ್ರಸ್ತೆಯರೇ ಅಪರಾಧಿಗಳಾಗಿ ಕಾಣುತ್ತಿರುವುದು ಮತ್ತು ಶಿಕ್ಷೆಗೊಳಗಾಗಿರುವುದನ್ನೂ ಕಾಣುತ್ತಿದ್ದೇವೆ. ಸಮಾಜದಲ್ಲಿ ಅಪರಾಧಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಅಧಿಕಾರಸ್ಥ ರಾಜಕಾರಣಿಗಳ ಹೇಳಿಕೆಗಳಲ್ಲಿ ಸಂವೇದನೆ ಇಲ್ಲದಿದ್ದರೂ, ಮನುಜ ಸೂಕ್ಷ್ಮತೆಯಾದರೂ ಇರಬೇಕಲ್ಲವೇ ? ದೌರ್ಜನ್ಯಕ್ಕೀಡಾದ ಮಹಿಳೆಯಲ್ಲೇ ಅಪರಾಧಿಯನ್ನು ಕಾಣುವ ಈ ಧೋರಣೆ ಅತ್ಯಾಚಾರಕ್ಕಿಂತಲೂ ಘೋರವಾದುದು.

ಆದರೆ ಭಾರತದಂತಹ ಪಿತೃಪ್ರಧಾನ ಸಮಾಜದಲ್ಲಿ, ಪ್ರಚಲಿತ ಸಾಂಸ್ಕೃತಿಕ ರಾಜಕಾರಣದ ಚೌಕಟ್ಟಿನಲ್ಲಿ ಈ ಧೋರಣೆ ಅಚ್ಚರಿ ಮೂಡಿಸುವುದಿಲ್ಲ. ದೆಹಲಿಯಲ್ಲಿ ಮಸಣದ ಅರ್ಚಕನಿಂದ ಅತ್ಯಾಚಾರಕ್ಕೊಳಗಾಗಿ ದಹಿಸಲ್ಪಟ್ಟ ಸಂತ್ರಸ್ತೆಯ ಬಗ್ಗೆ ಆಳುವ ಪಕ್ಷದಿಂದ ಒಂದು ಸಂತಾಪದ ನುಡಿಯೂ ಹೊರಬರದಿರುವುದನ್ನು ಗಮನಿಸಿದರೆ ಈ ಸೂಕ್ಷ್ಮತೆಯೂ ಅರ್ಥವಾಗುತ್ತದೆ. ಅತ್ಯಾಚಾರಕ್ಕೊಳಗಾದ ಮಹಿಳೆಯರ ದೂರು ದಾಖಲಿಸಲೂ ಪೊಲೀಸ್ ಠಾಣೆಗಳಲ್ಲಿ ವಿಳಂಬ ಮಾಡುವಂತಹ ಒಂದು ಕಾನೂನು ವ್ಯವಸ್ಥೆಯನ್ನು ಈ ರಾಜಕಾರಣ ಪೋಷಿಸುತ್ತಿದೆ. ಮಹಿಳಾ ದೌರ್ಜನ್ಯದ ಕಳಂಕ ಹೊತ್ತವರು ಅಧಿಕಾರ ಪೀಠಗಳಲ್ಲಿ ನಿರ್ಲಿಪ್ತವಾಗಿ ಮುಂದುವರೆಯುತ್ತಿರುವುದೇ ಈ ವಿಕೃತ ಪುರುಷ ಪ್ರಧಾನ ವ್ಯವಸ್ಥೆಯ ಪೋಷಕತ್ವವನ್ನು ಸಾಬೀತುಪಡಿಸುತ್ತದೆ.

Also read: ಮೈಸೂರು ಅತ್ಯಾಚಾರ: ನ್ಯಾಯ ಪರ ನಿಲ್ಲಬೇಕಾದವರು ತದ್ವಿರುದ್ದವಾಗಿ ನಡೆಯಬಹುದೇ?

