
ಬೆಂಗಳೂರು:”ಕುಮಾರಸ್ವಾಮಿ ಅವರು ಏನು ಮಾತನಾಡುತ್ತಾರೆ ಎಂಬುದು ಅವರಿಗೆ ಗೊತ್ತಿರುವುದಿಲ್ಲ. ಕೆಪಿಸಿಸಿ ಕಚೇರಿಗೂ ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್ ಅವರಿಗೂ ಏನು ಸಂಬಂಧ” ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಹೇಳಿದರು.

ಲೋಕಾಯುಕ್ತ ಎಸ್ ಐಟಿ ಎಡಿಜಿಪಿ ಚಂದ್ರಶೇಖರ್ ಅವರು ಯಾರು ಎಂದು ನನಗೆ ತಿಳಿದಿದೆ. ಅವರಿಗೆ ಕೆಪಿಸಿಸಿ ಕಚೇರಿಯಿಂದ ಪತ್ರ ಬಂದಿದೆ ಎನ್ನುವ ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಆರೋಪದ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ನೆಲಮಂಗಲದಲ್ಲಿ ಭಾನುವಾರದಂದು ಹೀಗೆ ಉತ್ತರಿದರು.
“ನಾನು ಊರಿನಲ್ಲೇ ಇಲ್ಲ. ಸಾತನೂರು, ಕನಕಪುರದಲ್ಲಿ ಕ್ಷೇತ್ರದ ಕೆಲಸ ಕಾರ್ಯಗಳ ಕುರಿತು ಓಡಾಡುತ್ತಿದ್ದೇನೆ. ಕುಮಾರಸ್ವಾಮಿ ಅವರು ಕೆಪಿಸಿಸಿ ನೆನೆಸಿಕೊಂಡರೆ ನಾನು ಏನು ಮಾತನಾಡಲು ಸಾಧ್ಯ” ಎಂದರು.
ಕುಮಾರಸ್ವಾಮಿ ಅವರ ಬಳಿ ದಾಖಲೆಗಳಿವೆ ಎಂದು ಹೇಳುತ್ತಿದ್ದಾರೆ ಎಂದು ಕೇಳಿದಾಗ, “ಅವರ ಬಳಿ ದಾಖಲೆಗಳು ಇದ್ದರೆ ಬಿಡುಗಡೆ ಮಾಡಲಿ. ಚಂದ್ರಶೇಖರ್ ಅವರು ನನ್ನ ನೋಡಿಯೂ ಇಲ್ಲ, ಮಾತನಾಡಿಯೂ ಇಲ್ಲ, ನನಗೆ ಅವರು ಸಿಕ್ಕಿಲ್ಲ, ನನಗೆ ಗೊತ್ತೇ ಇಲ್ಲ” ಎಂದರು.
ಎಲ್ಲ ಯಶಸ್ಸು ಶ್ರೀನಿವಾಸ್ ಗೆ ಸಲ್ಲಬೇಕು:ನೆಲಮಂಗಲ ಅಭಿವೃದ್ಧಿ ವಿಚಾರದ ಬಗ್ಗೆ ಕೇಳಿದಾಗ, “ಕಾಂಗ್ರೆಸ್ ಶಾಸಕ ಶ್ರೀನಿವಾಸ್ ಅವರು ನೆಲಮಂಗಲವನ್ನು ಬೆಂಗಳೂರಲ್ಲಿ ಅಭಿವೃದ್ಧಿಪಡಿಸಬೇಕು ಎಂದು ಶ್ರಮ ಪಡುತ್ತಿದ್ದಾರೆ. ಇಲ್ಲಿನ ಸಂಸದರಾದ ಸುಧಾಕರ್ ಅವರು ತಮ್ಮ ಹೆಸರೂ ಇರಬೇಕು ಎಂದು ಪ್ರಯತ್ನ ಮಾಡುತ್ತಿದ್ದಾರೆ. ಏನೇ ಅಭಿವೃದ್ಧಿ ಕೆಲಸವಾದರೂ ಅದರ ಎಲ್ಲಾ ಯಶಸ್ಸು ಶ್ರೀನಿವಾಸ್ ಅವರಿಗೆ ಸಲ್ಲಬೇಕು” ಎಂದರು.