ಪಿಎಫ್‌ಐ, ಎಸ್‌ಡಿಪಿಐ ಬಿಜೆಪಿಯ ʼಬಿʼ ಟೀಂ ಎಂದು ಎಷ್ಟೇ ಆರೋಪಿಸಲಾಗುತ್ತಿದ್ದರೂ, ದೇಶದಲ್ಲಿ ಪಿಎಫ್‌ಐ ಪ್ರಭಾವ ಹೆಚ್ಚುತ್ತಿರುವುದು ಆರ್‌ಎಸ್‌ಎಸ್ ಆತಂಕಕ್ಕೆ ಕಾರಣವಾಗಿದೆ ಎಂದು ವರದಿಗಳು ಹೇಳಿವೆ. ಮುಖ್ಯವಾಗಿ ದಕ್ಷಿಣ ಭಾರತದ ಕಾಲೇಜುಗಳಲ್ಲಿ ಪಾಪ್ಯುಲರ್ ಪ್ರಂಟ್ ಆಫ್ ಇಂಡಿಯಾ ತನ್ನ ಪ್ರಭಾವ ಹೆಚ್ಚುಸುತ್ತಿರುವುದು ಆರ್‌ಎಸ್‌ಎಸ್ ಆತಂಕಕ್ಕೆ ಕಾರಣವಾಗಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ದಕ್ಷಿಣ ಭಾರತದ ಕಾಲೇಜುಗಳಲ್ಲಿ ಹೆಚ್ಚುತ್ತಿರುವ ಪಿಎಫ್‌ಐ ಪ್ರಭಾವವನ್ನು ತಡೆಯಲು ಆರ್‌ಎಸ್‌ಎಸ್ ಯೋಜನೆ ರೂಪಿಸುತ್ತಿದೆ ಎಂದು ವರದಿ ಹೇಳಿದೆ. ದಕ್ಷಿಣ ಭಾರತದ ಕಾಲೇಜುಗಳಲ್ಲಿ ಆರ್‌ಎಸ್‌ಎಸ್ ವಿದ್ಯಾರ್ಥಿ ಘಟಕ ಎಬಿವಿಪಿಯ ವಿಸ್ತರಣೆ ಮಾಡುವುದು ಹಾಗೂ ಪಿಎಫ್‌ಐ ಜೊತೆ ಸೇರಿಕೊಳ್ಳದ ಮುಸ್ಲಿಂ ಸಮುದಾಯದ ವಿವಿಧ ವಿಭಾಗಗಳನ್ನು ತಮ್ಮೆಡೆಗೆ ಸೆಳೆಯುವುದು ಆರ್‌ಎಸ್‌ಎಸ್ ಕಾರ್ಯತಂತ್ರದ ಭಾಗವಾಗಿದೆ ಎನ್ನಲಾಗಿದೆ.
ಪಿಎಫ್‌ಐ ಸಂಘಟನೆಯ ವಿದ್ಯಾರ್ಥಿ ವಿಭಾಗವಾದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್‌ಐ) ಕರ್ನಾಟಕದಲ್ಲಿ ಹಿಜಾಬ್ ವಿಷಯದಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳನ್ನು ಪ್ರಚೋದಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಮತ್ತು ಅದನ್ನು ರಾಷ್ಟ್ರೀಯ ವಿಷಯವಾಗಿ ಮಾಡುವಲ್ಲಿ ಯಶಸ್ವಿಯಾಗಿದೆ ಎಂದು ಆರ್‌ಎಸ್‌ಎಸ್ ನಂಬಿದೆ.