ಮೈಸೂರಿನಲ್ಲಿ 2019ರಲ್ಲಿಯೂ ಇಂತಹುದೇ ಒಂದು ಸಾಮೂಹಿಕ ಅತ್ಯಾಚಾರ ಲಿಂಗಾಂಬುಧಿ ಕೆರೆಯ ಬಳಿ ನಡೆದಿತ್ತು. 2 ವರ್ಷಗಳ ನಂತರ ಮರುಕಳಿಸಿದೆ. ಅಂದರೆ ನಮ್ಮ ಕಾನೂನು ಸುವ್ಯವಸ್ಥೆಯನ್ನು ನಿರ್ವಹಿಸುವವರಲ್ಲಿ ಸೂಕ್ಷ್ಮತೆ ಮತ್ತು ಮಹಿಳೆಯರನ್ನು ರಕ್ಷಿಸಲು ಅಗತ್ಯವಾದ ಸಂವೇದನಾಶೀಲ ಧೋರಣೆ ಇಲ್ಲವೆಂದೇ ಅರ್ಥವಾಗುತ್ತದೆ. ಘಟನೆ ನಡೆದ ಕೂಡಲೇ ಕೆಲವು ದಿನ ಗಸ್ತು ತಿರುಗುವ ಪೊಲೀಸರು ಕೆಲವು ದಿನಗಳ ನಂತರ ಮರೆಯಾಗಿರುತ್ತಾರೆ. ಪೊಲೀಸ್ ಸಿಬ್ಬಂದಿಯ ಕೊರತೆ ಇದೆ, ಮಹಿಳಾ ಪೊಲೀಸರ ಕೊರತೆ ಇದೆ. ಪ್ರವಾಸೋದ್ಯಮ ಕೇಂದ್ರವಾದ ಮೈಸೂರಿನ ಸುತ್ತಮುತ್ತ ಸಾಕಷ್ಟು ಸೂಕ್ಷ್ಮ ಪ್ರದೇಶಗಳಿಗೆ. ಈ ಪ್ರದೇಶಗಳು ಅಪರಾಧಗಳ ಆಗರವೂ ಆಗಿದೆ. ಚಾಮುಂಡಿಬೆಟ್ಟದ ತಪ್ಪಲು, ಲಿಂಗಾಂಬುಧಿ ಕೆರೆಯ ಪ್ರದೇಶ, ವರ್ತುಲ ರಸ್ತೆಗಳು ಮತ್ತು ಮೈಸೂರಿನ ಹೊರವಲಯಗಳು ಸದಾ ಅಸುರಕ್ಷಿತವೆಂದೇ ಭಾಸವಾಗುತ್ತದೆ.

ಮಾನ್ಯ ಗೃಹ ಸಚಿವರು, ಮಹಿಳೆಯರಿಗೆ ಹೊರಹೋಗುವ ವೇಳಾಪಟ್ಟಿಯನ್ನು ನೀಡುವ ಬದಲು, ಯಾವ ಸಮಯದಲ್ಲಿ ಹೊರಹೋಗಬೇಕು ಎಂದು ಉಪದೇಶ ಮಾಡುವುದನ್ನು ಬಿಟ್ಟು, ಈ ಸೂಕ್ಷ್ಮ ಪ್ರದೇಶಗಳಲ್ಲಿ ಸದಾ ಕಣ್ಗಾವಲಿಡುವ ಕಾನೂನು ವ್ಯವಸ್ಥೆಯನ್ನು ಚುರುಕುಗೊಳಿಸಲು ಯೋಚಿಸುವುದು ವಿವೇಕಯುತ ಕ್ರಮವಾದೀತು. ಮಹಿಳೆಯರು ಯಾರೊಡನೆ, ಯಾವ ಸಮಯದಲ್ಲಿ, ಯಾವ ಜಾಗಗಳಿಗೆ ಹೊರಹೋಗಬೇಕು ಎಂದು ನಿಗದಿಪಡಿಸುವ ಭ್ರಷ್ಟ ಮನಸ್ಥಿತಿಯಿಂದ ಆಡಳಿತ ವ್ಯವಸ್ಥೆಯೂ, ರಾಜಕೀಯ ನಾಯಕರೂ, ಸಾಂಸ್ಕೃತಿಕ ರಾಯಭಾರಿಗಳೂ ಹೊರಬರಬೇಕಿದೆ. ಇಲ್ಲವಾದಲ್ಲಿ ರಾಜಕೀಯ ಮತ್ತು ಆಡಳಿತ ಭ್ರಷ್ಟಾಚಾರದಂತೆ ಅತ್ಯಾಚಾರವೂ ಸ್ವೀಕೃತ ಅಪರಾಧವಾಗಿಬಿಡುತ್ತದೆ. ಒಬ್ಬ ಗೃಹ ಸಚಿವರಿಗೆ ಈ ಸೂಕ್ಷ್ಮತೆ ಇರಬೇಕಾದ್ದು ಅವಶ್ಯ.

