
ವಿಜಯಪುರ: ದೆಹಲಿಗೆ ಹೋಗಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲು ಸಾಧ್ಯವಾಗದೆ ವಾಪಸ್ ಆಗಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ದೆಹಲಿಯಲ್ಲಿ ನಮಗೆ ಯಾವುದೇ ಅವಮಾನವಾಗಿಲ್ಲ ಎಂದಿರುವ ಯತ್ನಾಳ್ ಮಾಧ್ಯಮಗಳಲ್ಲಿ ಬರುತ್ತಿರುವ ವಿಚಾರಗಳ ಬಗ್ಗೆ ವ್ಯಂಗ್ಯವಾಡಿದ್ದಾರೆ.
ದೆಹಲಿಯಿಂದ ವಿಜಯೆಂದ್ರ ವಿರುದ್ಧ ವಿಜಯದ ಸಂಕೇತದಲ್ಲಿ ಬಂದಿದ್ದೇವೆ ಎಂದಿರುವ ಯತ್ನಾಳ್, ಮಾಧ್ಯಮಗಳಲ್ಲಿ ನಮ್ಮ ವಿರುದ್ದ ಬಂದಿರುವ ಸುದ್ದಿ ಖಂಡಿಸುತ್ತೇನೆ. ನಮ್ಮ ದೆಹಲಿ ಭೇಟಿ ಫಲಪ್ರದವಾಗಿದೆ, ನಮ್ಮ ಶಕ್ತಿ ಮತ್ತಷ್ಟು ಗಟ್ಟಿಯಾಗಿದೆ. ನಮಗೆ ಅಪಮಾನ ಆಗಿಲ್ಲ. ನಾವು ಖಾಲಿ ಕೈಯಿಂದ ಬಂದಿಲ್ಲ, ವಿಜಯದ ಬಂಗಾರ ಕೈಯ್ಯಲ್ಲಿ ಹಿಡಿದುಕೊಂಡು ಬಂದಿದ್ದೇವೆ ಎಂದಿದ್ದಾರೆ.

ಇನ್ನು ದೆಹಲಿ ನಾಯಕರು ಯತ್ನಾಳ್ ಟೀಂಗೆ ಸ್ಪಂದಿಸಿಲ್ಲ ಅನ್ನೋ ಮಾತಿಗೆ ಉತ್ತರ ಕೊಟ್ಟಿದ್ದು, ಕೇಂದ್ರ ನಾಯಕರು ನಮಗೆ ಸ್ಪಂದಿಸಿದ್ದಾರೆ. ದೇಶಕ್ಕೆ ನರೇಂದ್ರ ಮೋದಿ, ಉತ್ತರ ಪ್ರದೇಶಕ್ಕೆ ಯೋಗಿ ಆದಿತ್ಯನಾಥ್ ಹಾಗೇಯೇ ರಾಜ್ಯಕ್ಕೆ ಒಬ್ಬ ಉತ್ತಮ ನಾಯಕ ಸಿಗುತ್ತಾನೆ ಎಂದಿದ್ದಾರೆ ಬಂಡಾಯ ನಾಯಕ ಯತ್ನಾಳ್. ವಿಜಯೆಂದ್ರ ಬಳಿ ಬ್ಲಾಕ್ ಮೇಲ್ ಮಾಡೋ ಟೀಂ ಇದೆ. ನನ್ನ ವಿರುದ್ಧ ಏನಾದರು ಹಗುರವಾಗಿ ಮಾತನಾಡಿದರೆ, ನಿನ್ನದು ಎಲ್ಲವನ್ನೂ ಬಿಚ್ಚಿಡುತ್ತೇನೆ ಎಂದಿದ್ದಾರೆ.

ಬಿಜೆಪಿಯಲ್ಲಿ ಹೊಸ ಪರ್ವ ಶುರುವಾಗಲಿದೆ. ಮಳೆ ಗಾಳಿ ಪ್ರವಾಹ ಬಿರುಗಾಳಿ ಶುರುವಾಗಿದೆ. ಒಳ್ಳೆ ನಾಯಕ ಸಿಗುತ್ತಾನೆ. ಯಾವುದೇ ಜನಾಂಗಕ್ಕೆ ಅಧ್ಯಕ್ಷ ಸ್ಥಾನ ಕೊಟ್ಟರೂ ಸಮಾಧಾನ ಇದೆ. ಎಲ್ಲಾ ಸಮಾಜದ ಮುಖಂಡರೂ ಸಮರ್ಥರಿದ್ದಾರೆ. ಬರೀ ಯತ್ನಾಳ್, ವಿಜಯೇಂದ್ರ ಅಲ್ಲ, ಹೆಚ್ಚು ಮತ ಸೆಳೆಯೋರನ್ನ ಮಾಡಬೇಕಿದೆ. ಎಲ್ಲಾ ಸಮಾಜದ ಮುಖಂಡರೂ ಸಮರ್ಥರಿದ್ದಾರೆ ಎಂದಿದ್ದಾರೆ. ಲಿಂಗಾಯತ ಫೆಕ್ ಅಕೌಂಟ್ ತೆಗೆದು ಬಾಯಿಗೆ ಬಂದಂತೆ ಮಾತನಾಡಿದರೆ ಹುಷಾರ್ ಎಂದು ವಿಜಯೇಂದ್ರಗೆ ಎಚ್ಚರಿಕೆ ನೀಡಿದ್ದಾರೆ. ಇದೇ ವೇಳೆ ವಿರೋಧ ಪಕ್ಷದ ನಾಯಕನ ಸ್ಥಾನದ ಆಫರ್ ಏನಿಲ್ಲ ಎಂದಿದ್ದಾರೆ ಯತ್ನಾಳ್.