ರಾಜಕೀಯದಲ್ಲಿ ಇಂಥ ಬಂಡಾಯ, ಬಿಕ್ಕಟ್ಟುಗಳು ಬರುವುದು ಸಹಜ. ಅವುಗಳನ್ನು ಬಗೆಹರಿಸಬೇಕು. ‘ನೆಗಡಿ ಆಯಿತೆಂದು ಮೂಗು ಕತ್ತರಿಸಿ ಹಾಕಲು ಸಾಧ್ಯವಿಲ್ಲ. ಆದರೆ ಪಂಜಾಬ್ ಸಮಸ್ಯೆ ವಿಷಯದಲ್ಲಿ ಕಾಂಗ್ರೆಸ್ ಹೈಕಮಾಂಡ್ ‘ಮೂಗು ಕತ್ತರಿಸಿದೆ. ಕ್ಯಾಪ್ಟನ್ ಅಮರೀಂದರ್ ಸಿಂಗ್ ಸರ್ಕಾರದ ಸಮಸ್ಯೆಯನ್ನು ಒಂದೋ ಮೊದಲೇ ಬಗೆಹರಿಸಬೇಕಿತ್ತು. ಅಥವಾ ‘ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ’ ಕಷ್ಟಸಾಧ್ಯತೆ ಮೂಲಕ ಸಮಸ್ಯೆ ಬಗೆಹರಿಸಬೇಕಿತ್ತು. ಚುನಾವಣೆ ಹೊತ್ತಿನಲ್ಲಿ ನಾಯಕತ್ವ ಬದಲಾವಣೆ ಮಾಡಿರುವುದು ಅಷ್ಟೇನೂ ಸೂಕ್ತವಾಗಿ ಕಾಣುತ್ತಿಲ್ಲ. ಹೀಗೆ ಮೊದಲರ್ಧದಲ್ಲಿ ತಪ್ಪೆಸಗಿದ ಕಾಂಗ್ರೆಸ್ ಹೈಕಮಾಂಡ್ ಅಮರೀಂದರ್ ಸಿಂಗ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ ಬಳಿಕ ದಲಿತ ನಾಯಕ ಚರಣ್ಜೀತ್ ಸಿಂಗ್ ಚನ್ನಿ ಅವರನ್ನು ಮುಖ್ಯಮಂತ್ರಿ ಮಾಡಿ ದ್ವಿತೀಯಾರ್ಧದಲ್ಲಿ ಸರಿಯಾದ ಹೆಜ್ಜೆಯನ್ನೇ ಇಟ್ಟಿದೆ. ಏಕೆಂದರೆ ಸದ್ಯಕ್ಕೆ ಚರಣ್ಜೀತ್ ಸಿಂಗ್ ಚನ್ನಿ ಅವರಿಗಿಂತ ಸೂಕ್ತವಾದ ಅಭ್ಯರ್ಥಿ ಇರಲಿಲ್ಲ.
ವರ್ಷಗಳಿಂದ ಪಂಜಾಬ್ ಕಾಂಗ್ರೆಸಿನಲ್ಲಿ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಹಾಗೂ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ನಡುವೆ ನಡೆಯುತ್ತಿದ್ದ ತೀವ್ರ ತೆರನಾದ ಶೀತಲ ಸಮರ ಅಮರೀಂದರ್ ಸಿಂಗ್ ರಾಜೀನಾಮೆ ಮೂಲಕ ಕೊನೆಗೊಂಡಿತು. ಆದರೆ ಹೊಸ ನಾಯಕ ಯಾರು? ಎಂಬುದು ತುಂಬಾ ಸಂಕೀರ್ಣವಾಗಿತ್ತು. ನವಜೋತ್ ಸಿಂಗ್ ಸಿಧು, ಸುಖಜಿಂದರ್ ಸಿಂಗ್ ರಾಂಧವ, ಸುನೀಲ್ ಜಖರ್ ಮತ್ತು ಅಂಬಿಕಾ ಸೋನಿ ಹೆಸರು ಮುಖ್ಯಮಂತ್ರಿ ಸ್ಥಾನಕ್ಕೆ ದಟ್ಟವಾಗಿ ಕೇಳಿಬಂದಿದ್ದವು. ಈ ಪೈಕಿ ಅಮರೀಂದರ್ ಸಿಂಗ್ ವಿರುದ್ಧ ಸಮರ ಸಾರಿ ಗೆದ್ದಿದ್ದ ನವಜೋತ್ ಸಿಂಗ್ ಸಿಧು ಹೆಸರು ಮುಂಚೂಣಿಯಲ್ಲಿತ್ತು. ಅವರ ಬೆಂಬಲಿಗ ಎಂಬ ಕಾರಣಕ್ಕೆ ಸುಖಜಿಂದರ್ ಸಿಂಗ್ ರಾಂಧವ ಹೆಸರು ನಂತರದ ಸ್ಥಾನದಲ್ಲಿತ್ತು. ಹೈಕಮಾಂಡ್ ಕಡೆಯಿಂದ ಸುನೀಲ್ ಜಖರ್ ಅಥವಾ ಅಂಬಿಕಾ ಸೋನಿ ಹೆಸರುಗಳಿಗೆ ಹಸಿರು ನಿಶಾನೆ ಸಿಗಬಹುದು ಎಂಬ ಲೆಕ್ಕಾಚಾರಗಳಿದ್ದವು. ಆದರೆ ಇತ್ತೀಚೆಗೆ ಬಿಜೆಪಿ ಅಚ್ಚರಿಯಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದಂತೆ ಕಾಂಗ್ರೆಸ್ ಹೈಕಮಾಂಡ್ ಕೂಡ ಚರ್ಚೆಯಲ್ಲೇ ಇಲ್ಲದ ಚರಣ್ಜೀತ್ ಸಿಂಗ್ ಚನ್ನಿ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಿದೆ.

ಪಂಜಾಬ್‌ನ ಮೊದಲ ದಲಿತ ಸಿಎಂ!
ಇಡೀ ದೇಶದಲ್ಲಿ ದಲಿತರು ಶೇಕಡಾವರು ಅತಿ ಹೆಚ್ಚು ಇರುವುದು ಪಂಜಾಬಿನಲ್ಲಿ; ಶೇಕಡಾ 35ರಷ್ಟು. ಆದರೆ ಸ್ವಾತಂತ್ರ್ಯಾನಂತರ 75 ವರ್ಷಗಳಲ್ಲಿ ಈವರೆಗೆ ಅಲ್ಲಿ ಒಬ್ಬ ದಲಿತ ನಾಯಕನೂ ಮುಖ್ಯಮಂತ್ರಿ ಪಟ್ಟ ಏರಿಲ್ಲ. ಈಗ 58 ವರ್ಷದ ಚರಣಜಿತ್ ಸಿಂಗ್ ಚನ್ನಿ ಪಂಜಾಬಿನ ಮೊದಲ ದಲಿತ ಮುಖ್ಯಮಂತ್ರಿಯಾಗಿದ್ದಾರೆ. ಹಿಂದಿನ ಅಮರಿಂದರ್ ಸಿಂಗ್ ಸಂಪುಟದಲ್ಲಿ ತಾಂತ್ರಿಕ ಶಿಕ್ಷಣ ಸಚಿವರಾಗಿದ್ದ ಚಮ್ಮಾರ್ ಸಮುದಾಯದ ಚರಣಜಿತ್ ಸಿಂಗ್ ಚನ್ನಿ ಚಮಕೌರ್ ಸಾಹಿಬ್ ಕ್ಷೇತ್ರದಿಂದ ಮೂರನೇ ಬಾರಿ ಶಾಸಕರಾಗಿದ್ದಾರೆ. 2015 ರಿಂದ 2016 ರವರೆಗೆ ಪಂಜಾಬ್ ವಿಧಾನಸಭೆಯಲ್ಲಿ ಚನ್ನಿ ವಿರೋಧ ಪಕ್ಷದ ನಾಯಕರಾಗಿ ಕೂಡ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಹೀಗೆ ಅನುಭವವೂ ಇರುವ, ಹೆಚ್ಚು ವಯಸ್ಸು ಆಗಿರದ, ಸಮುದಾಯದ ಬೆಂಬಲವೂ ಇರುವ, ಅಮರೀಂದರ್ ಸಿಂಗ್ ಅಥವಾ ನವಜೋತ್ ಸಿಂಗ್ ಸಿಧು ಪಾಳೆಯದ ವಿರೋಧವೂ ಇಲ್ಲದ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬಲ್ಲ, ಪಕ್ಷ ನಿಷ್ಟನನ್ನು ಹೈಕಮಾಂಡ್ ಆರಿಸಿದೆ.