ಮಹಿಳೆಯರ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯ ಮತ್ತು ಅತ್ಯಾಚಾರಗಳಿಗೆ ಮೂಲತಃ ಪಿತೃಪ್ರಧಾನ ವ್ಯವಸ್ಥೆಯಲ್ಲಿ ಅಡಗಿರುವ ಕ್ರೌರ್ಯ ಮತ್ತು ಅಹಮಿಕೆಯೇ ಕಾರಣವಾದರೂ, ಈ ಧೋರಣೆಯನ್ನು ನಿರಂತರವಾಗಿ ಪೋಷಿಸುತ್ತಿರುವ ಭಾರತದ ಸಾಂಸ್ಕೃತಿಕ ಪರಿಸರವೂ ಇಲ್ಲಿ ಅಪರಾಧಿ ಸ್ಥಾನದಲ್ಲಿ ನಿಲ್ಲಬೇಕಾಗುತ್ತದೆ. ಒಂದು ಕಳ್ಳತನ, ದರೋಡೆಯಂತೆಯೇ ಅತ್ಯಾಚಾರ ಪ್ರಕರಣವನ್ನೂ ಕಾನೂನು ಸುವ್ಯವಸ್ಥೆಯ ಚೌಕಟ್ಟಿನಲ್ಲೇ ನೋಡುವ ಭಾರತದ ಆಡಳಿತ ವ್ಯವಸ್ಥೆಯಲ್ಲಿ ಲಿಂಗಸೂಕ್ಷ್ಮತೆಯನ್ನು ಬೆಳೆಸುವ ನಿಟ್ಟಿನಲ್ಲಿ ಯಾವುದೇ ಪ್ರಯತ್ನಗಳು ನಡೆಯುತ್ತಿಲ್ಲ ಎನ್ನುವುದು ವಾಸ್ತವ. ಸಮಾಜದ ಉನ್ನತಿಗೆ ಮೆಟ್ಟಿಲುಗಳಾಗಬೇಕಾದ ಶೈಕ್ಷಣಿಕ ವಲಯದಲ್ಲೇ ಈ ಲಿಂಗ ಸೂಕ್ಷ್ಮತೆ ಇಲ್ಲದಿರುವುದು, ಮೈಸೂರು ವಿಶ್ವವಿದ್ಯಾಲಯದ ಕೆಲವು ಘಟನೆಗಳೇ ಸೂಚಿಸುತ್ತವೆ.

“ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ,,,,,,” ಎನ್ನುವ ರಾಜಕೀಯ ನಾಯಕರ ಧೋರಣೆಯೇ ಅತ್ಯಾಚಾರಗಳನ್ನು ಒಂದು ಘಟನೆಯ ಚೌಕಟ್ಟಿನಲ್ಲಿ ಬಂಧಿಸಲು ಕಾರಣವೂ ಆಗಿದೆ. ಆದರೆ ಭಾರತದ ಪುರುಷ ಸಮಾಜ ಮತ್ತು ಪುರುಷಪ್ರಧಾನ ರಾಜಕೀಯ ವ್ಯವಸ್ಥೆ ಈ ಸಂಕುಚಿತ ಚೌಕಟ್ಟಿನಿಂದ ಹೊರಬರಬೇಕಿದೆ. ಐದು ವರ್ಷದ ಹಸುಳೆಯಿಂದ 80ರ ವಯೋವೃದ್ಧ ಮಹಿಳೆಯರವರೆಗೂ ಅತ್ಯಾಚಾರದ ಕರಿನೆರಳು ಚಾಚಿಕೊಂಡಿರುವುದನ್ನು ನೋಡುತ್ತಲೇ ಇದ್ದೇವೆ. ಅಮಾಯಕ, ಅನಾಥ ಹೆಣ್ಣುಮಕ್ಕಳ ಮಾರಾಟ ಜಾಲವನ್ನು ಮೈಸೂರಿನಲ್ಲೇ ಕಂಡುಹಿಡಿಯಲಾಗುತ್ತಿದೆ. ಇದರಲ್ಲಿ ಪೊಲೀಸರ ವೈಫಲ್ಯವೊಂದನ್ನೇ ಗುರುತಿಸುತ್ತಾ ಹೋದರೆ, ಬೌದ್ಧಿಕ ವಲಯದಲ್ಲಿ ನಮ್ಮ ಪ್ರಯತ್ನಗಳು ನಿಷ್ಫಲವಾಗುತ್ತವೆ.