“ಒಂದು ಕಾಲದಲ್ಲಿ ಕೇರಳಕ್ಕೆ ಮಾತ್ರ ಸೀಮಿತವಾಗಿದ್ದ ಪಿಎಫ್‌ಐ ವೇಗವಾಗಿ ತನ್ನ ವಿಸ್ತಾರವನ್ನು ಚಾಚುತ್ತಿದೆ. ಇದು ದಕ್ಷಿಣ ಭಾರತದ ಕ್ಯಾಂಪಸ್‌ಗಳಲ್ಲಿ ವ್ಯಾಪಕವಾಗಿದೆ. ಈಗ ಉತ್ತರ ಭಾರತದ ಕಾಲೇಜುಗಳಲ್ಲೂ ತನ್ನ ನೆಲೆ ವಿಸ್ತರಿಸಿಕೊಳ್ಳಲು ಪ್ರಾರಂಭಿಸಿದೆ. ಉತ್ತರಪ್ರದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ಪಿಎಫ್‌ಐ ಪ್ರಮುಖ ಪಾತ್ರ ವಹಿಸಿತ್ತು. ಅದರ ಹೆಚ್ಚುತ್ತಿರುವ ಪ್ರಭಾವವನ್ನು ಎದುರಿಸುವ ಅವಶ್ಯಕತೆಯಿದೆ” ಎಂದು ಹಿರಿಯ ಆರ್‌ಎಸ್‌ಎಸ್ ನಾಯಕರೊಬ್ಬರು ಹೇಳಿರುವುದಾಗಿ ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ವರದಿ ಹೇಳಿದೆ.
ಆರ್‌ಎಸ್‌ಎಸ್ ಮಾದರಿಯಲ್ಲೇ ಪಿಎಫ್‌ಐ ಸಂಘಟನಾತ್ಮಕ ರಚನೆ ಮತ್ತು ಕಾರ್ಯಚಟುವಟಿಕೆಗಳು ಇರುವುದು ಕೂಡಾ ಆರ್‌ಎಸ್‌ಎಸ್ ಇರಿಸು-ಮುರಿಸುಗೆ ಕಾರಣವಾಗಿದೆ ಎನ್ನಲಾಗಿದೆ.
ಪಿಎಫ್‌ಐ ಸಾಮಾಜಿಕ-ಸಾಂಸ್ಕೃತಿಕ ಪ್ರಭಾವವನ್ನು ಹೊಂದಿದ್ದಾರೆ. ಸಕ್ರಿಯವಾಗಿ ಕ್ಯಾಂಪಸ್‌ಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆರ್‌ಎಸ್‌ಎಸ್ ನಂತೆಯೇ ಪೆರೇಡ್‌ಗಳನ್ನು ನಡೆಸುವ ಅಂಗವೂ ಅದರಲ್ಲಿದೆ. ಅದು ಬಹಳ ಕಾಲದಿಂದ ಇಲ್ಲಿದೆ ಎಂಬಂತೆ ತೋರಿಸುತ್ತಿದೆ ಎಂದು ಮತ್ತೋರ್ವ ಹಿರಿಯ ಆರ್‌ಎಸ್‌ಎಸ್ ನಾಯಕ ಹೇಳಿರುವುದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಹೇಳಿದೆ.
ಪಿಎಫ್‌ಐಯ ನಿಜ ಮುಖವನ್ನು ಸಾರ್ವಜನಿಕರ ಮುಂದೆ ಅನಾವರಣಗೊಳಿಸಲು ಆರ್‌ಎಸ್‌ಎಸ್ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ ಎಂದು ಮೂಲಗಳು ಹೇಳಿವೆ. ಪಿಎಫ್‌ಐಯನ್ನು ಸಿದ್ಧಾಂತವನ್ನು ಒಪ್ಪದ ಮುಸ್ಲಿಂ ವಿಭಾಗಗಳನ್ನು ತಲುಪುವ ಯೋಜನೆಯನ್ನು ಆರ್‌ಎಸ್‌ಎಸ್ ಹಾಕಿಕೊಂಡಿದೆ.
“ಎಲ್ಲಾ ಮುಸ್ಲಿಮರು PFI ಸಿದ್ಧಾಂತವನ್ನು ಒಪ್ಪಿಕೊಂಡಿಲ್ಲ. ಮುಸ್ಲಿಮರಲ್ಲಿ ಹೆಚ್ಚಿನ ಸಂಖ್ಯೆಯು ಅದರ ಉಗ್ರಗಾಮಿ ಚಟುವಟಿಕೆಯನ್ನು ಇಷ್ಟಪಡುವುದಿಲ್ಲ. ನಾವು ಅವರನ್ನು ತಲುಪಬೇಕು” ಎಂದು ಆರ್‌ಎಸ್‌ಎಸ್‌ನ ಪದಾಧಿಕಾರಿಯೊಬ್ಬರು ಹೇಳಿದ್ದಾರೆ ಎಂದು ವರದಿ ಹೇಳಿದೆ.

ಇದಲ್ಲದೆ, ಸಂಘವು ದಕ್ಷಿಣ ಭಾರತದ ಕ್ಯಾಂಪಸ್‌ಗಳಲ್ಲಿ ಎಬಿವಿಪಿಯನ್ನು ಇನ್ನಷ್ಟು ವಿಸ್ತರಿಸಲು ಯೋಜಿಸಿದೆ.
ʼಕರ್ನಾಟಕದಲ್ಲಿ ನಾವು ಈಗಾಗಲೇ ಉತ್ತಮ ನೆಟ್‌ವರ್ಕ್ ಹೊಂದಿದ್ದೇವೆ. ತೆಲಂಗಾಣದಲ್ಲಿಯೂ ನಾವು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದೇವೆ. ಕೇರಳದಲ್ಲಿ ಎಡಪಕ್ಷಗಳು ಕ್ಯಾಂಪಸ್‌ಗಳಲ್ಲಿ ಪ್ರಾಬಲ್ಯವನ್ನು ಹೊಂದಿವೆ, ಆದರೂ ನಾವು ಹೋರಾಡುತ್ತಿದ್ದೇವೆ. ಆಂಧ್ರದ ಕರಾವಳಿ ಪ್ರದೇಶಗಳಲ್ಲಿ ಮತ್ತು ತಮಿಳುನಾಡಿನಲ್ಲಿ ನಮ್ಮ ಪ್ರಭಾವ ಹೆಚ್ಚಿಸಿಕೊಳ್ಳಬೇಕು’ ಎಂದು ಆರ್‌ಎಸ್‌ಎಸ್ ವಮುಖಂಡರೊಬ್ಬರು ಹೇಳಿದ್ದಾರೆ
ಪ್ರಸ್ತುತ 33,44,917 ಸದಸ್ಯರನ್ನು ಹೊಂದಿರುವ ಎಬಿವಿಪಿಯ ಮೂಲಕ ಸಿಎಫ್‌ಐಯನ್ನು ಎದುರಿಸಲು ಕಾರ್ಯತಂತ್ರ ಹೆಣೆಯಲಾಗುತ್ತಿದೆ ಎಂದು ಹೇಳಲಾಗಿದೆ.
ಆರ್‌ಎಸ್‌ಎಸ್‌ನಲ್ಲಿನ ಅನೇಕರು ಸರ್ಕಾರವು ಪಿಎಫ್‌ಐ ಅನ್ನು ನಿಷೇಧಿಸಬೇಕು ಎಂದು ನಂಬುತ್ತಾರೆ, ಸಂಘಟನೆಯ ವಿರುದ್ಧ ತನಿಖಾ ಏಜೆನ್ಸಿಗಳು ಅನೇಕ ವರದಿಗಳನ್ನು ನೀಡಿವೆ.
“ನಾವು ಸರ್ಕಾರವಲ್ಲ, ಅದು ತನ್ನದೇ ಆದ ಕಾನೂನು ಮತ್ತು ಪ್ರಕ್ರಿಯೆಯ ಒತ್ತಾಯಗಳನ್ನು ಹೊಂದಿರಬಹುದು. ಆದರೆ ಸಮಾಜದೊಂದಿಗೆ ಕೆಲಸ ಮಾಡುವುದು ನಮ್ಮ ಕ್ಷೇತ್ರವಾಗಿದೆ, ”ಎಂದು ಇನ್ನೊಬ್ಬ ಆರ್‌ಎಸ್‌ಎಸ್ ಕಾರ್ಯಕಾರಿ ಹೇಳಿದ್ದಾರೆ.