ಪಂಜಾಬಿಗೆ ಮೊದಲ ದಲಿತ ಮುಖ್ಯಮಂತ್ರಿ: ಚರಣಜಿತ್ ಸಿಂಗ್ ಚನ್ನಿ ನೂತನ ಸಿಎಂ – ಹೈಕಮಾಂಡ್ ಅಚ್ಚರಿಯ ಆಯ್ಕೆ
ಪಂಜಾಬಿನ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಚರಣಜಿತ್ ಸಿಂಗ್ ಚನ್ನಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿದ ಬಳಿಕ ಮುಖ್ಯಮಂತ್ರಿ ಸ್ಥಾನದ ನಿರೀಕ್ಷೆಯಲ್ಲಿದ್ದ ಸುಖಜಿಂದರ್ ಸಿಂಗ್ ರಾಂಧವಾ ಅವರು ‘ಇದು ಹೈಕಮಾಂಡ್ ನಿರ್ಧಾರ, ಇದನ್ನು ಸ್ವಾಗತಿಸುತ್ತೇನೆ. ಚರಣಜಿತ್ ಸಿಂಗ್ ಚನ್ನಿ ನನ್ನ ಕಿರಿಯ ಸಹೋದರ ಇದ್ದಂತೆ. ನನಗೆ ಯಾವುದೇ ಬೇಸರ ಇಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ. ಇಷ್ಟೇಯಲ್ಲ, ಚರಣಜಿತ್ ಸಿಂಗ್ ಚನ್ನಿ ಆಯ್ಕೆ ಬಗ್ಗೆ ಯಾರೊಬ್ಬರೂ ಸೊಲ್ಲೆತ್ತಿಲ್ಲ. ಈ ಮೂಲಕ ಚರಣಜಿತ್ ಸಿಂಗ್ ಚನ್ನಿ ಇದ್ದುದರಲ್ಲೇ ಸೂಕ್ತವಾದ ಆಯ್ಕೆಯಾಗಿತ್ತು ಎನ್ನುವುದು ಖಾತರಿಯಾಗಿದೆ. ಇದಲ್ಲದೆ ಇತ್ತೀಚೆಗೆ ಅಲ್ಲಲ್ಲಿ ದಲಿತ ಮುಖ್ಯಮಂತ್ರಿ ವಿಚಾರ ಪ್ರಸ್ತಾಪ ಆಗುತ್ತಲೇ ಇದೆ. ಹಾಗಾಗಿ ಪಂಜಾಬಿನಾಚೆಗೂ ಕಾಂಗ್ರೆಸ್ ಪಕ್ಷಕ್ಕೆ ಚರಣಜಿತ್ ಸಿಂಗ್ ಚನ್ನಿ ಆಯ್ಕೆಯಿಂದ ಲಾಭ ಆಗಬಹುದು.
ನವಜೋತ್ ಸಿಂಗ್ ಸಿಧುಗೆ ಚಾನ್ಸ್ ಮಿಸ್!