ಅತ್ಯುತ್ತಮ ಪೊಲೀಸ್ ವ್ಯವಸ್ಥೆ ಇದ್ದಾಗಲೂ ಅದರಿಂದ ಅತ್ಯಾಚಾರದ ಘಟನೆಗಳನ್ನು ತಡೆಗಟ್ಟಬಹುದು. ಆದರೆ ಅತ್ಯಾಚಾರ ಎಸಗುವ ಪುರುಷ ಸಮಾಜದ ಮನೋವೈಕಲ್ಯವನ್ನು ಹೋಗಲಾಡಿಸಲು ಸೂಕ್ಷ್ಮ ಸಂವೇದನೆಯ ಕ್ರಮಗಳು ಅತ್ಯಗತ್ಯವಾಗಿದೆ. ಇದು ನಮ್ಮ ಸಮಾಜದಲ್ಲಿ ಆಗುತ್ತಿಲ್ಲ ಎನ್ನುವುದು ವಾಸ್ತವ. ಅಪರಾಧ-ಶಿಕ್ಷೆ-ಅನುಕಂಪ-ಪ್ರಾಯಶ್ಚಿತ್ತದ ಚೌಕಟ್ಟಿನಿಂದಾಚೆಗೆ ನಮಗೆ ಒಂದು ಸಾಮಾಜಿಕ, ನೈತಿಕ ಹೊಣೆಗಾರಿಕೆಯೂ ಇದೆ ಎನ್ನುವುದಾದರೆ, ಅದು ಸಮಾಜದಲ್ಲಿ ಲಿಂಗಸೂಕ್ಷ್ಮತೆ ಮತ್ತು ಸ್ತ್ರೀ ಸಂವೇದನೆಯನ್ನು ಬೆಳೆಸುವುದೇ ಆಗಿದೆ. ಈ ನಿಟ್ಟಿನಲ್ಲಿ ಆಡಳಿತಾರೂಢ ಸರ್ಕಾರಗಳು, ಪೊಲೀಸ್ ಇಲಾಖೆ, ಆಡಳಿತ ಯಂತ್ರವನ್ನು ನಿರ್ವಹಿಸುವ ಅಧಿಕಾರ ವಲಯ ಮತ್ತು ಶೈಕ್ಷಣಿಕ ವಲಯ ಹೆಚ್ಚು ಸಂವೇದನಾಶೀಲ ಕ್ರಮಗಳನ್ನು ಕೈಗೊಳ್ಳಬೇಕಿದೆ.