ಇತ್ತೀಚೆಗೆ ಗುಜರಾತ್‌ನಲ್ಲಿ ನಡೆದ ಅಖಿಲ ಭಾರತೀಯ ಪ್ರತಿನಿಧಿ ಸಭಾ ಬೈಠಕ್‌ನಲ್ಲಿ ಆರ್‌ಎಸ್‌ಎಸ್ ಮಂಡಿಸಿದ ವಾರ್ಷಿಕ ವರದಿಯಲ್ಲಿ, ಸಂವಿಧಾನ ಮತ್ತು ಧಾರ್ಮಿಕ ಸ್ವಾತಂತ್ರ್ಯದ ಹೆಸರಿನಲ್ಲಿ ದೇಶದಲ್ಲಿ ಧಾರ್ಮಿಕ ಮತಾಂಧತೆ ಬೆಳೆಯುತ್ತಿದ್ದು, ಆಡಳಿತ ಯಂತ್ರವನ್ನು ಪ್ರವೇಶಿಸಲು ನಿರ್ದಿಷ್ಟ ಸಮುದಾಯವು ವಿಸ್ತಾರವಾದ ಯೋಜನೆಗಳನ್ನು ಹೊಂದಿದೆ ಎಂದು ಹೇಳಿತ್ತು.
ಈ ಬೆದರಿಕೆಯನ್ನು ಸೋಲಿಸಲು ʼಸಂಘಟಿತ ಶಕ್ತಿಯೊಂದಿಗೆ ಸರ್ವಾಂಗೀಣ ಪ್ರಯತ್ನಗಳಿಗೆʼ ಕರೆ ನೀಡಿದ್ದ ಆರ್‌ಎಸ್‌ಎಸ್, ʼದೇಶದಲ್ಲಿ ಬೆಳೆಯುತ್ತಿರುವ ಧಾರ್ಮಿಕ ಮತಾಂಧತೆಯ ಅಸಾಧಾರಣ ರೂಪವು ಹಲವೆಡೆ ಮತ್ತೆ ತಲೆ ಎತ್ತಿದೆ. ಕೇರಳ, ಕರ್ನಾಟಕದಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರ ಕ್ರೂರ ಹತ್ಯೆಗಳು ಈ ಬೆದರಿಕೆಗೆ ಉದಾಹರಣೆಯಾಗಿದೆ. ಕೋಮು ಉನ್ಮಾದ, ರ್ಯಾಲಿಗಳು, ಪ್ರತಿಭಟನೆಗಳು, ಸಂವಿಧಾನ ಮತ್ತು ಧಾರ್ಮಿಕ ಸ್ವಾತಂತ್ರ್ಯದ ನೆಪದಲ್ಲಿ ಸಾಮಾಜಿಕ ಶಿಸ್ತು, ಸಂಪ್ರದಾಯಗಳ ಉಲ್ಲಂಘನೆ, ಕ್ಷುಲ್ಲಕ ಕಾರಣಗಳನ್ನು ಪ್ರಚೋದಿಸುವ ಮೂಲಕ ಹಿಂಸಾಚಾರಕ್ಕೆ ಪ್ರಚೋದನೆ, ಕಾನೂನುಬಾಹಿರ ಚಟುವಟಿಕೆಗಳನ್ನು ಉತ್ತೇಜಿಸುವುದು ಇತ್ಯಾದಿಗಳನ್ನು ಬಹಿರಂಗಪಡಿಸುವ ಕ್ರೂರ ಕೃತ್ಯಗಳ ಸರಣಿ ಹೆಚ್ಚುತ್ತಿದೆ,ʼ ಎಂದು ಹೇಳಿತ್ತು.