ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಸೇರಿದಂತೆ ಎಲ್ಲ ನಾಯಕರು ಒಗ್ಗಟ್ಟಿನಿಂದ ರಾಜ್ಯದಲ್ಲಿ ಕಾಂಗ್ರೆಸ್ ಅನ್ನು ಮತ್ತೆ ಅಧಿಕಾರಕ್ಕೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದು, ಇದರಲ್ಲಿ ರಾಜಕಾರ ಮಾಡುತ್ತಿಲ್ಲ. ಕೆಲವು ಮಾಧ್ಯಮಗಳು ಬಿಂಬಿಸುವ ರೀತಿ ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಸ್ಪಷ್ಟಪಡಿಸಿದ್ದಾರೆ.
ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರನ್ನು 3-4 ದಶಕಗಳಿಂದ ಬಲ್ಲೆ. ಅವರು ಕ್ರಿಯಾಶೀಲ, ರಾಜ್ಯದ ಬಗ್ಗೆ ಬದ್ಧತೆ ಇರುವ ರಾಜಕಾರಣಿ. ರೈತಪರ ಕುಟುಂಬದಲ್ಲಿ ಹುಟ್ಟಿ, ಜನಪರ ಹಾಗೂ ಅಭಿವೃದ್ಧಿ ಪರ ಕೆಲಸ ಮಾಡುವ ನಾಯಕ. ಅದಕ್ಕೆ ಉದಾಹರಣೆ ತುಮಕೂರಿನ ಪಾವಗಡದ ಸೋಲಾರ್ ಕೇಂದ್ರದಲ್ಲಿ ಜಮೀನು ಖರೀದಿ ಮಾಡದೇ ಜಮೀನನ್ನು ಲೀಸ್ ಮೂಲಕ ತೆಗೆದುಕೊಂಡಿರುವುದೇ ಶಿವಕುಮಾರ್ ಅವರ ಜನಪರ ಹಾಗೂ ಅಭಿವೃದ್ಧಿ ಕೆಲಸಕ್ಕೆ ಸಾಕ್ಷಿ ಎಂದು ಹೇಳಿದ್ದಾರೆ.
ಕೆಪಿಸಿಸಿ ಮಾಧ್ಯಮ ವಿಭಾಗದ ಸಹ ಸಂಚಾಲಕ ಸಲೀಂ ಅವರು ನಾನು ಪತ್ರಿಕಾಗೋಷ್ಠಿಗೆ ಆಗಮಿಸಿದಾಗ ನನ್ನ ಕಿವಿಯಲ್ಲಿ ಜನ ಹೀಗೆ ಮಾತನಾಡುತ್ತಿದ್ದಾರೆ. ಈ ಮಧ್ಯೆ ನೀರಾವರಿ ಇಲಾಖೆ ಹಗರಣ ವಿಚಾರವಾಗಿ ಬಿಜೆಪಿ ಅವರು ನಮ್ಮ ಪಕ್ಷದ ನಾಯಕರ ವಿರುದ್ಧ ಗೂಬೆ ಕೂರಿಸಲು ಈ ರೀತಿ ಆರೋಪ ಮಾಡಿದ್ದಾರೆ ಎಂದು ಹೇಳಿದರು. ನಾನು ಅದನ್ನು ಅಲ್ಲಿಗೆ ನಿಲ್ಲಿಸಿ ಪತ್ರಿಕಾಗೋಷ್ಠಿ ನಡೆಸಿದೆ. ಅದನ್ನು ಮಾಧ್ಯಮಗಳು ಬೇರೆ ರೀತಿ ಬಿಂಬಿಸುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಡಿ.ಕೆ. ಶಿವಕುಮಾರ್ ಅವರು ಉತ್ತಮ ಆಡಳಿತಗಾರ, ಜನಪರ ಚಿಂತನೆಯುಳ್ಳ ನಾಯಕ. ಅವರು ಸಂಪಾದಿಸಿರುವ ಹಣ ರಾಜಕಾರಣದಿಂದ ಅಲ್ಲ. ಅವರು ತಮ್ಮ ವ್ಯಾಪಾರ ವ್ಯವಹಾರಗಳಿಂದ ಸಂಪಾದನೆ ಮಾಡಿದ್ದಾರೆ ಅವರು ಎಂದಿಗೂ ಪರ್ಸೆಂಟೇಜ್ ರಾಜಕಾರಣ ಮಾಡಿಲ್ಲ ಎಂದು ಹೇಳಿದ್ದಾರೆ.
