ಚಿಕ್ಕಬಳ್ಳಾಪುರ, ಸೆಪ್ಟೆಂಬರ್ 21: ಗುಣಮಟ್ಟದ ದಾಳಿಂಬೆ (Pomegranate) ಹಣ್ಣಿಗೆ ಒಂದು ಕೆಜಿಗೆ 200 ರೂಪಾಯಿ ಬೆಲೆ ಇದೆ. ಇದ್ರಿಂದ ಕಳ್ಳರ (Thieves) ಕಣ್ಣು ರೈತರು ಬೆಳೆದಿದ್ದ ದಾಳಿಂಬೆ ತೋಟಗಳ ಮೇಲೆ ಬಿದ್ದಿತ್ತು. ರಾತ್ರೋರಾತ್ರಿ ಪ್ರತಿದಿನ ಒಂದಿಲ್ಲೊಂದು ಕಡೆ ದಾಳಿಂಬೆ ಕದ್ದು, ರೈತರ ನಿದ್ದೆಗೆಡಿಸಿದ್ದರು. ಕೊನೆಗೂ ಪೊಲೀಸರು ದಾಳಿಂಬೆ ಕಳ್ಳರನ್ನು ಬಂಧಿಸಿದ್ದಾರೆ. ಬರೀ ಮೋಜು, ಮಸ್ತಿಗಾಗಿ ದಾಳಿಂಬೆ ಕದಿಯುತ್ತಿದ್ದ ಪ್ರಕರಣ ಬಯಲಾಗಿದೆ.
ದಾಳಿಂಬೆ ಕಳ್ಳರು ಯಾರು ಗೊತ್ತಾ..?
ಬಂಧಿತ ಆರೋಪಿಗಳ ವಿವರ ಇಲ್ಲಿದೆ. ಒಬ್ಬ ಆರೋಪಿಯ ಹೆಸರು ಶ್ರೀಕಾಂತ್ ಅಲಿಯಾಸ್ ಕೆಂಪ. ಈಗ ತಾನೇ 19 ವರ್ಷ. ಚಿಕ್ಕಬಳ್ಳಾಪುರ ತಾಲ್ಲೂಕಿನ ಕುರ‍್ಲಹಳ್ಳಿ ಗ್ರಾಮದ ನಿವಾಸಿ. ಮತ್ತೊಬ್ಬನ ಹೆಸರು ರಾಜು ಕೆ.ಬಿ. ಅಲಿಯಾಸ್ ಚಿಕ್ಕಭೈರಪ್ಪ ಅಲಿಯಾಸ್ ಭೈರ. 23 ವರ್ಷ ವಯಸ್ಸು. ಚಿಕ್ಕಬಳ್ಳಾಪುರ ತಾಲ್ಲೂಕಿನ ಕರ‍್ಲಹಳ್ಳಿ ಗ್ರಾಮದ ನಿವಾಸಿ. ದುಡಿದು ತಿನ್ನುವ ವಯಸ್ಸಿನಲ್ಲಿ ಮೋಜು-ಮಸ್ತಿ ಹಿಂದೆ ಬಿದ್ದಿದ್ದರು. ದುಡಿದು ತಿನ್ನುವುದರ ಬದಲು ರೈತರು ಬೆಳೆದಿದ್ದ ದಾಳಿಂಬೆ ತೋಟಕ್ಕೆ ನುಗ್ಗಿ, ದಾಳಿಂಬೆ ಕಳ್ಳತನ ಮಾಡುತ್ತಿದ್ದರು. ಆದರೆ ಈಗ ಇವರ ನಸೀಬು ಕೆಟ್ಟಿದ್ದು, ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾಗಿ ಚಿಕ್ಕಬಳ್ಳಾಪುರ ಎಸ್ಪಿ ಡಿ.ಎಲ್. ನಾಗೇಶ್ ಮಾಹಿತಿ ನೀಡಿದ್ದಾರೆ.
ಎಲ್ಲೆಲ್ಲಿ ಕಳ್ಳತನ ಮಾಡಿದ್ದರು ಗೊತ್ತಾ?
ಚಿಕ್ಕಬಳ್ಳಾಪುರ ತಾಲ್ಲೂಕಿನ ನಂದಿಕ್ರಾಸ್, ಚದಲಪುರ, ಅಜ್ಜವರ, ಸಾದೇನಹಳ್ಳಿ, ನಾಯನಹಳ್ಳಿ, ಪಟ್ರೇನಹಳ್ಳಿ ಸೇರಿದಂತೆ ವಿವಿದೆಡೆ 10ಕ್ಕೂ ಹೆಚ್ಚು ತೋಟಗಳಲ್ಲಿ ದಾಳಿಂಬೆ ಕಳ್ಳತನ ಮಾಡಲಾಗಿತ್ತು.
ಕದ್ದ ದಾಳಿಂಬೆ ಮಾರಾಟ ಮಾಡಿದ್ದಕ್ಕೆ ವ್ಯಾಪಾರಿಗಳಿಗೂ ಕೂಡಾ ಅಂದರ್..!
ರೈತರ ತೋಟದಿಂದ ಕದ್ದಿದ್ದ ದಾಳಿಂಬೆಯನ್ನು ಚಿಕ್ಕಬಳ್ಳಾಪುರದ ಹಣ್ಣಿನ ವ್ಯಾಪಾರಿಗಳಾದ ನಂಜುಂಡಪ್ಪ ಹಾಗೂ ಸೈಯದ್ ಮನ್ಸೂರ್ ಖರೀದಿ ಮಾಡಿ ಲಾಭ ಮಾಡಿಕೊಳ್ಳುತ್ತಿದ್ದರು. ಇದರಿಂದ ಅವರನ್ನೂ ಸಹಾ ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.