ರಾಜ್ಯ ಗೃಹ ಸಚಿವರು ಆತಂಕದಿಂದ ಆಡಿದ “ ಆ ಸಮಯದಲ್ಲಿ ಹೋಗಬಾರದಿತ್ತು,,,,,,,” ಎನ್ನುವ ಮಾತುಗಳು ಈ ಸಂವೇದನಾಶೀಲತೆಯನ್ನು ಕೊಲ್ಲುವ ಆಯುಧಗಳಾಗಿ ಪರಿಣಮಿಸುತ್ತವೆ. ಈ ಪರಿಜ್ಞಾನ ಆಡಳಿತ ನಿರ್ವಹಣೆಯ ರೂವಾರಿಗಳಿಗೆ ಮತ್ತು ಪುರುಷ ಸಮಾಜಕ್ಕೆ ಇರಬೇಕಾಗುತ್ತದೆ. ಚಾಮುಂಡಿ ತಪ್ಪಲಿನಲ್ಲಿ ನಡೆದ ಈ ಘಟನೆಯನ್ನು ಮೈಸೂರಿಗೆ ಅಂಟಿದ ಕಪ್ಪು ಚುಕ್ಕೆ ಎಂಬ ಸಂಕುಚಿತ ಮನೋಭಾವದಿಂದ ಹೊರಬಂದು, ಮನುಜ ಸಮಾಜಕ್ಕೆ ಅಂಟಿದ ಕಪ್ಪು ಚುಕ್ಕೆ ಎಂದು ಭಾವಿಸುವಂತಾದರೆ ನಮ್ಮ ಪ್ರಜ್ಞೆಯೂ ವಿಸ್ತರಿಸಲು ಸಾಧ್ಯ . ನಿರಂತರವಾಗಿ ನಡೆಯುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ನಿಯಂತ್ರಿಸುವ ಮುನ್ನ ನಮ್ಮ ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ ಬೇರುಬಿಟ್ಟಿರುವ ತಾರತಮ್ಯದ ಧೋರಣೆಗಳನ್ನು ಮತ್ತು ಸಮಸ್ತ ಪುರುಷ ಸಮಾಜದಲ್ಲಿ ಬೇರೂರಿರುವ ಅಹಮಿಕೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಯೋಚಿಸಬೇಕಿದೆ.

ದಿನನಿತ್ಯ ಸಂಸ್ಕೃತಿಯ ಪಠಣ ಮಾಡುವ ಸಾಂಸ್ಕೃತಿಕ ರಾಜಕಾರಣದ ರಾಯಭಾರಿಗಳ ಧೋರಣೆಯೇ ಅಪಾಯಕಾರಿಯಾಗಿ ಸಂಭವಿಸುತ್ತಿರುವುದನ್ನು ನಿರ್ಭಯಾ ಪ್ರಕರಣದಿಂದಲೂ ನೋಡುತ್ತಲೇ ಇದ್ದೇವೆ. ಈ ಧೋರಣೆಯ ವಿರುದ್ಧ ನಾವಿಂದು ಹೋರಾಡಬೇಕಿದೆ. ಭಾರತ ಅತ್ಯಾಚಾರಿಗಳ ದೇಶವಾಗುತ್ತಿದೆ. ಸಾಂಸ್ಕೃತಿಕ ನಗರಿಯೂ ಇದರಿಂದ ಹೊರತಾಗಿಲ್ಲ ಎನ್ನುವುದು ಸಾಬೀತಾಗಿದೆ.

Tags: Araga JnanendraBasavaraj BommaiBJPGang RapeKarnatakaMysoreಬಿಜೆಪಿ
Previous Post

ಮೈಸೂರು ಅತ್ಯಾಚಾರ: ನ್ಯಾಯ ಪರ ನಿಲ್ಲಬೇಕಾದವರು ತದ್ವಿರುದ್ದವಾಗಿ ನಡೆಯಬಹುದೇ?

Next Post

ಅತ್ಯಾಚಾರ ಪ್ರಕರಣ: ಅಂದಾಜು ಹೇಳಿಕೆಗೆ ಬೆಲೆ ತೆರಲಿದ್ದಾರೆಯೇ ಆರಗ?

Related Posts

ಚಿತ್ತಾಪುರ RSS ಪಥಸಂಚಲನ: ಒಂದು ವಾರದಲ್ಲಿ ಸರ್ಕಾರದ ನಿರ್ಧಾರ
ಅಭಿಮತ

ಚಿತ್ತಾಪುರ RSS ಪಥಸಂಚಲನ: ಒಂದು ವಾರದಲ್ಲಿ ಸರ್ಕಾರದ ನಿರ್ಧಾರ

by ಪ್ರತಿಧ್ವನಿ
November 7, 2025
0

  https://youtu.be/iZY7Q0JnGnY ಬೆಂಗಳೂರು: ಹೈಕೋರ್ಟ್ ನಲ್ಲಿಂದು ಮತ್ತೆ ಚಿತ್ತಾಪುರ ಪಥಸಂಚಲನ ಕುರಿತ ಅರ್ಜಿ ವಿಚಾರಣೆ ನಡೆದಿದೆ. ೮ ವೇಳೆ ಅರ್ಜಿದಾರರಿಗೆ ಅನುಮತಿ ಮಂಜೂರು ಮಾಡಲು ಸರ್ಕಾರಕ್ಕೆ ನವೆಂಬರ್...