ನೀರಾವರಿ ಹಗರಣಕ್ಕೆ ಸಂಬಂಧಿಸಿದಂತೆ ಆರೋಪ ಹೊತ್ತಿರುವ ಆಯನೂರು ಉಮೇಶ್ ಅವರು ನನ್ನ ಜಿಲ್ಲೆಯವರು ನಮ್ಮ ನಾಯಕರ ಮೇಲೆ ಆರೋಪ ಮಾಡುವ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಹೇಳಲು ಮುಂದಾಗಿದ್ದರು.
ನಮ್ಮ ಪಕ್ಷದ ಅಧ್ಯಕ್ಷರಾಗಲಿ, ನಾಯಕರಾಗಲಿ ಅಧಿಕಾರದಲ್ಲಿದ್ದಾಗ ಪರ್ಸೆಂಟೇಜ್ ಪಡೆಯುವ ಸಂಸ್ಕೃತಿ ಬೆಳೆಸಿಲ್ಲ. ಹೀಗಾಗಿ ಆ ಪಿಸುಗುಟಿದ ಮಾತು ವೈಭವೀಕರಣ ಮಾಡಿ ಬಿಂಬಿಸುವ ಕೆಲಸ ಮಾಧ್ಯಮ ಮೌಲ್ಯಗಳಿಗೆ ಸಮಂಜಸವಲ್ಲ ಎಂದು ಹೇಳಿದ್ದಾರೆ.
ಕಮಿಷನ್, ಭ್ರಷ್ಟಾಚಾರದಿಂದ ಕಾಂಗ್ರೆಸ್ ಗೆ ದೂರ; ಅದರಲ್ಲೂ ಪಕ್ಷದ ಅಧ್ಯಕ್ಷರು ಇನ್ನೂ ದೂರ.
ಮೋದಿ ಅವರು ಕಳೆದ ಚುನಾವಣೆ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರನ್ನು ಕಮಿಷನ್ ರಾಮಯ್ಯ ಎಂದಾಗ 100 ಕೋಟಿ ಮಾನಹಾನಿ ಕೇಸ್ ಹಾಕಿದಾಗ ಅದಕ್ಕೆ ಮೋದಿ ಅವರು ಉತ್ತರ ನೀಡಲಿಲ್ಲ. ಭ್ರಷ್ಟಾಚಾರ ಗಂಗೋತ್ರಿ ಹರಿಸುತ್ತಿರುವುದು ಬಿಜೆಪಿ ನಾಯಕರು ಎಂದು ಆರೋಪಿಸಿದ್ದಾರೆ.
ಇಡಿ ಹಾಗೂ ಆದಾಯ ತೆರಿಗೆ ಅಧಿಕಾರಿಗಳು ರಾಜ್ಯದಲ್ಲಿ ದಾಳಿ ನಡೆಸಿದ ನಂತರ ನಾವು ಆಗ್ರಹಿಸಿದಂತೆ ಮಾಧ್ಯಮಗಳಿಗೆ ಮಾಹಿತಿ ನೀಡಿ 750 ಕೋಟಿ ಲೆಕ್ಕದ ವ್ಯತ್ಯಾಸವಿದೆ ಎಂದು ಹೇಳಿದ್ದಾರೆ. ಇದು ಯಾರ ಆಡಳಿತದಲ್ಲಿ ನಡೆದಿದೆ? ಇದಕ್ಕೆ ಹೊಣೆ ಯಾರು? ಈ ಬಗ್ಗೆ ಮೋದಿ, ಬಿಜೆಪಿ ಅವರು ಮಾತನಾಡುತ್ತಿಲ್ಲ ಯಾಕೆ? ಎಂದು ಪ್ರಶ್ನಿಸಿದ್ದಾರೆ.

ಭ್ರಷ್ಟಾಚಾರ ಯಾರೇ ಮಾಡಿದರೂ ತಪ್ಪೇ, ಯಡಿಯೂರಪ್ಪ ಮಾಡಿದರೂ ತಪ್ಪೇ, ಪ್ರಧಾನಿ ಮಾಡಿದರೂ ತಪ್ಪೇ.ನಮ್ಮ ಪಕ್ಷದವರು ಮಾಡಿದರೂ ತಪ್ಪೇ. ಭ್ರಷ್ಟಾಚಾರ ಮುಕ್ತ ರಾಜ್ಯ ಕಟ್ಟಲು ಕಾಂಗ್ರೆಸ್ ಬದ್ಧ. ಅದರಲ್ಲೂ ಡಿ.ಕೆ ಶಿವಕುಮಾರ್ ಅವರು ಬದ್ಧ. ಅವರು ಯಾವುದೇ ಭ್ರಷ್ಟಾಚಾರ ಮಾಡಿಲ್ಲ. ನಿನ್ನೆ ಸಲೀಂ ಅವರ ಹೇಳಿಕೆ ತಿರುಚುವುದು ಬೇಡ ಎಂದು ವಿನಂತಿಸಿದ್ದಾರೆ.