ಅಮರೀಂದರ್ ಸಿಂಗ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವಲ್ಲಿ ಮಹತ್ವದ ಪಾತ್ರವಹಿಸಿದ ನವಜೋತ್ ಸಿಂಗ್ ಸಿಧುಗೆ ಸಹಜವಾಗಿ ನಿರಾಸೆಯಾಗಿದೆ. ಆದರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಬಳಿಕ ಅಮರೀಂದರ್ ಸಿಂಗ್ ಆಡಿದ ಮಾತುಗಳು ಸಿಧು ಪಾಲಿಗೆ ದುಬಾರಿಯಾದವು. ‘ನವಜೋತ್ ಸಿಂಗ್ ಸಿಧು ಪಾಕಿಸ್ತಾನದ ಜೊತೆ ಸಂಪರ್ಕ ಹೊಂದಿದ್ದಾರೆ. ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಜೊತೆ ಸ್ನೇಹ ಸಂಬಂಧವಿದೆ. ಕಾಶ್ಮೀರ ಪ್ರತ್ಯೇಕವಾದಿಗಳ ಜೊತೆಗೆ ಸಿಧು ಸಂಪರ್ಕ ಹೊಂದಿದ್ದಾರೆ. ಅವರನ್ನು ಮುಖ್ಯಮಂತ್ರಿ ಮಾಡಿದರೆ ಅದು ದುರಂತ’ ಎಂದು ಹೇಳಿದ್ದರು. ಈ ಮಾತನ್ನು ಕೇಳಿಯೂ ಕಾಂಗ್ರೆಸ್ ಹೈಕಮಾಂಡ್ ನವಜೋತ್ ಸಿಂಗ್ ಸಿಧುಗೆ ಮುಖ್ಯಮಂತ್ರಿ ಸ್ಥಾನ ಕೊಡಲು ಸಾಧ್ಯವೇ ಇರಲಿಲ್ಲ. ಈ ಘಟನೆಯಿಂದ ತಮ್ಮನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದ ಸಿಧುಗೆ ಸಿಎಂ ಸ್ಥಾನ ತಪ್ಪಿಸುವಲ್ಲಿ ಅಮರೀಂದರ್ ಸಿಂಗ್ ಗೆದ್ದಿದ್ದಾರೆ.
ಪಂಜಾಬ್ ಸಿಎಂ ರಾಜೀನಾಮೆ: ಹಳೆಯ ಬಿಕ್ಕಟ್ಟಿನ ಅಂತ್ಯವೋ? ಹೊಸ ಬಿಕ್ಕಟ್ಟಿನ ಆರಂಭವೋ?
ಸುಖಜಿಂದರ್ ಸಿಂಗ್ ರಂಧವಾ ಅವರ ಹೆಸರು ನವಜೋತ್ ಸಿಂಗ್ ಸಿಧು ಬೆಂಬಲಿಗ, ಪ್ರಬಲ ಜಾಟ್ ಸಮುದಾಯದ ನಾಯಕ ಎನ್ನುವ ಕಾರಣಕ್ಕೆ ಚರ್ಚೆ ಆಯಿತು. ಆದರೆ ರಂಧವಾ ಅವರಿಗೆ ಮುಖ್ಯಮಂತ್ರಿ ಸ್ಥಾನ ಕೊಟ್ಟಿದ್ದರೆ ಪರೋಕ್ಷವಾಗಿ ನವಜೋತ್ ಸಿಂಗ್ ಸಿಧುಗೆ ಸ್ಥಾನ ಕೊಟ್ಟಂತಾಗುತ್ತಿತ್ತು. ಆಗ ಅಮರೀಂದರ್ ಸಿಂಗ್ ಪಾಳೆಯದ ಬಂಡಾಯ ಶುರುವಾಗುತ್ತಿತ್ತು. ಇದನ್ನರಿತೇ ಅಂತಿಮವಾಗಿ ಚರಣಜಿತ್ ಸಿಂಗ್ ಚನ್ನಿ ಹೆಸರಿಗೆ ಕಾಂಗ್ರೆಸ್ ಹೈಕಮಾಂಡ್ ಹಸಿರು ನಿಶಾನೆ ತೋರಿದೆ ಎನ್ನಲಾಗುತ್ತಿದೆ. ಚರಣಜಿತ್ ಸಿಂಗ್ ಚನ್ನಿ ಹೆಸರಿಗೆ ಅಮರೀಂದರ್ ಸಿಂಗ್ ಅಥವಾ ನವಜೋತ್ ಸಿಂಗ್ ಸಿಧು ಪಾಳೆಯದಿಂದ ವಿರೋಧ ವ್ಯಕ್ತವಾದರೆ ಹೈಕಮಾಂಡ್ ಅಭ್ಯರ್ಥಿಯನ್ನಾಗಿ ಸುನೀಲ್ ಜಖರ್ ಅಥವಾ ಅಂಬಿಕಾ ಸೋನಿ ಹೆಸರನ್ನು ಸೂಚಿಸಬೇಕು ಎಂದು ಲೆಕ್ಕಾಚಾರ ಹಾಕಲಾಗಿತ್ತು. ಆದರೆ ಅಂತಹ ಪರಿಸ್ಥಿತಿಯೇ ಬರಲಿಲ್ಲ.