Read moreDetails

ಸಿಬಿಎಸ್‌ಇ 2025: 10ನೇ ಮತ್ತು 12ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

January 12, 2025

ಹಿರಿಯ ಸಾಹಿತಿ ನಾಡೋಜಾ ನಾ. ಡಿಸೋಜಾ ನಿಧನ..

January 6, 2025

ಅಭಿಮಾನಿಗಳ ಹಾಗೂ ಚಿತ್ರತಂಡದವರ ಗೆಲುವಿನ ನಗುವನ್ನು ನೋಡಿ ನಾನು ಸಂಭ್ರಮಿಸುತ್ತಿದ್ದೇನೆ .

December 31, 2024

Central Govt: ಕೇಂದ್ರ ಸರ್ಕಾರದಿಂದ ರೈತರಿಗೆ ಸಂತಸದ ಸುದ್ದಿ.. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಣೆ..!!

December 6, 2024
Next Post
ಅತ್ಯಾಚಾರ ಪ್ರಕರಣ: ಅಂದಾಜು ಹೇಳಿಕೆಗೆ ಬೆಲೆ ತೆರಲಿದ್ದಾರೆಯೇ ಆರಗ?

ಅತ್ಯಾಚಾರ ಪ್ರಕರಣ: ಅಂದಾಜು ಹೇಳಿಕೆಗೆ ಬೆಲೆ ತೆರಲಿದ್ದಾರೆಯೇ ಆರಗ?

Please login to join discussion

Recent News

Top Story

ಮನರೇಗಾ ಯೋಜನೆ ಹತ್ಯೆ ಮಾಡುತ್ತಿರುವ ಕೇಂದ್ರ : ಡಿಸಿಎಂ ಡಿ.ಕೆ.ಶಿವಕುಮಾರ್

by ಪ್ರತಿಧ್ವನಿ
December 23, 2025
Top Story

ರೈತರ ಅಭಿವೃದ್ಧಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಹೆಚ್ಚು ಒತ್ತು ನೀಡಬೇಕು: ಎನ್. ಚಲುವರಾಯಸ್ವಾಮಿ.

by ಪ್ರತಿಧ್ವನಿ
December 23, 2025
Top Story

ಜಾಮೀನು ಅರ್ಜಿ ವಜಾ: ಭೈರತಿ ಬಸವರಾಜುಗೆ ಬಂಧನದ ಭೀತಿ ಶುರು..

by ಪ್ರತಿಧ್ವನಿ
December 23, 2025
Top Story

ಜೀವರಕ್ಷಕ ಪ್ರಶಸ್ತಿ ಸ್ವೀಕರಿಸಿದ ಕಾರ್ಮಿಕ ಸಚಿವ ಸಂತೋಷ್‌ ಎಸ್‌ ಲಾಡ್‌

by ಪ್ರತಿಧ್ವನಿ
December 23, 2025
Daily Horoscope: ಇಂದು ಈ ರಾಶಿಗಳ ಯಶಸ್ಸಿನ ಹಾದಿ ಸುಗಮ..!
Top Story

Daily Horoscope: ಇಂದು ಈ ರಾಶಿಗಳ ಯಶಸ್ಸಿನ ಹಾದಿ ಸುಗಮ..!

by ಪ್ರತಿಧ್ವನಿ
December 23, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಮನರೇಗಾ ಯೋಜನೆ ಹತ್ಯೆ ಮಾಡುತ್ತಿರುವ ಕೇಂದ್ರ : ಡಿಸಿಎಂ ಡಿ.ಕೆ.ಶಿವಕುಮಾರ್

December 23, 2025

ರೈತರ ಅಭಿವೃದ್ಧಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಹೆಚ್ಚು ಒತ್ತು ನೀಡಬೇಕು: ಎನ್. ಚಲುವರಾಯಸ್ವಾಮಿ.

December 23, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada